News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 26th November 2024


×
Home About Us Advertise With s Contact Us

ಭಾರತ-ಚೀನಾ ಗಡಿ ವಿವಾದ: ವಿಘ್ನ ಸಂತೋಷಿಯೆದುರು ಸಾತ್ವಿಕನೇ ಗೆಲ್ಲುವುದಲ್ಲವೇ…? 

ಪಕ್ಕದ ಮನೆಯವರೊಂದಿಗೆ ವೈರತ್ವ‌ವಿದ್ದರೆ ಯಾವತ್ತೂ ಹಾಗೇನೇ.. ಅಲ್ಲಿ ಎಲ್ಲವೂ ಸೇರಿಕೊಂಡಿರುತ್ತದೆ. ದ್ವೇಷ, ಅಸೂಯೆ, ಕೇಡು, ಕೆಡುಕು, ತಿರಸ್ಕಾರ, ಅಸೂಯೆ ಪಟ್ಟಿಯನ್ನಿನ್ನೂ ಬೆಳೆಸಬಹುದು..! ವೈರಿಯ ಉನ್ನತಿಗೆ ಹೇಗೆ ಕೊಕ್ಕೆ ಹಾಕುವುದು ಎಂದು ಕಾಯುತ್ತಲೇ ಇರುತ್ತಾರೆ. ತಮ್ಮ ದ್ವೇಷ ಸಾಧನೆಗಾಗಿ ಎಂತಹಾ ಮಾರ್ಗವನ್ನು ಬಳಸಲುಕೂಡ ಹಿಂಜರಿಯುವುದಿಲ್ಲ. ಇಬ್ಬರೂ ಒಂದೇ ತರಹ ಇರಬೇಕೆಂದೇನಿಲ್ಲ..! ಒಬ್ಬ ಅಂತಹ ಭಾವನೆ ಹೊಂದಿದ್ದರೆ ಸಾಕು..! ಸಾತ್ವಿಕ‌ನಾದವನಿಗೆ ಕಿರುಕುಳ ತಪ್ಪಿದ್ದಲ್ಲ. ಇಬ್ಬರೂ ಸಮರ್ಥರಾಗಿದ್ದರೆ ಉತ್ತರ – ನಿರುತ್ತರ – ಪ್ರತ್ಯುತ್ತರ ನಡೆದೇ ಇರುತ್ತದೆ.. ಆದರೆ ಏನೇ ಆದರೂ ಕೊನೆಗೆ ಜಯಿಸುವುದು ಸಾತ್ವಿಕನೆ..! ಒಪ್ಪುತ್ತೀರಲ್ಲವೇ..?

