ಆಗಸ್ಟ್ 15, 1947 ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿದ ದಿನವಾದರೂ ಅದರ ಮೊದಲೇ ಅಖಂಡವಾಗಿದ್ದ ಭಾರತವನ್ನು ಧರ್ಮದ ಆಧಾರದಲ್ಲಿ ಒಡೆಯುವ ಕೆಲಸವನ್ನು ಬ್ರಿಟಿಷರು ಅದಾಗಲೇ ಮಾಡಿ ಬಿಟ್ಟಿದ್ದರು. ಭಾರತಕ್ಕೆ ಅಖಂಡತೆಯನ್ನು ತಂದುಕೊಟ್ಟಿದ್ದ ಪಾಕಿಸ್ಥಾನ, ಬಾಂಗ್ಲಾದೇಶ ಮೊದಲಾದ ಭಾರತದ ಭೂಭಾಗಗಳನ್ನು ಭಾರತದಿಂದ ಬೇರ್ಪಡಿಸಿ ,ಒಡೆದು ಆಳುವ ನೀತಿಯನ್ನು ಅನುಸರಿಸುವ ಮೂಲಕ ಭಾರತವನ್ನು ತುಂಡರಿಸಿ ಹೋಗಿದ್ದರು ಬ್ರಿಟಿಷರು. ಇದಕ್ಕೆ ಭಾರತದ ಕೆಲವು ಜನರ ಬೆಂಬಲವೂ ಅವರಿಗೆ ದೊರೆತಿದೆ ಎಂಬುವಂತಹ ವಿಚಾರವನ್ನು ಮರೆಯದೆಯೇ, ಇಂದು ಅಂದರೆ ಆಗಸ್ಟ್ 14 ಅಖಂಡ ಭಾರತ ಸಂಕಲ್ಪ ದಿನವನ್ನು ನಾವು ಆಚರಣೆ ಮಾಡುತ್ತಲೇ ಬಂದಿದ್ದೇವೆ.
ಖಂಡ ತುಂಡವಾಗಿರುವ ರಾಷ್ಟ್ರವನ್ನು ಮತ್ತೆ ಅಖಂಡ ಭಾರತವಾಗಿ ಮಾಡುವ ಸಂಕಲ್ಪವನ್ನು ಇಂದಿಗೂ ಮಾಡುತ್ತಲೇ ಇದ್ದೇವೆ. ದೇಶದ ಅಖಂಡತೆಯ ಕನಸನ್ನು ಹೊತ್ತು ಮಡಿದ ಅದೆಷ್ಟೋ ದೇಶಪ್ರೇಮಿ ನಾಯಕರಿಗೆ ನ್ಯಾಯ ಸಲ್ಲಿಸುವ ಸಲುವಾಗಿ ಅಖಂಡ ಭಾರತದ ಕನಸನ್ನು ಇಂದಿಗೂ ಹೊತ್ತುಕೊಂಡೇ ಸಾಗುತ್ತಿದ್ದೇವೆ.
ಆದರೆ ವಾಸ್ತವತೆಯ ಬಗ್ಗೆ ಯೋಚಿಸಿದಾಗ ಭಾರತದ ಭಾಗಗಳಾಗಿದ್ದ ಬಳಿಕ ಇಂಗ್ಲಿಷರ ಕುತಂತ್ರಕ್ಕೆ ಒಳಗಾಗಿ ಭಾರತಕ್ಕೇ ಬೆನ್ನಿಗೆ ಚೂರಿ ಹಾಕಿ ದೇಶದ್ರೋಹವೆಸಗಿದ ಹಲವು ಸೋ ಕಾಲ್ಡ್ ನಾಯಕರ ಅಂದಿನ ತಪ್ಪನ್ನು ಅಷ್ಟು ಸುಲಭವಾಗಿ ಸರಿಪಡಿಸುವುದು ಅಸಾಧ್ಯ. ಭಾಗವಾಗಿ ಹರಿದು ಹಂಚಿ ಹೋಗಿ ಇಂದು ಸ್ವತಂತ್ರ ದೇಶಗಳಾಗಿ ಗುರುತಿಸಿಕೊಂಡಿರುವ ರಾಷ್ಟ್ರಗಳನ್ನು ಭಾರತದೊಳಕ್ಕೆ ಸೇರಿಸುವುದು ಸುಲಭದ ಮಾತಲ್ಲ. ಪಾಕಿಸ್ಥಾನ ಆಕ್ರಮಿತ ಕಾಶ್ಮೀರವನ್ನೇ ಅದು ನಮ್ಮದು, ಅದು ಭಾರತಕ್ಕೆ ಸೇರಿದ್ದು ಎಂದು ಎದೆ ತಟ್ಟಿ ಹೇಳಿಕೊಳ್ಳಬೇಕಾದರೆ ನಮಗೆ ಸ್ವಾತಂತ್ರ್ಯ ದೊರಕಿ ಇಷ್ಟು ವರ್ಷಗಳೇ ಹಿಡಿಯಿತು. ಅದಕ್ಕೊಬ್ಬ ಸಮರ್ಥ ನಾಯಕನ ಆಡಳಿತಕ್ಕಾಗಿ ಭಾರತ ಕಾಯಬೇಕಾಯಿತು. ಇಂತಹ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಹಂಚಿಕೆಯಾಗಿ ಹೋಗಿರುವ ರಾಷ್ಟ್ರಗಳನ್ನು ಅಷ್ಟು ಸುಲಭವಾಗಿ ಹಿಂದೂಸ್ಥಾನಕ್ಕೆ ಸೇರಿಸಿಕೊಳ್ಳುವುದು ಅಂದುಕೊಂಡಷ್ಟು ಆರಾಮವೆಂದುಕೊಂಡರೆ ನಮ್ಮಷ್ಟು ಮೂರ್ಖರು ಬೇರಿರುವುದು ಸಾಧ್ಯವಿಲ್ಲ.
