ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ 1993 ರ ಮುಂಬಯಿ ಸರಣಿ ಬಾಂಬ್ ಸ್ಫೋಟದ ಪ್ರಮುಖ ಅಪರಾಧಿ, ಉಗ್ರ ಯಾಕುಬ್ ಮೆಮನ್ ಗಲ್ಲು ಶಿಕ್ಷೆಯ ಬಗ್ಗೆಯೇ ಈಗ ನಾನಾ ಬಗೆಯ ಚರ್ಚೆ. ಆತನಿಗೆ ಗಲ್ಲು ಶಿಕ್ಷೆ ವಿಧಿಸಬಾರದೆಂದೂ ಜೀವಾವಧಿ ಶಿಕ್ಷೆಗೆ ಗುರಿಪಡಿಸಿದರೆ ಸಾಕೆಂದೂ ಕೆಲವು ಯಾಕುಬ್ ಅಭಿಮಾನಿಗಳ ಅಳಲು. ಮಜ್ಲಿಸ್ ಎ ಇತೆಹಾದುಲ್ ಮುಸ್ಲಿಮೀನ್ (ಎಂಐಎಂ)ನ ಸಂಸದ ಅಸಾದುದ್ದೀನ್ ಒವೈಸಿಯಂತೂ ಯಾಕುಬ್ ಮೆಮನ್ ಮುಸ್ಲಿಂ ಆಗಿರುವುದರಿಂದಲೇ ಆತನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ ಎಂದು ವಿವಾದಿತ ಹೇಳಿಕೆ ನೀಡಿ ಇನ್ನಷ್ಟು ಗೊಂದಲ ಎಬ್ಬಿಸಿದ್ದಾರೆ. ಕೆಲವು ಮಾಧ್ಯಮಮಿತ್ರರಂತೂ ಸುಪ್ರೀಂಕೋರ್ಟ್ ಯಾಕುಬ್ನನ್ನು ಗಲ್ಲಿಗೇರಿಸಲು ನಿಗಧಿಪಡಿಸಿದ ಜು. 30 ರಂದೇ ಆತನ ಹುಟ್ಟಿದ ಹಬ್ಬವೆಂದು ಇನ್ನೊಂದು ‘ಕರುಣಾಪೂರ್ಣ’ ಗುಲ್ಲೆಬ್ಬಿಸಿದ್ದಾರೆ. ಹೀಗೆ ಯಾಕುಬ್ ಮೆಮನ್ ಗಲ್ಲು ಶಿಕ್ಷೆಯ ಬಗ್ಗೆ ಅತಿರಂಜಿತ ಚರ್ಚೆಗಳು ದಿಕ್ಕೆಟ್ಟು ಸಾಗಿವೆ.
1993 ರ ಮಾರ್ಚ್ 12 ರಂದು ನಡೆದ ಮುಂಬಯಿ ಸರಣಿ ಸ್ಫೋಟದಲ್ಲಿ ಉಗ್ರರ 13 ಬಾಂಬುಗಳು 257 ಅಮಾಯಕರನ್ನು ಬಲಿ ತೆಗೆದುಕೊಂಡಿತ್ತು. 700 ಮಂದಿ ನಾಗರಿಕರು ಗಾಯಗೊಂಡಿದ್ದರು. 27 ಕೋಟಿ ಮೊತ್ತದ ಆಸ್ತಿಪಾಸ್ತಿ ಹಾನಿಗೊಳಗಾಗಿತ್ತು. ಎರಡನೇ ವಿಶ್ವ ಯುದ್ಧದ ಬಳಿಕ ಅತೀ ಹೆಚ್ಚು ಆರ್ಡಿಎಕ್ಸ್ ಬಳಸಿ ನಡೆಸಿದ ಸ್ಫೋಟ ಅದಾಗಿತ್ತು. ಆ ದಿನ ಮುಂಬಯಿ ನಗರದಲ್ಲಿ ಅಕ್ಷರಶಃ ರಕ್ತದ ಕೋಡಿ ಹರಿದಿತ್ತು. ಎಲ್ಲೆಡೆ ಹಾಹಾಕಾರ, ಆಕ್ರಂದನ, ಚೀತ್ಕಾರ ಮುಗಿಲುಮುಟ್ಟಿತ್ತು. ಇಡೀ ಜನಜೀವನ ಸ್ತಬ್ಧಗೊಂಡು ಬೆಚ್ಚಿಬಿದ್ದಿತ್ತು. ಅದಾಗಿ 15 ದಿನಗಳ ಬಳಿಕವೂ ಮುಂಬಯಿ ಚೇತರಿಸಿಕೊಂಡಿರಲಿಲ್ಲ. 1992 ರಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸಗೊಂಡಿದ್ದಕ್ಕೆ ಪ್ರತೀಕಾರವಾಗಿ ಈ ಕೃತ್ಯ ನಡೆಸಿದ್ದೆಂದು ಉಗ್ರರು ಆಗ ಹೇಳಿಕೆ ನೀಡಿದ್ದರು.
