ಜಮ್ಮು: ಜಮ್ಮುವಿನಲ್ಲಿ ಭಾರತ-ಪಾಕಿಸ್ಥಾನ ಅಂತರರಾಷ್ಟ್ರೀಯ ಗಡಿ ಬೇಲಿಯ ಕೆಳಗೆ ನಿರ್ಮಿಸಲಾದ ಸುರಂಗವನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಪತ್ತೆ ಮಾಡಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಈ ಗುಪ್ತ ಸುರಂಗ ಪತ್ತೆಯಾದ ಹಿನ್ನಲೆಯಲ್ಲಿ, ಒಳನುಸುಳುವಿಕೆಗೆ ಸಹಾಯ ಮಾಡುವಂತಹ ಇತರ ಗುಪ್ತ ರಚನೆಗಳನ್ನು ಹುಡುಕಲು ಈ ಪ್ರದೇಶದಲ್ಲಿ ಪ್ರಮುಖ ಶೋಧ ಕಾರ್ಯಾಚರಣೆಯನ್ನು ಸೇನೆ ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ.
ಒಳನುಸುಳುವಿಕೆ ವಿರೋಧಿ ಗ್ರಿಡ್ ಸಮರ್ಪಕವಾಗಿ ಇದೆ ಮತ್ತು ಇತರ ಮುಂಭಾಗದಲ್ಲಿ ಒಳನುಸುಳಲು ಸಾಧ್ಯವಾಗುವಂತಹ ಯಾವುದೇ ಗ್ಯಾಪ್ ಇಲ್ಲ ಎಂದು ಖಚಿತಪಡಿಸಿಕೊಳ್ಳಲು ಬಿಎಸ್ಎಫ್ ಮಹಾನಿರ್ದೇಶಕ ರಾಕೇಶ್ ಅಸ್ತಾನಾ ತಮ್ಮ ಗಡಿನಾಡು ಕಮಾಂಡರ್ಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಹೇಳಲಾಗಿದೆ.
ಭಾರತದ ಗಡಿ ಬೇಲಿಯಿಂದ ಸುಮಾರು 50 ಮೀಟರ್ ದೂರದಲ್ಲಿರುವ ಈ ಸುರಂಗವನ್ನು ಜಮ್ಮುವಿನ ಸಾಂಬಾ ಸೆಕ್ಟರ್ನಲ್ಲಿ ಗುರುವಾರ ಬಿಎಸ್ಎಫ್ ಗಸ್ತು ತಿರುಗುವಾಗ ಪತ್ತೆ ಮಾಡಿದೆ. ನಂತರ ಸೇನೆ ಸುರಂಗವನ್ನು ಪರೀಕ್ಷಿಸಿದಾಗ ಅದರ ಪ್ರವೇಶ ಜಾಗದಲ್ಲಿ ಪ್ಲಾಸ್ಟಿಕ್ ಮರಳು ಚೀಲಗಳು ಕಂಡುಬಂದಿದ್ದು, ಅವುಗಳಲ್ಲಿ ಪಾಕಿಸ್ಥಾನಿ ಗುರುತುಗಳು ಇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಸುರಂಗವು ಪ್ರಾರಂಭದ ಜಾಗದಲ್ಲಿ ಸುಮಾರು 25 ಅಡಿಗಳಷ್ಟು ಆಳವನ್ನು ಹೊಂದಿದೆ. ಗಡಿ ಪಡೆ ಈ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಗಡಿಯ ಉದ್ದಕ್ಕೂ ಮೆಗಾ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳ ಕಳ್ಳಸಾಗಣೆಗೂ ಸಹ ಈ ಸುರಂಗ ಸಹಾಯ ಮಾಡುತ್ತಿದ್ದಿರಬಹುದು ಎಂದು ಹೇಳಲಾಗಿದೆ.
‘ಕರಾಚಿ ಮತ್ತು ಶಕರ್ಘರ್’ ಎಂದು ಬರೆದಿರುವ ಸುಮಾರು 8-10 ಪ್ಲಾಸ್ಟಿಕ್ ಸ್ಯಾಂಡ್ಬ್ಯಾಗ್ಗಳನ್ನು ಸುರಂಗದ ಪ್ರವೇಶ ಜಾಗದ ಬಳಿ ವಶಪಡಿಸಿಕೊಳ್ಳಲಾಗಿದೆ ಮತ್ತು ಚೀಲಗಳಲ್ಲಿ ಅದರ ಉತ್ಪಾದನೆ ಮತ್ತು ಮುಕ್ತಾಯ ದಿನಾಂಕವನ್ನು ಕೂಡ ಉಲ್ಲೇಖಿಸಲಾಗಿದೆ. ಇದರಿಂದ ಅವುಗಳು ಇತ್ತೀಚೆಗೆ ತಯಾರಿಸಲ್ಪಟ್ಟವು ಎಂದು ತಿಳಿಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ಥಾನದ ಹತ್ತಿರದ ಗಡಿ ಪೋಸ್ಟ್ ಈ ಸುರಂಗದಿಂದ 400 ಮೀಟರ್ ದೂರದಲ್ಲಿದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.