ಹೈದರಾಬಾದ್: ಬಡ ಕುಟುಂಬದಿಂದ ಬಂದರೇನು. ಸಾಧನೆಗೆ ಬೇಕಾದ, ನಿರೀಕ್ಷಿತ ಗುರಿ ತಲುಪಲು ಬೇಕಾದ ಛಲ ಇದ್ದರೆ ಯಾವುದೂ ಅಸಾಧ್ಯವಲ್ಲ. ಇದಕ್ಕೆ ಸಾಕ್ಷಿಯಾಗಿದ್ದಾಳೆ ಈ ಹುಡುಗಿ. ಮಧ್ಯಪ್ರದೇಶದ ಚಹಾ ಮಾರಾಟಗಾರರೊಬ್ಬರ ಪುತ್ರಿ ಭಾರತೀಯ ವಾಯು ಪಡೆಯ ಅಧಿಕಾರಿಯಾಗಿ ಆಯ್ಕೆಯಾಗುವ ಮೂಲಕ ಸಾಮಾನ್ಯರೂ ಅಸಾಮಾನ್ಯ ಸಾಧನೆ ಮಾಡುವುದು ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ್ದಾಳೆ.
ಅಂಚಲ್ ಗಂಗ್ವಾಲ್ ಭಾರತೀಯ ವಾಯುಪಡೆಗೆ ಆಯ್ಕೆಯಾದ ಯುವತಿಯಾಗಿದ್ದು, ಇವರ ತಂದೆ ಸುರೇಶ್ ಗಂಗ್ವಾಲ್ ಅವರು ಮಧ್ಯಪ್ರದೇಶದ ನೀಮುಚ್ ಜಿಲ್ಲೆಯಲ್ಲಿ ಚಹಾ ಮಾರಾಟಗಾರರಾಗಿದ್ದಾರೆ. ಅಂಚಲ್ ಫ್ಲೈಯಿಂಗ್ ಆಫೀಸರ್ ಆಗಿರುವುದು ಮಾತ್ರವಲ್ಲದೆ, ಕಂಬೈನ್ಡ್ ಗ್ರಾಜುವೇಶನ್ ಪರೇಡ್ನಲ್ಲಿ ರಾಷ್ಟ್ರಪತಿ ಅವರಿಂದ ಪದಕ ಸ್ವೀಕರಿಸುವ ಮೂಲಕ ತಮ್ಮ ಹೆತ್ತವರು, ಊರಿಗೆ ಹೆಮ್ಮೆ ತಂದಿದ್ದಾರೆ.
ಈ ಕುರಿತು ಸಂತಸ ವ್ಯಕ್ತಪಡಿಸಿರುವ ಅಂಚಲ್ ತಂದೆ ಸುರೇಶ್, ಹೆತ್ತವರಿಗೆ ಮಕ್ಕಳು ನೀಡುವ ದೊಡ್ಡ ಉಡುಗೊರೆ ಎಂದರೆ ಅವರು ಮಾಡುವ ಸಾಧನೆ. ಮಗಳು ವಾಯುಪಡೆಗೆ ಆಯ್ಕೆಯಾಗಿರುವುದು ನಮಗೆ ನಿಜಕ್ಕೂ ಸಂತೋಷ ನೀಡಿದೆ. ಇದಕ್ಕಿಂತ ಹೆತ್ತವರಿಗೆ ಇನ್ನೇನು ಬೇಕು. ತಮ್ಮ ಮಗಳ ಸಾಧನೆಯಿಂದ ನಾವೂ ಹೆಮ್ಮೆ ಪಡುವಂತಾಗಿದೆ ಎಂದು ತಿಳಿಸಿದ್ದಾರೆ.
ತಮ್ಮದು ಬಡ ಕುಟುಂಬ. ಮೂವರು ಮಕ್ಕಳ ವಿದ್ಯಾಭ್ಯಾಸಕ್ಕೂ ಕಷ್ಟ ಪಡಬೇಕಾದ ಸ್ಥಿತಿ. ಇಂತಹ ಪರಿಸ್ಥಿತಿಯಲ್ಲಿ ತಮ್ಮ ಮಗಳು ಇದ್ದ ಸೌಕರ್ಯಗಳನ್ನು ಬಳಸಿಕೊಂಡು ಅತ್ಯುತ್ತಮ ಸ್ಥಾನಕ್ಕೇರಿದ್ದಾಳೆ ಎಂದೂ ಸುರೇಶ್ ತಿಳಿಸಿದ್ದಾರೆ. ನಾವು ನಮ್ಮ ಮಕ್ಕಳ ಶಿಕ್ಷಣಕ್ಕೆ ಉಳಿದೆಲ್ಲವುಗಳಿಗಿಂತಲೂ ಮಹತ್ವ ನೀಡಿದ್ದು, ಅದನ್ನು ಸಮರ್ಥವಾಗಿ ಬಳಸಿಕೊಂಡ ಮಗಳು ಇಂದು ಇಷ್ಟು ದೊಡ್ಡ ಉಡುಗೊರೆ ನೀಡಿದ್ದಾಳೆ ಎಂದು ಅವರು ಖುಷಿ ಹಂಚಿಕೊಂಡಿದ್ದಾರೆ.
ಮಗಳ ವಿದ್ಯಾಭ್ಯಾಸಕ್ಕಾಗಿ ಸಾಲ ಮಾಡಿ ಇಂದೋರ್ನಲ್ಲಿ ಕೋಚಿಂಗ್ ಕೊಡಿಸಿದ್ದಾಗಿಯೂ ತಿಳಿಸಿರುವ ಸುರೇಶ್, ಮಕ್ಕಳು ಸಾಧನೆ ಮಾಡುತ್ತಾರೆಂಬ ನಂಬಿಕೆ ಇದ್ದುದಾಗಿಯೂ ತಿಳಿಸಿದ್ದಾರೆ. ನಮ್ಮ ಮಗಳು ದೇಶಕ್ಕೆ ಯಾವ ರೀತಿಯ ಸೇವೆಯನ್ನು ನೀಡುವುದಕ್ಕೂ ಸಿದ್ಧಳಿದ್ದು , ಅವಳಿಗೆ ಸದಾ ತಮ್ಮ ಆಶೀರ್ವಾದ ಇರುವುದಾಗಿಯೂ ತಿಳಿಸಿದ್ದಾರೆ.
ಒಟ್ಟಿನಲ್ಲಿ ಸಾಧನೆಗೆ ಬೇಕಾದದ್ದು ಹಠ. ಸಾಧಿಸುವ ಹಠ, ಛಲವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಅಂಚಲ್ ಸಾಕ್ಷಿಯಾಗಿದ್ದಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.