ಹನ್ನೊಂದು ವರ್ಷಗಳ ಹಿಂದೆ ಆರಂಭವಾದ ಕೇರಳ ಮೂಲದ ಟೆಕ್ಜೆನ್ಟ್ಸಿಯಾ ಸಾಫ್ಟ್ವೇರ್ ಟೆಕ್ನಾಲಜೀಸ್ ಪ್ರೈ. ಲಿ. ಕಂಪನಿಯು ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಗ್ರ್ಯಾಂಡ್ ಚಾಲೆಂಜ್ನಲ್ಲಿ ವಿಜೇತವಾಗಿದ್ದು, 1 ಕೋಟಿ ರೂ. ಗಳನ್ನು ತನ್ನ ಪಾಲಾಗಿಸಿಕೊಂಡಿದೆ. ಆ ಮೂಲಕ ಈ ಸಂಸ್ಥೆಯು ಜೂಮ್ ಆ್ಯಪ್ಗೆ ಸರಿಸಮನಾದ ವಿಡಿಯೋ ಕಾನ್ಫರೆನ್ಸ್ಗೆ ಪೂರಕವಾಗಿರುವ Vconsol ತಂತ್ರಜ್ಞಾನವನ್ನು ನೀಡಿದ ಕೀರ್ತಿಯನ್ನು ತನ್ನದಾಗಿಸಿಕೊಂಡಿದೆ.
ಕೊಚ್ಚಿಯಲ್ಲಿ ಟೆಕ್ ಕನ್ಸಲ್ಟೆಂಟ್ ಆಗಿ ವೃತ್ತಿ ಜೀವನ ಆರಂಭ ಮಾಡಿದ್ದ ಸೆಬಾಸ್ಟಿಯನ್ ಅವರ ಕನಸಿನ ಟೆಕ್ಜೆನ್ಟ್ಸಿಯಾ ವಿಡಿಯೋ ಕಾನ್ಫರೆನ್ಸ್ ಇದೀಗ ದೇಶದ ಡಿಜಿಟಲ್ ಇಂಡಿಯಾ ವೇದಿಕೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಪತಿರಪಳ್ಳಿ ಎಂಬ ಸಣ್ಣ ಹಳ್ಳಿಯ ವ್ಯಕ್ತಿಯೊಬ್ಬರ ಕನಸು ಇಂದು ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸುವಂತಾಗಿದೆ. ಆಲಪ್ಪುರದ ಟೆಕ್ ಪಾರ್ಕ್ನಲ್ಲಿನ ಸೆಬಾಸ್ಟಿಯನ್ ಅವರ ಕನಸಿನ ಟೆಕ್ಜೆನ್ಟ್ಸಿಯಾ ವಿಡಿಯೋ ಕಾನ್ಫರೆನ್ಸ್ ಆ್ಯಪ್ ಇದೀಗ ಕೇಂದ್ರ ಸರ್ಕಾರದ ಪ್ರಶಂಸೆ, ಬಹುಮಾನಕ್ಕೂ ಪಾತ್ರವಾಗಿದ್ದು, ಆ ಮೂಲಕ 44 ವರ್ಷದ ಕೇರಳದ ಪುಟ್ಟ ಹಳ್ಳಿಯ ಸೆಬಾಸ್ಟಿಯನ್ ಮತ್ತು ಅವರ ತಂತ್ರಜ್ಞಾನ ಪ್ರಖ್ಯಾತವಾಗಿದೆ. ಜೊತೆಗೆ ಇತರ ತಂತ್ರಜ್ಞಾನ ಅಭಿವೃದ್ಧಿ ಮಾಡುವ ಆಶಯವಿರುವ ಅದೆಷ್ಟೋ ಜನರಿಗೆ ಮಾದರಿಯಾಗಿದೆ ಎಂದರೂ ತಪ್ಪಾಗಲಾರದು.
ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾದಲ್ಲಿ ವಿಜೇತರಾಗಿರುವ ಬಗ್ಗೆ ಸಂತಸ ಹಂಚಿಕೊಂಡಿರುವ ಸೆಬಾಸ್ಟಿಯನ್, ಕೇಂದ್ರದ ಈ ಸವಾಲು ನನ್ನ ಕನಸನ್ನು, ನನ್ನ ತಂತ್ರಜ್ಞಾನವನ್ನು ಜಗತ್ತಿಗೆ ಪರಿಚಯಿಸಲು ನನಗೆ ಸಹಾಯ ಮಾಡಿತು. ದೇಶಕ್ಕಾಗಿ ಈ ತಂತ್ರಜ್ಞಾನವನ್ನು ಅಭಿವೃದ್ಧಿ ಮಾಡಿದ್ದು, ಸದ್ಯ ಆ ಕನಸು ನನಸಾಗಿರುವುದಾಗಿ ತಿಳಿಸಿದ್ದಾರೆ. ಇವರು ಕೊಲ್ಲಂನ ಟಿಕೆಎಂ ಕಾಲೇಜ್ ಆಫ್ ಎಂಜಿನಿಯರಿಂಗ್ ನಲ್ಲಿ ಎಂಸಿಎ ಪದವಿ ಪಡೆದಿದ್ದಾರೆ.
ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಬಗೆಗೂ ಸೆಬಾಸ್ಟಿಯನ್ ಮಾಹಿತಿ ನೀಡಿದ್ದು, 2009 ರಲ್ಲಿ ತಮ್ಮ ಬಹುಕಾಲದ ಗೆಳೆಯ ಟೋನಿ ಥಾಮಸ್ ಅವರ ಜೊತೆಗೂಡಿ ಈ ಸಂಸ್ಥೆಯನ್ನು ಹುಟ್ಟುಹಾಕಿದ್ದಾಗಿ ತಿಳಿಸಿದ್ದಾರೆ. ಸದ್ಯ ಟೋನಿ ಅವರು ಆಸ್ಟ್ರೇಲಿಯಾದಲ್ಲಿದ್ದಾರೆ. ನಾವಿಬ್ಬರೂ ಮೊದಲಿನಿಂದಲೂ ವಿಡಿಯೋ ಕಾನ್ಫರೆನ್ಸ್ ಆರ್ ಆಂಡ್ ಡಿ ಬಗ್ಗೆ ಆಸಕ್ತಿ ವಹಿಸಿ ಕೆಲಸ ಮಾಡಿದ್ದು, ಈಗ ಆ ಕೆಲಸಕ್ಕೆ ಬೆಲೆ ಸಿಕ್ಕಂತಾಗಿದೆ ಎಂದೂ ಅವರು ಹೇಳಿದ್ದಾರೆ. ಟೆಕ್ಜೆನ್ಟ್ಸಿಯಾ ಅಭಿವೃದ್ಧಿ ಮಾಡಿರುವ ಬಿ 2 ಬಿ ಮಾದರಿಗೆ ಅಮೆರಿಕ, ಭಾರತ, ಯರೋಪ್ ರಾಷ್ಟ್ರಗಳಿಂದಲೂ ಗ್ರಾಹಕರಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಹನ್ನೊಂದು ವರ್ಷಗಳಲ್ಲಿ ನಾವೂ ಬೆಳೆದಿದ್ದೇವೆ. ಜೊತೆಗೆ 65 ಜನರಿಗೆ ನಮ್ಮ ಸಂಸ್ಥೆಯ ಮೂಲಕ ಬದುಕು ಕಟ್ಟಿಕೊಳ್ಳುವ ಉದ್ಯೋಗವನ್ನೂ ನೀಡಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನಮ್ಮ ಸ್ಟಾರ್ಟ್-ಅಪ್ ಆಯ್ಕೆಯಾಗಲು ನಮ್ಮ ತಂತ್ರಜ್ಞರ ವಿಶ್ವಾಸ ಮತ್ತು ಅವರಲ್ಲಿನ ಸಾಮರ್ಥ್ಯವೇ ಕಾರಣವಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಇನ್ನು