ಗಿಡಗಳನ್ನು ಪ್ಲಾಸ್ಟಿಕ್ ಅಧವಾ ಪಾಲಿಥಿನ್ ಚೀಲಗಳಲ್ಲಿ ನೆಟ್ಟು ಪರಿಸರಕ್ಕೆ ಹಾನಿ ಉಂಟುಮಾಡುವ ಬದಲಾಗಿ ಪರ್ಯಾಯ ವಿಧಾನಗಳನ್ನು ಬಳಕೆ ಮಾಡಿ ಪ್ರಕೃತಿ ಸ್ನೇಹಿ ಗಿಡಗಳನ್ನು ಬೆಳೆಸುವತ್ತ ಚಿತ್ತ ನೆಟ್ಟು ಅದಕ್ಕಾಗಿ ಶ್ರಮಿಸಿದವರು ಕೇರಳದ ಮೀನಾಕ್ಷಿ ಎಂಬ ಮಹಿಳೆ. 2018ರಲ್ಲಿ ಸಿ.ಮೀನಾಕ್ಷಿ ಅವರು ಕೇರಳದ ಮಧ್ಯ ಭಾಗದಲ್ಲಿನ ಪ್ರದೇಶವೊಂದರ ಅರಣ್ಯ ಸಂರಕ್ಷಣಾಧಿಕಾರಿಯಾಗಿ ನೇಮಕಗೊಳ್ಳುತ್ತಾರೆ. ಅಂದಿನಿಂದಲೇ ತಾವು ಸಸಿಗಳನ್ನು ನೆಡಲು ಪ್ಲಾಸ್ಟಿಕ್ ಚೀಲಗಳ ಬದಲಾಗಿ ಬೇರೆ ಯಾವುದಾದರೂ ಪರ್ಯಾಯ ಕ್ರಮವನ್ನು ಅನುಸರಿಸುವ ನಿಟ್ಟಿನಲ್ಲಿ ಯೋಚಿಸುತ್ತಾರೆ. ಮೊಳಕೆಗಳನ್ನು ಬೆಳೆಸುವ ಸಂದರ್ಭದಲ್ಲಿ ಪಾಲಿಥಿನ್ ಚೀಲಗಳನ್ನು ಬಳಕೆ ಮಾಡದೇ ಇರುವುದು ಮತ್ತು ಈ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅವರು ಪ್ರಯತ್ನ ನಡೆಸಿದ್ದು, ತಮ್ಮ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.
ಪ್ರತಿ ವರ್ಷವೂ ಅರಣ್ಯ ಇಲಾಖೆಯ ವತಿಯಿಂದ 90 ಲಕ್ಷಗಳಷ್ಟು ಸಸಿಗಳನ್ನು ಶಾಲೆ, ಕಾಲೇಜುಗಳು, ಪಂಚಾಯತ್, ಕ್ಲಬ್ಗಳು ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳಿಗೆ ನೀಡುವ ಮೂಲಕ ಪರಿಸರ ದಿನವನ್ನು ಆಚರಿಸುತ್ತದೆ. ಆದರೆ ಈ ಸಂದರ್ಭದಲ್ಲಿ ಗಿಡಗಳನ್ನು ಪಾಲಿಥಿನ್ ಚೀಲಗಳನ್ನು ಬಳಸಿ ಸಸಿಗಳನ್ನು ನೀಡಲಾಗುತ್ತದೆ. ಈ ಚೀಲಗಳು ಭೂಮಿಯಲ್ಲಿ ಕೊಳೆಯದೆ ಪ್ರಕೃತಿಗೆ ಹಾನಿಯುಂಟು ಮಾಡುತ್ತದೆ. ಇಂತಹ ಚೀಲಗಳನ್ನು ವಿಲೇವಾರಿ ಮಾಡುವುದೂ ಕಷ್ಟಕರವಾದ ಕೆಲಸವಾಗಿದ್ದು, ಅದಕ್ಕಾಗಿ ಪರ್ಯಾಯವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಮೀನಾಕ್ಷಿ ಚಿಂತನೆಗಳನ್ನು ನಡೆಸುತ್ತಾರೆ. ಪಾಲಿಥಿನ್ ಬದಲಾಗಿ ಗೋಣಿ ಚೀಲಗಳು, ತೆಂಗಿನ ಚಿಪ್ಪು, ಗೆರಟೆಗಳನ್ನು ಬಳಕೆ ಮಾಡಿ ಅದರಿಂದ ಸಸಿಗಳನ್ನು ನೆಡಲು ಸಾಧ್ಯವಾಗುತ್ತದೆಯೋ ಎಂಬ ಪ್ರಯತ್ನಗಳನ್ನು ನಡೆಸುತ್ತಾರೆ. ಆದರೆ ಈ ಪ್ರಯತ್ನದಲ್ಲಿಯೂ ಅಂದುಕೊಂಡ ಮಟ್ಟಿಗೆ ಅವರಿಗೆ ಫಲಿತಾಂಶ ದೊರೆಯುವುದಿಲ್ಲ. ಬದಲಾಗಿ ಇವುಗಳ ವಿಲೇವಾರಿಯೂ ಕಷ್ಟವಾಗಿ ಬಿಡುತ್ತದೆ. ಇನ್ನು ಸಸ್ಯಗಳಿಗೆ ನೀರುಣಿಸುವುದು ಸಹ ಕಷ್ಟವಾಗುತ್ತದೆ. ಆದರೂ ಪ್ರಯತ್ನ ನಿಲ್ಲಿಸದ ಮೀನಾಕ್ಷಿ ಸೂಕ್ತ ಪರಿಹಾರಕ್ಕಾಗಿ ಮತ್ತೆ ಪರ್ಯಾಯಗಳನ್ನು ಹುಡುಕಲಾರಂಭಿಸುತ್ತಾರೆ.
ಈ ಸಂದರ್ಭದಲ್ಲಿ ಅವರು ತಮ್ಮ ಮಾಜಿ ಸಹೋದ್ಯೋಗಿ ಶೇಕ್ ಹುಸೇನ್ ಎಂಬವರ ಬಳಿ ತಮ್ಮ ಈ ಸಮಸ್ಯೆಯನ್ನು ತಿಳಿಸುತ್ತಾರೆ. ಈ ಸಂದರ್ಭದಲ್ಲಿ ಹುಸೇನ್ ಅವರು ಕಾಯಿರ್ (ತೆಂಗಿನ ನಾರಿನ ಪಾತ್ರೆಗಳು) ಬಗ್ಗೆ ಮೀನಾಕ್ಷಿ ಅವರಿಗೆ ಮಾಹಿತಿ ನೀಡುತ್ತಾರೆ. ಇವುಗಳನ್ನು ತಯಾರಿಸುವ ತಮಿಳುನಾಡಿನ ಪೊಲ್ಲಾಚಿ ಎಂಬ ಪ್ರದೇಶದಲ್ಲಿ ಇರುವ ಕಾಯಿರ್ ತಯಾರಿಸುವ ಏಜೆಂಟ್ ಅವರನ್ನೂ ಪರಿಚಯಿಸುತ್ತಾರೆ. ಅವರನ್ನು ಮೀನಾಕ್ಷಿ ಅವರು ಭೇಟಿ ಮಾಡಿ ಅವರಿಗೆ ತಮ್ಮ ಇಚ್ಛೆಯನ್ನು ತಿಳಿಸಿ, ಅದಕ್ಕನುಗುಣವಾಗಿ ಕೊಂಚ ದೊಡ್ಡ ಗಾತ್ರದ ಕಾಯಿರ್ಗಳನ್ನು ತಯಾರಿಸಿ ಕೊಡುವಂತೆ ತಿಳಿಸುತ್ತಾರೆ.
