2019 ಜುಲೈ 26, ಕರ್ನಾಟಕದಲ್ಲಿ ಬಿ. ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷ ಆಡಳಿತದ ಗದ್ದುಗೆ ಏರಿದ ದಿನ. ಅದಕ್ಕೂ ಮುನ್ನವೇ ಬಿಜೆಪಿ ಪಕ್ಷ ರಾಜ್ಯದ ಆಡಳಿತ ವಹಿಸಿಕೊಳ್ಳಬೇಕು ಎಂಬಂತೆ ರಾಜ್ಯದ ಹೆಚ್ಚಿನ ಜನರು ಮತ ನೀಡಿದ್ದರೂ ,ಕೆಲವೇ ಸೀಟುಗಳ ಕೊರತೆಯಿಂದಾಗಿ ರಾಜ್ಯದಲ್ಲಿ ಪಕ್ಷ ಆಡಳಿತ ಹಿಡಿಯುವಲ್ಲಿ ವಿಫಲವಾಯಿತು. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನ ಅಸಮರ್ಪಕ ಮೈತ್ರಿ ಮುರಿದ ಬಳಿಕ ಮತ್ತೆ ಜನಪರ ಪಕ್ಷ ಭಾಜಪ ರಾಜ್ಯದ ಆಡಳಿತದ ಗದ್ದುಗೆ ಏರಿ, ಬಿಎಸ್ವೈ ಮುಖ್ಯಮಂತ್ರಿಯಾಗಿ ಇಂದಿಗೆ ಒಂದು ವರ್ಷ. ಈ ಒಂದು ವರ್ಷದಲ್ಲಿಯೇ ಬಿಜೆಪಿ ಪ್ರಾಕೃತಿಕ, ಮಾನವ ನಿರ್ಮಿತ ಅಸಮತೋಲನಗಳು, ಸವಾಲುಗಳನ್ನು ಎದುರಿಸಬೇಕಾಯಿತು. ಈ ಎಲ್ಲಾ ಅಡೆತಡೆಗಳನ್ನು ಮೀರಿ ಜನರಿಗೆ ತೊಂದರೆಯಾಗದಂತೆ, ರಾಜ್ಯದ ಅಭಿವೃದ್ಧಿಯ ಆಶಯವನ್ನಿಟ್ಟುಕೊಂಡು ಸಮರ್ಥವಾಗಿ ಆಡಳಿತ ನಡೆಸಿದೆ ಎಂದರೂ ತಪ್ಪಾಗಲಾರದು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದ ಬಳಿಕ ಅದೆಷ್ಟೋ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿದೆ. ಆರಂಭದಲ್ಲಿ ಬರ ಪರಿಸ್ಥಿತಿಯನ್ನು ಎದುರಿಸುವ ಸವಾಲು ,ಅದನ್ನು ಪರಿಹರಿಸುವುದಕ್ಕಾಗಿ ಎಲ್ಲಾ ಪೂರಕ ಕ್ರಮಗಳನ್ನು ತೆಗೆದುಕೊಂಡ ಬಳಿಕ, ಕಂಡು ಕೇಳರಿಯದ ಭೀಕರ ಪ್ರವಾಹಕ್ಕೆ ರಾಜ್ಯ ಸಾಕ್ಷಿಯಾಗಬೇಕಾಯಿತು. ಈ ಸಂದರ್ಭದಲ್ಲಿ ಖುದ್ದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೇ ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳಿಗೆ ತೆರಳಿ, ಅಲ್ಲಿನ ಜನರ ಸಂಕಷ್ಟ, ಪರಿಸ್ಥಿತಿಯ ಅವಲೋಕನ ನಡೆಸುವ ಪ್ರಾಮಾಣಿಕ ಪ್ರಯತ್ನ ನಡೆಸಿದರು. ಜೊತೆಗೆ ಶೀಘ್ರ ಪರಿಹಾರ ಘೋಷಣೆ, ಜನರಿಗೆ ಅಗತ್ಯ ನೆರವುಗಳನ್ನು ನೀಡುವ ಮೂಲಕ ನೊಂದ ಸಮಾಜಕ್ಕೆ ಭರವಸೆ ತುಂಬುವ ಕೆಲಸವನ್ನು ಮಾಡಿದರು. ಜೊತೆಗೆ ಪರಿಸ್ಥಿತಿಯ ನಿಯಂತ್ರಣ ಹೇಗೆ ಎಂಬುದನ್ನು ಅಧಿಕಾರಿಗಳ ಜೊತೆಗೆ ಚರ್ಚಿಸಿ ರಾಜ್ಯದ ಜನರಿಗೆ ಭದ್ರ ಬದುಕು ಕಟ್ಟಿಕೊಳ್ಳಲು ಬೇಕಾದ ಎಲ್ಲಾ ರೀತಿಯ ನೆರವನ್ನೂ ಸರ್ಕಾರದ ಮೂಲಕ ಮಾಡಿಕೊಡುವ ಕೆಲಸವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿದ್ದಾರೆ. ಜೊತೆಗೆ ಈ ಸಂದರ್ಭದಲ್ಲಿ ವಸತಿ ಕಳೆದುಕೊಂಡು ಬೀದಿಗೆ ಬಿದ್ದ ಅನೇಕ ಕುಟುಂಬಗಳಿಗೆ ಸರ್ಕಾರದ ವತಿಯಿಂದಲೇ ಮನೆಯನ್ನು ಕಟ್ಟಿಸಿಕೊಟ್ಟು ನೊಂದವರ ಮುಖದಲ್ಲಿ ಮತ್ತೆ ಭರವಸೆ ಹುಟ್ಟಿಸುವ ಪ್ರಾಮಾಣಿಕ ಪ್ರಯತ್ನವೂ ಬಿಜೆಪಿ ಸರ್ಕಾರದಿಂದ ಆಗಿದೆ.
ಇಂತಹ ಹಲವು ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ ಸರ್ಕಾರಕ್ಕೆ ಕೊರೋನಾ ಎಂಬ ಮಹಾಮಾರಿಯೂ ಕಳೆದ 4-5 ತಿಂಗಳಿನಿಂದ ಸಮಸ್ಯೆ ಸೃಷ್ಟಿಸುತ್ತಲೇ ಬಂದಿದೆ. ಗೊತ್ತು ಗುರಿ ಇಲ್ಲದ ರೋಗಕ್ಕೆ ಮದ್ದಿಲ್ಲದೇ ಇರುವ ಸಂದರ್ಭದಲ್ಲಿ, ರಾಜ್ಯದ ಜನರನ್ನು ಕಾಪಾಡಲು ರಾಜ್ಯವನ್ನು ಸಂಪೂರ್ಣ ಲಾಕ್ಡೌನ್ ಮಾಡಲಾಯಿತು. ಅನೇಕ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಮೂಲಕವಾದರೂ ಕೊರೋನಾ ಸಮಸ್ಯೆಯನ್ನು ಜಯಿಸಬೇಕು ಎಂಬ ಆಶಯದ ಮೂಲಕವೂ ಹಲವಾರು ಮುಂಜಾಗ್ರತಾ ನಿಯಮಗಳನ್ನು ಜಾರಿಗೊಳಿಸಲಾಯಿತು. ಬಿಎಸ್ವೈ ಸರ್ಕಾರ ತೆಗೆದುಕೊಂಡ ಸಮರ್ಥ ಕ್ರಮಗಳಿಗೆ ದೇಶ ವಿದೇಶಗಳಿಂದಲೂ ಮೆಚ್ಚುಗೆಯ ಮಹಾಪೂರ ಹರಿದು ಬಂತು. ಜೊತೆಗೆ ರಾಜ್ಯದ ಕೊರೋನಾ ನಿಯಂತ್ರಣ ಕ್ರಮಗಳನ್ನು ಮಾದರಿಯಾಗಿಟ್ಟುಕೊಂಡು ಕೆಲಸ ಮಾಡುವಂತೆ ಇತರ ರಾಜ್ಯಗಳಿಗೂ ಕೇಂದ್ರ ಸರ್ಕಾರ ಸೂಚಿಸಿತು.
