ಭಾರತ ಸಮರ್ಥ ನಾಯಕತ್ವದ ಕೈಯಲ್ಲಿ ಅಭಿವೃದ್ಧಿಯ ಆಶಯಗಳ ಜೊತೆಗೆ ಹೆಜ್ಜೆ ಇಡುತ್ತಿದೆ. ಹೆಚ್ಚಿನ ರಾಷ್ಟ್ರಗಳಿಂದು ಭಾರತದತ್ತ ಸ್ನೇಹಹಸ್ತವನ್ನು ಚಾಚಿ ಬರುವಂತಾಗಿದೆ. ಆರ್ಥಿಕ, ಸಾಮಾಜಿಕ, ತಾಂತ್ರಿಕ ನೆಲೆಗಟ್ಟಿನ ಜೊತೆಗೆ ಹಲವು ದೇಶಗಳು ಭಾರತದ ಜೊತೆಗೆ ಸಾಮರಸ್ಯ, ಸದ್ಭಾವನೆಯ ಸಂಬಂಧ ಹೊಂದುವುದಕ್ಕೂ ಮುಂದಾಗಿವೆ. ಇದು ಭಾರತದ ವೈಭವ, ವೈಚಾರಿಕತೆ ಮತ್ತು ತಾತ್ವಿಕ ನಿಲುವುಗಳ ಕಾರಣದಿಂದಾಗಿಯೇ ಸಾಧ್ಯವಾಗಿದೆ. ಕಳೆದ 6 ದಶಕಗಳಿಂದ ಸಾಧ್ಯವಾಗದ ಭಾರತೀಯರ ಒಂದಷ್ಟು ಕನಸುಗಳು, ಕೆವಲ 5-6 ವರ್ಷಗಳಲ್ಲಿ ಸಾಕಾರಗೊಳ್ಳುವುದಕ್ಕೆ ಆರಂಭವಾಗಿದ್ದು ಈ ಬೆಳವಣಿಗೆ ದೇಶವನ್ನು ಮತ್ತಷ್ಟು ಎತ್ತರಕ್ಕೆ ಏರಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.
ಇಂತಹ ಸಂದರ್ಭದಲ್ಲಿ ಆಂತರಿಕ ಮತ್ತು ಬಾಹ್ಯ ಭಯೋತ್ಪಾದನೆ ಮಾತ್ರ ಭಾರತದ ಪಾಲಿಗೆ ಇನ್ನಿಲ್ಲದ ಸವಾಲಾಗಿ ಪರಿಣಮಿಸಿದೆ. ದೇಶದ ಗಡಿ ಭಾಗಗಳಲ್ಲಿ ಉಗ್ರರ ಉಪಟಳದ ಜೊತೆಗೆ, ನೆರೆಯ ಕೆಲವು ಕುತಂತ್ರಿ ರಾಷ್ಟ್ರಗಳು ನೀಡುತ್ತಿರುವ ತೊಂದರೆಗಳನ್ನು ಮೆಟ್ಟಿ ನಿಲ್ಲುವ ಮೂಲಕವೂ ದೇಶದಲ್ಲಿ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡಬೇಕಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಸ್ವಾತಂತ್ರ್ಯದ ಬಳಿಕ ಅಧಿಕಾರದಲ್ಲಿದ್ದ ಕೆಲವು ನಾಯಕರ ತಪ್ಪಿಗೆ ಇಂದು ದೇಶದ ಪ್ರತಿಯೊಬ್ಬರು ಶತ್ರು ರಾಷ್ಟ್ರಗಳ ಜೊತೆಗೆ, ದೇಶದೊಳಗಿದ್ದುಕೊಂಡೇ ಅಭಿವೃದ್ಧಿಯ ಓಟಕ್ಕೆ ಅಡ್ಡಗಾಲು ಹಾಕುವವರ ಹುನ್ನಾರಗಳಿಗೆ ಎದೆ ಕೊಟ್ಟು ಮುನ್ನುಗ್ಗಬೇಕಿದೆ. ಯಾವ ರಾಷ್ಟ್ರದಲ್ಲಿಯೂ ದೇಶದ ವಿಚಾರ, ಅಭಿವೃದ್ಧಿ ವಿಚಾರದಲ್ಲಿ ಇಂತಹ ವೈರುಧ್ಯ ಕಾಣಲು ಸಾಧ್ಯವಿಲ್ಲವೇನೋ. ಹೀಗಿದ್ದರೂ ಸಮರ್ಥ ಸರ್ಕಾರ ಇದೆಲ್ಲವನ್ನೂ ಎದುರಿಸಿಕೊಂಡು ಅಭಿವೃದ್ಧಿಯ ಮಂತ್ರದ ಜೊತೆಗೆ ಹೆಜ್ಜೆ ಹಾಕುತ್ತಿದೆ ಎಂದರೆ ದೇಶ ಬಲಿಷ್ಠವಾಗಿದೆ ಎಂದೇ ಅರ್ಥವಲ್ಲವೇ.