ಅವರ ಬೇಡಿಕೆಗೆ ಅನುಗುಣವಾಗಿ ತಯಾರಕರು ಅವರಿಗೆ ಕಾಯಿರ್ ಗಳನ್ನು ತಯಾರಿಸಿಕೊಡಲು ಒಪ್ಪಿಕೊಳ್ಳುತ್ತಾರೆ. ಸುಮಾರು 2.5 ಮಿಮಿ ದಪ್ಪ, 500 ಎಂಎಂ ವ್ಯಾಸ, 100 ಎಂಎಂ ಉದ್ದದ ಕಾಯಿರ್ ಗಳನ್ನು ನಿರ್ಮಿಸಿ ಕೊಡುತ್ತಾರೆ. ಈ ನಾರಿನ ಪಾತ್ರೆಯಲ್ಲಿ ಮಣ್ಣು ತುಂಬುವುದು, ಅದರಲ್ಲಿ ಬೀಜ ಬಿತ್ತುವುದು, ನೀರುಣಿಸುವುದು, ಸೇರಿದಂತೆ ನೆಡುವುದು ಕೂಡಾ ತುಂಬಾ ಸುಭವಾಗಿದ್ದು, ಇದನ್ನು ವಿಲೇವಾರಿ ಮಾಡುವ ಯಾವುದೇ ಅಗತ್ಯವೂ ಇಲ್ಲ ಎಂದು ಮೀನಾಕ್ಷಿ ಮಾಹಿತಿ ನೀಡಿದ್ದಾರೆ. ಇನ್ನು ಈ ಬೇರಿನ ಪಾತ್ರೆಗಳು ಮಣ್ಣಿನಲ್ಲಿ ಯಾವುದೇ ದುಷ್ಪರಿಣಾಮ ಬೀರದೆಯೇ ಕೊಳೆತು ಹೋಗುವುದಾಗಿಯೂ ಅವರು ತಿಳಿಸಿದ್ದಾರೆ. ಇದರಲ್ಲಿ ಸಸ್ಯ ಗಳನ್ನು ನೆಟ್ಟು ಬೆಳೆಸುವ ವಿಚಾರದಲ್ಲಿ, ಅವುಗಳ ಬಾಳಿಕೆ ವಿಚಾರದಲ್ಲಿ ಪರೀಕ್ಷೆ ಗಳನ್ನು ನಡೆಸಲು ಮುಂದಾದ ಮೀನಾಕ್ಷಿ ನೇತೃತ್ವದ ಅರಣ್ಯ ಇಲಾಖೆ ಸುಮಾರು30 ಕ್ಕೂ ಅಧಿಕ ಜಾತಿಯ ಗಿಡಗಳನ್ನು ನೆಟ್ಟು ಪರೀಕ್ಷೆ ನಡೆಸಿ ಯಶಸ್ಸು ಕಂಡುಕೊಂಡಿದ್ದಾರೆ. ಜೊತೆಗೆ ಇದರಿಂದ ಯಾವುದೇ ತ್ಯಾಜ್ಯ ಉತ್ಪತ್ತಿ ಯಾಗುವ ಸಂಭವವೂ ಇಲ್ಲ ಎಂಬುದು ಮೀನಾಕ್ಷಿ ಅವರ ಅಭಿಪ್ರಾಯ.
ಪ್ರಾಯೋಗಿಕವಾಗಿ ಇದರಲ್ಲಿ ಯಶಸ್ಸು ಕಂಡುಕೊಂಡ ಅರಣ್ಯ ಇಲಾಖೆ, 2020 ರಲ್ಲಿ ಕಾಯಿರ್ ಗಳನ್ನು ತಯಾರಿಸುವ ಜನರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ತಯಾರಿಕೆಗೂ ಒಪ್ಪಂದ ಮಾಡಿಕೊಳ್ಳುತ್ತದೆ. ಅದೇ ಪಾತ್ರೆಗಳಲ್ಲಿ ಮಣ್ಣು ತುಂಬಿ ಬೀಜ ಬಿತ್ತನೆ ಮಾಡುವ ಕಾಯಕದಲ್ಲಿಯೂ ಇಲಾಖೆ ತೊಡಗಿಕೊಳ್ಳುತ್ತದೆ. ಆ ಮೂಲಕ ಪ್ಲಾಸ್ಟಿಕ್ ಬಳಕೆಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಪೂರಕ ಪ್ರಯತ್ನ ಮಾಡಲಾರಂಭಿಸಿತು.
ಈ ಕಾರ್ಯದಲ್ಲಿ ಭಾಗಿಯಾಗಿದ್ದ ಎರ್ನಾಕುಳಂ ನ ವಿಭಾಗೀಯ ಅರಣ್ಯಾಧಿಕಾರಿ ಅನಾಜ್, ರಾಜ್ಯಾದ್ಯಂತ ಸಸಿಗಳ ವಿತರಿಸುವ ಅರಣ್ಯ ಇಲಾಖೆ ಈ ಬಾರಿ ಪ್ಲಾಸ್ಟಿಕ್ ನಿರ್ಮೂಲನೆಯ ಮಹತ್ವದ ಉದ್ದೇಶವನ್ನು ಇರಿಸಿಕೊಂಡು ಕಾಯಿರ್ ಗಳ ಮೂಲಕ ಸಸಿಗಳನ್ನು ನೆಟ್ಟು ವಿತರಣೆ ಮಾಡಿದೆ. ಈ ಕಾಯಿರ್ ಗಳು ಪರಿಸರಕ್ಕೆ ಯಾವುದೇ ಹಾನಿ ಮಾಡಿಲ್ಲ. ಜೊತೆಗೆ ಗಿಡಗಳಿಗೆ ನೀರುಣಿಸಲು, ಅವುಗಳಿಗೆ ಸ್ವತಂತ್ರವಾಗಿ ಬೇರುಗಳನ್ನು ಬೆಳೆಸುವುದಕ್ಕೂ ಕಾಯಿರ್ ಗಳು ಪೂರಕವಾಗಿ ಅವಕಾಶ ನೀಡಿವೆ ಎಂದು ತಿಳಿಸಿದ್ದಾರೆ.
