ರಾಯ್ಪುರ: ಛತ್ತೀಸ್ಗಢ ರಾಜ್ಯದ ಸುರ್ಗುಜ ಜಿಲ್ಲೆಯ ಸುರ್ ಪ್ರದೇಶದ ಮುದ್ಗಾಲಿ ತಿರ್ಕಿ ಎಂಬ ಹೆಸರಿನ 55 ವರ್ಷದ ದಾದಿಯೊಬ್ಬರು ಅಲ್ಲಿನ ಜನರಿಗೆ ಅಗತ್ಯವೆನಿಸಿದ ಸೇವೆ ಒದಗಿಸುತ್ತಾ ಬಂದಿದ್ದು, ಆ ಮೂಲಕ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲಿನ ಜನರ ಪಾಲಿಗೆ ಜೀವ ರಕ್ಷಕಿಯಾಗುವ ಮೂಲಕ ಅವರ ಆರೋಗ್ಯ ಅವಶ್ಯಕತೆಯನ್ನು ಪೂರೈಸುತ್ತಿದ್ದಾರೆ.
ಕಳೆದ ಒಂದು ದಶಕದಿಂದಲೂ ಇಲ್ಲಿನ ಜನರಿಗೆ ಬೇಕಾದ ಮೂಲಭೂತ ಅವಶ್ಯಕತೆಗಳನ್ನು ಒದಗಿಸಿ ಕೊಡುವಲ್ಲಿ ಈ ನರ್ಸ್ ಗುರುತಿಸಿಕೊಂಡಿದ್ದಾರೆ. ಈ ಭಾಗದ ಜನರಿಗೆ, ಯಾವುದೇ ರೀತಿಯ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಇವರು ಸಹಾಯವನ್ನು ಒದಗಿಸುತ್ತಾರೆ. ವಾರಕ್ಕೆ 2 ದಿನ ಈ ಹಳ್ಳಿಗೆ ಭೇಟಿ ನೀಡುವ ಇವರು ಅಲ್ಲಿನ ಜನರ ಅವಶ್ಯಕತೆಗಳನ್ನು ಪೂರೈಸಿಕೊಡುವ ನಿಟ್ಟಿನಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಬಗ್ಗೆ ಖಾಸಗಿ ಮಾಧ್ಯಮಕ್ಕೆ ಮಾಹಿತಿ ನೀಡಿರುವ ತಿರ್ಕಿ, ತಾನು ವಾರದಲ್ಲಿ 2 ದಿನಗಳ ಕಾಲ ಈ ಪ್ರದೇಶಕ್ಕೆ ಭೇಟಿ ನೀಡುತ್ತೇನೆ. ಕಠಿಣ ಅರಣ್ಯ ಪ್ರದೇಶ, ಕಾಡು ಪ್ರಾಣಿಗಳ ಹಾವಳಿಯ ಆತಂಕದ ಜೊತೆಗೆ ಸುರ್ ತಲುಪಬೇಕಾಗಿದ್ದು ಒಬ್ಬಾಕೆಗೆಯೇ ದಾರಿ ನಡೆಯುವುದು ಕಷ್ಟ. ಈ ಹಿನ್ನೆಲೆಯಲ್ಲಿ ಯಾರಾದ್ದಾದರೂ ಸಹಾಯ ಪಡೆದುಕೊಂಡು ಹಳ್ಳಿಗೆ ತೆರಳಿ, ಜನರಿಗೆ ಸೇವೆ ಒದಗಿಸುತ್ತಿರುವುದಾಗಿಯೂ ಅವರು ಮಾಹಿತಿ ನೀಡಿದ್ದಾರೆ.
ಇನ್ನು ಈ ಮಹಾತಾಯಿಯ ಮಹತ್ಕಾರ್ಯದ ಬಗ್ಗೆ ಮಾತನಾಡಿರುವ ಗ್ರಾಮಸ್ಥರು, ಈ ದಾದಿ ಹಳ್ಳಿಯ ಜನರಿಗೆ ಅಗತ್ಯವಿರುವ ವಸ್ತುಗಳನ್ನು ಜನರು ಕೇಳದೆಯೇ ತಂದುಕೊಡುತ್ತಾರೆ ಎಂಬುದಾಗಿಯೂ ತಿಳಿಸಿದ್ದಾರೆ. ಅಲ್ಲದೆ ಇಡೀ ಹಳ್ಳಿಗಳಲ್ಲಿ ಯಾರೇ ಅಸೌಖ್ಯಕ್ಕೆ ಒಳಗಾದರೆ ಅವರಿಗೆ ಬೇಕಾದಂತಹ ಔಷಧಗಳನ್ನೂ ತಿರ್ಕಿ ಅವರೇ ತಂದುಕೊಡುತ್ತಾರೆ ಎಂದೂ ಮಾಹಿತಿ ನೀಡಿದ್ದಾರೆ. ಜೊತೆಗೆ ಹಳ್ಳಿಯ ಜನರಲ್ಲಿ ಯಾರಾದರೂ ಗಂಭೀರ ಸ್ವರೂಪದ ಕಾಯಿಲೆಯಿಂದ ಬಳಲುವ ಸಂದರ್ಭದಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸುವ ಕೆಲ ಮತ್ತು ಪೂರಕ ಚಿಕಿತ್ಸೆ ನೀಡುವ ನಿಟ್ಟಿನಲ್ಲಿಯೂ ತಿರ್ಕಿ ಶ್ರಮ ವಹಿಸುತ್ತಾರೆ.
ಜೊತೆಗೆ ಹಳ್ಳಿಯ ಮಹಿಳೆಯರಿಗೆ ಹೆರಿಗೆ ಮಾಡಿಸುವ ಸೂಲಗಿತ್ತಿಯ ಕೆಲಸವನ್ನೂ ತಿರ್ಕಿ ಮಾಡುತ್ತಿದ್ದಾರೆ. ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಸಹ ತಿರ್ಕಿ ಅವರು ಸುರ್ ಗೆ ಹೋಗಿ ಅಲ್ಲಿನ ಜನರಿಗೆ ಅಗತ್ಯ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿಯೂ ಕೆಲಸ ಮಾಡಿದ್ದು, ಆ ಮೂಲಕ ತಮ್ಮ ಇಳಿ ವಯಸ್ಸಿನಲ್ಲಿಯೂ ಸಮಾಜಮುಖಿ ಕಾರ್ಯಗಳ ಮೂಲಕವೇ ಜನಪ್ರಿಯರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.