ಕಳೆದ ಐದಾರು ವರ್ಷಗಳಲ್ಲಿ ದೇಶ ಮಹತ್ವದ ಬದಲಾವಣೆಗಳಿಗೆ ಸಾಕ್ಷೀಭೂತವಾಗಿದೆ. ಹೇಗೆಂದರೆ, ಈ ಹಿಂದೆ ನಮ್ಮ ದೇಶದ ಮೇಲೆ ಈಗಿನ ಹಾಗೆಯೇ ಭಯೋತ್ಪಾದಕ ದಾಳಿಗಳು ಸರ್ವೇ ಸಾಮಾನ್ಯವಾಗಿದ್ದವು. ಆದರೆ ಅದರ ನಿಖರತೆ ಮಾತ್ರ ಅಷ್ಟಾಗಿ ಬೆಳಕಿಗೆ ಬರುವ ಪರಿಸ್ಥಿತಿ ಇರಲಿಲ್ಲ. ಆದರೆ ಈಗ ಹಾಗಲ್ಲ. ಯಾವ ಗಡಿಯಲ್ಲಿ ಏನು ನಡೆಯುತ್ತಿದೆ, ನಮ್ಮ ಸೈನ್ಯದ ಸಾಮರ್ಥ್ಯ, ಉಗ್ರಗಾಮಿ, ನುಸುಳುಕೋರರ ಸಾವು ನೋವಿನ ಸಂಖ್ಯೆ ಹೀಗೆ ಪ್ರತಿಯೊಂದು ವಿಚಾರವನ್ನು ಯಾವುದೇ ಮುಚ್ಚುಮರೆ ಇಲ್ಲದಂತೆ ಜನ ಸಾಮಾನ್ಯರ ಮುಂದಿಡುವ ಮೂಲಕ, ಜನರಿಂದಲೂ ಯೋಧರಿಗೆ ಬೆಂಬಲ ದೊರಕುವಂತೆ ಮಾಡುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಹಿಂದೆಲ್ಲಾ ದೇಶದ ಸೇನೆ ಅಷ್ಟಾಗಿ ಪ್ರಚಲಿತಕ್ಕೆ ಬರುತ್ತಿರಲಿಲ್ಲ. ಆದರೆ ಈಗ ಹಾಗಲ್ಲ, ಸೇನೆ, ಯೋಧರ ಮೇಲಿನ ಗೌರವ ಭಾವವನ್ನು, ಅವರ ಸೇವೆಯನ್ನು ಜನತೆಗೆ ತಿಳಿಯಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಲಾಗಿದೆ.
