ಕೊರೋನಾ ಸಂಕಷ್ಟದ ಈ ದಿನಗಳು ದೇಶದ ಆರ್ಥಿಕ, ಆರೋಗ್ಯ ಸಂಬಂಧಿ ಸ್ಥಿತಿಗತಿಗಳ ಜೊತೆಗೆ ಶೈಕ್ಷಣಿಕ ಅಭಿವೃದ್ಧಿಯ ಮೇಲೆಯೂ ತನ್ನ ಕರಿನೆರಳನ್ನು ಚಾಚಿದೆ. ಜೂನ್ನಲ್ಲಿಯೇ ಆರಂಭವಾಗಬೇಕಾಗಿದ್ದ ಈ ಶೈಕ್ಷಣಿಕ ವರ್ಷ ಈ ಬಾರಿ ಆಗಸ್ಟ್ ಮುಗಿಯುತ್ತಾ ಬಂದರೂ ಆರಂಭವಾಗಿಲ್ಲ.
ಇಂತಹ ಸಂದರ್ಭದಲ್ಲಿ ಕರ್ನಾಟಕ ರಾಜ್ಯದಲ್ಲಿ ಆನ್ಲೈನ್ ಶಿಕ್ಷಣವನ್ನು ಆರಂಭ ಮಾಡಲಾಗಿದೆ. ಆದರೆ ಹಳ್ಳಿಗಾಡಿನ, ಗ್ರಾಮೀಣ ಪ್ರದೇಶದ ಮಕ್ಕಳು, ಬಡವರು ಇದರಿಂದಾಗಿ ಸಂಕಷ್ಟ ಅನುಭವಿಸುವ ಸ್ಥಿತಿಯೂ ನಿರ್ಮಾಣವಾಗಿದೆ. ಏಕೆಂದರೆ ಗ್ರಾಮೀಣ ಪ್ರದೇಶಗಳಲ್ಲಿನ ಕೆಲವು ಮಕ್ಕಳು ಮೊಬೈಲ್ ಇದ್ದರೂ ನೆಟ್ವರ್ಕ್ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಕೆಲವು ಮಕ್ಕಳಿಗೆ ಆನ್ಲೈನ್ ಮೂಲಕ ನೀಡಲಾಗುವ ಶಿಕ್ಷಣ ಪಡೆಯುವುದಕ್ಕೆ ಮೊಬೈಲ್ ಇಲ್ಲ. ಇಂತಹ ಸಮಸ್ಯೆಗಳ ನಡುವೆ ಹಳ್ಳಿಗಾಡಿನ ಬಡ ಮಕ್ಕಳು ಬವಣೆ ಪಡುವಂತಾಗಿದೆ.
ಮಕ್ಕಳ ಈ ಸಮಸ್ಯೆಗಳನ್ನು ಅರಿತ ಉಜಿರೆಯ ನಿವಾಸಿ, ಅಮೆರಿಕಾದಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿರುವ ಶೇಷಗಿರಿ ಶೆಣೈ ಅವರು ಬಡ ಪ್ರತಿಭಾವಂತ ಮಕ್ಕಳಿಗೆ ಆನ್ಲೈನ್ ಶಿಕ್ಷಣದಲ್ಲಿ ತೊಡಗಿಸಿಕೊಳ್ಳಲು ಸಹಾಯವಾಗುವಂತೆ ಮೊಬೈಲ್ಗಳನ್ನು ಖರೀದಿಸಿ ನೀಡಿದ್ದಾರೆ. ಇವರ ಈ ಯೋಜನೆಗೆ ಸ್ನೇಹಿತರು ಮತ್ತು ಆತ್ಮೀಯರು ಸಹ ಬೆಂಬಲ ಸೂಚಿಸಿದ್ದು, ಅವರೊಂದಿಗೆ ಕೈ ಜೋಡಿಸಿದ್ದಾರೆ.
