ಬಗೆದಷ್ಟೂ ಸ್ಪೋಟಕ ವಿಚಾರಗಳನ್ನು ಬಿಚ್ಚಿಡುತ್ತಲೇ ಹೋಗುತ್ತಿದೆ ಬೆಂಗಳೂರು ಡಿಜೆ ಹಳ್ಳಿ, ಕೆಜಿ ಹಳ್ಳಿ, ಕಾವಲ್ಭೈರಸಂದ್ರದ ಗಲಭೆಯ ಪ್ರಕರಣ. ಫೇಸ್ಬುಕ್ ಪೋಸ್ಟ್ ಒಂದರಿಂದ ಹೊತ್ತಿಕೊಂಡಿದೆ ಎಂದು ನಂಬಲಾದ ಕಿಡಿಯ ಹಿಂದಿನ ರಹಸ್ಯಗಳನ್ನು ಬೇಧಿಸುತ್ತಾ ಹೋದಂತೆ ಬೆಚ್ಚಿ ಬೀಳುವ ಮಾಹಿತಿಗಳು ಪೊಲೀಸ್ ಇಲಾಖೆಗೆ ಮತ್ತಷ್ಟು ಮಗದಷ್ಟು ಎಂಬಂತೆ ಸಿಗುತ್ತಲೇ ಇದೆ. ಈ ಪ್ರಕರಣಕ್ಕೆ ಇನ್ನೆಷ್ಟು ತಿರುವುಗಳಿವೆಯೋ ಎಂಬುದು ಇದರಲ್ಲಿ ಭಾಗಿಯಾದವರಿಗೂ ತಿಳಿದಿರಲಿಕ್ಕಿಲ್ಲವೇನೋ. ಕೇವಲ ಕೆಲವು ಶಕ್ತಿಗಳ ಹಿತಾಸಕ್ತಿಗೆ ಇಂತಹ ಒಂದು ದೊಡ್ಡ ಮಟ್ಟದ ಗಲಭೆ ನಡೆದು ಹೋಗಿರುವುದು ನಿಜಕ್ಕೂ ಬೇಸರದ ವಿಚಾರ.
ಅದೇನೇ ಇರಲಿ, ಇಂತಹ ಗಲಭೆಗಳು ಇದೇ ಮೊದಲೇನಲ್ಲ. ಈ ಹಿಂದೆಯೂ ಅದೆಷ್ಟೋ ಪ್ರಕರಣಗಳು ಪೊಲೀಸ್ ಡೈರಿ ಸೇರಿದ್ದನ್ನು ನಾವು ನೋಡಿದ್ದೇವೆ. ಕೇಳಿದ್ದೇವೆ. ಕೊಂಚ ಸಮಯದ ಬಳಿಕ ಪ್ರಕರಣ ತಣ್ಣಗಾಗಿದ್ದು, ಭಾಗಿಯಾದವನಿಗೂ ಮರೆತು ಹೋಗಿದ್ದನ್ನೂ ಕಂಡಿದ್ದೇವೆ. ಮುಂದಿನ ದಿನಗಳಲ್ಲಿ ಈ ಘಟನೆಯೂ ಕ್ರಮೇಣ ಜನರ ಮನಸ್ಸಿನಿಂದ ಮಾಸಿ ಹೋಗುತ್ತದೆ ಎಂಬುದರಲ್ಲಿಯೂ ಯಾವುದೇ ಸಂದೇಹ ಬೇಡ. ಏಕೆಂದರೆ ಮರೆವು ಎಂಬ ಮಾಯೆಗೆ ಅಂತಹ ಶಕ್ತಿ ಇದೆ. ಈ ನಡುವೆ ನಾವು ಯೋಚಿಸಬೇಕಾದದ್ದು ಎತ್ತ ಸಾಗುತ್ತಿದೆ ನಮ್ಮ ಸಮಾಜ ಎಂದು.
