ಆಗಸ್ಟ್ 5 ಭಾರತದ ಪಾಲಿಗೆ ಮಹತ್ವದ ದಿನ. ಒಂದು ಕಡೆ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿದೆ. ಇನ್ನೊಂದು ಕಡೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಂಡು ಇಂದಿಗೆ ಒಂದು ವರ್ಷವಾಗುತ್ತಿದೆ. ಈ ಎರಡು ಐತಿಹಾಸಿಕ ಘಟನೆಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸದೃಢ ಸರ್ಕಾರದ ದೃಢನಿಶ್ಚಯದ ಫಲವಾಗಿದೆ.
370 ನೇ ವಿಧಿ ಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಿತ್ತು. ಭಾರತದ ಭಾಗವಾಗಿದ್ದರೂ, ಆ ರಾಜ್ಯಕ್ಕೆ ಭಾರತದ ಸಂವಿಧಾನ ಅನ್ವಯವಾಗುತ್ತಿರಲಿಲ್ಲ. ಅಲ್ಲಿನ ಜನರಿಗೆ ಪ್ರತ್ಯೇಕ ಕಾನೂನುಗಳಿದ್ದವು. ಆಸ್ತಿ ಮೇಲಿನ ಹಕ್ಕು ಮತ್ತು ಮೂಲಭೂತ ಹಕ್ಕುಗಳನ್ನು ಅವರಿಗೆ ವಿಶೇಷವಾಗಿ ನೀಡಲಾಗಿತ್ತು. ಇತರ ರಾಜ್ಯದ ಜನರು ಅಲ್ಲಿ ಭೂಮಿಯನ್ನು ಖರೀದಿ ಮಾಡುವಂತೆ ಇರಲಿಲ್ಲ. ಭಾರತದ ಇತರ ಭಾಗಕ್ಕೆ ಅನ್ವಯವಾಗುವ ಯಾವುದೇ ಕಾನೂನನ್ನು ಕೇಂದ್ರ ಅಲ್ಲಿ ನೇರವಾಗಿ ಅನ್ವಯ ಮಾಡುವಂತೆ ಇರಲಿಲ್ಲ. ಈ ವಿಶೇಷ ಸ್ಥಾನಮಾನ ಕಾಶ್ಮೀರ ಜನತೆಗೆ ಒಳಿತು ಮಾಡಿರುವುದಕ್ಕಿಂತ ಕೆಡುಕು ಮಾಡಿರುವುದೇ ಹೆಚ್ಚು.
ಕಾಶ್ಮೀರವೆಂಬ ಸ್ವರ್ಗಲೋಕವನ್ನು ಭಯೋತ್ಪಾದನೆಯ ಬಲಿಪಶು ಮಾಡುವಲ್ಲಿ 370ನೇ ವಿಧಿ ಮೂಲಕ ನೀಡಲಾದ ವಿಶೇಷ ಸ್ಥಾನಮಾನ ಹೆಚ್ಚು ಕೊಡುಗೆ ನೀಡಿತ್ತು ಎಂದರೆ ತಪ್ಪಾಗಲಾರದು. ಅಲ್ಲಿನ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಲು ಇದನ್ನು ಬಳಸಿಕೊಂಡರು. ಮೂಲಭೂತವಾದಿಗಳು ಅಮಾಯಕ ಯುವಕರನ್ನು ಎತ್ತಿಕಟ್ಟಲು ಇದನ್ನು ದುರ್ಬಳಕೆ ಮಾಡಿಕೊಂಡರು. ಕಣಿವೆ ರಾಜ್ಯ ಮೂಲ ಸೌಕರ್ಯವಿಲ್ಲದೆ ನರಳುವಂತಾಯಿತು. ಉದ್ದಿಮೆಗಳಿಗೆ ಅಲ್ಲಿ ಯಶಸ್ಸು ಕಾಣುವ ಅವಕಾಶವೇ ಸಿಗಲಿಲ್ಲ. ಭಾರತದ ಇತರ ಭಾಗಗಳಲ್ಲಿನ ಉದ್ದಿಮೆಗಳು ಅಲ್ಲಿ ಅಂಗ ಸಂಸ್ಥೆಗಳನ್ನು ತೆರೆಯುವ ಸಾಹಸ ಮಾಡಲಿಲ್ಲ. ಇದರಿಂದಾಗಿ ಅಲ್ಲಿನ ಜನರಿಗೆ ಉದ್ಯೋಗ ಸಿಗಲಿಲ್ಲ. ಹೀಗಾಗಿ ಭಯೋತ್ಪಾದನೆಯತ್ತ ಅವರು ಹೆಚ್ಚು ಆಕರ್ಷಿತರಾದರು.
