
ಅಯೋಧ್ಯೆ: ಭವ್ಯ ರಾಮ ಮಂದಿರವನ್ನು ನಿರ್ಮಾಣ ಮಾಡುವ ಸಲುವಾಗಿ ಉತ್ತರ ಪ್ರದೇಶದ ಅಯೋಧ್ಯೆ ನಗರದಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದೆ. ರಾಮ ನಿರ್ಮಾಣ ಕಾರ್ಯದ ಉಸ್ತುವಾರಿಯನ್ನು ನೋಡಿಕೊಳ್ಳಲು ಸ್ಥಾಪನೆ ಮಾಡಲಾದ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಶನಿವಾರ ಸಭೆ ಸೇರಿದ್ದು, ದೇಗುಲ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆಯನ್ನು ನಡೆಸುವ ಬಗ್ಗೆ ಚರ್ಚೆ ನಡೆಸಿವೆ.
ರಾಮ ಮಂದಿರದ ನಿರ್ಮಾಣ ಕಾರ್ಯದ ಆರಂಭವನ್ನು ಸೂಚಿಸುವ ಭೂಮಿ ಪೂಜೆ ಅಥವಾ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯನ್ನು ಟ್ರಸ್ಟ್ ಈಗಾಗಲೇ ಆಹ್ವಾನಿಸಿದೆ. ನಿನ್ನೆ ನಡೆದ ಸಭೆಯಲ್ಲಿ ಭೂಮಿ ಪೂಜೆಗಾಗಿ ಎರಡು ದಿನಾಂಕಗಳನ್ನು ಆಯ್ಕೆ ಮಾಡಿರುವ ಟ್ರಸ್ಟ್, ಅದನ್ನು ಮೋದಿಯವರಿಗೆ ನೀಡಿದೆ.
ಆಗಸ್ಟ್ 3 ಮತ್ತು 5 ಅನ್ನು ಆಯ್ಕೆ ಮಾಡಲಾಗಿದೆ. ತಮಗೆ ಸೂಕ್ತವಾದ ದಿನಾಂಕವನ್ನು ಪ್ರಧಾನಿಯವರು ಆಯ್ಕೆ ಮಾಡಿ ನಮಗೆ ತಿಳಿಸಬಹುದು. ಅವರು ಖಂಡಿತವಾಗಿಯೂ ಆಗಮಿಸಲಿದ್ದಾರೆ ಎಂಬ ಭರವಸೆ ಇದೆ ಎಂದು ಟ್ರಸ್ಟ್ ಸದಸ್ಯರು ಹೇಳಿದ್ದಾರೆ.
“ಅಯೋಧ್ಯೆಯಲ್ಲಿ ಆದಷ್ಟು ಬೇಗ ಮತ್ತು ಹಿಂದೆ ಇದ್ದಂತೆ ಅತ್ಯಂತ ಭವ್ಯವಾದ ರಾಮ ಮಂದಿರವನ್ನು ನಿರ್ಮಾಣ ಮಾಡುವುದು ನಮ್ಮ ಉದ್ದೇಶ. ಪ್ರಧಾನಿ ನರೇಂದ್ರ ಮೋದಿ ಅವರು ಖಂಡಿತವಾಗಿಯೂ ಆಗಮಿಸುತ್ತಾರೆ” ಎಂದು ಟ್ರಸ್ಟ್ ನ ಹಿರಿಯ ಸದಸ್ಯ ಸ್ವಾಮಿ ಪರಮಾನಂದ ಮಹಾರಾಜ್ ಹೇಳಿದ್ದಾರೆ.
ಸುಮಾರು 300 ಕೋಟಿ ವೆಚ್ಚದಲ್ಲಿ ಮಂದಿರವು ನಿರ್ಮಾಣವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಮಳೆಗಾಲದ ನಂತರ ಶೀಘ್ರದಲ್ಲೇ ಟ್ರಸ್ಟ್ ಆರ್ಥಿಕ ಸಹಾಯಕ್ಕಾಗಿ ದೇಶಾದ್ಯಂತ 10 ಕೋಟಿ ಕುಟುಂಬಗಳನ್ನು ಸಂಪರ್ಕಿಸಲಿದೆ ಮತ್ತು ದೇವಾಲಯದ ವಿನ್ಯಾಸವನ್ನು ಪೂರ್ಣಗೊಳಿಸಿದ ನಂತರ ಮೂರರಿಂದ ಮೂರೂವರೆ ವರ್ಷಗಳೊಳಗೆ ಕಾಮಗಾರಿಯನ್ನು ಮುಗಿಸಲಾಗುವುದು ಎಂದು ಟ್ರಸ್ಟ್ನ ಪ್ಧಾರನ ಕಾರ್ಯದರ್ಶಿ ಚಂಪತ್ ರಾಯಗ ಹೇಳಿದ್ದಾರೆ.
ಸಭೆಯಲ್ಲಿ ರಾಮ ಮಂದಿರದ ಎತ್ತರದ ವಿಷಯವನ್ನೂ ಚರ್ಚಿಸಲಾಯಿತು. ದೇವಾಲಯದ ಎತ್ತರವು 161 ಅಡಿಗಳು ಮತ್ತು ಐದು ಶಿಖರಗಳನ್ನು ಹೊಂದಿರುತ್ತದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯ ಕಾಮೇಶ್ವರ ಚೌಪಾಲ್ ಹೇಳಿದ್ದಾರೆ.
ಯೋಜನೆಯ ಪ್ರಕಾರ ಎಲ್ಲವೂ ನಡೆದರೆ, ಪ್ರಧಾನಿ ಮೋದಿ ಅವರು ಆಗಸ್ಟ್ 5 ರಂದು ಅಯೋಧ್ಯೆಗೆ ಭೇಟಿ ನೀಡುವ ಸಾಧ್ಯತೆಯಿದೆ. ಪಿಎಂಒ ಅವರ ಭೇಟಿಯ ದಿನಾಂಕಕ್ಕೆ ಅನುಮೋದನೆಯ ಅಂತಿಮ ಮುದ್ರೆಯನ್ನು ಹಾಕಲಿದೆ. ಯೋಜನೆಯ ಪ್ರಕಾರ, ಮೋದಿ ಆ ದಿನ ಸುಮಾರು 3-4 ಗಂಟೆಗಳ ಕಾಲ ಅಯೋಧ್ಯೆಯಲ್ಲಿ ಕಳೆಯುವ ನಿರೀಕ್ಷೆಯಿದೆ. ಅವರು ಅಯೋಧ್ಯೆಯ ವಾಸ್ತವ್ಯದ ಸಮಯದಲ್ಲಿ ಸರಯು ಪೂಜನ್ಗೆ ಹಾಜರಾಗುತ್ತಾರೆ ಮತ್ತು ಹನುಮಂಗರ್ಹಿಗೆ ಭೇಟಿ ನೀಡುತ್ತಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



