ವಸುದೇವ ಸುತಂ ದೇವಂ
ಕಂಸ ಚಾಣೂರ ಮರ್ದನಂ
ದೇವಕಿ ಪರಮಾನಂದಂ
ಕೃಷ್ಣಂ ವಂದೇ ಜಗದ್ಗುರುಂ
ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯೂ ಒಂದು. ವಿಷ್ಣುವಿನ ಅವತಾರ, ಗೋವುಗಳ ಪರಿಪಾಲಕ, ಶಿಷ್ಟರ ರಕ್ಷಕ, ದುಷ್ಟರಿಗೆ ಶಿಕ್ಷೆ ನೀಡುವ, ಜಗತ್ತಿನ ಪಾಲಿಗೆ ದಾರಿ ತೋರುವ ಗುರುವಾಗಿರುವ ಪರಮಾವತಾರಿ ಶ್ರೀ ಕೃಷ್ಣನ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಅವನ ಲೀಲೆಗಳನ್ನು ತಿಳಿಸುವ ಒಂದೊಂದು ಕಥೆಯೂ ಆ ಪರಮ ಪುರುಷನ ಪವಾಡಗಳನ್ನು, ಸಾಧನೆಗಳನ್ನು ತಿಳಿಸುತ್ತವೆ. ಬಾಲನಾಗಿರುವಾಗಲೇ ದುಷ್ಟ ಶಿಕ್ಷಕನಾಗಿ ಶರಣು ಎಂದು ಬಂದವರನ್ನು ಕರುಣೆಯಿಂದ ಪೊರೆದ ಜಗದೋದ್ಧಾರನ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ.
ಶ್ರಾವಣದ ಕೃಷ್ಣ ಪಕ್ಷದ ಅಷ್ಟಮಿ, ಸೌರಮಾನದ ಸಿಂಹ ಮಾಸದ ರೋಹಿಣಿ ನಕ್ಷತ್ರದಂದು ಶ್ರೀ ಕೃಷ್ಣ ಧರೆಗವತರಿಸಿದನೆಂಬ ನಂಬಿಕೆ. ಮಥುರಾ ಕೃಷ್ಣನ ಜನ್ಮಸ್ಥಾನ. ತಂದೆ ವಸುದೇವ, ತಾಯಿ ದೇವಕಿ. ದೇವಕಿಯ ಅಣ್ಣ, ರಾಜ ಉಗ್ರಸೇನನ ಮಗ ಕಂಸ, ದೇವಕಿ, ವಸುದೇವರಿಗೆ ಮದುವೆ ಮಾಡುತ್ತಾನೆ. ಇಂತಹ ಸುಸಂದರ್ಭದಲ್ಲೇ ಕಂಸನಿಗೆ ದೇವಕಿಯ ಎಂಟನೇ ಗರ್ಭದಲ್ಲಿ ಜನಿಸಿದ ಮಗುವಿನಿಂದಲೇ ತನ್ನ ಮರಣ ಎಂಬ ವಿಚಾರ ಅಶರೀರವಾಣಿಯ ಮೂಲಕ ತಿಳಿಯುತ್ತದೆ. ಕೂಡಲೇ ದೇವಕಿಯನ್ನು ಕೊಲ್ಲಲು ಮುಂದಾಗುತ್ತಾನೆ. ಆಗ ವಸುದೇವ ತನ್ನ ಮಕ್ಕಳು ಹುಟ್ಟಿದ ತಕ್ಷಣವೇ ಕಂಸನ ಕೈಗೆ ನೀಡುವುದಾಗಿ ತಿಳಿಸುತ್ತಾನೆ. ಅದಕ್ಕೊಪ್ಪಿದ ಕಂಸ ಗಂಡ-ಹೆಂಡಿರಿಬ್ಬರನ್ನೂ ಕಾರಾಗೃಹದಲ್ಲಿ ಇರಿಸುತ್ತಾನೆ. ದೇವಕಿಯ ಮಕ್ಕಳನ್ನು ಹುಟ್ಟಿದ ಕೂಡಲೇ ಕಂಸನ ಕೈಯಲ್ಲಿ ಇರಿಸಲಾಗುತ್ತದೆ. ಆ ಮಕ್ಕಳನ್ನು ಕಂಸ ಕೊಲ್ಲಿಸುತ್ತಾನೆ. ಎಂಟನೇ ಮಗು ಅಂದರೆ ಶ್ರೀ ಕೃಷ್ಣನನ್ನು ಹುಟ್ಟಿದ ಕೂಡಲೇ ರಾತ್ರೋರಾತ್ರಿ ತಂದೆ ವಸುದೇವ ಬುಟ್ಟಿಯಲ್ಲಿ ಹೊತ್ತು, ಯಮುನೆಯನ್ನು ದಾಟಿ ಗೋಕುಲಕ್ಕೆ ತಲುಪಿಸಿ, ಅಲ್ಲಿ ಯಶೋಧೆ ಮತ್ತು ನಂದಗೋಪರಿಗೆ ಹುಟ್ಟಿದ್ದ ಹೆಣ್ಣು ಶಿಶುವನ್ನು ತಂದು ಕಾರಾಗೃಹದಲ್ಲಿ ತಮ್ಮ ಜೊತೆಗೆ ಇರಿಸಿಕೊಳ್ಳುತ್ತಾರೆ. ದೇವಕಿಗೆ ಎಂಟನೇ ಮಗು ಹುಟ್ಟಿದ ಸುದ್ದಿ ಕಂಸನಿಗೆ ತಿಳಿಯುತ್ತದೆ. ಆತ ಕಾರಾಗೃಹಕ್ಕೆ ಬಂದು ಆ ಮಗುವನ್ನು ಕೊಲ್ಲಲನುವಾದಾಗ, ಆ ಮಗು ‘ನಿನ್ನನ್ನು ಸಂಹರಿಸುವ ಮಗುವಿನ ಜನನ ಭೂಮಿಯಲ್ಲಿ ಈಗಾಗಲೇ ಆಗಿದೆ’ ಎಂದು ನುಡಿದು ಮಾಯವಾಗುತ್ತದೆ. ಇದಾದ ಬಳಿಕ ಮಥುರಾ ಪಟ್ಟಣದಲ್ಲಿದ್ದ ಎಲ್ಲಾ ನವಜಾತ ಶಿಶುಗಳನ್ನೂ ಸಂಹರಿಸಲು ಅನೇಕ ರಾಕ್ಷಸರನ್ನು ಕಳುಹಿಸುತ್ತಾನೆ. ಇತ್ತ ಗೋಕುಲದಲ್ಲಿ ಯದುಕುಲ ತಿಲಕ, ಕಂಸ ಚಾಣೂರರನ್ನು ಸಂಹರಿಸುವ ಶಕ್ತಿ ಶ್ರೀ ಕೃಷ್ಣ ಬೆಣ್ಣೆ ಕಳ್ಳನಾಗಿ, ತುಂಟಾಟ, ಪವಾಡಗಳನ್ನು ತೋರಿಸುತ್ತಾ ಬೆಳೆಯುತ್ತಾನೆ. ಕೊನೆಗೆ ಯೌವನ ಕಾಲದಲ್ಲಿ ಅಣ್ಣ ಬಲರಾಮನ ಜೊತೆಗೆ ಮಥುರೆಗೆ ಬಂದು ಮಲ್ಲಯುದ್ಧದಲ್ಲಿ ಕಂಸ, ಚಾಣೂರರನ್ನು ಸಂಹರಿಸಿ, ಸೆರೆಯಲ್ಲಿದ್ದ ತಾತ ಉಗ್ರಸೇನನಿಗೆ ಪಟ್ಟ ಕಟ್ಟುವ ಮೂಲಕ ಅನ್ಯಾಯದ ವಿರುದ್ಧ ಜಯದ ಪತಾಕೆ ಹಾರಿಸುತ್ತಾನೆ.
