ನವದೆಹಲಿ: ಕೊರೋನಾ ಸೋಂಕಿನ ವಿರುದ್ಧ ಎಲ್ಲಾ ರಾಜ್ಯ ಸರ್ಕಾರಗಳ, ಕೇಂದ್ರಾಡಳಿತ ಪ್ರದೇಶಗಳ ಸಹಕಾರದೊಂದಿಗೆ ಕೇಂದ್ರ ಸರ್ಕಾರ ಶ್ರಮ ವಹಿಸುತ್ತಿದೆ. ಆರೋಗ್ಯ ಮೂಲ ಸೌಕರ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿಯೂ ಕೇಂದ್ರ ಸರ್ಕಾರ ರಾಜ್ಯಗಳಿಗೆ ಬೆಂಬಲ ನೀಡುತ್ತಿದೆ.
ಕೊರೋನಾ ನಿಯಂತ್ರಣ ವಿಚಾರದಲ್ಲಿ ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯ ಸರ್ಕಾರಗಳಿಗೆ ವೈದ್ಯಕೀಯ ಸೌಲಭ್ಯಗಳನ್ನೂ ಸರಬರಾಜು ಮಾಡುತ್ತಿದೆ. ಆ ಮೂಲಕ ದೇಶದಲ್ಲಿ ಆರೋಗ್ಯ ಮೂಲ ಸೌಕರ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿಯೂ ಕೇಂದ್ರ ಸರ್ಕಾರ ಮಹತ್ವದ ಪಾತ್ರವನ್ನು ವಹಿಸುತ್ತಿದೆ. ಕೊರೋನಾ ಪೂರ್ವದಲ್ಲಿ ಹಲವಾರು ವೈದ್ಯಕೀಯ ಸೌಲಭ್ಯಗಳನ್ನು ಭಾರತದಲ್ಲಿ ತಯಾರಿಸುವ ವ್ಯವಸ್ಥೆ ಇಲ್ಲದಿದ್ದರೂ, ತದನಂತರದಲ್ಲಿ ಭಾರತದಲ್ಲಿಯೇ ಸ್ವದೇಶೀ ವೈದ್ಯಕೀಯ ವಸ್ತುಗಳನ್ನು ತಯಾರಿಸುವ ನಿಟ್ಟಿನಲ್ಲಿಯೂ ಕೇಂದ್ರ ಸರ್ಕಾರ ಹೆಚ್ಚು ಆಸ್ಥೆ ವಹಿಸಿ ಕಾರ್ಯ ನಿರ್ವಹಿಸುತ್ತಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಜವಳಿ ಸಚಿವಾಲಯ, ಔಷಧ ಸಚಿವಾಲಯಗಳೂ ಸೇರಿದಂತೆ ದೇಶದ ಇನ್ನಿತರ ಇಲಾಖೆಗಳ ಸಹಯೋಗದಲ್ಲಿ, ಔಷಧ ಮತ್ತು ವೈದ್ಯಕೀಯ ಸವಲತ್ತುಗಳ ತಯಾರಿಕೆಯನ್ನು ಉತ್ತೇಜಿಸುವ ಸಲುವಾಗಿಯೂ ಕೇಂದ್ರ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಪಿಪಿಇ ಕಿಟ್ಗಳು, ಎನ್ 95 ಮಾಸ್ಕ್ಗಳು, ಔಷಧಗಳು, ವೆಂಟಿಲೇಟರ್ ಮೊದಲಾದ ವಸ್ತುಗಳನ್ನು ತಯಾರಿಸುವ ನಿಟ್ಟಿನಲ್ಲಿ ಕೇಂದ್ರ ಮುತುವರ್ಜಿ ವಹಿಸಿದೆ. ಆತ್ಮನಿರ್ಭರ ಭಾರತವನ್ನು ಸೃಷ್ಟಿಸುವ ಸಲುವಾಗಿ ಸ್ವದೇಶೀ ವಸ್ತುಗಳ ತಯಾರಿಕೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಅನೇಕ ಕ್ರಮಗಳನ್ನು ಕೈಗೊಂಡಿದೆ.
ಈಗಾಗಲೇ ದೇಶದ ಎಲ್ಲಾ ರಾಜ್ಯಗಳಿಗೆ ಸಂಬಂಧಿಸಿ ಎಪ್ರಿಲ್ 1 ರಿಂದ ತೊಡಗಿದಂತೆ 2.02 ಕೋಟಿ ಎನ್ 95 ಮಾಸ್ಕ್, 1.18 ಕೋಟಿಗಳಷ್ಟು ಪಿಪಿಇ ಕಿಟ್ ಗಳನ್ನೂ ಉಚಿತವಾಗಿ ನೀಡಿದೆ. ಜೊತೆಗೆ 6.12 ಕೋಟಿಗೂ ಅಧಿಕ ಎಚ್ ಸಿ ಕ್ಯು ಮಾತ್ರೆಗಳನ್ನು ವಿತರಿಸಲಾಗಿದೆ. ಸ್ವದೇಶೀ ನಿರ್ಮಿತ 11,300 ರಷ್ಟು ವೆಂಟಿಲೇಟರ್, 1.02 ಲಕ್ಷ ಆಕ್ಸಿಜನ್ ಸಿಲಿಂಡರ್ಗಳನ್ನೂ ಭಾರತ ಸರ್ಕಾರ ನೀಡಿದೆ. 72,293 ಆಕ್ಸಿಜನ್ ಸಿಲಿಂಡರ್ಗಳನ್ನು ರೋಗಿಗಳ ಹಾಸಿಗೆಗೆ ಅಳವಡಿಸಲಾಗಿದೆ.
ದೆಹಲಿಗೆ 7.81 ಲಕ್ಷ ಪಿಪಿಇ ಕಿಟ್ ಗಳನ್ನು, 12.76 ಲಕ್ಷ ಎನ್-95 ಮಾಸ್ಕ್ ಗಳನ್ನು ವಿತರಿಸಲಾಗಿದೆ. ಮಹಾರಾಷ್ಟ್ರ ದಲ್ಲಿ 11.78 ಲಕ್ಷ ಪಿಪಿಇ, 20.64 ಲಕ್ಷ ಎನ್95 ಮಾಸ್ಕ್ಗಳನ್ನು ವಿತರಣೆ ಮಾಡಲಾಗಿದೆ. ತಮಿಳುನಾಡಿಗೆ 5.39 ಲಕ್ಷ ಪಿಪಿಇ, 9.81 ಲಕ್ಷ ಮಾಸ್ಕ್ಗಳನ್ನು ನೀಡಲಾಗಿರುವುದಾಗಿಯೂ ಕೇಂದ್ರ ಸರ್ಕಾರ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.