ಕರಾವಳಿಯ ಬಿಲ್ಲವ ಸಮಾಜದ ಹಿರಿಯ ರಾಜಕಾರಣಿ ಮತ್ತು ಪ್ರಥಮ ಸಚಿವರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಮತ್ತು ಕಟಪಾಡಿ ವಿಶ್ವನಾಥ ಕ್ಷೇತ್ರದ ನವೀಕರಣ ಕಾರ್ಯದಲ್ಲಿ ಮುಂಚೂಣಿಯ ಪಾತ್ರ ವಹಿಸಿದ್ದ ವಸಂತ ವಿ. ಸಾಲ್ಯಾನ್ ಅವರ ನಿಧನಕ್ಕೆ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಗೌರವಾಧ್ಯಕ್ಷ / ವಿಶ್ವನಾಥ ಕ್ಷೇತ್ರದ ಕ್ಷೇತ್ರಾಡಳಿತ ಮಂಡಳಿಯ ಗೌರವಾಧ್ಯಕ್ಷ ಜಯ ಸಿ. ಸುವರ್ಣ, ಬಿಲ್ಲವರ ಅಸೋಸಿಯೇಶನ್ನ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ನಟ ಮತ್ತು ನಿರ್ದೇಶಕ ರಾಜಶೇಖರ್ ಕೋಟ್ಯಾನ್, ದುಬಾೖ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ ಬೆಳಪು, ಬಹ್ರೈನ್ ಬಿಲ್ಲವರ ಸಂಘದ ಅಧ್ಯಕ್ಷ ರಾಜ್ಕುಮಾರ್, ಕಟಪಾಡಿ ವಿಶ್ವನಾಥ ಕ್ಷೇತ್ರದ ಮುಂಬಯಿ ಕಮಿಟಿ ಅಧ್ಯಕ್ಷ ದಾಮೋದರ್ ಕುಂದರ್ ಮೊದಲಾದವರು ಸಂತಾಪ ಸೂಚಿಸಿದ್ದಾರೆ.ಹೃದಯಾಘಾತದಿಂದ ನಿಧನಹೊಂದಿದ ಕರ್ನಾಟಕ ಸರಕಾರದ ಮಾಜಿ ಸಚಿವ, ಕಾಪು ಕ್ಷೇತ್ರದ ಮಾಜಿ ಶಾಸಕ, ಹಿರಿಯ ರಾಜಕೀಯ ಮುತ್ಸದ್ದಿ ವಸಂತ ವಿ. ಸಾಲ್ಯಾನ್ ಅವರಿಗೆ ಸಕಲ ಸರಕಾರಿ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಿ, ಕಟಪಾಡಿ ಫಾರೆಸ್ಟ್ ಗೇಟ್ ಬಳಿಯ ಅವರ ನಿವಾಸದ ವಠಾರದಲ್ಲಿ ರವಿವಾರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಸಾಲ್ಯಾನ್ ಅವರ ಪಾರ್ಥಿವ ಶರೀರವನ್ನು ಮಣಿಪಾಲ ಶವಾಗಾರದಿಂದ ನೇರವಾಗಿ ಕಾಪುವಿಗೆ ತಂದು ಕಾಪುವಿನಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಅಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ರಾಜಕೀಯ ನಾಯಕರು, ಜನಪ್ರತಿನಿಧಿಗಳು, ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಮುಖಂಡರು ಮತ್ತು ಕಾಪುವಿನ ಜನತೆ ಅಂತಿಮ ನಮನ ಸಲ್ಲಿಸಿದರು. ಉಡುಪಿ ತಹಶೀಲ್ದಾರ್ ಗುರುಪ್ರಸಾದ್ ಸರಕಾರದ ಪರವಾಗಿ ಗೌರವ ನಮನ ಸಲ್ಲಿಸಿದರು.
ಸರಕಾರಿ ಗೌರವ ಸಲ್ಲಿಕೆ
ಬಳಿಕ ಕಟಪಾಡಿ ಫಾರೆಸ್ಟ್ ಗೇಟ್ನಲ್ಲಿರುವ ಸ್ವಗೃಹಕ್ಕೆ ಪಾರ್ಥಿವ ಶರೀರವನ್ನು ತಂದು, ಹಿಂದೂ ಧರ್ಮದ ಪ್ರಕಾರ ವಿವಿಧ ಧಾರ್ಮಿಕ ವಿಧಾನಗಳನ್ನು ನೆರವೇರಿಸಲಾಯಿತು. ಬಳಿಕ ಅಡಿಷನಲ್ ಎಸ್ಪಿ ಡಾ| ಸಂತೋಷ್ ಕುಮಾರ್ ಮಾರ್ಗದರ್ಶನದಲ್ಲಿ ಉಡುಪಿ ಸಶಸ್ತ್ರ ಮೀಸಲು ಪಡೆಯ ಅಧಿಕಾರಿ ಉಮೇಶ್ ನೇತೃತ್ವದಲ್ಲಿ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಕುಶಾಲ ತೋಪು ಹಾರಿಸಿ ಸರಕಾರಿ ಗೌರವ ವಂದನೆ ಸಲ್ಲಿಸಿಲಾಯಿತು. ಕಾರ್ಕಳ ಡಿವೈಎಸ್ಪಿ ವಿನಯ ನಾಯಕ್, ಕಾಪು ಸಿಐ ಸುನೀಲ್ ನಾಯಕ್, ಕಾಪು ಎಸ್ಸೆ ಜಗದೀಶ್ ರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.
