ನವದೆಹಲಿ: ಕೊರೋನಾ ಸಂಕಷ್ಟದಿಂದಾದ ಆರ್ಥಿಕ ಸಂಕಷ್ಟ ಮತ್ತು ಲಡಾಕ್ ನಲ್ಲಿ ಕುತಂತ್ರಿ ಚೀನಾದ ಉಪಟಳಕ್ಕೆ ಸೆಡ್ಡು ಹೊಡೆದಿರುವ ಭಾರತ ಆತ್ಮ ನಿರ್ಭರತೆಯ ಮೂಲಕ ಸ್ವದೇಶೀ, ಸ್ವಾವಲಂಬಿ ಮಂತ್ರವನ್ನು ಅನುಷ್ಠಾನಕ್ಕೆ ತರುವ ಪ್ರಯತ್ನದಲ್ಲಿದೆ. ಇದಕ್ಕೆ ಪೂರಕವಾಗಿ ಎಂಬಂತೆ ದೇಶದ ಸಣ್ಣ ಮತ್ತು ಮಧ್ಯಮ ಪ್ರಮಾಣದ ವ್ಯಾಪಾರಸ್ಥರು ಅಮೆಜಾನ್ ಅನ್ನು ಬಳಕೆ ಮಾಡಿಕೊಂಡು ಎರಡು ಶತಕೋಟಿ ಡಾಲರ್ ಗಳಷ್ಟು ಮೊತ್ತದ ಸಾಮಗ್ರಿಗಳನ್ನು ರಫ್ತು ಮಾಡಿರುವುದಾಗಿ ಅಮೆಜಾನ್ ಸಂಸ್ಥೆ ಮಾಹಿತಿ ನೀಡಿದೆ.
ಜಾಗತಿಕವಾಗಿ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ಉದ್ದೇಶದಿಂದ 2015 ರಲ್ಲಿಯೇ ಅಮೆಜಾನ್ ಕಾರ್ಯ ಯೋಜನೆಗಳನ್ನು ರೂಪಿಸಿಕೊಂಡು, ಅದನ್ನು ಕಾರ್ಯರೂಪಕ್ಕೆ ತರುವ ಕೆಲಸವನ್ನೂ ಮಾಡಿತ್ತು. ಈ ಸೇವೆಯನ್ನು ಸಮರ್ಥವಾಗಿ ಬಳಸಿಕೊಂಡಿರುವ ದೇಶೀಯ ಸಣ್ಣ, ಮಧ್ಯಮ ಪ್ರಮಾಣದ ವ್ಯಾಪಾರಸ್ಥರು ಈ ಬಾರಿ ಆಮದಿನ ಪ್ರಮಾಣಕ್ಕಿಂತ ಅಧಿಕ ಮಟ್ಟದಲ್ಲಿ ಸಾಮಗ್ರಿಗಳನ್ನು ರಫ್ತು ಮಾಡಿದ್ದಾರೆ. ಇದು ಮೋದಿ ಅವರ ಆತ್ಮ ನಿರ್ಭರ ಭಾರತಕ್ಕೆ ಸಿಕ್ಕ ಬೆಂಬಲ ಎಂದೂ ಅಮೆಜಾನ್ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಅಭಿಜಿತ್ ಕಮ್ರ, ಭಾರತದಿಂದ 60,000 ಮಾರಾಟಗಾರರು ಸ್ವದೇಶೀ ಉತ್ಪನ್ನಗಳನ್ನು ಅಮೆಜಾನ್ ನ 15 ವೆಬ್ಸೈಟ್ ಗಳ ಮೂಲಕ ವಿದೇಶಕ್ಕೆ ರಫ್ತು ಮಾಡಿದ್ದಾರೆ ಎಂದೂ ತಿಳಿಸಿದ್ದಾರೆ. ಚೀನಾದಿಂದ ಆಮದು ಪ್ರಕ್ರಿಯೆಯನ್ನು ಕಡಿಮೆ ಮಾಡುವ ಕೇಂದ್ರ ಸರ್ಕಾರದ ಯೋಚನೆಗೆ ಇದು ಬಲ ನೀಡಿದಂತಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಜೊತೆಗೆ ಭಾರತದ ಮಧ್ಯಮ ಮತ್ತು ಸಣ್ಣ ಉದ್ಯಮಗಳ ಡಿಜಿಟಲೀಕರಣಕ್ಕಾಗಿ 1 ಶತಕೋಟಿ ಡಾಲರ್ ಗಳಷ್ಟು ಹೂಡಿಕೆ ಮಾಡುವುದಾಗಿಯೂ ಅಮೆಜಾನ್ ಸಂಸ್ಥೆಯ ಮುಖ್ಯಸ್ಥ ಜೆಫ್ ಬಿಜೋಸ್ ಅವರು ಕಳೆದ ಜನವರಿ ತಿಂಗಳಿನಲ್ಲಿಯೇ ಘೋಷಣೆ ಮಾಡಿದ್ದರು. ಜೊತೆಗೆ 2025 ರ ಸಂದರ್ಭಕ್ಕೆ 10 ಶತಕೋಟಿ ಡಾಲರ್ ಮೊತ್ತದ ಉತ್ಪನ್ನಗಳನ್ನು ರಫ್ತು ಮಾಡುವ ಗುರಿಯನ್ನು ಅಮೆಜಾನ್ ಇಟ್ಟುಕೊಂಡಿರುವುದಾಗಿಯೂ ತಿಳಿಸಿದ್ದರು.
ದೇಶದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಮಾರಾಟಗಾರರು ಸಿದ್ಧಪಡಿಸಿದ ಉತ್ಪನ್ನಗಳ ರಫ್ತಿನ ಪ್ರಮಾಣವನ್ನು ಶತಕೋಟಿ ಡಾಲರ್ ಗೆ ಏರಿಸಲು ಮೂರು ವರ್ಷಗಳ ಕಾಲವನ್ನು ಅಮೆಜಾನ್ ತೆಗೆದುಕೊಂಡಿದೆ. ಕಡಿಮೆ ಅವಧಿಯಲ್ಲಿ 100% ದಷ್ಟು ಪ್ರಗತಿಯನ್ನು ಕಾಣುವ ನಿಟ್ಟಿನಲ್ಲಿಯೂ ಅಮೆಜಾನ್ ಕಾರ್ಯ ನಿರ್ವಹಿಸುತ್ತಿದೆ ಎಂದು ಮಾರಾಟ ವಿಭಾಗದ ಮುಖ್ಯಸ್ಥ ಗೋಪಾಲ್ ಪಿಳ್ಳೈ ತಿಳಿಸಿದ್ದಾರೆ. ಜೊತೆಗೆ ಸಣ್ಣ ಉದ್ಯಮಿಗಳಿಗೆ ಸಾಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿಯೂ ಸಂಸ್ಥೆ ಕೆಲವು ಬ್ಯಾಂಕ್ ಗಳ ಜೊತೆಗೆ ಕೈ ಜೋಡಿಸಲಿದೆ ಎಂದೂ ಅವರು ತಿಳಿಸಿದ್ದಾರೆ.
ಅಮೆಜಾನ್ ನ ಈ ಸಾಧನೆಯ ಬಗ್ಗೆ ಮಾತನಾಡಿರುವ ಕೇಂದ್ರ ಸಾರಿಗೆ ಹಾಗೂ ಸಣ್ಣ ಮಧ್ಯಮ ಕೈಗಾರಿಕೆಗಳ ಸಚಿವ ನಿತಿನ್ ಗಡ್ಕರಿ, ಅಮೆಜಾನ್ ಇನ್ನಷ್ಟು ಸಣ್ಣ ಉದ್ಯಮಿಗಳಿಗೆ ನೆರವು ನೀಡುವಂತಾಗಲಿ ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.