ಯಾವ ಧರ್ಮಗಳಲ್ಲಿಯೂ ಇಂದು ಶಿಕ್ಷಣ ಕೈಗೆಟುಕದ ಹಣ್ಣಾಗಿ ಉಳಿದಿಲ್ಲ. ಬದಲಾಗಿ ಸರ್ವರಿಗೂ ಶಿಕ್ಷಣ ದೊರೆಯುವಂತಹ ಅದೆಷ್ಟೋ ಕಾನೂನುಗಳಿವೆ. ಈ ಜಮಾನದಲ್ಲಿ ಯುವ ಜನರು ಶಿಕ್ಷಣ ಇಲ್ಲದವರು ಎಂದು ಹೇಳಿದರೆ ಅದಕ್ಕಿಂತ ದೊಡ್ಡ ತಮಾಷೆ ಮತ್ತೊಂದಿರಲಾರದು. ಶಿಕ್ಷಣ ದೊರೆತರೂ ಸಮಾಜದ ಸ್ವಾಸ್ಥ್ಯ ಕದಡುವಲ್ಲಿ ಕೆಲವು ದುಷ್ಟ ಮನಸ್ಥಿತಿಗಳು ನಿರ್ಮಾಣವಾಗುವುದನ್ನು ಕಂಡಾಗ ನಮಗನಿಸುವುದು ಪಡೆದ ಶಿಕ್ಷಣ ನಮಗೇನು ಕಲಿಸಿದೆ ಎಂದು. ಇದು ಸುವಿಚಾರಗಳನ್ನು ಕಲಿತವರಿಗಲ್ಲ. ಬದಲಾಗಿ ಇಂತಹ ಪೂರ್ವ ಯೋಜಿತ, ಪೂರ್ವಯೋಜಿತವಲ್ಲದ ಗಲಭೆಗಳನ್ನು ಸೃಷ್ಟಿಸಿ, ಅದರಲ್ಲಿ ಭಾಗವಹಿಸಿ ಜನರ ನೆಮ್ಮದಿ ಕೆಡಿಸಿ ಭಯದ ವಾತಾವರಣ ನಿರ್ಮಾಣ ಮಾಡುವವರಿಗೆ ಮತ್ತು ಆ ಮೂಲಕ ತಮ್ಮ ತಲೆಗೂ ಚಪ್ಪಡಿ ಕಲ್ಲು ಎಳೆದುಕೊಳ್ಳುವವರಿಗೆ ಅನ್ವಯವಾಗುತ್ತದೆ. ಕಾರಣ ಇದರಲ್ಲಿ ನಷ್ಟ ಅನುಭವಿಸುವವರು ವಿಚಾರ ತಿಳಿದುಕೊಳ್ಳದೆ, ಯಾರೋ ಹೇಳಿದ್ದನ್ನು ಕೇಳಿ, ಇನ್ಯಾರಿಂದಲೋ ಪ್ರೇರೇಪಣೆ ಪಡೆದು ದುಷ್ಕೃತ್ಯ ನಡೆಸುವವರೇ ಆಗಿರುತ್ತಾರೆ. ಇದಕ್ಕೆ ಪ್ರೇರಣೆ ನೀಡಿದ ಶಕ್ತಿಗಳು ದೂರದಲ್ಲೆಲ್ಲೋ ಕುಳಿತು ತಾವು ಬೇರೆಯವರ ಕೈಯಿಂದ ಹಚ್ಚಿಸಿದ ದ್ವೇಷದ ಬೆಂಕಿಗೆ ಚಳಿ ಕಾಯಿಸಿಕೊಳ್ಳುತ್ತಾ, ಮತ್ತೊಂದು ಕುಕೃತ್ಯದ ಸಂಚು ನಡೆಸುವುದರಲ್ಲೇ ಬ್ಯುಸೀಯಾಗಿರುತ್ತಾರೆ. ನೀವು ನಂಬುತ್ತೀರೋ ಬಿಡುತ್ತೀರೋ ಇದು ಇಂತಹ ಎಲ್ಲಾ ಘಟನೆಗಳ ಹಿಂದಿರುವ ಕಹಿ ಸತ್ಯ.