ಅಳಿಯಂದಿರಿಂದ ಚಿತೆಗೆ ಬೆಂಕಿ:ವಸಂತ ಸಾಲ್ಯಾನ್ ಅವರ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಸಹಸ್ರಾರು ಮಂದಿ ವಸಂತ ಸಾಲ್ಯಾನ್ ಅವರ ಪಾರ್ಥಿವ ಶರೀರವನ್ನು ವೀಕ್ಷಿಸಿ ಕಂಬನಿ ಮಿಡಿದರು. ವಿವಿಧ ವಿಧಿಗಳನ್ನು ಪೂರೈಸಿ ಭಜನಾ ಕಾರ್ಯಕ್ರಮದ ಮೂಲಕ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಳಿಯಂದಿರಾದ ಗಂಗಾಧರ ಸುವರ್ಣ ಮತ್ತು ಕಮಲಾಕ್ಷ ಸುವರ್ಣ ಅವರು ವಸಂತ ಸಾಲ್ಯಾನ್ ಚಿತೆಗೆ ಅಗ್ನಿಸ್ಪರ್ಷ ಮಾಡಿದರು.
ಸಚಿವ ಸೊರಕೆ ಮಾರ್ಗದರ್ಶನ
ವಸಂತ್ ಸಾಲ್ಯಾನ್ ಅವರ ಜೀವಿತ ಕಾಲದ ಆಸೆಯಂತೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರೊಂದಿಗೆ ಮಾತನಾಡಿದ ಸಚಿವ ವಿನಯ ಕುಮಾರ್ ಸೊರಕೆ, ಸರಕಾರಿ ಗೌರವ ಸಲ್ಲಿಕೆಗೆ ವಿಶೇಷ ವ್ಯವಸ್ಥೆ ಕಲ್ಪಿಸಿದರು. ಮಾತ್ರವಲ್ಲದೇ ತನ್ನೆಲ್ಲಾ ಸರಕಾರಿ ಮತ್ತು ಖಾಸಗಿ ಕಾರ್ಯಕ್ರಮಗಳನ್ನು ರದ್ಧು ಪಡಿಸಿ ಸಾಲ್ಯಾನ್ ಅವರ ಅಂತ್ಯ ಕ್ರಿಯೆಯವರೆಗೂ ಉಪಸ್ಥಿತರಿದ್ದು ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಲು ಸೂಕ್ತ ಮಾರ್ಗದರ್ಶನ ನೀಡಿದರು.
ಗಣ್ಯರ ಉಪಸ್ಥಿತಿ:ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ, ಸಚಿವರಾದ ರಮಾನಾಥ ರೈ, ವಿನಯ್ ಕುಮಾರ್ ಸೊರಕೆ, ಯು.ಟಿ. ಖಾದರ್, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗೋಪಾಲ ಪೂಜಾರಿ, ಜೆ.ಆರ್. ಲೋಬೋ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುನೀಲ್ ಕುಮಾರ್, ಪ್ರತಾಪ್ಚಂದ್ರ ಶೆಟ್ಟಿ, ಐವನ್ ಡಿ’ಸೋಜಾ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕರಾದ ಲಾಲಾಜಿ ಆರ್. ಮೆಂಡನ್, ರಘುಪತಿ ಭಟ್, ಗೋಪಾಲ ಭಂಡಾರಿ, ಉಡುಪಿ ಜಿ.ಪಂ. ಅಧ್ಯಕ್ಷೆ ಸವಿತಾ ಎಸ್. ಕೋಟ್ಯಾನ್, ಕರ್ನಾಟಕ ಸಾಬೂನು ನಿಗಮದ ಅಧ್ಯಕ್ಷೆ ವೆರೋನಿಕಾ ಕರ್ನೇಲಿಯೋ, ಉಡುಪಿ ನಗರ ಸಭಾಧ್ಯಕ್ಷ ಯುವರಾಜ್, ಗೃಹ ರಕ್ಷಕದಳದ ಜಿಲ್ಲಾ ಕಮಾಂಡೆಂಟ್ ಡಾ| ಪ್ರಶಾಂತ್ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ. ಗಫೂರ್, ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ, ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಉದ್ಯಮಿ ನಾಡೋಜ ಡಾ| ಜಿ. ಶಂಕರ್ ಸೇರಿದಂತೆ ವಿವಿಧ ಪಕ್ಷಗಳ ನಾಯಕರು, ಜನಪ್ರತಿನಿಧಿಗಳು ಮತ್ತು ನೂರಾರು ಮಂದಿ ಗಣ್ಯರು ಪಾರ್ಥಿವ ಶರೀರದ ಅಂತಿಮ ದರ್ಶನಗೈದು, ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.