ಓಲೈಕೆಯ ರಾಜಕಾರಣದಲ್ಲಿ ಮುಳುಗಿ ಹೋಗಿರುವ ರಾಜಕೀಯ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಮೋದಿ ಸರ್ಕಾರ 370ನೇ ವಿಧಿಯನ್ನು ರದ್ದುಗೊಳಿಸಿ, ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜನೆ ಮಾಡಲು ತೋರಿದ ದಿಟ್ಟತನವನ್ನು ನಾವಿಲ್ಲಿ ಮೆಚ್ಚಿಕೊಳ್ಳಲೇ ಬೇಕು. ಅದರಲ್ಲೂ ಮೂಲಸೌಕರ್ಯದಿಂದ ಬಲು ದೂರವೇ ಉಳಿದಿದ್ದ ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿದ್ದು ಅಲ್ಲಿನ ಜನರ ಬದುಕನ್ನೇ ಬದಲಾಯಿಸಿದೆ. ಅಲ್ಲಿ ಮೊದಲ ಕೇಂದ್ರೀಯ ವಿದ್ಯಾಲಯ ಈಗ ಸ್ಥಾಪನೆಯಾಗುತ್ತಿದೆ. ಮಾತ್ರವಲ್ಲ, ಹಲವು ಯೋಜನೆಗಳು ಆರಂಭಗೊಳ್ಳುತ್ತಿವೆ.
370 ನೇ ವಿಧಿ ರದ್ದತಿ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಮಹತ್ವದ ಬದಲಾವಣೆಗಳು ಕಾಣಿಸುತ್ತಿದೆ. ಭಾರತದ ಎಲ್ಲಾ ಮಹತ್ವದ ಕಾನೂನುಗಳನ್ನು ಅಲ್ಲಿ ಅನ್ವಯ ಮಾಡಲಾಗಿದೆ. ವಿಶೇಷವಾಗಿ, ಒಂದು ರಾಷ್ಟ್ರ ಒಂದು ರೇಷನ್, ಮೋದಿ ಸರಕಾರದ ಹಲವು ಕಲ್ಯಾಣ ಯೋಜನೆಗಳನ್ನು ಅಲ್ಲಿ ಅನ್ವಯಿಸಲಾಗಿದೆ. ಅಲ್ಲಿನ ಜನರು ಈಗ ಸರ್ಕಾರದ ಉದ್ಯೋಗಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ, ವಿದ್ಯಾರ್ಥಿವೇತನ ಯೋಜನೆಗಳು ಅಲ್ಲಿನ ವಿದ್ಯಾರ್ಥಿಗಳಿಗೆ ದೊರೆಯುತ್ತಿವೆ. ವಿಶೇಷವಾಗಿ, ಕಣಿವೆ ರಾಜ್ಯದಲ್ಲಿ ಬಹುವರ್ಷಗಳಿಂದ ಜೀವಿಸುತ್ತಿದ್ದ ಜನರಿಗೆ ನಿವೇಶನ ಪತ್ರ ದೊರೆಯುತ್ತಿದೆ. ಕಾಶ್ಮೀರ ಜನತೆಗೆ ಭಾರತ ಮತ್ತು ಭಾರತದ ಜನತೆಗೆ ಕಾಶ್ಮೀರ ಈಗ ಮುಕ್ತವಾಗಿದೆ.
370ನೇ ವಿಧಿ ರದ್ದುಗೊಂಡರೆ ರಕ್ತಪಾತವಾಗುತ್ತದೆ ಎಂದು ಹೇಳಿದ್ದ ರಾಜಕೀಯ ಪಕ್ಷಗಳು ಈಗ ಮೌನವಾಗಿವೆ. ಯಾಕೆಂದರೆ ಕಳೆದ ಒಂದು ವರ್ಷದಲ್ಲಿ ಅಲ್ಲಿ ಒಂದೇ ಒಂದು ಕಲ್ಲು ತೂರಾಟ ನಡೆದಿಲ್ಲ. ನಾಗರಿಕರ ಹತ್ಯೆಯಾಗಿಲ್ಲ. ಇನ್ನು ರಕ್ತಪಾತದ ಮಾತೆಲ್ಲಿ. ಪರಿಸ್ಥಿತಿಯನ್ನು ಕೇಂದ್ರ ಅಚ್ಚುಕಟ್ಟಾಗಿ ನಿಭಾಯಿಸಿದೆ ಎಂಬುದಕ್ಕೆ ಇದು ಒಂದು ಉದಾಹರಣೆಯಾಗಿದೆ.
ಅದೇನೆಯಿರಲಿ, ನರೇಂದ್ರ ಮೋದಿ ಸರ್ಕಾರ ಆಡಳಿತದಲ್ಲಿ ನಡೆದ ಅನೇಕ ಮಹತ್ವದ ನಿರ್ಧಾರಗಳಲ್ಲಿ 370ನೇ ವಿಧಿ ರದ್ಧತಿ ಅಗ್ರಗಣ್ಯ ಸ್ಥಾನ ಪಡೆಯುತ್ತದೆ. ಯಾಕೆಂದರೆ ಇದು ಅಖಂಡ ಭಾರತದ ಆಶಯವನ್ನು ಎತ್ತಿ ಹಿಡಿಯುತ್ತದೆ. ಭಾರತಕ್ಕೆ ನಿಜವಾದ ಏಕೀಕರಣವನ್ನು ತಂದುಕೊಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.