ಕೊರೋನಾವೈರಸ್ ಎಂಬ ಮಹಾಮಾರಿ ನಮ್ಮ ಭೂಮಿಯನ್ನು ಅಪ್ಪಳಿಸುವ ಮೊದಲು ಶಿಕ್ಷಣದಲ್ಲಿ ಡಿಜಿಟಲೀಕರಣ, ಅದರಲ್ಲೂ ಪ್ರಾಥಮಿಕ ಶಿಕ್ಷಣದಲ್ಲಿ ಡಿಜಿಟಲೀಕರಣದ ವಿಷಯ ಬಹುವಾಗಿ ಚರ್ಚೆಗೆ ಒಳಪಡಲಿಲ್ಲ. ಆನ್ಲೈನ್ನಿಂದ ಮಕ್ಕಳು ಎಷ್ಟು ದೂರ ಇರುತ್ತಾರೋ ಅಷ್ಟು ಒಳ್ಳೆಯದು ಎಂಬ ಅಭಿಪ್ರಾಯ ಎಲ್ಲರಲ್ಲೂ ಇತ್ತು. ಆಡಿ ಬೆಳೆಯಬೇಕಾದ ಮಕ್ಕಳನ್ನು ಡಿಜಿಟಲ್ ಕೈಗೊಂಬೆ ಮಾಡುವುದು ಅವರ ಮಾನಸಿಕ ಬೆಳವಣಿಗೆಗೆ ಉತ್ತಮವಾದುದು ಅಲ್ಲ ಎಂಬುದನ್ನು ತಜ್ಞರು ಕೂಡ ಹೇಳುತ್ತಲೇ ಬಂದಿದ್ದಾರೆ. ಆದರೆ ಕೊರೋನಾ ಎಂಬ ಹಿಂದೆಂದೂ ಕಂಡುಕೇಳರಿಯದ ಸಾಂಕ್ರಾಮಿಕ ರೋಗ ಎಲ್ಲವನ್ನೂ ಬದಲಾಯಿಸಿಬಿಟ್ಟಿದೆ. ಇದರ ಹೊಡೆತಕ್ಕೆ ಶಿಕ್ಷಣಕ್ಷೇತ್ರ ಅಲ್ಲೋಲ ಕಲ್ಲೋಲವಾಗಿದೆ. ಅತ್ತ ಶಾಲೆಗೂ ಹೋಗಲಾರದೆ, ಇತ್ತ ಮನೆಯಲ್ಲೂ ಕಲಿಯಲಾರದೆ ಮಕ್ಕಳು ಪರಿತಪಿಸುತ್ತಿದ್ದಾರೆ.
ಮಕ್ಕಳ ಶಿಕ್ಷಣ ಮೊಟಕುಗೊಳ್ಳಬಾರದು ಎಂಬ ಕಾರಣಕ್ಕೆ ಆನ್ಲೈನ್ ಶಿಕ್ಷಣ ಪದ್ಧತಿಯನ್ನು ಪರಿಚಯಿಸಲಾಗಿದೆ. ಮೊಬೈಲ್, ಲ್ಯಾಪ್ಟಾಪ್ನಿಂದ ದೂರವಿರಿ ಎನ್ನುತ್ತಿದ್ದ ಶಿಕ್ಷಕರು ಈಗ ಮಕ್ಕಳಿಗೆ ಅದೇ ಮಾಧ್ಯಮದ ಮೂಲಕ ಪಾಠ ಹೇಳಿಕೊಡುವ ದುಃಸ್ಥಿತಿ ಬಂದಿದೆ. ಶಾಲೆಯಿಂದ, ತಮ್ಮ ಶಿಕ್ಷಕರಿಂದ, ಸಹಪಾಠಿಗಳಿಂದ ದೂರವೇ ಉಳಿದು ಪಾಠ ಕಲಿಯಬೇಕಾದ ಅನಿವಾರ್ಯತೆ ಮಕ್ಕಳಿಗೆ ಬಂದೊದಗಿದೆ. ಆನ್ಲೈನ್ ಶಿಕ್ಷಣ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಬಲ್ಲದು ಎಂಬ ಕಲ್ಪನೆ ಯಾರಲ್ಲೂ ಇಲ್ಲ. ಆದರೂ ಅನಿವಾರ್ಯತೆಗೆ ಒಗ್ಗಿಕೊಂಡು ಇದನ್ನು ಅನುಸರಿಸಲೇಬೇಕಾಗಿದೆ.