ಈಗ ಜಗತ್ತು ಸಂಕಷ್ಟ‌ದಲ್ಲಿದೆ.. ಹಲವೆಡೆ ತುತ್ತಿಗೂ ಪರದಾಟ‌ವಿದೆ.. ಇದಕ್ಕೆಲ್ಲಾ ಕಾರಣ ನಮ್ಮ ಪಕ್ಕದ ಆ ಒಂದು ದೇಶ ಅದೇ ಚೀನಾ.. ವಿಘ್ನ ಸಂತೋಷಿ..! ತನ್ನಲ್ಲೇ ಹುಟ್ಟಿಕೊಂಡ ಅಥವಾ ತಾನೇ ಹುಟ್ಟಿಸಿದ ವೈರಾಣು‌ವಿನ ಜನನ ಜಾತಕದ ವಿವರಗಳನ್ನು ಮುಚ್ಚಿಟ್ಟು ಜಗತ್ತನ್ನೇ ಅಲುಗಾಡಿಸಿದೆ. ಅರಿವಾದ ಮೇಲೂ ಜಗತ್ತಿನಲ್ಲಿ ನಿಯಂತ್ರಣ‌ಕ್ಕೆ ಸಿಗದನ್ನು ತನ್ನಲ್ಲಿ ಹೇಗೆ ನಿಯಂತ್ರಿಸಿತು..? ಅಥವಾ ತನ್ನ ದೇಶದ ಮಾಧ್ಯಮ ಸಮೂಹ‌ವನ್ನು ತನ್ನ ಕೈಯಲ್ಲಿ ಹಿಡಿದಿಟ್ಟಿರುವ ಚೀನಿ ಸರಕಾರ ಜಗತ್ತಿಗೆ ಸುಳ್ಳು ಹೇಳಿತೇ..? ವಾಸ್ತವತೆಯನ್ನು ವಿವರಿಸುತ್ತಿದ್ದ ಕೆಲ ಪತ್ರಕರ್ತರು ನಾಪತ್ತೆಯಾಗಿದ್ದೇಕೆ..? ವಿಶ್ಲೇಷಣೆ‌ಗಳು ನಡೆಯುತ್ತಿದ್ದರೂ ಇವೆಲ್ಲವೂ ಈಗಲೂ ಉತ್ತರ ಸಿಗದ ಯಕ್ಷ ಪ್ರಶ್ನೆಗಳು..! W.H.O ತನ್ನ ಕಪಿಮುಷ್ಟಿಯಲ್ಲಿದ್ದರೂ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಮೇಲೆ ಭುಗಿಲೇಳುತ್ತಿರುವ ಅಸಮಾಧಾನ, ವಾಸ್ತವ‌ವತೆಯ ತನಿಖೆಗೆ ಒಕ್ಕೊರಲಿನ ಆಗ್ರಹ, ಒಪ್ಪಿಗೆ, ಚೀನಾ ಅವಲಂಬನೆಯನ್ನು ಜಗತ್ತೇ ಕಡಿಮೆ ಮಾಡುತ್ತಿರುವುದು… ಇವೆಲ್ಲವೂ ಚೀನಾದ ನಿದ್ದೆಗೆಡಿಸಿದೆ..

ಅದಕ್ಕೀಗ ಜಗತ್ತನ್ನು ಬೇರೆಡೆಗೆ ಸೆಳೆಯ ಬೇಕಾಗಿದೆ. ಹಾಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ವಿರುದ್ಧ ನಿಂತಿರುವ ತನ್ನನ್ನು ಮೀರಿಸಿ ಬೆಳೆಯುತ್ತಿರುವ ಭಾರತಕ್ಕೆ ಕಿರುಕುಳ ಕೊಟ್ಟು ಜಗತ್ತು ವೈರಸ್‌ನ (ತನ್ನ) ವಿರುದ್ಧವಿಟ್ಟಿರುವ ದೃಷ್ಟಿಗೆ ಪರದೆಯ‌ನ್ನೆಳೆಯ ಬೇಕಾಗಿದೆ.. ಹಾಗಾಗಿ ಕಾಲು ಕೆರೆಯುತ್ತಿದೆ. ಇಲ್ಲಿಯವರೆಗೆ ತನ್ನ ಕೈಗೊಂಬೆ ಪಾಕಿಸ್ಥಾನ‌ವನ್ನು ನಮ್ಮ ವಿರುದ್ಧ ಛೂ ಬಿಡುತಿದ್ದ ಚೀನಾ ಈಗ ನೇಪಾಳವನ್ನೂ ತನ್ನ ಹಿಡಿತಕ್ಕೆ ತೆಗೆದುಕೊಂಡು ನಮ್ಮ ವಿರುದ್ಧ ಪ್ರಚೋದಿಸುತ್ತಿದೆ. ಚೀನಾದ ಬುದ್ಧಿಯೇ ಹಾಗೆ ದುರ್ಬಲ‌ರನ್ನು ಹುಡುಕಿ ನೆರವನ್ನು ನೀಡುವ ನೆಪದಲ್ಲಿ ಹದಗೊಳಿಸಿ ಸಾಲದ ಸುಳಿಯಲ್ಲಿ ಸಿಲುಕಿಸಿ ಮತ್ತೆ ತನಗೆ ಬೇಕಾದಂತೆ ಬಗ್ಗಿಸಿ ಬಳಸಿಕೊಳ್ಳುವುದು. ಇದಕ್ಕೊಂದು ದೃಷ್ಟಾಂತ ಬೇಕಿದ್ದರೆ ಭಾರತದ ಎಚ್ಚರಿಕೆಯನ್ನು ಮೀರಿ ಶ್ರೀಲಂಕಾ ತನ್ನ ಹಂಬನ್‌ತೋಟ ಬಂದರನ್ನು ಅಭಿವೃದ್ಧಿ‌ ಪಡಿಸಲು ಚೀನಾದ ನೆರವು (ಸಾಲ) ಪಡೆದು ಈಗ ಆ ಬಂದರನ್ನೇ ಅದರ ತೆಕ್ಕೆಗೆ ನೀಡಬೇಕಾಗಿ ಬಂದಿದೆ..!