ಈಗಾಗಲೇ ಪಾಕಿಸ್ಥಾನದಲ್ಲಿ ಹಿಂದೂಗಳ ಸಂಖ್ಯೆ ನೂರಕ್ಕೆ ಬೆರಳೆಣಿಕೆಯಷ್ಟು ಮಾತ್ರ. ಜೊತೆಗೆ ಮಾಡಬಾರದ ಪಾಪಗಳನ್ನೆಲ್ಲಾ ಮಾಡಿಕೊಂಡು ಪ್ರಪಂಚದ ಕಣ್ಣಿಗೆ ಭಯೋತ್ಪಾದಕ ರಾಷ್ಟ್ರವಾಗಿ, ಭಯೋತ್ಪಾದಕರ ತವರಾಗಿ ರಾರಾಜಿಸುತ್ತಿರು ರಾಷ್ಟ್ರ ಇಂದಿನ ಪರಿಸ್ಥಿತಿಯಲ್ಲಿ ಭಾರತದೊಳಕ್ಕೆ ಮತ್ತೆ ಸೇರಿತೆಂದಿಟ್ಟುಕೊಳ್ಳೋಣ, ಒಮ್ಮೆ ಯೋಚಿಸಿ ಮನೆಯಲ್ಲೇ ಸಾಕಿದ ವಿಷಸರ್ಪ ನಮ್ಮನ್ನು ಕಚ್ಚಿ ಸಾಯಿಸುವ ಸಾಧ್ಯತೆಗಳಿಲ್ಲವೇ ಎಂದು. ಹೌದು ಭಾರತ ಮನಸ್ಸು ಮಾಡಿದರೆ ಪಾಕ್, ಬಾಂಗ್ಲಾ ಭಾರತಕ್ಕೆ ಮತ್ತೆ ಸೇರುವುದು ದೊಡ್ಡ ವಿಷಯವೇ ಅಲ್ಲ. ಅಂತಹ ಬಲಿಷ್ಠ ಸೇನೆ, ನಾಯಕರು ನಮ್ಮಲ್ಲಿದ್ದಾರೆ. ಆದರೆ ಆ ಕೆಲಸವನ್ನು ನಾವು ಮಾಡಿದೆವೆಂದಾದಲ್ಲಿ ಆ ಹುಳ ಹಿಡಿದ ಒಂದು ಹಣ್ಣು ಭಾರತದ ಪರಿಶುದ್ಧ, ಉತ್ತಮ ಹಣ್ಣುಗಳನ್ನು ಉತ್ತಮವಾಗಿಯೇ ಉಳಿಯಲು ಬಿಡುವುದು ಸಾಧ್ಯವೇ?. ಸುಮ್ಮನೇ ಒಮ್ಮೆ ಯೋಚಿಸಿ.
ಅಖಂಡ ಭಾರತ ನಿರ್ಮಾಣ ನಮ್ಮ ಕನಸೇನೋ ಹೌದು. ಈ ಕನಸಿನ ಮೂಲಕ ಮಡಿದ ನಮ್ಮ ಹಿರಿಯರ ಆಶಯಗಳನ್ನು ಈಡೇರಿಸುವುದು ನಮ್ಮ ಕಾಯಕವಾಗಬೇಕು ಎಂಬುದನ್ನು ಒಪ್ಪಿಕೊಳ್ಳಲೇ ಬೇಕು. ಅದು ಅದ್ಯತೆ, ಅಗತ್ಯತೆ ಎರಡೂ ಹೌದು. ಆದರೆ ಹಲವಾರು ಆಂತರಿಕ, ಬಾಹ್ಯ ಸವಾಲುಗಳ ನಡುವೆ ನಾವು ಈ ನಮ್ಮ ಸಂಕಲ್ಪವನ್ನು ಈಡೇರಿಸಲು ಹೇಗೆ ಸಾಧ್ಯ. ಒಂದು ವೇಳೆ ಸಂಕಲ್ಪ ಪೂರೈಸಿದೆವೆಂದಾದಲ್ಲಿ ನಂತರದ ದಿನಗಳಲ್ಲಿ ಭಾರತ ಎದುರಿಸಬೇಕಾದ ಸವಾಲುಗಳ ಬಗ್ಗೆಯೂ ಇಂದಿನ ದಿನಗಳಲ್ಲಿ ನಾವು ಯೋಚಿಸಲೇ ಬೇಕಿದೆ. ಅದು ಅನಿವಾರ್ಯತೆ. ಏಕೆಂದರೆ 1947 ರ ಮೊದಲಿನ ಪರಿಸ್ಥಿತಿಯೂ ಈಗ ಭಾರತದಲ್ಲಿಲ್ಲ. ಜೊತೆಗೆ ಭಾರತ ಪಾಕಿಸ್ಥಾನಗಳೆರಡೂ ಅಜನ್ಮ ಶತ್ರುಗಳೆಂದೇ ಬಿಂಬಿಸಿಕೊಂಡಿವೆ. ಹೇಳಿ, ನರಿ ಬುದ್ಧಿಯ ಪಾಕ್ ನಂತಹ ಅನಾಹುತಕಾರಿ ದೇಶ ಭಾರತದ ಜೊತೆಗೆ ವಿಲೀನವಾದರೆ ನಮ್ಮ ದೇಶ ಉಳಿದೀತೇ ಎಂದು.