ಈ ಸಮಯದಲ್ಲಿ ಜನರಿಗೆ ಒಂದು ಕಡೆಯಿಂದ ಆರೋಗ್ಯ ಸಂಬಂಧಿ ಸಮಸ್ಯೆಗಳು ಎದುರಾಗುವ ಭಯವಿದ್ದರೆ, ಮತ್ತೊಂದು ಕಡೆಯಲ್ಲಿ ದೇಶವೇ ಸ್ತಬ್ಧವಾಗಿರುವಾಗ ಹೊಟ್ಟೆ ತುಂಬಿಸಿಕೊಳ್ಳುವುದು, ಜೀವನ ನಿರ್ವಹಣೆಯ ದಾರಿ ಕಂಡುಕೊಳ್ಳುವುದೇ ದೊಡ್ಡ ಸವಾಲಿನ ವಿಚಾರವಾಗಿಬಿಡುತ್ತದೆ. ಇಂತಹ ಸಂದರ್ಭದಲ್ಲಿ ಎದೆಗುಂದದ ಬಿಎಸ್ವೈ ಸರ್ಕಾರ, ಜನರಿಗೆ ಆಹಾರ ಭದ್ರತೆ, ಆರೋಗ್ಯ ಭದ್ರತೆ ಗಳನ್ನು ಒದಗಿಸುವ ನಿಟ್ಟಿನಲ್ಲಿಯೂ ಅನೇಕ ಕ್ರಮಗಳನ್ನು ಕೈಗೊಂಡಿತು. ನೇಕಾರರಿಗೆ, ಕೃಷಿಕರಿಗೆ, ವಲಸೆ.ಕಾರ್ಮಿಕರಿಗೆ, ಆಟೋ, ಟ್ಯಾಕ್ಸಿ ಚಾಲಕರಿಗೆ ಹೀಗೆ ಸಮಾಜದಲ್ಲಿ ಕೊರೋನಾ ದಿಂದ ಅರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿರುವ ಜನರನ್ನು ಗಮನದಲ್ಲಿಟ್ಟುಕೊಂಡು ಅನೇಕ ಯೋಜನೆಗಳನ್ನೂ ಬಿಜೆಪಿ ಸರ್ಕಾರ ಕೈಗೊಂಡಿತು. ಆ ಮೂಲಕ ಅವರ ಕುಟುಂಬಕ್ಕೆ ಈ ಸಂಕಷ್ಟದಿಂದ ಕೊಂಚ ಮಟ್ಟಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳುಲು ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಯನ್ನೂ ಸರ್ಕಾರ ಮಾಡಿಕೊಟ್ಟಿದೆ. ಅನೇಕ ಬಡ ಜನರ ಕಣ್ಣೀರೊರೆಸುವ ಕೆಲಸವನ್ನು ರಾಜ್ಯ ಬಿಜೆಪಿ ಸರ್ಕಾರ ಈ ಸಂದರ್ಭದಲ್ಲಿ ಮಾಡಿದೆ ಎಂದರೂ ತಪ್ಪಾಗಲಾರದು.
ಇನ್ನು ಕೊರೋನಾ ವೇಳೆ ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೆ, ಪೊಲೀಸರಿಗೆ, ಆಶಾ ಕಾರ್ಯಕರ್ತೆಯರಿಗೆ, ಪೌರ ಕಾರ್ಮಿಕರಿಗೂ ಅಗತ್ಯವಾಗಿ ಬೇಕಾದ ಎಲ್ಲಾ ಸೌಕರ್ಯಗಳನ್ನು ಒದಗಿಸಿ ಕೊಡುವಲ್ಲಿ ಬಿಜೆಪಿ ಸರ್ಕಾರ ನಿಸ್ವಾರ್ಥವಾಗಿ ಪ್ರಯತ್ನ ನಡೆಸಿದೆ. ಹಾಗೆಯೇ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಆಯುಷ್ ವೈದ್ಯರಿಗೂ ವೇತನ ಹೆಚ್ಚಳ ಮಾಡುವ ಮೂಲಕ ಅವರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಿದೆ. ಅಗತ್ಯ ವೈದ್ಯಕೀಯ ಉಪಕರಣಗಳು, ಪಿಪಿಇ ಕಿಟ್, ಸ್ಯಾನಿಟೈಸರ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಖರೀದಿಸಲಾಗಿದೆ. ಸರ್ಕಾರ ಆರ್ಥಿಕವಾಗಿ ಸಂಕಷ್ಟದ ಸ್ಥಿತಿಯನ್ನೆದುರಿಸುತ್ತಿದ್ದರೂ, ಕೊರೋನಾ ಚಿಕಿತ್ಸೆಗೆ ಪೂರಕವಾದ ಆಸ್ಪತ್ರೆಗಳನ್ನು, ಆಂಬ್ಯುಲೆನ್ಸ್ ವ್ಯವಸ್ಥೆಯನ್ನು, ಕಡಿಮೆ ಬೆಲೆಗೆ ಕೊರೋನಾ ಪರೀಕ್ಷೆಯನ್ನು, ಐಸೋಲೇಷನ್, ಕ್ವಾರಂಟೈನ್ ಪ್ರಕ್ರಿಯೆಗೆ ಅಗತ್ಯವೆನಿಸಿದ ಪೂರಕ ಕ್ರಮಗಳನ್ನು ಸಮರ್ಥವಾಗಿ ಒದಗಿಸುವ ಕೆಲಸವನ್ನು ಮಾಡಿದೆ. ಜೊತೆಗೆ ಖಾಸಗಿ ಆಸ್ಪತ್ರೆಗಳ ಜೊತೆಗೆ ಮಾತುಕತೆ ನಡೆಸಿ ಕೊರೋನಾ ಚಿಕಿತ್ಸೆಗೆ 50% ದಷ್ಟು ಹಾಸಿಗೆಗಳನ್ನು ಒದಗಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ. ಇಷ್ಟೇ ಅಲ್ಲದೆ ಕೊರೋನಾ ಪರಿಹಾರಕ್ಕೆ ಬೇಕಾದ ಎಲ್ಲಾ ಮಾರ್ಗಗಳನ್ನು ಸರ್ಕಾರ ಇಂದಿಗೂ ಕಾರ್ಯರೂಪಕ್ಕೆ ತರುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ಎಲ್ಲಾ ಸಚಿವರು, ಅಧಿಕಾರಿಗಳು ಸೇರಿದಂತೆ ಎಲ್ಲರೂ ಹಗಲು ರಾತ್ರಿ ಎನ್ನದೆ ದಣಿವರಿಯದೆ ದುಡಿಯುತ್ತಿದ್ದಾರೆ ಎಂದರೂ ತಪ್ಪಾಗಲಾರದು.
ಒಂದು ಕಡೆಯಿಂದ ಪ್ರಾಕೃತಿಕವಾಗಿ ಬಂದೊದಗುತ್ತಿರುವ ಸವಾಲುಗಳು, ಇನ್ನೊಂದೆಡೆ ಮೊಸರಿನಲ್ಲಿಯೂ ಕಲ್ಲು ಹುಡುಕುತ್ತಿರುವ ವಿರೋಧ ಪಕ್ಷಗಳ ನಡುವೆಯೂ ಜನಸ್ನೇಹಿ ಆಡಳಿತ ನೀಡುವ ಮೂಲಕವೇ ಬಿಎಸ್ವೈ ನೇತೃತ್ವದ ಸರ್ಕಾರ ಇಂದು ರಾಜ್ಯದ ಮನೆ ಮನಗಳನ್ನು ತಲುಪಿದೆ. 75 ವರ್ಷ ವಯಸ್ಸಾದರೂ ಇನ್ನೂ ಚಿರ ಯುವಕನಂತೆ ಉತ್ಸಾಹದಿಂದ ಕೆಲಸ ಮಾಡುತ್ತಿರುವ ಯಡಿಯೂರಪ್ಪ ಮತ್ತು ಅವರ ತಂಡದ ನಿಷ್ಪಕ್ಷಪಾತ, ನಿಷ್ಟೆಯುಳ್ಳ ಅಭಿವೃದ್ಧಿ ಪರ ಚಿಂತನೆಗಳು, ಯೋಜನೆಗಳು ಮತ್ತು ಕಾರ್ಯ ವೈಖರಿಯೇ ಬಿಜೆಪಿಯನ್ನು ಜನಮಾನಸಕ್ಕೆ ಮತ್ತಷ್ಟು ಹತ್ತಿರವನ್ನಾಗಿಸುತ್ತಿದೆ ಎಂದರೂ ಅತಿಶಯವಾಗಲಾರದೇನೋ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.