ಅತ್ತ ಗೋಕುಲದಲ್ಲಿ ಬೆಳೆಯುತ್ತಿರುವಾಗಲೇ ಮಣ್ಣು ತಿಂದು ಬಾಯಲ್ಲಿ ತಾಯಿ ಯಶೋಧೆಗೆ ಮೂಜಗವ ತೋರಿಸಿ ಅಚ್ಚರಿ ಹುಟ್ಟಿಸುತ್ತಾನೆ. ಕೊಲ್ಲಲು ಬಂದ ಪೂತನಿ ಎಂಬ ರಾಕ್ಷಸಿಯ ಎದೆ ಹಾಲು ಹೀರುವ ನೆಪದಲ್ಲಿ ಆಕೆಯನ್ನು ಮಣ್ಣು ಮುಕ್ಕಿಸುತ್ತಾನೆ. ಯಮುನೆಯಲ್ಲಿ ತನ್ನ ಕ್ರೂರತನ ಮೆರೆಯುತ್ತಿದ್ದ ಕಾಳಿಂಗನ ನೆತ್ತಿಯ ಮೇಲೆ ನಾಟ್ಯವಾಡಿ ಅವನನ್ನು ಸಂಹರಿಸಿ ಜನರಿಗೆ ಅಭಯ ನೀಡುತ್ತಾನೆ. ಗೋವರ್ಧನ ಗಿರಿಯನ್ನು ತನ್ನ ಕಿರು ಬೆರಳಲ್ಲೆತ್ತುವ ಮೂಲಕ ಗೋವು, ಗೋಪಾಲಕರನ್ನು ಕಾಪಾಡುವ ಪರಮಾತ್ಮನ ಪವಾಡದ ಬಗ್ಗೆ ಇನ್ನೂ ಅನೇಕ ಕಥೆಗಳು ಜನಜನಿತವಾಗಿದೆ.
ಇನ್ನು ಸೆರೆಯಲ್ಲಿದ್ದ ಹದಿನಾರು ಸಾವಿರ ನಾರಿಯರ ಸೆರೆ ಮುದದಿಂದ ಬಿಡಿಸಿದ ಕೃಷ್ಣ, ಅವರ ಬೇಡಿಕೆಯಂತೆ ಅವರ ಪತಿಯಾಗುತ್ತಾನೆ. ಗೋಪಿಕೆ ರಾಧೆಯ ಪ್ರೀಯತಮನಾಗುತ್ತಾನೆ. ರುಕ್ಮಿಣಿ, ಸತ್ಯಭಾಮೆಯರ ಪತಿಯಾಗುತ್ತಾನೆ. ಬಾಲ್ಯದಲ್ಲಿ ಗೋಪಿಕಾ ಸ್ತ್ರೀಯರ ಸೀರೆ ಕದ್ದು ಮಾಡಿದ ವಿನೋದಗಳಿಗೂ ಎಣೆ ಇಲ್ಲ.