ಮಾತ್ರವಲ್ಲದೆ, ಸೇನೆಗೆ ಬೇಕಾದ ಆಧುನಿಕವಾದ ಸಕಲ ಸೌಲಭ್ಯಗಳನ್ನು ಒದಗಿಸಿಕೊಡುವ ನಿಸ್ವಾರ್ಥ ಪ್ರಯತ್ನ ಜನಸ್ನೇಹಿ ಸರ್ಕಾರ ಮಾಡಿದೆ. ಬುಲೆಟ್ ಪ್ರೂಫ್ ಜಾಕೆಟ್, ಸ್ಟ್ಯಾಂಡರ್ಡ್ ಶೂಸ್ ಸೇರಿದಂತೆ ಸೇನೆಗೆ ಬೇಕಾದ ಅತ್ಯಾಧುನಿಕ ವಿಮಾನಗಳು, ನೌಕೆಗಳು, ಶಸ್ತ್ರಾಸ್ತ್ರಗಳನ್ನು ಪೂರೈಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ವರೆಗೆ ಸೇನೆ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೂ ವೈರಿಗಳಿಗೆ ಗುಂಡು ಹೊಡೆಯಲು ಮಾತ್ರ ಸರ್ಕಾರದ ಒಪ್ಪಿಗೆಗೆ ಕಾಯಬೇಕಾಗಿದ್ದ ಎಲ್ಲಾ ಕಾನೂನುಗಳನ್ನು ಬದಲಾಯಿಸಿ, ಸೇನೆಗೆ ಸರ್ವ ಸ್ವತಂತ್ರ ನೀಡುವ ಮೂಲಕ ಅಗತ್ಯ ಸಂದರ್ಭದಲ್ಲಿ ತುರ್ತು ಕ್ರಮ ಕೈಗೊಳ್ಳುವ ಶಕ್ತಿಯನ್ನು ಯೋಧರಿಗೆ ನೀಡಿ, ಶತ್ರುಗಳ ವಿರುದ್ಧದ ಹೋರಾಟಕ್ಕೆ ಅವರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲಾಗಿದೆ. ಮೋದಿ ಸರ್ಕಾರದ ಮಹೋನ್ನತ ಸಾಧನೆ ಏನು? ಅವರೇನು ಅಭಿವೃದ್ಧಿ ಮಾಡಿದ್ದಾರೆ? ಎಂದೆಲ್ಲಾ ಪ್ರಶ್ನಿಸುವ ಕುರುಡರಿಗೆ ಇದಕ್ಕಿಂತ ಒಳ್ಳೆಯ ಉತ್ತರ ಬೇರೊಂದಿರಲು ಸಾಧ್ಯವಿಲ್ಲ.
ಉಗ್ರವಾದ ಭಾರತದ ಶತ್ರು. ನೆರೆಯ ಪಾಕಿಸ್ಥಾನ ಉಗ್ರರಿಗೆ ಭಾರತದ ವಿರುದ್ಧ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ನೆರವು ನೀಡುತ್ತಿದೆ. ಈ ಉಗ್ರಗಾಮಿಗಳ ಗುಂಪಿಗೆ ಭಾರತೀಯ ಯುವಕರನ್ನು ಆಕರ್ಷಿಸುವ ಸಲುವಾಗಿ ಅವರಿಗೆ ವಿವಿಧ ಆಮಿಷಗಳನ್ನು ಒಡ್ಡಿ ಅವರನ್ನು ತನ್ನತ್ತ ಸೆಳೆದುಕೊಳ್ಳುವ ಕೆಲಸವನ್ನು ಉಗ್ರರು ಮಾಡುತ್ತಿದ್ದಾರೆ. ಎಲ್ಲದ್ದಕ್ಕೂ ಸಾಕ್ಷಿ ಹುಡುಕುವವರು ನಮ್ಮಲ್ಲಿ ಹಲವರಿರುವುದರಿಂದ, ಇದಕ್ಕೆ ಪೂರಕ ಎನ್ನಬಹುದಾದ ವಿಚಾರಗಳತ್ತಲೂ ನಾವು ಗಮನ ಹರಿಸುವುದು ಮುಖ್ಯವಾಗುತ್ತದೆ.
ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳು ಕೆಲವು ತಿಂಗಳ ಹಿಂದೆ ಕರ್ನಾಟಕ ರಾಜ್ಯದಲ್ಲಿದ್ದುಕೊಂಡು, ಪಾಕ್ ಪರ ನಿಲುವುಗಳನ್ನು ಪ್ರದರ್ಶಿಸುತ್ತಾರೆ, ಯಾವುದೋ ವೇದಿಕೆಯಲ್ಲಿ ನಿಂತು ಪಾಕ್ ಪರ ಘೋಷಣೆಯನ್ನು ಕೂಗುವವರು ನಮ್ಮ ದೇಶದಲ್ಲಿದ್ದಾರೆ, ಬಾಲಾಕೋಟ್ ಮೇಲೆ ಭಾರತದ ಸೇನೆ ನಡೆಸಿದ ವೈಮಾನಿಕ ದಾಳಿಗೆ ಸಾಕ್ಷಿ ಕೇಳುತ್ತಾರೆ ಎಂದಾದಲ್ಲಿ ಅವರ ಮಾನಸಿಕತೆಗಳ ಬಗ್ಗೆ, ದೇಶದ ಭದ್ರತೆಯ ಬಗ್ಗೆ ಅವರ ನಿಲುವುಗಳ ಬಗೆಗೂ ನಾವು ಚಿಂತಿಸಲೇ ಬೇಕು. ಇನ್ನು ಉಗ್ರಗಾಮಿ ಸಂಘಟನೆಗಳಿಗೆ ನಮ್ಮ ದೇಶದ ಹಲವು ಯುವಕರು ಹಣದಾಸೆಗೆ ಸೇರಿದ್ದಾರೆ ಎಂಬುದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗಷ್ಟೇ ಬೆಂಗಳೂರಿನ ಚಿಕ್ಕ ಪ್ರಾಯದ ವೈದ್ಯನಿಗಿದ್ದ ಉಗ್ರರೊಂದಿಗಿನ ನಂಟು ನಮಗೆ ಸಾಕ್ಷಿ ನುಡಿಯುವಂತಿದೆ. ಇದಕ್ಕಿಂತ ದೊಡ್ಡ ಉದಾಹರಣೆ ಆಮಿಷಗಳಿಗೆ ಬಲಿಯಾಗಿ ದೇಶ ಕಟ್ಟಬೇಕಾದ ಯುವ ಮನಗಳು ದೇಶದ್ರೋಹ ಮಾಡುತ್ತಿದ್ದಾರೆ ಎಂಬುದಕ್ಕೆ ಸಿಗಲಾರದೇನೋ.
ದೇಶದೊಳಗಿದ್ದೇ ದೇಶದ್ರೋಹಿಗಳಿಗೆ ಸಹಾಯ ಮಾಡುತ್ತಿದ್ದಾರೆ ಎಂಬುದಕ್ಕೆ ಇದೀಗ ಮತ್ತೊಂದು ದಾಖಲೆಯನ್ನು ಎನ್ಐಎ ಪುಲ್ವಾಮಾ ದಾಳಿಯ ವಿಚಾರದಲ್ಲಿ ನಡೆಸಿದ ತನಿಖೆಯ ಚಾರ್ಜ್ಶೀಟ್ನಲ್ಲಿಯೂ ತಿಳಿಸಿದೆ. ಈ ದಾಳಿಗೆ ಉಗ್ರಗಾಮಿಗಳಿಗೆ ಕಾಶ್ಮೀರದ ಯುವತಿಯೊಬ್ಬಳು ನೆರವಾಗಿದ್ದಾಳೆ ಎಂಬ ಬೆಚ್ಚಿ ಬೀಳಿಸುವ ಸಂಗತಿಯನ್ನು ಇದರಲ್ಲಿ ಹೇಳಿದೆ. ಜೈಶ್-ಇ-ಮೊಹಮ್ಮದ್ ಈ ದಾಳಿಯನ್ನು ನಡೆಸಿದ್ದು, ಉಗ್ರರಿಗೆ ಆ ದಾಳಿಯ ಸಂದರ್ಭದಲ್ಲಿ ವಸತಿ, ಮನೆ, ವಾಹನಗಳನ್ನು ನೀಡಿ ಉಗ್ರನೋರ್ವನ ಪ್ರೇಯಸಿ ಇನ್ಶಾ ಜಾನ್ ನೀಡಿ ಸಹಕರಿಸಿದ್ದಾಗಿಯೂ ವರದಿಯಲ್ಲಿ ಹೇಳಿದೆ. ಈಕೆ ಪುಲ್ವಾಮಾ ದಾಳಿಯ ಕಿಂಗ್ಪಿನ್ ಉಮರ್ ಫರೂಕ್ ಎಂಬಾತನನ್ನು ಪ್ರೀತಿಸುತ್ತಿದ್ದಳು ಎಂದು ತನಿಖೆಯಲ್ಲಿ ತಿಳಿದು ಬಂದಿದ್ದು, ಈಕೆಯನ್ನು ಸದ್ಯ ಬಂಧನಕ್ಕೊಳಪಡಿಸಲಾಗಿದೆ. ( https://www.ndtv.com/india-news/pulwama-attack-the-23-year-old-woman-insha-jan-who-helped-the-terrorists-2285802 ).