ಈಗ ಗಲ್ಲು ಶಿಕ್ಷೆಗೆ ಒಳಗಾಗಿರುವ ಯಾಕುಬ್ ಮೆಮನ್ ಮುಂಬಯಿ ಸರಣಿಸ್ಫೋಟಕ್ಕೆ ನೇರ ಹೊಣೆಗಾರನಲ್ಲವೆಂಬುದು ಇನ್ನೊಂದು ವಿತಂಡವಾದ. ಸ್ಫೋಟಕ್ಕೆ ನೇರ ಹೊಣೆ ಏನಿದ್ದರೂ ದಾವೂದ್ಇಬ್ರಾಹಿಂ ಮತ್ತು ಟೈಗರ್ ಮೆಮನ್ ಎಂಬ ವಾದ ಕೇಳಿಬರುತ್ತಿದೆ. ಬೇಕಿದ್ದರೆ ಅವರನ್ನು ಬಂಧಿಸಿ ಶಿಕ್ಷೆಗೊಳಪಡಿಸಿ. ಆದರೆ ಅಮಾಯಕನಾದ ಯಾಕುಬ್ನನ್ನು ಏಕೆ ಗಲ್ಲಿಗೆ ಹಾಕುತ್ತೀರಿ ಎಂದೂ ಕೆಲವರು ಕೇಳುತ್ತಿದ್ದಾರೆ.
ಮುಂಬಯಿ ಸರಣಿಸ್ಫೋಟಕ್ಕೆ ಸಂಬಂಧಿಸಿದಂತೆ ಯಾಕುಬ್ಮೆಮನ್ ಸ್ವತಃ ಪೊಲೀಸರಿಗೆ ಶರಣಾಗತನಾಗಿ ಬಂಧನಕ್ಕೀಡಾಗಿರುವಾಗ ಆತನಿಗೆ ಗಲ್ಲು ಶಿಕ್ಷೆ ವಿಧಿಸುವುದು ಎಷ್ಟರಮಟ್ಟಿಗೆ ಸಮಂಜಸ? ತಾನಾಗಿ ಶರಣಾಗತನಾದವನಿಗೆ ಕ್ಷಮಾದಾನ ನೀಡಬೇಕಾದುದು ಉಚಿತವಲ್ಲವೆ? ಎಂಬುದು ಇನ್ನೊಂದು ವಿತಂಡ ಪ್ರಶ್ನೆ. ಯಾಕುಬ್ ಮೆಮನ್ ಒಬ್ಬ ಅಮಾಯಕ, ನಿರಪರಾಧಿ. ಆತನನ್ನು ಮುಂಬಯಿ ಸರಣಿಸ್ಫೋಟದ ರುವಾರಿಯೆಂದು ಬಿಂಬಿಸಿ ಗಲ್ಲಿಗೇರಿಸುವುದು ತಪ್ಪು ಎಂಬುದು ಆತನ ಪರವಾಗಿ ಹೀಗೆ ವಾದಿಸುವವರ ಒಟ್ಟಾರೆ ಅಭಿಪ್ರಾಯ.
ಮುಂಬಯಿ ಸರಣಿಸ್ಫೋಟದ ಆದಿ – ಅಂತ್ಯ ಗೊತ್ತಿಲ್ಲದ ಮುಗ್ಧರಿಗೆ ಈ ಎಲ್ಲ ವಾದಗಳು ಅದೆಷ್ಟು ಸಮರ್ಥನೀಯ, ಸಮಂಜಸ ಎನಿಸಿದ್ದರೆ ಆಶ್ಚರ್ಯವಿಲ್ಲ. ಆದರೆ ಯಾಕುಬ್ನ ಜನ್ಮ ಜಾಲಾಡಿದಾಗ ಆತನಿಗೆ ಗಲ್ಲು ಶಿಕ್ಷೆ ವಿಧಿಸಿದ್ದು ಅತ್ಯಂತ ಸಮಂಜಸವೆಂದೇ ಹೇಳಬೇಕಾಗುತ್ತದೆ.