ಹೆಗಲುಕೊಟ್ಟ ಪೂಜಾರಿ: ಮೂರೂವರೆ ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಐದು ಬಾರಿ ಕಾಪು ಕ್ಷೇತ್ರದ ಶಾಸಕನಾಗಿ, ಎರಡು ಬಾರಿ ಸಚಿವರಾಗಿ, ಎರಡು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಪಡೆದು ಸೋತ ಬಳಿಕ, ಮೂರನೇ ಬಾರಿ ಟಿಕೆಟ್ ಸಿಗದೆ ನಿರಾಶೆಗೊಂಡು ಪಕ್ಷಾಂತರಗೊಂಡಿದ್ದ ವಸಂತ ವಿ. ಸಾಲ್ಯಾನ್ ಅವರ ಅಂತಿಮ ಯಾತ್ರೆಯ ವೇಳೆ ಪಾರ್ಥಿವ ಶರೀರಕ್ಕೆ ಹೆಗಲು ಕೊಡುವ ಮೂಲಕ ಕಾಂಗ್ರೆಸ್ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಆದರ್ಶ ಮೆರೆದರು. ಮಾತ್ರವಲ್ಲದೇ ಸಾಲ್ಯಾನ್ ಅವರ ಕುಟುಂಬ ವರ್ಗವನ್ನು ಸಂತೈಸಿದ ಅವರು ಸಾಲ್ಯಾನ್ ಪಕ್ಷಕ್ಕಾಗಿ ಏನು ಮಾಡಿದ್ದರು, ಪಕ್ಷದಲ್ಲಿ ಮತ್ತು ಸರಕಾರದಲ್ಲಿ ಹೇಗಿದ್ದರು ಎನ್ನುವುದಕ್ಕೆ ಇಂದು ಸೇರಿರುವ ಜನ ಸಮೂಹವೇ ಸಾಕ್ಷಿ ಎಂದು ಬಣ್ಣಿಸಿದರು.
ಕಾಂಗ್ರೆಸ್ಗೆ ತಪ್ಪಿದ ಅವಕಾಶ ಬಿಜೆಪಿ ದಕ್ಕಿತು !
ಸಾಮಾನ್ಯವಾಗಿ ಪಕ್ಷದ ಹಿರಿಯ ನಾಯಕರು ನಿಧನಹೊಂದಿದಾಗ ಕಾಂಗ್ರೆಸ್ ಪಕ್ಷದಲ್ಲಿ ಪಕ್ಷದ ಚಿಹ್ನೆಯ ಧ್ವಜವನ್ನು (ಬಟ್ಟೆ) ಪಾರ್ಥಿವ ಶರೀರಕ್ಕೆ ಹೊದೆಸುವುದು ವಾಡಿಕೆ. ಆದರೆ ಸುಮಾರು 35 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ವಸಂತ ಸಾಲ್ಯಾನ್ ಅವರು ಎರಡು ವರ್ಷದ ಹಿಂದೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದರಿಂದ ಅವರ ಪಾರ್ಥಿವ ಶರೀರಕ್ಕೆ ಕಾಂಗ್ರೆಸ್ ಚಿಹ್ನೆಯ ಬಟ್ಟೆ ಹೊದಿಸಲು ಸಾಧ್ಯವಾಗುತ್ತಿಲ್ಲವಲ್ಲಾ ಎಂಬ ನಿರಾಶೆಯ ಮಾತನ್ನು ಕಾಂಗ್ರೆಸ್ಸಿಗರು ವ್ಯಕ್ತ ಪಡಿಸಿದರು. ಸಾಲ್ಯಾನ್ ಪ್ರಸ್ತುತ ಬಿಜೆಪಿಯಲ್ಲಿದ್ದ ಕಾರಣ ಅವಕಾಶವನ್ನು ಬಳಸಿಕೊಂಡ ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಅವರು ಪಕ್ಷದ ಧ್ವಜವನ್ನು ಸಮರ್ಪಿಸಿ ಅಂತಿಮ ನಮನ ಸಲ್ಲಿಸುವ ಅವಕಾಶ ಪಡೆದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.