ಈ ಮಾಹಿತಿಯನ್ನು ಗಮನಿಸಿದಾಗ ದೇಶದ ಭದ್ರತೆಗೆ ದೇಶವಾಸಿಗಳೇ ಕುಮ್ಮಕ್ಕು, ಸಹಾಯ ನೀಡುವಾಗ ದೇಶದ ಅಭಿವೃದ್ಧಿಯ ಆಶಯ ಸರಿಯಾದ ನಿಟ್ಟಿನಲ್ಲಿ ಸಾಗುವುದಾದರೂ ಹೇಗೆ. ಬಾಹ್ಯ ಶತ್ರುಗಳನ್ನಾದರೂ ಜಯಿಸುವುದು ಸುಲಭ. ಆದರೆ ಆಂತರಿಕ ಶತ್ರುಗಳ ಸಮಸ್ಯೆಯನ್ನಿಟ್ಟುಕೊಂಡು ಅದನ್ನು ಬಗೆಹರಿಸಿಕೊಂಡು ಸಾಗುವಾಗ ಅಭಿವೃದ್ಧಿಯ ವೇಗ ಸ್ವಲ್ಪ ಮಟ್ಟಿಗೆ ಕುಂಠಿತವಾಗುತ್ತದೆ. ಹಾಗೆಂದು ಅಭಿವೃದ್ಧಿ ಆಗುತ್ತಿಲ್ಲ ಎಂದಲ್ಲ. ಇಂತಹ ನಕಾರಾತ್ಮಕ ವಿಚಾರಗಳ ಮಧ್ಯೆ ದೊಡ್ಡ ಮಟ್ಟದ ಅಭಿವೃದ್ಧಿಗಳನ್ನು ಗಮನಿಸಲು ಕೆಲವು ಜನರಿಗೆ ಕಷ್ಟವಾಗುತ್ತದೆ ಎಂದು. ಜೊತೆಗೆ ಈ ಅಭಿವೃದ್ಧಿಯನ್ನು ಒಪ್ಪಿಕೊಂಡಲ್ಲಿ ಎಲ್ಲಿ ನಮ್ಮನ್ನು ಜನರು ಕಸಕ್ಕಿಂತ ಕೀಳಾಗಿ ನೋಡುವರೊ ಎಂಬ ಭಯ. ಜೊತೆಗೆ ವಿಚಾರ ಒಳ್ಳೆಯದೋ ಕೆಟ್ಟದ್ದೋ, ಅದು ಮಾಡಿದ್ದು ನನ್ನ ವಿರೋಧಿ. ಹಾಗಾಗಿ ಅದನ್ನು ನಾನು ವಿರೋಧಿಸಲೇ ಬೇಕು ಎಂಬ ಸಂಕುಚಿತ ಮನೋಭಾವ.