ಯಾಕುಬ್ಮೆಮನ್ನ ಪೂರ್ಣ ಹೆಸರು ಯಾಕುಬ್ ಅಬ್ದುಲ್ ರಜಾಕ್ ಮೆಮನ್. ಈತ ಮೆಮನ್ ಕುಟುಂಬದಲ್ಲೇ ಎಲ್ಲರಿಗಿಂತಲೂ ಹೆಚ್ಚು ವಿದ್ಯಾವಂತ. ಚಾರ್ಟರ್ಡ್ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಈತನ ಸಹೋದರನೇ ಮುಂಬಯಿ ಸರಣಿಸ್ಫೋಟದ ಹಿಂದಿದ್ದ ಟೈಗರ್ ಮೆಮನ್. ಟೈಗರ್ನ ಬೆಳ್ಳಿ ಕಳ್ಳಸಾಗಣೆ ಸೇರಿದಂತೆ ಆತನ ಎಲ್ಲ ಅಕ್ರಮ ಚಟುವಟಿಕೆಗಳ ಹಣಕಾಸಿನ ವ್ಯವಹಾರ ನಡೆಯುತ್ತಿದ್ದುದು ಯಾಕುಬ್ನ ಅಕೌಂಟಿಂಗ್ ಸಂಸ್ಥೆಯಲ್ಲಿ . ತನ್ನ ಸಹೋದರನ ಎಲ್ಲ ಅಕ್ರಮ ಚಟುವಟಿಕೆಗಳ ಬಗ್ಗೆ ಸಮಗ್ರ ಮಾಹಿತಿ ಗೊತ್ತಿದ್ದುದು ಯಾಕುಬ್ನಿಗೆ ಮಾತ್ರ. ಮುಂಬಯಿ ಸ್ಫೋಟ ಪ್ರಕರಣದ ಬಳಿಕ ಯಾಕುಬ್ನ ತಂದೆ, ಮೂವರು ಸಹೋದರರು ಮತ್ತು ನಾದಿನಿಯನ್ನು ಕೂಡ ವಿಚಾರಣೆಗೆ ಒಳಪಡಿಸಲಾಗಿತ್ತು. ಪತ್ನಿ, ತಾಯಿ ಮತ್ತು ಸಹೋದರ ಸುಲೈಮಾನ್ ನಿರ್ದೋಷಿ ಎಂದು ತೀರ್ಪು ನೀಡಿದ್ದ ಕೋರ್ಟ್, ಮತ್ತಿಬ್ಬರು ಸಹೋದರರು ಮತ್ತು ನಾದಿನಿಯನ್ನು ದೋಷಿಗಳೆಂದು ಘೋಷಿಸಿತ್ತು.
ಯಾಕುಬ್ನ ಸಹೋದರ ಟೈಗರ್ ಮೆಮನ್ ಮತ್ತು ಸ್ಫೋಟದ ಮಾಸ್ಟರ್ಮೈಂಡ್ ದಾವೂದ್ ಇಬ್ರಾಹಿಂ 1993 ರಿಂದಲೇ ತಲೆಮರೆಸಿಕೊಂಡಿದ್ದಾರೆ. `ನಾನು ತಪ್ಪು ಮಾಡಿಲ್ಲ’ ಎಂದು ಹೇಳಿಕೊಂಡಿದ್ದ ಯಾಕುಬ್, 1994 ರಲ್ಲಿ ಪಾಕಿಸ್ಥಾನದಿಂದ ಭಾರತಕ್ಕೆ ವಾಪಸ್ ಆಗಿದ್ದ. ಇದಾದ ಕೆಲವೇ ದಿನಗಳಲ್ಲಿ ಆತನನ್ನು ಬಂಧಿಸಲಾಗಿತ್ತು. ಆದರೆ ಆತ ಮಾತ್ರ `ನಾನೇ ಪೊಲೀಸರಿಗೆ ಶರಣಾದೆನಾದರೂ ಅವರು ಬಂಧಿಸಿದ್ದಾಗಿ ಹೇಳಿಕೊಂಡಿದ್ದಾರೆ’ ಎಂದು ಹೇಳಿ ಸುದ್ದಿ ಮಾಡಿದ್ದ.