ನಗರ ಪ್ರದೇಶದಲ್ಲಿನ, ಮಧ್ಯಮ ವರ್ಗ ಅಥವಾ ಸಿರಿವಂತ ಕುಟುಂಬದ ಮಕ್ಕಳೇನೋ ಮೊಬೈಲ್ ಅಥವಾ ಲ್ಯಾಪ್ಟಾಪ್ ಬಳಸಿ ಆನ್ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಆದರೆ ಹಳ್ಳಿಗಾಡಿನ, ಬಡ ವರ್ಗದ ಮಕ್ಕಳ ಸ್ಥಿತಿ ಇಷ್ಟು ಉತ್ತಮವಾಗಿಲ್ಲ. ಎಲ್ಲರ ಪೋಷಕರ ಬಳಿಯೂ ಸ್ಮಾರ್ಟ್ಫೋನ್ ಇಲ್ಲ, ಇದ್ದರೂ ಕೆಲವು ಕಡೆ ನೆಟ್ವರ್ಕ್ ಸಿಗುತ್ತಿಲ್ಲ. ಈ ಕೊರತೆಗಳ ನಡುವೆ ಶಿಕ್ಷಣ ಕಲಿಯುವುದು ಮರೀಚಿಕೆಯಾಗಿ ಉಳಿದಿದೆ.
ಎನ್ಸಿಇಆರ್ಟಿ ಇತ್ತೀಚಿಗೆ ನಡೆಸಿದ ಸಮೀಕ್ಷೆಯ ಪ್ರಕಾರ, ಶೇಕಡ 27ರಷ್ಟು ವಿದ್ಯಾರ್ಥಿಗಳ ಬಳಿ ಸ್ಮಾರ್ಟ್ಫೋನ್ ಅಥವಾ ಲ್ಯಾಪ್ಟಾಪ್ ಇಲ್ಲ. ಮಾತ್ರವಲ್ಲ, ಶೇಕಡ 28ರಷ್ಟು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಆನ್ಲೈನ್ ಕ್ಲಾಸ್ ಕಲಿಯಲು ವಿದ್ಯುತ್ ಕೊರತೆ ಇದೆ. ಈ ಸಮೀಕ್ಷೆಯಲ್ಲಿ ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ ಮತ್ತು ಸಿಬಿಎಸ್ಸಿ ಮಾನ್ಯತೆಯಡಿ ನಡೆಯುತ್ತಿರುವ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಸೇರಿದಂತೆ 35 ಸಾವಿರ ಮಂದಿ ಪಾಲ್ಗೊಂಡಿದ್ದಾರೆ. ಸಮೀಕ್ಷೆಗೆ ಒಳಪಟ್ಟ ಅನೇಕ ಮಂದಿ, ‘ತಮಗೆ ಆನ್ಲೈನ್ ಕಲಿಕೆಗಾಗಿ ಉಪಯೋಗಿಸುವ ಸಾಧನೆಗಳನ್ನು ಬಳಸುವ ಬಗ್ಗೆ ಜ್ಞಾನದ ಕೊರತೆಯಿದೆ’ ಎಂದು ಹೇಳಿಕೊಂಡಿದ್ದಾರೆ. ಕೆಲವರು ‘ಶಿಕ್ಷಕರಲ್ಲಿ ಆನ್ಲೈನ್ ಪಾಠ ಮಾಡಲು ಪರಿಣಿತಿ ಇಲ್ಲ’ ಎಂದು ಅಭಿಪ್ರಾಯಿಸಿದ್ದಾರೆ.