ಡಿಜಿಟಲ್ ಇಂಡಿಯಾದಲ್ಲಿ ವಿಜೇತವಾಗಿರುವ ತಮ್ಮ ಸ್ಟಾರ್ಟ್-ಅಪ್ ಬಗ್ಗೆ ಮಾಹಿತಿ ನೀಡಿರುವ ಅವರು, ಜೂಮ್ ಆ್ಯಪ್ ನಲ್ಲಿರುವ ಎಲ್ಲಾ ವೈಶಿಷ್ಟ್ಯತೆಗಳನ್ನು ಈ ಆ್ಯಪ್ ಹೊಂದಿದೆ ಎಂದು ತಿಳಿಸಿದ್ದಾರೆ. ವಿಕನ್ಸೋಲ್ ಯುಎಸ್ಪಿ ಸುರಕ್ಷತೆಯನ್ನೂ ಕಾಯ್ದುಕೊಂಡಿದೆ ಎಂದು ಹೇಳಿದ್ದಾರೆ. ಜೂಮ್ ಆ್ಯಪ್ ಭದ್ರತಾ ಲೋಪವನ್ನು ಹೊಂದಿರುವುದಾಗಿ ಹೇಳಲಾಗಿದೆ. ಆದರೆ ನಾವು ನಮ್ಮ ಸ್ಟಾರ್ಟ್-ಅಪ್ ನಲ್ಲಿ ಭದ್ರತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದೇವೆ. ಇದನ್ನು ಬಳಕೆ ಮಾಡುವವರಿಗೆ ಬೇರೆ ಬೇರೆ ಪಾಸ್ವರ್ಡ್ ವ್ಯವಸ್ಥೆಯೂ ಇದೆ. ನಿರೀಕ್ಷಿತ ಅಥವಾ ಆಹ್ವಾನಿತರಿಗಷ್ಟೇ ಈ ಆ್ಯಪ್ ಮೂಲಕ ವಿಡಿಯೋ ಕಾನ್ಫರೆನ್ಸ್ನಲ್ಲಿ ಭಾಗವಹಿಸುವಂತೆ ಇದನ್ನು ವ್ಯವಸ್ಥೆ ಮಾಡಲಾಗಿದೆ. ಈ ಆ್ಯಪ್ ಮೂಲಕ ವಿಡಿಯೋ ಕಾನ್ಫರೆನ್ಸ್ನಲ್ಲಿ ಭಾಗವಹಿಸುವವರ ಮೊಬೈಲ್ ಸಂಖ್ಯೆಗೆ ಒಟಿಪಿ ಹೋಗುತ್ತದೆ. ಆ ಒಟಿಪಿ ಮೂಲಕ ಮಾತ್ರವೇ ಭಾಗವಹಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಸದ್ಯ ಈ ಆ್ಯಪ್ ಗೆ ಕೇಂದ್ರ ಸರ್ಕಾರದಿಂದ ಒಂದು ಕೋಟಿ ರೂ. ಆರ್ಥಿಕ ನೆರವು ಮತ್ತು ಮುಂದಿನ ಮೂರು ವರ್ಷಗಳ ಕಾರ್ಯಾಚರಣೆ, ನಿರ್ವಹಣೆ, ಅಭಿವೃದ್ಧಿಗಾಗಿ ಹೆಚ್ಚುವರಿ ಹತ್ತು ಲಕ್ಷ ರೂ. ಗಳನ್ನು ನೀಡಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ತಿಳಿಸಿದೆ. ಈ ಆ್ಯಪ್ ಮಾತ್ರವಲ್ಲದೆ ಇತರ ಅರ್ಜಿದಾರರು ಅಭಿವೃದ್ಧಿ ಮಾಡಿರುವ ಮತ್ತೆ ಮೂರು ಆ್ಯಪ್ ಗಳನ್ನೂ ತೀರ್ಪುಗಾರರು ಆಯ್ಕೆ ಮಾಡಿದ್ದಾರೆ. ಈ ಆ್ಯಪ್ ಗಳಿಗೆ ಮುಂದಿನ ಮೂರು ತಿಂಗಳುಗಳ ಕಾಲ ಅವುಗಳನ್ನು ಮತ್ತಷ್ಟು ಅಭಿವೃದ್ಧಿ ಮಾಡುವಂತೆ ಸೂಚಿಸಿದ್ದು ಆರ್ಥಿಕ ನೆರವು 25 ಲಕ್ಷ ರೂ. ಗಳನ್ನು ನೀಡುವುದಾಗಿಯೂ ಸಚಿವಾಲಯ ಮಾಹಿತಿ ನೀಡಿದೆ.