ಯಾಕುಬ್ ವಿದ್ಯಾವಂತ, ಜೊತೆಗೆ ಕ್ರಿಮಿನಲ್ ಕೂಡ. ಏಕೆಂದರೆ ಮುಂಬಯಿ ಸ್ಫೋಟದ ಹಿಂದಿದ್ದ ತನ್ನ ಸಹೋದರ ಟೈಗರ್ ಮೆಮನ್ ಮತ್ತಿತರ ಉಗ್ರರಿಗೆ ಹಣಕಾಸು, ಬಾಂಬ್ ಇತ್ಯಾದಿ ಪೂರೈಸಿದ್ದು ಆತನೇ ಎಂಬುದು ತನಿಖೆಯಿಂದ ಸ್ಪಷ್ಟವಾಗಿದೆ. ನ್ಯಾಯಾಲಯದಲ್ಲಿ ಸಾಕ್ಷ್ಯಾಧಾರಗಳ ಮೇಲೆಯೇ ವಿಚಾರಣೆ ನಡೆಯುತ್ತದೆ. ನ್ಯಾಯಾಧೀಶರಿಗೆ ಮುಂಬಯಿ ಸ್ಫೋಟದಲ್ಲಿ ಆತನ ಕೃತ್ಯ ಸಾಬೀತಾಗಿದೆ ಎಂದು ಅನಿಸಿದ್ದರಿಂದಲೇ ಆತನಿಗೆ ಗಲ್ಲು ಶಿಕ್ಷೆ ವಿಧಿಸಿದ್ದು; ಆ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಲು ರಾಷ್ಟ್ರಪತಿ ಕೂಡ ನಿರಾಕರಿಸಿದ್ದು . ಮುಂಬಯಿ ಸ್ಫೋಟ ಪ್ರಕರಣದ ಕುರಿತು ನ್ಯಾಯಾಲಯದಲ್ಲಿ ವಾದಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ನಿಕಂ ಅವರು ಯಾಕುಬ್ ಬಗ್ಗೆ ಹೇಳುವುದೇ ಬೇರೆ! ಯಾಕುಬ್ ನಿಜವಾಗಿ ಮುಂಬಯಿ ಸ್ಫೋಟವೆಂಬ ಸಿನಿಮಾದ ನಿರ್ದೇಶಕನಿದ್ದಂತೆ. ಆತನ ಸೂಚನೆಗೆ ಅನುಗುಣವಾಗಿ ಉಳಿದ ಪಾತ್ರಗಳು ನಟಿಸಿದವು ಎನ್ನುತ್ತಾರೆ ಅವರು. ನ್ಯಾಯಾಲಯದಲ್ಲಿ ಯಾಕುಬ್ನ ಮಾನಸಿಕತೆಯನ್ನು ಅರಿಯಲು ಉಜ್ವಲ್ನಿಕಂ ಸಾಕಷ್ಟು ಪ್ರಯತ್ನಿಸಿದ್ದರು. ಒಬ್ಬ ಚಾರ್ಟರ್ಡ್ ಅಕೌಂಟೆಂಟ್ ಯಾಕೆ ಭಯೋತ್ಪಾದನೆ ಕೃತ್ಯದಲ್ಲಿ ತನ್ನನ್ನು ತೊಡಗಿಸಿಕೊಂಡ ಎಂಬ ಪ್ರಶ್ನೆಗೆ ನಿಕಂ ಉತ್ತರ ಹುಡುಕುತ್ತಲೇ ಇದ್ದರು. ಯಾಕುಬ್ನ ಭೇಟಿಯಾದಾಗಲೆಲ್ಲ ಆತನ ಮನಃಸ್ಥಿತಿ ಸ್ಥಿರವಾಗಿರುತ್ತಿತ್ತು. ಈ ಕಾನೂನುಗಳು ತನ್ನನ್ನು ಏನೂ ಮಾಡಲಾರವು ಎಂಬ ಅಹಂಭಾವ ಆತನ ಮುಖದ ಮೇಲಿರುತ್ತಿತ್ತು. ಹಾಗಾಗಿಯೇ ಆತ ಕೋರ್ಟಿಗೆ ಬಂದಾಗಲೆಲ್ಲ ಅತೀವಿಶ್ವಾಸದ ವರ್ತನೆ ತೋರುತ್ತಿದ್ದ ಎನ್ನುತ್ತಾರೆ ನಿಕಂ. `ಇದು ಸುಪ್ರೀಂಕೋರ್ಟ್ನ ಐತಿಹಾಸಿಕ ನಿರ್ಧಾರ. ದೇಶದೊಳಗಿನ ಹಾಗೂ ಹೊರಗಿನ ತಪ್ಪಿತಸ್ಥರಿಗೆ ಶಿಕ್ಷೆ ಆಗಿಯೇ ಆಗುತ್ತದೆ ಎಂಬ ಕಠಿಣ ಸಂದೇಶವನ್ನು ಈ ತೀರ್ಪು ರವಾನಿಸಿದೆ’ ಎಂದೂ ನಿಕಂ ಹೇಳಿದ್ದಾರೆ.
ಅಸಾದುದ್ದೀನ್ ಒವೈಸಿ ಹೇಳಿಕೆಗೆ ಯಾರೂ ಅಷ್ಟೊಂದು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಏಕೆಂದರೆ ಆ ಅವಿವೇಕಿ ಮಾತನಾಡುವುದೇ ಹಾಗೆ. ಯಾಕುಬ್ನ ಜಾಗದಲ್ಲಿ ಆರೋಪಿಯಾಗಿ ಒಬ್ಬ ಹಿಂದು ಇದ್ದರೂ ಆತನಿಗೆ ಕೋರ್ಟ್ ಶಿಕ್ಷೆ ವಿಧಿಸುತ್ತಿತ್ತು. ರಾಜೀವ್ ಹಂತಕರನ್ನು ಗಲ್ಲಿಗೇರಿಸಿಲ್ಲ. ಅದೇ ರೀತಿ ಯಾಕುಬ್ನನ್ನು ಗಲ್ಲಿಗೇರಿಸುವ ಅಗತ್ಯವಿಲ್ಲ ಎಂದು ವಾದಿಸುವುದಕ್ಕೆ ಒವೈಸಿಗೆ ಇರುವ ಅಧಿಕಾರವಾದರೂ ಏನು? ಅಷ್ಟಕ್ಕೂ ರಾಜೀವ್ಗಾಂಧಿ ಹಂತಕರಿಗೆ ನ್ಯಾಯಾಲಯ ಅಥವಾ ಸರ್ಕಾರ ಕ್ಷಮಾದಾನ ನೀಡಿಲ್ಲ. `ಇದೊಂದು ಭೀಕರ ಘಟನೆಯಾಗಿದ್ದು, 18 ಮಂದಿ ಮೃತಪಟ್ಟು 200 ಮಂದಿ ಗಾಯಗೊಂಡಿದ್ದಾರೆ. ಹೀಗಾಗಿ ಹಂತಕರು ಯಾವುದೇ ರೀತಿಯ ಕರುಣೆ ಅಥವಾ ದಯೆಗೆ ಅರ್ಹರಲ್ಲ’ ಎಂದು ಕೇಂದ್ರ ಸರ್ಕಾರವೇ ಸುಪ್ರೀಂಕೋರ್ಟ್ಗೆ ತಿಳಿಸಿದೆ. ರಾಜೀವ್ ಹಂತಕರಿಗೆ ಕ್ಷಮೆ ಬೇಡ ಎಂಬ ದಿಟ್ಟ ನಿಲುವನ್ನು ಕೇಂದ್ರ ಸರ್ಕಾರವೇ ತಳೆದಿದೆ. ಹೀಗಿರುವಾಗ ಯಾಕುಬ್ನನ್ನು ಗಲ್ಲಿಗೇರಿಸಬಾರದು ಎಂದರೆ ಏನರ್ಥ?
