ನವದೆಹಲಿ: ಸುದ್ದಿ ಸಂಸ್ಥೆ ಪಿಟಿಐ ತನ್ನ ಕಛೇರಿಯ ಕಟ್ಟಡದ ಪ್ಲಾನ್ ಅನ್ನು ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಾಣ ಮಾಡಿರುವ ಆರೋಪವನ್ನು ಎದುರಿಸುತ್ತಿದೆ. ಈ ಕಾರಣಕ್ಕಾಗಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಪಿಟಿಐಗೆ ಭಾರೀ ಮೊತ್ತದ ದಂಡ ವಿಧಿಸಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುದ್ದಿ ಸಂಸ್ಥೆಗೆ 84 ಕೋಟಿ ರೂ. ದಂಡ ಪಾವತಿ ಮಾಡುವಂತೆ ನೋಟಿಸ್ ಸಹ ಜಾರಿ ಮಾಡಲಾಗಿದೆ. ಈ ಆದೇಶದಲ್ಲಿ ಕೇಂದ್ರ ಹೇಳಿರುವ ಮೊತ್ತವನ್ನು ನಿಗದಿತ ಸಮಯದಲ್ಲಿ ಪಾವತಿ ಮಾಡಲು ಸುದ್ದಿ ಸಂಸ್ಥೆ ವಿಫಲವಾದಲ್ಲಿ, ಆ ಮೊತ್ತಕ್ಕೆ ಮತ್ತೆ 10% ರಷ್ಟು ಬಡ್ಡಿಯನ್ನೂ ಪಾವತಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.
ಜೊತೆಗೆ ಸಚಿವಾಲಯದ ನೊಟೀಸ್ ಕೈ ಸೇರಿದ 30 ದಿನಗಳೊಳಗಾಗಿ ಅದರಲ್ಲಿ ಸೂಚಿಸಲಾದ ಎಲ್ಲಾ ನಿಯಮಗಳನ್ನು ಪಾಲನೆ ಮಾಡುವಲ್ಲಿ ಸಂಸ್ಥೆ ಎಡವಿದಲ್ಲಿ ಕಟ್ಟಡಕ್ಕೆ ಪ್ರವೇಶವನ್ನು ನಿರ್ಬಂಧಿಸುವ ಎಚ್ಚರಿಕೆಯನ್ನೂ ಸಚಿವಾಲಯ ನೀಡಿದೆ.
ಪಿಟಿಐ ಇತ್ತೀಚೆಗಷ್ಟೇ ಚೀನಾ ರಾಯಭಾರಿ ಸನ್ ವಿಸಾಂಗ್ ಅವರ ಸಂದರ್ಶನ ನಡೆಸಿದ ಬೆನ್ನಲ್ಲೇ ಕೇಂದ್ರ ಸಚಿವಾಲಯ ಈ ನಡೆಗೆ ಮುಂದಾಗಿದೆ. ಈ ಸಂದರ್ಶನದ ಸಂದರ್ಭದಲ್ಲಿ ಲಡಾಕ್ ನ ಗಡಿಯಲ್ಲಿ ನಡೆದ ಹಿಂಸಾತ್ಮಕ ಸಂಘರ್ಷಕ್ಕೆ ಭಾರತವೇ ಕಾರಣ ಎಂಬುದಾಗಿಯೂ ಆರೋಪಿಸಿದ್ದರು. ಈ ಘಟನೆಯ ಬೆನ್ನಲ್ಲೇ ಸರ್ಕಾರ ಪಿಟಿಐ ಸುದ್ದಿ ಸಂಸ್ಥೆಗೆ ಬಿಸಿ ಮುಟ್ಟಿಸುವ ಕೆಲಸ ಮಾಡಿದೆ.
ಅಲ್ಲದೆ ಚೀನಾ ರಾಯಭಾರಿ ಸಂದರ್ಶನದ ಬಳಿಕ ಸರ್ಕಾರಿ ಸ್ವಾಮ್ಯದ ಪ್ರಸಾರ ಭಾರತಿಯೂ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಜೊತೆಗಿನ ಸಂಬಂಧವನ್ನು ಕಳೆದುಕೊಳ್ಳುವ ಎಚ್ಚರಿಕೆಯನ್ನೂ ನೀಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.