ಆನ್ಲೈನ್ ಸಾಧನಗಳನ್ನು ಪರಿಣಾಮಕಾರಿಯಾಗಿ ಬಳಸುವ ಜ್ಞಾನದ ಕೊರತೆ ಇರುವ ಕಾರಣ, ಪರಿಣಾಮಕಾರಿ ಬೋಧನೆ, ಕಲಿಕೆ ಸಾಧ್ಯವಾಗುತ್ತಿಲ್ಲ. ಇದರಿಂದ ಸಂವಹನಕ್ಕೂ ತೊಂದರೆಯಾಗುತ್ತಿದೆ ಎಂದು ಅನೇಕ ಪೋಷಕರು ಸಮೀಕ್ಷೆಯಲ್ಲಿ ಅಳಲು ತೋಡಿಕೊಂಡಿದ್ದಾರೆ. ಲಭ್ಯವಿರುವ ಇ-ಪಠ್ಯ ಪುಸ್ತಕಗಳ ಬಗ್ಗೆ ಅನೇಕರಿಗೆ ಮಾಹಿತಿಯೇ ಇಲ್ಲ. ಇದುವರೆಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಠ್ಯಪುಸ್ತಕಗಳಿಗೆಯೇ ಅವಲಂಬಿಸಿಕೊಂಡಿದ್ದರಿಂದ ಅವರಿಗೆ ತಮ್ಮ ಕಂಫರ್ಟ್ ಝೋನ್ ಬಿಟ್ಟು ಹೊರ ಬರಲು ಸಾಧ್ಯವಾಗುತ್ತಿಲ್ಲ. ಇದರಿಂದ ಶಿಕ್ಷಣದ ಮೇಲೆ ದೊಡ್ಡಮಟ್ಟದ ಹೊಡೆತ ಬೀಳುತ್ತಿದೆ.
ಒಟ್ಟಿನಲ್ಲಿ ಕೊರೋನವೈರಸ್ ಎಂಬ ಮಹಾಮಾರಿ ತಂದಿಟ್ಟ ಸಂಕಷ್ಟ ಶಾಲಾ ಮಕ್ಕಳ ಶಿಕ್ಷಣದ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಮಕ್ಕಳ ಆರೋಗ್ಯದ ಸಂರಕ್ಷಣೆಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಶಾಲೆಗಳನ್ನು ಆರಂಭ ಮಾಡುವುದು ಸಾಧ್ಯವಾಗದ ಮಾತು. ಆದರೆ ಶಾಲೆಯಿಂದ ದೂರವಿದ್ದು ಮಕ್ಕಳು ಮತ್ತು ಶಿಕ್ಷಕರು ಇನ್ನಿಲ್ಲದ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಭವಿಷ್ಯದಲ್ಲಿ ಬಹುಶಃ ಆನ್ಲೈನ್ ಶಿಕ್ಷಣ ಜೀವನದ ಅವಿಭಾಜ್ಯ ಅಂಗ ಆಗಬಹುದು, ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇದು ಹಲವು ಸಮಸ್ಯೆಗಳಿಗೆ ಎಡೆಮಾಡಿಕೊಟ್ಟಿದೆ. ಆದರೆ ಪರಿಸ್ಥಿತಿ ಅನಿವಾರ್ಯತೆಯ ಕಾರಣ ನಾವಿದನ್ನು ಅನುಭವಿಸಲೇಬೇಕು. ಸರ್ಕಾರಗಳು ಆನ್ಲೈನ್ ಶಿಕ್ಷಣಕ್ಕೆ ಪೂರಕವಾದ ಹೆಚ್ಚಿನ ಕ್ರಮಗಳನ್ನು ಕೈಗೊಂಡು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಮಸ್ಯೆಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕಿದೆ.
ಶರಣ್ಯ ಶೆಟ್ಟಿ✍️
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.