ಇನ್ನು ಮಹಾಭಾರತ ಮತ್ತು ಕೃಷ್ಣನಿಗೂ ಅವಿನಾಭಾವ ಸಂಬಂಧವಿದೆ. ಪಾಂಡವರ ತಾಯಿ ಕುಂತಿ ಕೃಷ್ಣನ ತಂದೆ ವಸುದೇವನ ತಂಗಿ. ದ್ರೌಪದಿ ಸ್ವಯಂವರದ ಸಂದರ್ಭದಲ್ಲಿ ಪಾಂಡವರ ಪರಿಚಯ ಇವನಿಗಾಗುತ್ತದೆ. ಮುಂದೆ ಕೌರವರು, ಪಾಂಡವರ ನಡುವಿನ ಜೂಜು, ದ್ರೌಪದಿಯ ವಸ್ತ್ರಾಪಹರಣ ಸಂದರ್ಭದಲ್ಲಿ ಅಕ್ಷಯ ವಸನವನ್ನಿತ್ತು ಆಕೆಯನ್ನು ಕಾಯುತ್ತಾನೆ. ಹೀಗೆ ಮಹಾಭಾರತದ ಪ್ರತಿಯೊಂದು ಘಟನೆಗಳಲ್ಲಿಯೂ ಪಾಂಡವರ ಜೊತೆಗಿದ್ದು ಕೃಷ್ಣ ಅವರ ಮಾರ್ಗದರ್ಶಕನಾಗಿ ಗುರುತಿಸಿಕೊಂಡಿದ್ದಾನೆ. ಮಹಾಭಾರತದ 18 ದಿನಗಳ ಯುದ್ಧದಲ್ಲಿ ಕೃಷ್ಣನ ಪಾತ್ರ ಅಪಾರ. ಅರ್ಜುನನ ಸಾರಥಿಯಾಗಿ, ಕರ್ಣನನ್ನು ಕೊಲ್ಲುವ ಸಂದರ್ಭದಲ್ಲಿ ಪಾರ್ಥನ ಮನಸ್ಸಿನ ಎಲ್ಲಾ ಗೊಂದಲಗಳಿಗೂ ಸಮರ್ಥವಾಗಿ ಉತ್ತರ ನೀಡಿ ಯುದ್ಧಕ್ಕೆ ನಿಂತ ಮೇಲೆ ಯಾವ ಬಂಧುತ್ವವನ್ನೂ ಗಮನಿಸಬಾರದು. ಇದು ಧರ್ಮ ಅಧರ್ಮದ ನಡುವಿನ ಯುದ್ಧ. ಧರ್ಮ ಸ್ಥಾಪನೆಗೆ ಅಧರ್ಮದ ಹಾದಿಯಲ್ಲಿ ಸಾಗುವವರನ್ನು ನಾಶ ಮಾಡಿದರೆ ಪಾಪ ಬರುವುದಿಲ್ಲ ಎಂದು ತಿಳಿಸಿ, ಅವನಿಗೆ ಧರ್ಮ ಬೋಧನೆ ಮಾಡುವ ಮೂಲಕ ಜಗತ್ತಿಗೆ ಗೀತೆ (ಭಗವದ್ಗೀತೆ) ಬೋಧಿಸಿದ ಕೃಷ್ಣ ನಮ್ಮೆಲ್ಲರಿಗೂ ಪ್ರೇರಣಾಮಯಿ ಶಕ್ತಿ ಎನ್ನಬಹುದು. ಯಾವುದನ್ನು ಶಕ್ತಿಯಿಂದ ಗೆಲ್ಲಲಾಗದೋ, ಅಂತಹದ್ದನ್ನು ಯುಕ್ತಿಯಿಂದ ಗೆಲ್ಲಬೇಕು ಎಂದು ತಿಳಿಸಿಕೊಟ್ಟ ಕೃಷ್ಣನ ಜೀವನವೇ ಸಾಮಾನ್ಯರಿಗೆ ಮಾರ್ಗದರ್ಶನ ಎನ್ನಹುದು.