ನಮಗೆ ತಿಳಿದಿರುವಂತೆ ಚೀನಾ – ಭಾರತದ ಗಡಿ ವಿವಾದ ಇಂದು ನಿನ್ನೆಯದಲ್ಲ. ನಮಗೆ ಸ್ವಾತಂತ್ರ್ಯ ಬಂದಾಗಿನಿಂದಲೂ ಚೀನಿಯರ ಕಿರುಕುಳ ತಪ್ಪಿಲ್ಲ. 1959ರಲ್ಲಿ ಪಕ್ಕದ ಟಿಬೆಟ್‌ನ್ನು ವಶಪಡಿಸಿಕೊಂಡ ಚೀನಾ ಅಲ್ಲಿನ ಗುರು ದಲೈಲಾಮರಿಗೆ ಅಶ್ರಯ ನೀಡಿದಕ್ಕಾಗಿ ಮತ್ತು ಹಾಗೆಯೇ ಗಡಿ ವಿವಾದ‌ವನ್ನು ಜೋಡಿಸಿಕೊಂಡು 1962 ರಲ್ಲಿ ನಮ್ಮ ಮೇಲೇರಿ ಬಂದಿತ್ತು. ಆಗ ನಮ್ಮನ್ನಾಳುತ್ತಿದ್ದವರ ಲಜ್ಜೆಗೇಡಿತನದಿಂದ ನಮ್ಮ 38,000 ಚ. ಕಿಮೀ. ಪ್ರದೇಶ ಚೀನಾದ ಕೈವಶವಾಗಿತ್ತು. ಅಂದು ನಮ್ಮ ಸರ್ಕಾರ ಗಟ್ಟಿತನ ಧೈರ್ಯ ತೋರಿದ್ದರೆ ಏನಾಗುತ್ತಿತ್ತು ಎಂಬುದಕ್ಕೆ, ಆಗ ತನ್ನೊಂದಿಗಿರುವ 124 ಜನ ಸೈನಿಕರ ಪಡೆಯನ್ನು ಚೀನಾದ 3000 ಸೈನಿಕರ ಎದುರಿಗೆ ನಿಲ್ಲಿಸಿ ಅವರ 1500 ಕ್ಕೂ ಅಧಿಕ ಸೈನಿಕರನ್ನು ಹೊಡೆದುರುಳಿಸಿ ಹುತಾತ್ಮ‌ರಾದ ಮೇಜರ್ ಶೈತಾನ್ ಸಿಂಗ್ ಮತ್ತವರ ಬಳಗದ ಪರಾಕ್ರಮ ಎದುರಿಗಿರುವ ನಿದರ್ಶನ..! ನಮ್ಮ ಆತ್ಮಶಕ್ತಿ ಅಂಥದಲ್ಲವೇ..?!