ಅದ್ಯಾವ ಮಾಧ್ಯಮ ಮಿತ್ರರು ಯಾಕುಬ್ನ ಜನ್ಮದಿನ ಜು. 30 ರಂದೇ ಎಂದು ಪತ್ತೆ ಮಾಡಿದರೋ ಗೊತ್ತಿಲ್ಲ. ಅದೇ ದಿನ ಅವನನ್ನು ಗಲ್ಲಿಗೇರಿಸುವುದು ಯಾವ ನ್ಯಾಯ ಎಂಬುದು ಈ ಮಾಧ್ಯಮ ಮಿತ್ರರ `ಕಾಳಜಿ’ ಇರಬಹುದು! ಆದರೆ ಮುಂಬಯಿ ಸ್ಫೋಟದಲ್ಲಿ ಮೃತರಾದ 257 ಮಂದಿ ಅಮಾಯಕರ ಜನ್ಮದಿನದ ಬಗ್ಗೆ ಯಾವನಾದರೂ ಪತ್ರಕರ್ತ ತಲೆಕೆಡಿಸಿಕೊಂಡಿದ್ದಾನೆಯೇ? ಜನ್ಮದಿನದಂದೇ ಈ ಪೈಕಿ ಅದೆಷ್ಟು ಮಂದಿ ಮೃತರಾದರು ಎಂದು ಯಾಕೆ ಪತ್ತೆ ಮಾಡಲಿಲ್ಲ? ಅದೆಷ್ಟು ಮಂದಿ ತಮ್ಮ ತಂದೆ ತಾಯಿಗಳನ್ನು ಕಳೆದುಕೊಂಡು ತಬ್ಬಲಿಯಾಗಿದ್ದಾರೆ, ಈಗಲೂ ಅವರ ಬದುಕು ಅದೆಷ್ಟು ಅಸಹನೀಯವಾಗಿದೆ ಎಂದು ಈ ಪತ್ರಕರ್ತರು ಯೋಚಿಸಿದ್ದಾರಾ? ಮುಂಬಯಿ ಸ್ಫೋಟ ಪ್ರಕರಣದಲ್ಲಿ ಆರೋಪಕ್ಕೆ ಗುರಿಯಾಗಿ 6 ವರ್ಷ ಜೈಲು ಶಿಕ್ಷೆಗೊಳಗಾದ ನಟ ಸಂಜಯ್ದತ್ ಬಗ್ಗೆಯೂ ಇಂತಹದೇ ಕಕ್ಕುಲತೆ ಹರಿದಿತ್ತು. ಆತ ಜೈಲಿಗೆ ಹೋದರೆ ಹಿಂದಿ ಚಿತ್ರರಂಗಕ್ಕೆ ನೂರಾರು ಕೋಟಿ ರೂ. ನಷ್ಟವಾಗುತ್ತದೆಂದು ನಿರ್ಮಾಪಕರು, ನಿರ್ದೇಶಕರು ಆಗ ಬೊಬ್ಬೆ ಹೊಡೆದಿದ್ದರು. ಆದರೆ ಉಗ್ರರ ಶಸ್ತ್ರಾಸ್ತ್ರಗಳಿಗೆ ತನ್ನ ಮನೆಯಲ್ಲೇ ಆಶ್ರಯ ನೀಡಿದ ಸಂಜಯ್ದತ್ನ ಘನಗಂಭೀರ ಅಪರಾಧದ ಬಗ್ಗೆ ಯಾವೊಬ್ಬನೂ ತುಟಿ ಎರಡು ಮಾಡಲಿಲ್ಲ. ಅಂತಹ ಜನರೇ ಈಗ ಯಾಕುಬ್ ಬಗ್ಗೆಯೂ ಕಣ್ಣೀರು ಹರಿಸಿದ್ದಾರೆ!
ಯಾಕುಬ್ಗೆ ಜು. 30 ರಂದು ಗಲ್ಲು ಶಿಕ್ಷೆ ಆಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಎಂದಾದರೊಂದು ದಿನ ಆತ ನೇಣಿಗೇರಲೇ ಬೇಕು. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಯಾಕುಬ್ ಗಲ್ಲಿಗೇರಿದರೆ ಮುಂಬಯಿ ಸ್ಫೋಟದ ಇತರ ಮಾಸ್ಟರ್ ಮೈಂಡ್ಗಳಿಗೂ ಕಠಿಣ ಸಂದೇಶ ರವಾನೆಯಾಗುವುದು ಖಂಡಿತ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.