ಈ ಬಾರಿ ಕೇರಳದಲ್ಲಿ 10 ಲಕ್ಷ ಗಿಡಗಳನ್ನು ವಿಶ್ವ ಪರಿಸರ ದಿನದಂದು ನೀಡುವ ಉದ್ದೇಶ ಅರಣ್ಯ ಇಲಾಖೆಗಿದ್ದರೂ, ಕೊರೋನಾ ಕಾರಣದಿಂದ ಕೇವಲ 5 ಲಕ್ಷ ಸಸಿಗಳನ್ನಷ್ಟೇ ವಿತರಣೆ ಮಾಡಲಾಗಿದೆ. 14 ಜಿಲ್ಲೆಗೆಳಿಗೆ ಸಂಬಂಧಿಸಿದಂತೆ ಸಸಿಗಳನ್ನು ವಿತರಿಸಲಾಗಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಇನ್ನು ಈ ಮೊಳಕೆಗಳನ್ನು ಕಾಯಿರ್ ಗಳಲ್ಲೇ ನೀಡಲಾಗಿದ್ದು, ಯಶಸ್ವಿಯಾಗಿ ನೆಡುವ ಕಾರ್ಯ ನಡೆದಿದೆ ಎಂದು ಮೀನಾಕ್ಷಿ ತಿಳಿಸಿದ್ದಾರೆ. ತಮ್ಮ ಈ ಕಾರ್ಯಕ್ಕೆ ಯಶಸ್ಸು ದೊರೆತಿರುವುದಾಗಿಯೂ ಮೀನಾಕ್ಷಿ ತಿಳಿಸಿದ್ದಾರೆ. ಈ ಸಸಿಗಳನ್ನು ಪಡೆದುಕೊಂಡವರು, ನೆಟ್ಟವರು ಸಹ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ ಎಂದೂ ಅವರು ಹೇಳಿದ್ದಾರೆ. ಈ ವರೆಗೆ ಸುಮಾರು 40 ಲಕ್ಷ ದ ವರೆಗೆ ಸಸಿಗಳನ್ನು ಕಾಯಿರ್ ಪಾತ್ರೆಗಳಲ್ಲೇ ನೆಡಲಾಗಿದ್ದು, ಮುಂದಿನ ದಿನಗಳಲ್ಲಿಯೂ ಇದೇ ಕ್ರಮವನ್ನು ಅನುಸರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪ್ರಕೃತಿಯನ್ನು ಕಾಪಾಡುವ ನಿಟ್ಟಿನಲ್ಲಿ ಗಿಡಗಳನ್ನು ನೆಡುವ ನಾವು ಅದನ್ನು ನೆಡುವಾಗಲೇ ಪ್ರಕೃತಿಯ ಮೇಲೆ ಹಾನಿ ಎಸಗುವ ಪ್ಲಾಸ್ಟಿಕ್ ಬಳಸುತ್ತೇವೆ. ಆ ಪ್ಲಾಸ್ಟಿಕ್ ಪರಿಸರಕ್ಕೆ ಇನ್ನಿಲ್ಲದ ಸಮಸ್ಯೆ ಸೃಷ್ಟಿಸುತ್ತದೆ. ಇಂತಹ ಸಂದರ್ಭದಲ್ಲಿ ಪರಿಸರಕ್ಕೆ ಪೂರಕ ವಾದ ಮಾರ್ಗಗಳನ್ನು ಬಳಸಿಕೊಂಡೇ ಸಸಿಗಳನ್ನು ವಿತರಿಸುವ, ನೆಡುವ ಕಾರ್ಯಕ್ಕೆ ಮುಂದಾಗಿ ಯಶಸ್ಸು ಸಾಧಿಸಿರುವ ಮೀನಾಕ್ಷಿ ಅವರ ಸಾಧನೆಗೆ ಹ್ಯಾಟ್ಸಾಪ್ ಹೇಳಲೇಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.