ಬೆಂಗಳೂರು: ಕೊರೋನಾ ನಡುವೆಯೇ ಬಾಕಿ ಉಳಿದಿದ್ದ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ಮತ್ತು ಎಸೆಸೆಲ್ಸಿ ಪರೀಕ್ಷೆಗಳನ್ನು ರಾಜ್ಯ ಸರ್ಕಾರ ಪೂರಕ ನಿಯಂತ್ರಣ ಕ್ರಮಗಳ ಜೊತೆಗೆ ಯಶಸ್ವಿಯಾಗಿ ಮುಗಿಸಿದೆ. ಸದ್ಯ ಸ್ನಾತಕೋತ್ತರ ಪದವಿ, ಡಿಪ್ಲೊಮಾ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪರೀಕ್ಷಾ ದಿನಾಂಕವನ್ನು ಘೋಷಣೆ ಮಾಡಿದೆ.
ಈ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ಅವರು, ರಾಜ್ಯದಲ್ಲಿ ಅಂತಿಮ ವರ್ಷದಲ್ಲಿ ಅಧ್ಯಯನ ನಡೆಸುತ್ತಿರುವ ಪದವಿ, ಇಂಜಿನಿಯರಿಂಗ್ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆಗಳನ್ನು ನಡೆಸುವುದಾಗಿ ತಿಳಿಸಿದ್ದಾರೆ. ಮುಂದಿನ ಸೆಪ್ಟೆಂಬರ್ ತಿಂಗಳಿನಲ್ಲಿ ಪರೀಕ್ಷೆ ನಡೆಸಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ ಉಳಿದ ತರಗತಿಗಳಲ್ಲಿ ಅಧ್ಯಯನ ನಡೆಸುತ್ತಿರುವವರಿಗೆ ಪರೀಕ್ಷೆಗಳನ್ನು ಈ ಬಾರಿ ನಡೆಸಲಾಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಬ್ಯಾಕ್ ಲಾಗ್ ಪರೀಕ್ಷೆಗೂ ಅವಕಾಶವನ್ನು ಸರ್ಕಾರ ಒದಗಿಸಲಿರುವುದಾಗಿಯೂ ಅವರು ಮಾಹಿತಿ ನೀಡಿದ್ದಾರೆ.
ಈ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಈ ಬಾರಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಪರೀಕ್ಷೆಗೆ ಅವಕಾಶ ನೀಡಲಾಗುತ್ತದೆ. ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತು ಪಡಿಸಿದಂತೆ ಕೊರೋನಾ ಸೋಂಕಿನ ಕಾರಣದಿಂದ ಉಳಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುವುದಿಲ್ಲ. ಆ ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನದ ಅಂಕಗಳು ಮತ್ತು ವಿದ್ಯಾಭ್ಯಾಸದಲ್ಲಿ ಅವರ ಹಿಂದಿನ ಫಲಿತಾಂಶಗಳನ್ನು ಗಣನೆಗೆ ತೆಗೆದುಕೊಂಡು ಮುಂದಿನ ವರ್ಷದ ಅಧ್ಯಯನಕ್ಕೆ ಅವರಿಗೆ ಅವಕಾಶ ನೀಡಲಾಗುವುದು ಎಂದೂ ಉಪಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ.
ಜೊತೆಗೆ ಸಿಇಟಿ ಪರೀಕ್ಷೆಗಳ ಕುರಿತಾಗಿಯೂ ಮಾಹಿತಿ ನೀಡಿರುವ ಡಿಸಿಎಂ, ಇದೇ ತಿಂಗಳ 30 ಮತ್ತು31 ರಂದು ಸಿಇಟಿ ಪರೀಕ್ಷೆಗಳನ್ನು ನಡೆಸಲು ಸರ್ಕಾರ ತೀರ್ಮಾನಿಸಿದೆ. ಪಿಜಿ ಸಿಇಟಿ ಆಗಸ್ಟ್ 8 ಮತ್ತು 9 ರಂದು ನಡೆಯಲಿದೆ. ಡಿಪ್ಲೊಮಾ ಸಿಇಟಿ ಪರೀಕ್ಷೆ ಆಗಸ್ಟ್ 9 ರಂದು ನಡೆಯಲಿದೆ. ಸಿಇಟಿ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಲು ಸರ್ಕಾರ ಸಹಾಯವಾಣಿ ಯನ್ನು ತೆರೆದಿದ್ದು, ವಿದ್ಯಾರ್ಥಿಗಳು ಕರೆ ಮಾಡಿ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳುವಂತೆಯೂ ಅಶ್ವಥ್ ನಾರಾಯಣ್ ಅವರು ಮನವಿ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.