ಎಲ್ಲಿ ಅಧರ್ಮ ಹೆಚ್ಚಾಗುವುದೋ ಅಂತಹ ಸಂದರ್ಭದಲ್ಲಿ ಧರ್ಮವನ್ನು ಸ್ಥಾಪಿಸಲು ನಾನು ಮತ್ತೆ ಅವತಾರವೆತ್ತುತ್ತೇನೆ ಎಂಬ ಕೃಷ್ಣನ ಮಹಾಭಾರತ ಸಂದರ್ಭದ ಮಾತು ಅದೆಷ್ಟು ಅರ್ಥಪೂರ್ಣ. ಇದರರ್ಥ ಅಧರ್ಮದ ಸಂದರ್ಭದಲ್ಲಿ ನಮ್ಮೊಳಗೇ ಕೃಷ್ಣ ಹುಟ್ಟಬೇಕು. ಆ ಮೂಲಕ ಅಂತಹ ಅಧರ್ಮಿಗಳನ್ನು ಮಟ್ಟ ಹಾಕಿ ಧರ್ಮವನ್ನು ನೆಲೆಗೊಳಿಸುವ ನಿಟ್ಟಿನಲ್ಲಿ ನಾವು ಪ್ರಯತ್ನ ಪಡಬೇಕು. ಇದಕ್ಕೆ ಮನೋಬಲ ನೀಡಲು, ಮಾಡುವ ಒಳ್ಳೆಯ ಕೆಲಸಗಳಿಗೆ ಶಕ್ತಿ ತುಂಬಿ ಜಯ ತಂದು ಕೊಡಲು ಕೃಷ್ಣ ನಮ್ಮ ಬೆನ್ನಿಗಿದ್ದು ಸಹಾಯ ಮಾಡುತ್ತಾನೆ ಎಂಬುದು. ಹೌದು, ಜಗತ್ತಿನಲ್ಲಿ ಅಧರ್ಮದ ಹುಟ್ಟು ಹೆಚ್ಚಾದಾಗ ಅಲ್ಲೆಲ್ಲಾ ಧರ್ಮದ ಬೀಜವನ್ನು ಬಿತ್ತುವ ಶ್ರೀ ಕೃಷ್ಣ ನಮ್ಮೊಳಗೇ ಇದ್ದಾನೆ. ಅವನು ಅಂದು ಹಾಕಿಕೊಟ್ಟ ಧರ್ಮ ಮಾರ್ಗದಲ್ಲಿ ಇಂದಿನ ಜಗತ್ತನ್ನು ಬೆಳಗುವ ಬೆಳಕುಗಳಾಗೋಣ ನಾವೆಲ್ಲರೂ ಎಂಬ ಆಶಯವನ್ನು ಈ ಜನ್ಮಾಷ್ಟಮಿಯ ಸಂದರ್ಭದಲ್ಲಿ ನಮ್ಮನಮ್ಮಲ್ಲಿ ಬೆಳೆಸಿಕೊಳ್ಳುವ ಮೂಲಕ ಲೋಕ ಕಲ್ಯಾಣಕ್ಕಾಗಿ ಕೆಲಸ ಮಾಡುವತ್ತ ಚಿತ್ತ ಹರಿಸೋಣ.
ನಾಡಿನೆಲ್ಲೆಡೆ ಅದ್ದೂರಿಯಾಗಿ ಈ ವರೆಗೂ ಆಚರಿಸಲ್ಪಡುತ್ತಿದ್ದ ಶ್ರೀ ಕೃಷ್ಣನ ಜನ್ಮಾಷ್ಟಮಿ ಮತ್ತೆ ಬಂದಿದೆ. ಸಾರ್ವಜನಿಕವಾಗಿ ಸಂಭ್ರಮದಿಂದ ಆಚರಿಸಲ್ಪಡುತ್ತಿದ್ದ ಅಷ್ಟಮಿ ಈ ಬಾರಿ ಕೊರೋನಾ ಕಾರಣದಿಂದ ಕೇವಲ ಮನೆಗಷ್ಟೇ ಸೀಮಿತವಾಗಿದೆ. ಈ ಅನಿವಾರ್ಯತೆಗೆ ಒಗ್ಗಿಕೊಳ್ಳುತ್ತಾ, ಅನಿವಾರ್ಯತೆಯನ್ನು ಒಪ್ಪಿಕೊಳ್ಳುತ್ತಲೇ ಈ ದಿನದ ಹಬ್ಬವನ್ನು ಆಚರಿಸೋಣ. ಆ ಮೂಲಕ ಕೋವಿಡ್-19 ಎಂಬ ಸಾಂಕ್ರಾಮಿಕ ರೋಗವನ್ನು ಶ್ರೀ ಕೃಷ್ಣ ಪರಮಾತ್ಮನೇ ನಾಶ ಮಾಡಿ ಭಯ ಮುಕ್ತ ಸಮಾಜವನ್ನು ಮತ್ತೆ ನಮಗೆ ನೀಡಲಿ ಎಂದು ಪ್ರಾರ್ಥಿಸೋಣ.
ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.