ಕೆಲ ವರ್ಷಗಳ ಹಿಂದೆ ಅಂದರೆ 2017ರಲ್ಲಿ ಡೋಕ್ಲಾಮ್‌ನಲ್ಲಿ ಕಾಲು ಕೆರೆದ ಚೀನಾ ಭಾರತದ ರಾಜತಾಂತ್ರಿಕ ಚಾಣಾಕ್ಷತೆಗೆ ಬಾಲ ಮುದುಡಿಕೊಂಡು ಹಿಂದೋಡಿತ್ತು.. ಈಗ ಮತ್ತೆ ಲಡಾಖಿನ ಗಾಲ್ವಾನ್ ಕಣಿವೆಯಲ್ಲಿ ಕಾಲು ಕೆರೆದಿದೆ, ಗುದ್ದಾಡುತ್ತಿದೆ, ಕುತಂತ್ರಿ ಬುದ್ಧಿ ಪ್ರಯೋಗಿಸಿ ನಮ್ಮ ಹೆಮ್ಮೆಯ ಯೋಧರನ್ನು ಬಲಿ ತೆಗೆದುಕೊಂಡಿದೆ. ಆದರೆ ನಾವು ಬಿಟ್ಟೆವೇನು..!? ಶಾಂತಿ ಬಯಸುವ ನಾವು ನಮ್ಮ ಕೆನ್ನೆಗೆ ಏಟು ಬಿದ್ದಾಗ ಇನ್ನೊಂದನ್ನು ತೋರುವ ಕಾಲವಲ್ಲ ಇದು..! ಎದುರೇಟು ಕೊಟ್ಟು ದುರುಳ ಎದುರಾಳಿಯ ಎರಡೂ ಕೆನ್ನೆಯನ್ನೂದಿಸುವ ಕಾಲವಿದು..! ಗಮನಿಸುತ್ತಿದ್ದರೆ ಅದು ಈಗಾಗಲೇ ನಿಮಗರಿವಾಗಿರಬಹುದು..!

ಸಂಕಷ್ಟದ ಕಾಲವಿದು. ಈಗ ಇದೆಲ್ಲಾ ಬೇಕಿತ್ತಾ..? ವೈರಿಗಳೂ ಒಗ್ಗಟ್ಟಿನಲ್ಲಿರಬೇಕಾದ ಕಾಲವಿದು..! ಆದರೆ ದುಷ್ಟರು ಯಾವಾಗಲೂ ಹೀಗೇನೆ ಸಂಕಷ್ಟ‌ ಕಾಲವೇ ಅವರಿಗೆ ಪ್ರಿಯವಾದದ್ದು..! ಈಗಿನ ಭಾರತ, ಭಾರತ ಸರ್ಕಾರ ಯಾವುದೂ 1962 ರಂತಿಲ್ಲ..! ಇದು 2020 ನೆನಪಿರಲಿ.. ಈಗ ಅಧಿಕಾರ ಸ್ಥಾನದಲ್ಲಿರುವರು ಅಸಮರ್ಥರಲ್ಲ.., ಅಯೋಗ್ಯರಲ್ಲ..! ಸಮರ್ಥರು..! ನಂಬಿಕೆಯಿಡೋಣ.., ಭರವಸೆಯಿಡೋಣ.., ಹೆಮ್ಮೆಯ ಯೋಧರ ಸ್ಥೈರ್ಯವನ್ನು ಹೆಚ್ಚಿಸೋಣ.., ಹುತಾತ್ಮರಿಗೆ ಮನಸ್ಫೂರ್ತಿಯ ಮನತುಂಬಿದ ಗೌರವ ಸಲ್ಲಿಸೋಣ.., ತ್ಯಾಗ‌ವನ್ನು ಮರೆಯದಿರೋಣ.., ಕಷ್ಟದ ಈ ಸಮಯದಲ್ಲಿ ತೊಂದರೆಗೊಳಗಾಗಿರುವವರ ಜತೆ ನಿಲ್ಲೋಣ.., ನಾವು ಅವಲಂಬಿತರಾಗಿರುವ ಪರಕೀಯ‌ರ ವಸ್ತುಗಳನ್ನು, ತಂತ್ರಜ್ಞಾನದ ಬಳಕೆಯನ್ನು ಸಾಧ್ಯವಾದಷ್ಟು ನಿಲ್ಲಿಸೋಣ, ದೂರವಿರಿಸೋಣ.., ಸ್ವಾವಲಂಬಿ, ಶಶಕ್ತರಾಗೋಣ.., ಆತ್ಮಬಲ ಆತ್ಮಬಲವನ್ನು ಜಾಗೃತಿ, ಗಟ್ಟಿಗೊಳಿಸೋಣ… ತಾಯಿ ಭಾರತಾಂಬೆಯು ತನ್ನ ಮಕ್ಕಳಿಂದ ಬಯಸುತ್ತಿರುವುದು ಇದನ್ನೇ…!

ಕಿಶೋರ್ ಬಳ್ಳಡ್ಕ

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top