ನಮ್ಮ ಮನೆ, ಮನ ಸರಿಯಾಗಬೇಕು, ಧನಾತ್ಮಕವಾಗಿ ಶ್ರೇಣಿಯತ್ತ ಸಾಗಬೇಕು ಎಂದಾದರೆ ಮೊದಲು ಒಳ್ಳೆಯ ವಿಚಾರಗಳು ನಮ್ಮ ವಿರೋಧಿಯೇ ಮಾಡಿದ್ದರೂ ಅದನ್ನು ಒಪ್ಪಿಕೊಳ್ಳುವ ಮನೋಭಾವ ಬೆಳೆಯಬೇಕು. ಜೊತೆಗೆ ನಮ್ಮ ನಮ್ಮೊಳಗೆ ಏನೇ ಕಚ್ಚಾಟವಿರಲಿ, ವಿರೋಧ ಮನಸ್ಥಿತಿ ಇರಲಿ. ಪರರಿಂದ ಹಾನಿ ಉಂಟಾಗುವ ಸಂದರ್ಭದಲ್ಲಿ, ಶತ್ರುಗಳೆದುರು ನಮ್ಮ ಮನೆ ಅಭಿವೃದ್ಧಿಯ ಶಿಖರಕ್ಕೆ ಏರುತ್ತಿದೆ ಎಂದಾದಲ್ಲಿ ಅದನ್ನು ಬೆಂಬಲಿಸುವ ಗುಣ ನಮಗಿರಬೇಕು. ಅದು ಬಿಟ್ಟು ಶತ್ರುಗಳ ಜೊತೆಗೆ ಸೇರಿ ಧನಾತ್ಮಕ ಬೆಳವಣಿಗೆಯನ್ನು ಕುಂಠಿತ ಮಾಡಲು ಹೊರಟರೆ ನಮ್ಮಷ್ಟು ಶತಮೂರ್ಖರು ಬೇರಿರಲು ಸಾಧ್ಯವಿಲ್ಲ. ಇಲ್ಲಿ ಮನೆ ಎಂದರೆ ದೇಶ, ಶತ್ರುಗಳು ನಮ್ಮ ದೇಶದ ಆಂತರಿಕ, ಬಾಹ್ಯ ವಿರೋಧಿ ಶಕ್ತಿಗಳು, ಭಯೋತ್ಪಾದನೆ.
ಈ ಸಂದರ್ಭದಲ್ಲಿ ನಾವು ಒಂದಂಶವನ್ನು ಗಮನವಿಟ್ಟು ಅರ್ಥೈಸಿಕೊಳ್ಳಬೇಕು. ಇಂದು ನಾ ನೆರೆಮನೆಗಿಟ್ಟ ಕಿಚ್ಚು, ನಾಳೆ ಬೆಂಕಿಯಾಗಿ ಹತ್ತಿರವಿರುವ ನನ್ನ ಮನೆಯನ್ನು ಸುಡುವ ದಿನ ದೂರವಿಲ್ಲ ಎಂದು. ನಾವು ಬದಲಾದಲ್ಲಿ ಮಾತ್ರ ದೇಶ ಬದಲಾದೀತು. ಸಮರ್ಥ ನಾಯಕತ್ವ ದೇಶಕ್ಕೆ ಸಿಕ್ಕಿದೆ. ಅದನ್ನು ಸರಿಯಾದ ರೀತಿಯಲ್ಲಿ ಮುನ್ನಡೆಸಬೇಕಾದರೆ ನಾವೆಲ್ಲರೂ ಒಂದೇ ಎಂಬ ಭಾವದಲ್ಲಿ ಆ ನಾಯಕನ ಜೊತೆಗೆ ಕೈಜೋಡಿಸಬೇಕಿದೆ. ಇನ್ನೂ ಕಾಲ ಮಿಂಚಿಲ್ಲ. ಹಾಗೆಂದು ಸುಮ್ಮನೆ ಕೂರುವುದಲ್ಲ. ಕಾಲ ಮಿಂಚುವ ಮುನ್ನ ಬದಲಾಗೋಣ. ವೈರುಧ್ಯಗಳೇನೇ ಇರಲಿ. ದೇಶಕ್ಕಾಗಿ ಒಗ್ಗಟ್ಟಾಗುವ ಮನಸ್ಸು ನಮ್ಮೆಲ್ಲರದಾಗಲಿ ಎಂಬುದಷ್ಟೇ ಆಶಯ. ನಮ್ಮೊಳಗಿನ ವೈರುಧ್ಯ ದೇಶದ ಅಭಿವೃದ್ಧಿಗೆ ತೊಡಕಾಗದಿರಲಿ ಎಂಬುದೇ ಉದ್ದೇಶ.
✍️ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.