ಹಾಗಾದರೆ ನಮ್ಮ ಇಂದಿನ ಅಖಂಡತೆಯ ಸಂಕಲ್ಪಕ್ಕೆ ಬೆಲೆ ಇಲ್ಲವೇ? ಎಂಬ ಸಹಜ ಪ್ರಶ್ನೆಯೊಂದು ನಮ್ಮನ್ನು ಕಾಡಿದರೆ ಅದು ತಪ್ಪಲ್ಲ. ದೇಶದ ಅಖಂಡತೆಯ ಸಂಕಲ್ಪದ ಜೊತೆಗೆ ಅದನ್ನು ಸಾಧಿಸಬೇಕಾದರೆ ನಾವನುಭವಿಸಬೇಕಾದ ಎಡರು ತೊಡರುಗಳ ವಾಸ್ತವಿಕ ಚಿತ್ರಣದ ಬಗ್ಗೆಯೂ ನಾವು ಗಮನ ಹರಿಸಬೇಕಾಗುತ್ತದೆ. ಈ ಎಲ್ಲಾ ತೊಡಕುಗಳನ್ನು ಮೀರಿ ಅಖಂಡತೆಯ ಗುರಿಯನ್ನು ತಲುಪುವ ಸಂಕಲ್ಪದ ಜೊತೆಗೆ ನಾವಿಂದು ಹೆಜ್ಜೆ ನೆಡಬೇಕಾಗಿದೆ.
ಈ ಸಂದರ್ಭದಲ್ಲಿ ವಾಸ್ತವಿಕ ಅಂಶಗಳನ್ನು ಒಪ್ಪಿಕೊಳ್ಳುವ ಮತ್ತು ಅವುಗಳಿಗೆ ಪರ್ಯಾಯ ಹುಡುಕುವ ಮೂಲಕ, ಸ್ವಚ್ಛ, ಸ್ವಸ್ಥ, ಆರೋಗ್ಯಪೂರ್ಣ, ಶಾಂತಿಯ ಪ್ರತೀಕ, ವಿಶ್ವ ಪ್ರಿಯ ವಿಶ್ವವಂದ್ಯ ಭಾರತ ನಿರ್ಮಾಣದ ಗುರಿ ನಮ್ಮೊಳಗೆ ಸೃಜಿಸಬೇಕಾಗಿದೆ. ಅದಕ್ಕೆ ಮೊದಲು ನಮ್ಮಲ್ಲೇ ಇರುವ ಅಂದರೆ ಆಂತರಿಕ ಶತ್ರುಗಳನ್ನು ಮೊದಲು ನಾವು ಗೆಲ್ಲಬೇಕಾಗಿದೆ. ಆಮೇಲೆ ಬಾಹ್ಯ ಶತ್ರುಗಳನ್ನು ಎದುರಿಸಿ ಭಾರತದ ಅಖಂಡತೆಗಾಗಿ ಶ್ರಮಿಸುವ ಅನಿವಾರ್ಯತೆಯಲ್ಲಿ ನಾವಿಂದು ನಿಂತಿದ್ದೇವೆ. ಈ ಸತ್ಯದ ಅರಿವು ನಮ್ಮೊಳಗಾದಾಗ ಮಾತ್ರ ಖಂಡ ತುಂಡವಾದ ಭಾರತದ ಅಖಂಡತೆಯ ಹಾದಿ ಗೋಚರವಾಗುತ್ತದೆ. ಸಾಗುವ ದಾರಿ ಹತ್ತಿರವಾಗುತ್ತದೆ. ಮತ್ತೆ ಜಂಬೂ ದ್ವೀಪೇ, ಭರತ ವರ್ಷೇ ಎಂಬ ವಾಕ್ಯಕ್ಕೆ ನೈಜಾರ್ಥ ಬರುವುದು ಸಾಧ್ಯವಾಗುತ್ತದೆ.
ಭುವನ ಬಾಬು✍️
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.