ಟೆಕ್ಜೆನ್ಟ್ಸಿಯಾ, ಸರ್ವ್ ವೆಬ್ಸ್ ಪ್ರೈವೇಟ್ ಲಿಮಿಟೆಡ್ (ಜೈಪುರ), ಪೀಪಲ್ಲಿಂಕ್ ಯೂನಿಫೈಡ್ ಕಮ್ಯುನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್ (ಹೈದರಾಬಾದ್) ಮತ್ತು ಇನ್ಸ್ಟ್ರೈವ್ ಸಾಫ್ಟ್ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ (ಚೆನ್ನೈ) – ಸಿಇಆರ್ಟಿ-ಇನ್ ಮತ್ತು ಸಿಡಿಎಸಿ ಸೇರಿದಂತೆ ವಿವಿಧ ಸರ್ಕಾರಿ ಟೆಕ್ಗಳಿಗೂ ಕೇಂದ್ರ ಐಟಿ ಸಚಿವಾಲಯ ಈ ಸಂದರ್ಭದಲ್ಲಿ ಬೆಂಬಲ ಸೂಚಿಸಿದೆ.
ವಿಜೇತರ ಘೋಷಣೆಯ ಬಳಿಕ ಮಾತನಾಡಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಪ್ರಧಾನಿ ಮೋದಿ ಅವರ ಕನಸಿನ ಆತ್ಮನಿರ್ಭರ ಸ್ವಾವಲಂಬಿ ಭಾರತದ ನಿರ್ಮಾಣಕ್ಕೆ ಈ ಹೆಜ್ಜೆ ಬಲ ನೀಡಲಿದೆ. ಭಾರತದ ಸಾಫ್ಟ್ವೇರ್ ಮತ್ತು ಮೊಬೈಲ್ ಆ್ಯಪ್ ಗಳ ಮೂಲಕವೂ ಆರ್ಥಿಕತೆಯನ್ನು ಭದ್ರಗೊಳಿಸುವತ್ತ ಕೇಂದ್ರ ಸರ್ಕಾರ ಚಿತ್ತ ನೆಟ್ಟಿದೆ. ಈ ಪ್ರಯತ್ನದ ಮೂಲಕವೇ ನಾವು ಸಮರ್ಥ ರಾಷ್ಟ್ರವನ್ನು ನಿರ್ಮಾಣ ಮಾಡುವುದಾಗಿಯೂ ತಿಳಿಸಿದ್ದಾರೆ.
ಆತ್ಮನಿರ್ಭರ ಭಾರತದ ಕಲ್ಪನೆಯಲ್ಲಿ ಸೆಬಾಸ್ಟಿಯನ್ ಎಂಬ ಗ್ರಾಮೀಣ ಪ್ರದೇಶದ ಪ್ರತಿಭೆ ಅಭಿವೃದ್ಧಿ ಮಾಡಿರುವ ಟೆಕ್ನಾಲಜಿ ಇಂದು ದೇಶ ವಿದೇಶಗಳಲ್ಲಿ ತನ್ನ ಕೀರ್ತಿ ಪತಾಕೆ ಹಾರಿಸುವಂತಾಗಿದೆ. ಮೋದಿ ಅವರ ಕನಸಿನ ಡಿಜಿಟಲ್ ಇಂಡಿಯಾ ಸೆಬಾಸ್ಟಿಯನ್ ಅವರಂತಹ ಅದೆಷ್ಟೋ ಗ್ರಾಮೀಣ ಪ್ರತಿಭೆಗಳಿಗೆ ಭರವಸೆ ತುಂಬುವ, ಸ್ವಾವಲಂಬಿ ರಾಷ್ಟ್ರದ ಕಲ್ಪನೆಗೆ ಜೀವ ತುಂಬುವ ಮತ್ತು ಭಾರತೀಯರಲ್ಲಿ ನಾವು ಏನಾದರೊಂದು ಸಾಧಿಸಬೇಕಲ್ಲಾ ಎಂಬ ಛಲವನ್ನು ಹುಟ್ಟಿಸಿದೆ ಎಂಬುದಕ್ಕೆ ಟೆಕ್ಜೆನ್ಟ್ಸಿಯಾದ ಗೆಲುವೇ ಸಾಕ್ಷಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.