ಈಗಾಗಲೇ ಪ್ರಥಮ ಹಂತದಲ್ಲಿ 11 ಮೊಬೈಲ್ಗಳನ್ನು ಖರೀದಿಸಿ ಅರ್ಹ ಬಡ ವಿದ್ಯಾರ್ಥಿಗಳಿಗೆ ನೀಡುವ ಕೆಲಸವನ್ನು ಶೇಷಗಿರಿ ಮತ್ತವರ ತಂಡ ಯಶಸ್ವಿಯಾಗಿ ಮಾಡಿ ಮುಗಿಸಿದೆ. ಉಜಿರೆಯ ವಕೀಲ ಸುದೇಶ್ ಕಾಮತ್ ಅವರ ಕಛೇರಿಯಲ್ಲಿ, ಎಸ್ಡಿಎಂ ಕಾಲೇಜಿನ ಪ್ರಾಧ್ಯಾಪಕ ಶೈಲೇಶ್ ಉಜಿರೆ ಅವರ ಉಪಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್ಗಳನ್ನು ಹಸ್ತಾಂತರ ಮಾಡಲಾಯಿತು. ಇವರ ಈ ಕಾರ್ಯದಿಂದ ಸ್ಫೂರ್ತಿಗೊಂಡ ಮೊಬೈಲ್ ಅಂಗಡಿಯ ಮಾಲಕ ರಾಘವೇಂದ್ರ ಅವರು ಕಡಿಮೆ ಬೆಲೆಗೆ ಮೊಬೈಲ್ ಹೊಂದಿಸಿಕೊಡುವ ಕೆಲಸವನ್ನು ಮಾಡುವ ಮೂಲಕ ತಾವೂ ಈ ಸೇವೆಗೆ ಕೈ ಜೋಡಿಸಿದ್ದಾರೆ.
ಆ ಮೂಲಕ ಬಡ ವಿದ್ಯಾರ್ಥಿಗಳ ಶಿಕ್ಷಣದ ಕನಸನ್ನು ಕೈಗೂಡಿಸುವ ನಿಟ್ಟಿನಲ್ಲಿ ನಿಸ್ವಾರ್ಥ ಪ್ರಯತ್ನ ಶೇಷಗಿರಿ ಮತ್ತವರ ತಂಡ ಮಾಡಿದೆ. ತಮ್ಮ ಸಹಕಾರ ಮನೋಭಾವದ ಮೂಲಕವೇ ಶೇಷಗಿರಿ ಮತ್ತು ಅವರ ಸ್ನೇಹಿತರ ಬಳಗ ಇತರರಿಗೂ ಆದರ್ಶವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ಬಡತನದಲ್ಲಿ ಹುಟ್ಟಿದ ಅದೆಷ್ಟೋ ಮಕ್ಕಳು ಸರಿಯಾದ ಶಿಕ್ಷಣ ಸಿಗದೆ ಬಳಲುವಂತಹ ಪರಿಸ್ಥಿತಿ ಇಂದಿಗೂ ನಮ್ಮೆದುರು ಕಂಡುಬರುತ್ತದೆ. ಸರ್ವರಿಗೂ ಶಿಕ್ಷಣ ದೊರೆಯುವ, ಬಡವರ್ಗಕ್ಕೆ ಉಚಿತ ಶಿಕ್ಷಣ ದೊರೆಯಬೇಕೆಂಬ ಕಾನೂನುಗಳಿದ್ದರೂ ಕೆಲವೊಮ್ಮೆ ಕೆಲವು ಮಕ್ಕಳು ಶಿಕ್ಷಣದಿಂದ ವಿಮುಖರಾಗುವ ಸ್ಥಿತಿ ಇದೆ. ಹೀಗಿರುವಾಗಲೂ ತುತ್ತು ಅನ್ನಕ್ಕೂ ಪರದಾಡುವ ಅದೆಷ್ಟೋ ಪೋಷಕರು ತಮ್ಮ ಮಕ್ಕಳು ಓದಿ ಮುಂದೆ ಬರಬೇಕು. ಉತ್ತಮ ಉದ್ಯೋಗ ಹೊಂದಬೇಕು ಎಂಬೆಲ್ಲಾ ಕನಸಿಟ್ಟುಕೊಂಡು ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಆದರೆ ಈ ಬಾರಿ ಕೊರೋನಾ ಎಂಬ ಮಹಾಮಾರಿ ಬಂದು ಬಡ ಜನರ ಬದುಕು, ಆರೋಗ್ಯದ ಜೊತೆಗೆ ಬಡ ಮಕ್ಕಳ ಶಿಕ್ಷಣದ ಹಕ್ಕನ್ನೂ ಕಸಿದುಕೊಳ್ಳುವ ನೆಲೆಗೆ ಪರಿಸ್ಥಿತಿಯನ್ನು ತಂದು ಮುಟ್ಟಿಸಿದೆ.