ಹಾಗಾದರೆ ಇಂತಹ ದುಷ್ಟತನದಲ್ಲಿ ಭಾಗಿಯಾದ ಜನರು ಅಮಾಯಕರೇ? ಇದೊಂದು ಪ್ರಶ್ನೆ ಸಹಜವಾಗಿ ಕಾಡಬಹುದು. ಖಂಡಿತವಾಗಿಯೂ ಅಲ್ಲ. ಬದಲಾಗಿ ಕೆಟ್ಟ ವಿಚಾರವಿರಲಿ, ಉತ್ತಮ ವಿಚಾರಗಳಿರಲಿ. ಅವುಗಳನ್ನು ಸಾಧಿಸಿಕೊಳ್ಳಲು, ಬಗೆಹರಿಸಿಕೊಳ್ಳಲು, ಪರಿಹರಿಸಲು ದೇಶದಲ್ಲಿ ಎಲ್ಲಾ ವ್ಯವಸ್ಥೆಗಳೂ ಇವೆ. ಆ ಎಲ್ಲದರ ಮೊರೆ ಹೋಗದೆ ಯಾರೋ ಹೇಳಿದ್ದನ್ನು ಕೇಳಿ, ಅವರವರ ಬುದ್ಧಿಯನ್ನು ಉಪಯೋಗಿಸದೆ, ಸರಿ, ತಪ್ಪುಗಳ ಬಗ್ಗೆ ಆಲೋಚಿಸದೆ ಇಂತಹ ಸಮಾಜ ವಿರೋಧಿ ಕೃತ್ಯಗಳಲ್ಲಿ ಭಾಗಿಯಾದವರನ್ನು ಅಮಾಯಕರು ಎಂದು ಹೇಳಿದರೆ ಯಾವ ಧರ್ಮದ ದೇವರೂ ಮೆಚ್ಚಲಾರ. ಶಿಕ್ಷಣ ಇಲ್ಲದವರಿಗೂ ಇನ್ನೊಬ್ಬರ ಮನೆಗೆ ಬೆಂಕಿ ಹಚ್ಚಬಾರದು, ಜೀವ ಹಾನಿ ಮಹಾಪಾಪ, ಸಾರ್ವಜನಿಕ ಸೊತ್ತುಗಳಿಗೆ ಹಾನಿ ಮಾಡಿದರೆ ಅದಕ್ಕೆ ಮತ್ತೆ ನಾವೇ ದಂಡ ಕಟ್ಟಬೇಕಾಗುತ್ತದೆ ಎಂಬುದನ್ನು ಯೋಚಿಸುವ ಬುದ್ಧಿ ಇದ್ದೇ ಇರುತ್ತದೆ. ಇನ್ಯಾರಿಂದಲೋ ಪ್ರೇರಣೆ ಪಡೆದು ಗಲಭೆ ಎಬ್ಬಿಸಲು ಮುಂದಾಗುವವರಿಗೆ ಈ ಅಂಶಗಳನ್ನು ಯೋಚಿಸುವ ಶಕ್ತಿ ಇಲ್ಲ ಎಂದು ಹೇಳಿದರೆ ಅದಕ್ಕಿಂತ ಮೂರ್ಖತನ ಮತ್ತೊಂದಿರಲಾರದೇನೋ. ಹಾಗಿರುವಾಗ ಅವರನ್ನು ಅಮಾಯಕರು ಎನ್ನುವುದಾದರೂ ಹೇಗೆ.
ಇನ್ನು ಇಂತಹ ಘಟನೆ ನಡೆದಾಗೆಲ್ಲ ಕೆಲವು ನಾಯಕರೆನಿಸಿಕೊಂಡವರು ಇದಕ್ಕೆ ಬೆಂಬಲ ಸೂಚಿಸುವುದನ್ನು ಕಂಡಾಗ ಖೇದವೆನಿಸುತ್ತದೆ. ಯಾರನ್ನು ಅಭಿವೃದ್ಧಿಯ ದೃಷ್ಟಿಯನ್ನಿಟ್ಟುಕೊಂಡು ಜನರು ಆರಿಸಿ ಕಳುಹಿಸುತ್ತಾರೆಯೋ ಅಂತಹ ನಾಯಕರೇ ದುಷ್ಕರ್ಮಿಗಳಿಗೆ ಬೆಂಬಲ ಸೂಚಿಸಿದಾಗ ಅವರ ಅರ್ಹತೆಯ ಬಗ್ಗೆ ಯೋಚಿಸುವಂತಾಗುತ್ತದೆ. ಜನರನ್ನು ದಾರಿತಪ್ಪಿಸಿ ಇಂತಹ ಸಮಾಜ ಬಾಹಿರ, ಕಾನೂನು ಬಾಹಿರ ಕೃತ್ಯಗಳನ್ನು ನಡೆಸುವಂತೆ ಮಾಡುವಾಗ ರಕ್ತ ಕುದಿಯುತ್ತದೆ. ಕಾನೂನು ರಕ್ಷಣೆ ಮಾಡುವ ಪೊಲೀಸರ ಮೇಲೆ ದಾಳಿ, ಹಲ್ಲೆ ನಡೆಸಿದಾಗ ಅದನ್ನು ನೋಡುವ ಸತ್ಪ್ರಜೆಗಳಿಗೆ ಅಯ್ಯೋ ನಮ್ಮ ಸಮಾಜದ ದುರ್ವಿಧಿಯೇ ಎಂದು ವ್ಯವಸ್ಥೆಯ ಮೇಲೆ ಅಸಹ್ಯ ಹುಟ್ಟದೇ ಇರದು.
