ಭಾರತೀಯರ ಮೌಲ್ಯಗಳ ಶ್ರೇಷ್ಠತೆಯ ಸಂಕೇತವೇ ಸಂಸ್ಕೃತ. ಭಾರತೀಯರ ಮಹೋನ್ನತ ಜೀವನಶೈಲಿಯ ಮೂಲವೂ ಸಂಸ್ಕೃತ. ಭಾರತೀಯರ ಆಧ್ಯಾತ್ಮಿಕತೆಯ ಅವಿಭಾಜ್ಯ ಅಂಗವೂ ಆಗಿದೆ ಸಂಸ್ಕೃತ. ಭಾರತೀಯರ ಸಂಸ್ಕೃತಿ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ಧರ್ಮ ಹೀಗೆ ಪ್ರತಿಯೊಂದರಲ್ಲೂ ಸಂಸ್ಕೃತ ಆಳವಾಗಿ ಬೇರೂರಿದೆ. ಭಾರತ ಸಾವಿರಾರು ಭಾಷೆಗಳ ತವರು. ಒಂದೊಂದು ಪ್ರದೇಶಕ್ಕೂ ಒಂದೊಂದು ಭಾಷೆ ನಮ್ಮಲ್ಲಿದೆ. ಆದರೆ ಎಲ್ಲಾ ಭಾಷೆಗಳಲ್ಲೂ ಸಂಸ್ಕೃತದ ಸಾರವಿದೆ. ಇಂತಹ ಮಹಾನ್ ಸಂಸ್ಕೃತ ಭಾಷೆಯ ಪ್ರಾಮುಖ್ಯತೆಯನ್ನು ಸಾರುವ ಸಲುವಾಗಿಯೇ ಇಂದು ವಿಶ್ವ ಸಂಸ್ಕೃತ ದಿನವನ್ನು ಆಚರಣೆ ಮಾಡಲಾಗುತ್ತಿದೆ.
ಪ್ರತಿವರ್ಷ ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರಾವಣ ಹುಣ್ಣಿಮೆಯಂದು ಸಂಸ್ಕೃತ ದಿನವನ್ನು ಆಚರಿಸಲಾಗುತ್ತದೆ. ಸಂಸ್ಕೃತವು ಭಾರತೀಯ ಸಂಸ್ಕೃತಿಯ, ಜ್ಞಾನ ಮತ್ತು ಪರಂಪರೆಯ ಮೂಲ. ವಿಶ್ವದ ಅತಿ ಪ್ರಾಚೀನ ಭಾಷೆಗಳಲ್ಲಿ ಸಂಸ್ಕೃತ ಕೂಡ ಒಂದು. ಈ ಭಾಷೆಯ ಮೌಲ್ಯವನ್ನು ಅರಿತು ಬಾಳಬೇಕಾದುದು, ಸಂಸ್ಕೃತದ ಹಿರಿಮೆಯನ್ನು ಜಗತ್ತಿಗೆ ಸಾರ ಬೇಕಾದುದು ಇಂದಿನ ಅವಶ್ಯಕತೆಯೂ ಆಗಿದೆ.
ನಮ್ಮ ಸಂಸ್ಕೃತಿ, ಪರಂಪರೆಯ, ನಮ್ಮ ನಾಗರಿಕತೆಯ ಸಾರವನ್ನು ತನ್ನೊಳಗೆ ಹುದುಗಿಟ್ಟುಕೊಂಡಿರುವ ಸಂಸ್ಕೃತವನ್ನು ಮತ್ತೆ ನಮ್ಮ ನಿತ್ಯ ಜೀವನದ ಭಾಗವನ್ನಾಗಿ ಮಾಡುವ ಅವಶ್ಯಕತೆ ತುಂಬಾ ಇದೆ. ನಮ್ಮ ಪ್ರಾಚೀನ ಗ್ರಂಥಗಳಾದ ವೇದ, ಪುರಾಣ ಮತ್ತು ಮಹಾಕಾವ್ಯಗಳು ಸಂಸ್ಕೃತದಲ್ಲಿಯೇ ರಚಿತವಾಗಿದೆ. ಜಗತ್ತಿನಲ್ಲಿ ಎಲ್ಲೂ ಕಾಣಸಿಗದಂತಹ ಮಹಾಭಾರತ ಮತ್ತು ರಾಮಾಯಣದಂತಹ ಮಹಾಕಾವ್ಯಗಳು ಸಂಸ್ಕೃತದಲ್ಲೇ ರಚನೆಗೊಂಡಿವೆ. ಇಂತಹ ಮಹಾನ್ ಗ್ರಂಥಗಳು ಜೀವನ ಸಾರವನ್ನು ಹೊಂದಿವೆ. ಸಂಸ್ಕೃತದ ಹಿರಿಮೆಗೆ ಈ ಮಹಾನ್ ಗ್ರಂಥಗಳೇ ಉದಾಹರಣೆ.
ಪ್ರಾಚೀನ ಭಾರತೀಯ ಭಾಷೆಯ ಪುನರುಜ್ಜೀವನ ಮತ್ತು ನಿರ್ವಹಣೆಯನ್ನು ಉತ್ತೇಜಿಸಲು ವಿಶ್ವ ಸಂಸ್ಕೃತ ದಿನವನ್ನು ಆಚರಿಸಲಾಗುತ್ತದೆ.
ಈ ವರ್ಷ ಭಾರತದಲ್ಲಿ, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು ʼವಿಶ್ವ ಸಂಸ್ಕೃತ ದಿನʼವನ್ನು ಆಗಸ್ಟ್ 3 ರಂದು ಸೂಕ್ತವಾದ ಆಚರಣೆಯೊಂದಿಗೆ ಗುರುತಿಸುವಂತೆ ಸೂಚಿಸಿದೆ. ಸಂಸ್ಕೃತ ವಿಶ್ವವಿದ್ಯಾಲಯಗಳ ಒಕ್ಕೂಟವು ‘ಸಂಸ್ಕೃತ ಸಪ್ತಾಹವನ್ನು ಆಯೋಜಿಸುವ ಮೂಲಕ ದಿನವನ್ನು ಆಚರಿಸಲಿದೆ. ಜುಲೈ 31 ರಿಂದ ಆಗಸ್ಟ್ 6 ರವರೆಗೆ ಆಚರಣೆ ನಡೆಯಲಿದೆ.
ಸುಮಾರು 3,500 ವರ್ಷಗಳ ಹಿಂದೆ ಹುಟ್ಟಿಕೊಂಡಿದೆ ಎಂದು ನಂಬಲಾದ ಪ್ರಾಚೀನ ಭಾರತೀಯ ಭಾಷೆಯ ಬಗ್ಗೆ ಯುವ ಪೀಳಿಗೆಗೆ ಅರಿವು ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ಸಂಸ್ಕೃತ ಭಾಷೆಯ ಬಗ್ಗೆ ಮತ್ತು ನಮ್ಮ ರಾಷ್ಟ್ರೀಯ ಪರಂಪರೆಯನ್ನು ಕಾಪಾಡುವ ಅಗತ್ಯತೆಯ ಬಗ್ಗೆ ಜನರನ್ನು ಪ್ರೇರೇಪಿಸುವ ಉದ್ದೇಶವೂ ಇದರ ಹಿಂದಿದೆ.
ಭಾಷೆಯ ಆಚರಣೆ ಮಾತ್ರವಲ್ಲದೆ, ಪ್ರಾಚೀನ ಕಾಲದಲ್ಲಿ ವ್ಯಾಪಕವಾಗಿ ಮಾತನಾಡುತ್ತಿದ್ದ ಸಂಸ್ಕೃತವನ್ನು ಕಲಿಯುವ ಮತ್ತು ತಿಳಿದುಕೊಳ್ಳುವ ಪ್ರಾಮುಖ್ಯತೆಯನ್ನು ಈ ದಿನವು ಒತ್ತಿ ಹೇಳುತ್ತದೆ. ಯುವ ಪೀಳಿಗೆಗೆ ಸಂಸ್ಕೃತದ ಇತಿಹಾಸ ಮತ್ತು ಭಾಷೆಯ ಮಹತ್ವವನ್ನು ತಿಳಿಸುವ ಗುರಿಯನ್ನು ಹೊಂದಿದೆ.
ಭಾರತೀಯರ ಮಹಾನ್ ಸಂಸ್ಕೃತಿಯ ಸಾರವಾಗಿರುವ ಸಂಸ್ಕೃತವನ್ನು ಉಳಿಸುವ, ಬೆಳೆಸುವ, ವಿಶ್ವ ವ್ಯಾಪಿಯಾಗಿಸುವ ಮಹತ್ತರವಾದ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದೆ.
ಶರಣ್ಯ ಶೆಟ್ಟಿ✍️
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.