ಒಂದು ಕಡೆಯಲ್ಲಿ ಮಕ್ಕಳಿಗೆ ಶಿಕ್ಷಣ ದೊರಕಿಸಿಕೊಡುವ ನಿಟ್ಟಿನಲ್ಲಿ ಪರ್ಯಾಯ ಹುಡುಕಿಕೊಂಡ ಸರ್ಕಾರ ಮತ್ತು ಶಿಕ್ಷಣ ಇಲಾಖೆಗಳು ಆನ್ಲೈನ್ ಶಿಕ್ಷಣವನ್ನು ಆರಂಭ ಮಾಡಿವೆ. ಆ ಮೂಲಕ ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡಬಾರದು ಎಂಬ ಸದುದ್ದೇಶದ ಯೋಜನೆಯನ್ನು ಹಮ್ಮಿಕೊಂಡಿದೆ. ಈ ಬಗೆ ಪಟ್ಟಣ ಪ್ರದೇಶಕ್ಕೇನೋ ಪೂರಕವೇ. ಹಳ್ಳಿಗಾಡಿನ ಮಕ್ಕಳಿಗಿರುವಂತಹ ನೆಟ್ವರ್ಕ್ ಸಮಸ್ಯೆ ನಗರ ಪ್ರದೇಶಗಳಲ್ಲಿ ಅಷ್ಟರ ಮಟ್ಟಿಗೆ ಬಾಧಿಸಲಾರದೇನೋ.
ಆದರೆ ಹಳ್ಳಿಯ ಮಕ್ಕಳ ಬದುಕೇ ಬೇರೆ. ಹೇಳಿ ಕೇಳಿ ಇದು ಮಳೆಗಾಲ. ಈ ಸಂದರ್ಭದಲ್ಲಿ ವಿದ್ಯುತ್ ಸಮಸ್ಯೆ, ನೆಟ್ವರ್ಕ್ ಸಮಸ್ಯೆಯನ್ನು ವಿದ್ಯಾರ್ಥಿಗಳು ಎದುರಿಸಬೇಕಾಗಿದೆ. ಹಾಗೆಯೇ ಹಳ್ಳಿಗಾಡಿನ ಬಡ ಕುಟುಂಬಗಳಲ್ಲಿ ಪ್ರತಿಭಾನ್ವಿತ ಮಕ್ಕಳಿದ್ದರೂ, ಅದಕ್ಕೆ ಬೇಕಾದ ಪೂರಕ ವ್ಯವಸ್ಥೆಗಳನ್ನು ಕಲ್ಪಿಸಿಕೊಳ್ಳಲಾಗದೆ ಪರದಾಡುವಂತಹ ಪರಿಸ್ಥಿತಿ ಇದೆ. ಇಂತಹ ಮಕ್ಕಳ ಸಮಸ್ಯೆಯನ್ನು ಅರಿತುಕೊಂಡು ಅವರಿಗೆ ಸಹಾಯ ನೀಡುವ ನೆಲೆಯಲ್ಲಿ ಮೊಬೈಲ್ ನೀಡುವ ಯೋಜನೆ ಹಾಕಿಕೊಂಡು, ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿರುವ ಶೇಷಗಿರಿ ಮತ್ತು ಅವರ ಗೆಳೆಯರಿಗೆ ನಾವು ಕೃತಜ್ಞತೆ ಅರ್ಪಿಸಲೇ ಬೇಕು. ಇವರ ಈ ಕಾರ್ಯದಿಂದ ಪ್ರೇರಣೆ ಪಡೆದ ಮತ್ತಷ್ಟು ಜನರು ಇದೇ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ನೆರವು ನೀಡಿ, ಶಿಕ್ಷಣ ಪಡೆಯಲು ಸಹಾಯ ಮಾಡುವಂತಾಗಲಿ ಎಂಬ ಆಶಯ ನಮ್ಮದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.