ಇನ್ನೊಬ್ಬರ ಮಾತಿಗೆ ಮರುಳಾಗಿ ಇಂತಹ ಕೃತ್ಯಕ್ಕೆ ಮುಂದಾಗುವ ಮೊದಲು ಅವರವರ ತಾಯಿ, ಹೆಂಡತಿ, ಮಕ್ಕಳು, ಕುಟುಂಬದ ಬಗ್ಗೆಯೂ ಒಂದು ಬಾರಿ ಚಿಂತಿಸಿದರೆ, ನಮ್ಮಂತೆಯೇ ಸಮಾಜದಲ್ಲಿ ಬದುಕುವ ಜನರೂ ಎಂಬುದನ್ನು ಮನಸ್ಸಿಗೆ ತೆಗೆದುಕೊಂಡರೆ ಇಂತಹ ಘಟನೆಗಳು ಈ ಸಮಾಜದಲ್ಲಿ ನಡೆಯುವುದು ಸಾಧ್ಯವೇ ಇಲ್ಲ. ಏಕೆಂದರೆ ಯಾವುದೇ ಧರ್ಮ ಹಿಂಸಾಚಾರಕ್ಕೆ ಬೆಂಬಲ ನೀಡುವ ಬಗ್ಗೆ ಉಲ್ಲೇಖಗಳೇ ಇಲ್ಲ. ಯಾವ ಧರ್ಮವೂ ಮತ್ತೊಂದು ಧರ್ಮಕ್ಕೆ ಅವಹೇಳನ ಮಾಡುವಂತೆಯೂ ತಿಳಿಸಿಲ್ಲ. ನಾವು ಧರ್ಮವನ್ನು ತಪ್ಪಾಗಿ ಅರ್ಥೈಸಿಕೊಂಡು ಸಮಾಜದ ಶಾಂತಿ ಕದಡುತ್ತಿದ್ದೇವೆ ಎಂಬುದನ್ನು ಅರಿತುಕೊಂಡರೆ ಯಾವ ಗಲಭೆ, ದೊಂಬಿ, ಹಿಂಸಾಚಾರ, ಅನಾಚಾರಗಳು ನಡೆಯಲಾರದು.
ಎಲ್ಲಕ್ಕೂ ಮೊದಲು ನಾವು ಭಾರತೀಯರು ಎಂಬ ಭಾವನೆ ನಮ್ಮೊಳಗಿದ್ದಲ್ಲಿ, ನಮ್ಮ ದೇಶದಲ್ಲಿ, ನಾವಿರುವ ಪ್ರದೇಶದಲ್ಲಿ ಶಾಂತಿ ಉಳಿಸುವ, ಸೌಹಾರ್ದತೆ ಬೆಳೆಸುವ ಕೆಲಸವನ್ನು ನಾವೇ ಮಾಡಬೇಕು ಎಂಬ ಸಣ್ಣ ಪ್ರಜ್ಞೆ ಇದ್ದರೆ, ಪ್ರತಿಜ್ಞೆ ನಮಗೆ ನಾವೇ ಮಾಡಿಕೊಂಡರೆ ಇಂತಹ ಕೃತ್ಯಗಳ ಹಿಂದಿನ ಕಾಣದ ವ್ಯಕ್ತಿಗಳು, ಅದರಿಂದ ಲಾಭ ಪಡೆಯುವ ದುಷ್ಟ ಶಕ್ತಿಗಳು ಮಣ್ಣುಮುಕ್ಕುತ್ತಾರೆ ಎಂಬುದರಲ್ಲಿ ಸಂದೇಹವೇ ಬೇಡ. ಆಗ ಯಾರೋ ಒಬ್ಬ ಅವಿವೇಕಿ ಹಾಕಿದ ಪೋಸ್ಟ್, ಉರಿಯುವ ಬೆಂಕಿಗೆ ತುಪ್ಪ ಸುರಿದ ಕಣ್ಣಿಗೆ ಕಾಣದ ಸೋ ಕಾಲ್ಡ್ ನಾಯಕರ ಆಮಿಷಗಳು ನಮ್ಮನ್ನು ಕೆಣಕಲಾರವು. ಕೆಣಕುವುದು ಸಾಧ್ಯವೇ ಇಲ್ಲ.
