ಬೆಳ್ತಂಗಡಿ : ನೆರಿಯ ಗ್ರಾಮದ ಕಾಟಾಜೆಯಲ್ಲಿ ಸುಂದರ ಮಲೆಕುಡಿಯ ಎಂಬುವರ ಕೈ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪುಷ್ಪಲತಾ ಎಂಬುವರನ್ನು ಎಎಸ್ಪಿ ರಾಹುಲ್ಕುಮಾರ್ ನೇತೃತ್ವದ ತಂಡ ಸೋಮವಾರ ಬಂಧಿಸಿದೆ. ಪ್ರಕರಣದ ಪ್ರಮುಖ ಆರೋಪಿ ಗೋಪಾಲಕೃಷ್ಣ ಗೌಡ ಹಾಗೂ ಆತನ ಸಹೋದರಿ ದಮಯಂತಿ ತಲೆಮರೆಸಿಕೊಂಡಿದ್ದಾರೆ. ಪೋಲಿಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಘಟನೆ ನಡೆದ ಬೆನ್ನಲ್ಲೆ ಭಾನುವಾರ ತಡ ರಾತ್ರಿ ಎಎಸ್ಪಿಯವರು ಹಾಗೂ ಪೋಲಿಸ್ ತಂಡ ಸ್ಥಳಕ್ಕೆ ತೆರಳಿ ಪ್ರಕರಣದ ಬಗ್ಗೆ ಮಾಹಿತಿಯನ್ನು ಪಡೆದು ಅಗತ್ಯ ಸಾಕ್ಷ್ಮವನ್ನು ಸಂಗ್ರಹಿಸಿಕೊಂಡಿದ್ದಾರೆ. ಸೋಮವಾರ ಆರೋಪಿ ಗೋಪಾಲಗೌಡನ ಮನೆಗೆ ತೆರಳಿ ಅಲ್ಲಿದ್ದ ಅವರ ಪತ್ನಿ ಸಹ ಆರೋಪಿ ಪುಷ್ಪಲತಾ ಎಂಬುವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಘಟನಾ ಸ್ಥಳದಿಂದ ಸುಂದರ ಮಲೆಕುಡಿಯನ ತುಂಡಾಗಿದ್ದ ಒಂದು ಕೈಬೆರಳು ಪತ್ತೆಯಾಗಿದೆ. ಅದು ತಡವಾಗಿ ಸಿಕ್ಕಿದ ಕಾರಣ ಅದನ್ನು ಕೈಗೆ ಮರಳಿ ಜೋಡಿಸಲು ಸಾಧ್ಯವಾಗಿಲ್ಲ. ಉಳಿದ ಮೂರು ಬೆರಳುಗಳು ಪತ್ತೆಯಾಗಿಲ್ಲ. ಅಲ್ಲೇ ಬಿದ್ದಿದ್ದ ಮೆಣಸಿನ ಹುಡಿಯ ಡಬ್ಬಿಯನ್ನು, ಆಕ್ರಮಣಕ್ಕೆ ಉಪಯೋಗಿಸಿದ ಕಳೆ ಕೀಳುವ ಯಂತ್ರವನ್ನು ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಾಟಾಜೆಯಲ್ಲಿ ಭಾನುವಾರ ಸಂಜೆ ನಡೆದ ಘಟನೆಯನ್ನು ಸುಂದರ ಮಲೆಕುಡಿಯರ ಅವರ ಮಕ್ಕಳು ಇನ್ನೂ ಭಯದಿಂದಲೇ ನೆನೆಸಿಕೊಳ್ಳುತ್ತಾರೆ. ಸಂಜೆ ೫.೩೦ರ ಸುಮಾರಿಗೆ ಸುಂದರ ಪತ್ನಿ ಮತ್ತು ಮಕ್ಕಳು ತಮ್ಮ ಜಾಗದಲ್ಲಿ ಸೊಪ್ಪು ಸಂಗ್ರಹಿಸುತ್ತಿದ್ದರು. ಈ ಸಂದರ್ಭ ಓಮ್ನಿ ಕಾರಿನಲ್ಲಿ ಬಂದ ಗೋಪಾಲಗೌಡರು ಕಾರಿನಿಂದ ಇಳಿದು ಕಳೆ ಕೀಳುವ ಯಂತ್ರದೊಂದಿಗೆ ಸುಂದರರ ಇದ್ದಲ್ಲಿ ಬಂದು ಕಳೆ ಕೀಳಲು ಆರಂಭಿಸಿದ್ದಾರೆ. ಅಲ್ಲಿಗೆ ಹೋದ ಸುಂದರ ಮಲೆಕುಡಿಯ ಹಾಗೂ ಮಗ ಪೂರ್ಣೇಶ, ಪತ್ನಿ ರೇವತಿ ತಮ್ಮ ಜಮೀನಿಗೆ ಪ್ರವೇಶಿಸಿದ ಬಗ್ಗೆ ಪ್ರಶ್ನಿಸಿದರು. ಈ ಸಂದರ್ಭ ಏಕಾಏಕಿ ಅವರತ್ತ ನುಗ್ಗಿದ ಗೋಪಾಲಗೌಡರು ಕಳೆ ಕೀಳುವ ಯಂತ್ರವನ್ನು ಅವರ ಮುಖದತ್ತ ತಂದಿದ್ದಾರೆ. ಭಯಗೊಂಡ ಅವರು ತನ್ನ ಕುತ್ತಿಗೆಗೆ ಬರುತ್ತಿದ್ದ ಯಂತ್ರವನ್ನು ತಡೆಯಲು ಕೈಯನ್ನು ಮುಂದೊಡಿದ್ದಾರೆ. ಈ ಸಂದರ್ಭ ಯಂತ್ರ ಅವರ ಕೈಯನ್ನು ಕತ್ತರಿಸಿಹಾಕಿದೆಯಲ್ಲದೆ ಬೆರಳುಗಳನ್ನು ತುಂಡರಿಸಿದೆ. ತಡೆಯಲು ಬಂದ ರೇವತಿ ಹಾಗು ಪೂರ್ಣೇಶನ ಮೇಲೆ ಗೌಡರೊಂದಿಗಿದ್ದ ದಮಯಂತಿ ಹಾಗೂ ಪುಷ್ಪಲತಾ ಮೆಣಸಿನ ಹುಡಿಯನ್ನು ಎರಚಿದ್ದಾರೆ. ಕಣ್ಣಿಗೆ ಮೆಣಸಿನ ಪುಡಿ ಬಿದ್ದದ್ದರಿಂದ ಅಲ್ಲೇ ಕುಸಿದಿದ್ದಾನೆ. ಈ ವೇಳೆಗೆ ಆರೋಪಿಗಳು ತಾವು ಬಂದಿದ್ದ ವಾಹನದಲ್ಲಿ ಪರಾರಿಯಾಗಿದ್ದಾರೆ. ಉರಿಯನ್ನು ತಡೆಯಲಾರದೆ ಪೂರ್ಣೇಶ ತಂಗಿಯಿಂದ ತನ್ನ ಸಂಬಂಧಿಕರಿಗೆ ಕರೆ ಮಾಡಿಸಿ ಘಟನೆಯ ಬಗ್ಗೆ ವಿವರಿಸಿದ್ದಾನೆ. ಕೂಡಲೇ ಜೀಪಿನಲ್ಲಿ ಬಂದ ಸಂಬಂಧಿಕರು ಇವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ರೀತಿಯಾಗಿ ಪೂರ್ಣೇಶ ಘಟನೆಯನ್ನು ವಿವರಿಸಿದ್ದಾನೆ.
ಈ ಹಿಂದೆಯೂ ದಾಳಿ ಮಾಡಿದ್ದ- ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಆರೋಪಿ ಗೋಪಾಲಗೌಡ ಮತ್ತು ತಂಡ ಇದೇ ಕುಂಟುಂಬದ ಮನೆಯ ಮೇಲೆ ದಾಳಿ ನಡೆಸಿದ್ದರು. ಪೂರ್ಣೇಶ ಚಿಕ್ಕಮಗುವಾಗಿದ್ದ ಸಂದರ್ಭ ತೊಟ್ಟಿಲಲ್ಲಿ ಮಲಗಿದ್ದ ಮಗುವಿಗೆ ಕತ್ತಿಯಿಂದ ಕಡಿಯಲು ಬಂದಾಗ ಅದನ್ನು ತಾಯಿ ರೇವತಿ ತಡೆದಿದ್ದರು. ಈ ಸಂದರ್ಭ ಕತ್ತಿಯ ಹೊಡೆತಕ್ಕೆ ಆಕೆಯ ಒಂದು ಬೆರಳು ತುಂಡಾಗಿ ಹೋಗಿತ್ತು, ತೊಟ್ಟಲು ಕಡಿದು ಮಗು ಕೆಳಗೆ ಬಿದ್ದಿತ್ತು. ಆಕೆಯ ಕೈಯಲ್ಲಿ ಈಗಲೂ ನಾಲ್ಕೇ ಬೆರಳು. ಹಲ್ಲೆಗೊಳಗಾದ ಕೈ ಈಗಲೂ ಸ್ವಾಧೀನದಲ್ಲಿಲ್ಲವಾಗಿದೆ.
ಸುಂದರ ಮಲೆಕುಡಿಯರಿಗೆ ನಾಲ್ವರು ಮಕ್ಕಳು. ಕಡು ಬಡತನದ ಕುಟುಂಬ ಇವರದ್ದು. ಕಳೆದ ಒಂದು ವರ್ಷದಿಂದ ಅನಾರೋಗ್ಯ ಪೀಡಿತರಾಗಿದ್ದ ಇವರು ಸುಮಾರು ಆರು ತಿಂಗಳ ಕಾಲ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೆಲ ದಿನಗಳ ಹಿಂದೆಯಷ್ಟೇ ಮನೆಗೆ ಬಂದಿದ್ದರು. ಹಿರಿಯ ಮಗ ಪೂರ್ಣೇಶ ತಂದೆಯ ಅಸೌಖ್ಯದ ಕಾರಣ ಶಿಕ್ಷಣವನ್ನು ಬಿಟ್ಟು ಮನೆಯಲ್ಲಿದ್ದು ಕುಟುಂಬದ ಜವಾಬ್ದಾರಿ ಹೊತ್ತಿದ್ದಾನೆ. ಮೂವರು ಹೆಣ್ಣು ಮಕ್ಕಳಿದ್ದು ಹಿರಿಯವಳು ಪಿಯುಸಿಯಲ್ಲಿ, ಉಳಿದವರಿಬ್ಬರು ಶಾಲಾ ವಿದ್ಯಾರ್ಥಿಗಳಾಗಿದ್ದಾರೆ. ಇದೀಗ ಬಂದೊಗಿದ ದುಃಸ್ಥಿತಿಯನ್ನು ತಡೆದುಕೊಳ್ಳುವ ಶಕ್ತಿ ಈ ಕುಟುಂಬಕ್ಕಿಲ್ಲವಾಗಿದೆ. ಚಿಕಿತ್ಸೆಯ ವೆಚ್ಚಕ್ಕೆ ಇನ್ನೊಬ್ಬರ ಮುಂದೆ ಕೈ ಚಾಚಬೇಕಾದ ಸ್ಥಿತಿ ಇವರದ್ದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.