ಮೊದಲು ನಾವು ನಮ್ಮ ಮನಸ್ಥಿತಿಗಳನ್ನು ಬದಲಾಯಿಸಬೇಕು. ಯಾವುದೋ ಒಂದು ಘಟನೆಗೆ ಇನ್ಯಾರೋ ಹಚ್ಚಿದ ಬೇಡದ ಬಣ್ಣಗಳನ್ನು ಅಳಿಸುವ ಶಕ್ತಿ ನಮ್ಮೊಳಗೆಯೇ ಹುಟ್ಟಬೇಕು. ಇದಕ್ಕೆ ಬೇಕಾಗಿರುವುದು ಶಾಲೆಯಲ್ಲಿ ಕಲಿತ ಶಿಕ್ಷಣವಲ್ಲ. ಬದಲಾಗಿ ದೇವರು ಕೊಟ್ಟ ಬುದ್ಧಿ ಅಷ್ಟೇ. ಯೋಚಿಸಿ ಕೆಲಸ ಮಾಡುವವನು ಆರಂಭದಲ್ಲಿ ಸೋಲುತ್ತಾನೆ. ಆದರೆ ಶಾಶ್ವತವಾದ ಗೆಲುವೊಂದು ಅವನಿಗಾಗಿ ಕಾಯುತ್ತಿರುತ್ತದೆ. ಗೆಲುವಿನ ದಾರಿಗೆ ಕಲ್ಲು ಹೊಡೆಯುವುದನ್ನು ನಿಲ್ಲಿಸೋಣ, ಬದಲಾಗಿ ಅದೇ ಕಲ್ಲನ್ನೂ ಬಳಸಿ ಶಾಂತಿಯ ಗೋಡೆ ಕಟ್ಟುವತ್ತ ನಮ್ಮ ಚಿಂತನೆಗಳು ಸಾಗಲಿ. ಬೆಂಕಿ ಹಚ್ಚಿ ನಾಶಗೊಳಿಸುವ ಹಕ್ಕು ನಮಗಿಲ್ಲ. ಹಾಗಾಗಿ ಆ ಬೆಂಕಿಯನ್ನು ದೀಪಗಳಾಗಿ ಮಾರ್ಪಡಿಸಿ ಜಗತ್ತಿನ ದಾರಿಗೆ ಬೆಳಕಾಗೋಣ. ಅದು ಸಾಧ್ಯವಾಗದಿದ್ದರೆ ಕೊನೇ ಪಕ್ಷ ನಮ್ಮ ಬದುಕಿನ ಕತ್ತಲಿನ ಹಾದಿಯನ್ನಾದರೂ ತೊಡೆಯುವ ಹಣತೆಗಳಾಗಿ ಬದಲಾಯಿಸೋಣ. ಆಗ ನಮ್ಮನ್ನು ದಾರಿ ತಪ್ಪಿಸುವವರು ಅವರಾಗಿಯೇ ಸೋಲುತ್ತಾರೆ. ಜಗತ್ತು ಭಾರತದ ಸೌಹಾರ್ದತೆ, ಶಾಂತಿಯನ್ನು ಕಂಡು ತಲೆಬಾಗುತ್ತದೆ. ಕೆಡವುದರಿಂದ ಚಿತ್ತ ಕಟ್ಟುವುದರತ್ತ ನೆಟ್ಟಲ್ಲಿ ನಮ್ಮ ನೆಮ್ಮದಿ ನಮ್ಮ ಜೊತೆಗೆ ಉಳಿಯುತ್ತದೆ. ಇಲ್ಲ ಕೆಡಹುವುದೇ ನಮಗೆ ಹಿತ ಎಂದುಕೊಂಡರೆ ನಮ್ಮ ಸರ್ವನಾಶವೂ ನಮ್ಮ ಕೈಯಲ್ಲೇ ಆಗುತ್ತದೆ. ಆಯ್ಕೆ ಅವರವರದ್ದೇ…
ಭುವನ ಬಾಬು✍️
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.