ಗುವಾಹಟಿ: ದೇಶದೆಲ್ಲೆಡೆ ಕೊರೋನಾ ಸೋಂಕು ಹೆಚ್ಚಾಗುತ್ತಲೇ ಇದ್ದು, ಅದನ್ನು ಹತೋಟಿಯಲ್ಲಿಡುವ, ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಹಲವಾರು ಸಂಶೋಧನೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಗುವಾಹಟಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ಗುವಾಹಟಿಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಆರ್ಆರ್ ಅನಿಮಲ್ ಹೆಲ್ತ್ಕೇರ್ ಸಹಯೋಗದಲ್ಲಿ ಕೊರೋನಾ ಟೆಸ್ಟಿಂಗ್ ಕಿಟ್ಗಳನ್ನು ಅಭಿವೃದ್ಧಿಪಡಿಸಿದೆ. ವೈರಲ್ ಟ್ರಾನ್ಸ್ಫೋರ್ಟ್ ಮೀಡಿಯಾ (ವಿಟಿಎಂ), ಆರ್ಟಿ-ಪಿಸಿಆರ್, ಆರ್ಎನ್ಎ ಐಸೋಲೇಷನ್ ಕಿಟ್ಗಳನ್ನು ಐಐಟಿ ತಂಡ ಅಭಿವೃದ್ಧಿಪಡಿಸಿದೆ ಎಂದು ವರದಿಗಳು ತಿಳಿಸಿವೆ.
ವಿಟಿಎಂ ಕಿಟ್ಗಳ ಮೂಲಕ ಮೂಗಿನ ಮತ್ತು ಮೌಖಿಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಮೂಗು ಮತ್ತು ಮೌಖಿಕ ಸ್ಯಾಂಪಲ್ ಗಳನ್ನು ತೆಗೆದುಕೊಂಡು ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿ ಸೋಂಕು ತಗುಲಿದೆಯೋ, ಇಲ್ಲವೋ ಎಂಬುದನ್ನು ಖಚಿತಪಡಿಸುವ ಸಲುವಾಗಿ ಇದನ್ನು ಬಳಕೆ ಮಾಡಲಾಗುತ್ತದೆ. ಈ ವಿಧಾನದಲ್ಲಿ ಪ್ರಯೋಗಾಲಯದಲ್ಲಿ ಪರೀಕ್ಷಾ ವಿಧಾನಗಳು ಸಂಪೂರ್ಣಗೊಳ್ಳುವವರೆಗೆ ವೈರಸ್ ಗಳು ಮಾದರಿಗಳಲ್ಲಿ ಜೀವಂತ ಇರುವುದಾಗಿಯೂ ಸಂಶೋಧಕರು ಮಾಹಿತಿ ನೀಡಿದ್ದಾರೆ. ಇದನ್ನು ಮಾದರಿ ಸಂಗ್ರಹ ಮತ್ತು ಸಾಗಾಟಕ್ಕೆ ಪೂರಕವಾಗುವಂತೆ ಸಿದ್ಧಪಡಿಸಲಾಗಿದೆ ಎಂದೂ ಸಂಶೋಧಕರು ತಿಳಿಸಿದ್ದಾರೆ.
ಈ ಕಿಟ್ಗಳನ್ನು ಕಡಿಮೆ ಬೆಲೆಗೆ ಲಭ್ಯವಾಗುವಂತೆ ಮಾಡುವ ಹಿನ್ನೆಲೆಯಲ್ಲಿ ಸಂಶೋಧಕರು ಸ್ಥಳೀಯವಾಗಿ ಸಿಗುವ ಆದರೆ ಡಬ್ಲ್ಯೂ ಎಚ್ ಒ ನಿಂದ ಪ್ರಮಾಣೀಕರಿಸಲ್ಪಟ್ಟ ವಸ್ತುಗಳನ್ನೇ ಬಳಕೆ ಮಾಡಿರುವುದಾಗಿಯೂ ತಿಳಿಸಿದ್ದಾರೆ. ಹೆಚ್ಚು ಜನರಿಗೆ ಇದರ ಉಪಯೋಗ ದೊರೆಯಬೇಕು ಎನ್ನುವ ದೃಷ್ಟಿಯಿಂದ ಇದನ್ನು ಹೆಚ್ಚು ತಯಾರು ಮಾಡುವ ನಿಟ್ಟಿನಲ್ಲಿಯೂ ಕಾರ್ಯ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಪ್ರಯೋಗಾರ್ಥ ಬಳಕೆಗಾಗಿ ಇದನ್ನು ಅಸ್ಸಾಂನ ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ಜೆಎಂಸಿಎಚ್ ಗೆ ಹಸ್ತಾಂತರಿಸಿರುವುದಾಗಿಯೂ ಸಂಶೋಧಕ ಪ್ರೊ. ಪರಮೇಶ್ವರ ಕೃಷ್ಣನ್ ಅಯ್ಯರ್ ತಿಳಿಸಿದ್ದಾರೆ.
ಈ ಕಿಟ್ಗಳು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳಿಂದ ಶಿಫಾರಸ್ಸು ಮಾಡಲ್ಪಟ್ಟಿದ್ದು, ಮೌಲ್ಯೀಕರಿಸಲ್ಪಟ್ಟಿವೆ. ಆದ್ದರಿಂದ ಇವುಗಳನ್ನು ಕೊರೋನಾ ಟೆಸ್ಟಿಂಗ್ನಲ್ಲಿ ಯಾವುದೇ ಸಂದೇಹವಿಲ್ಲದೆ ಬಳಕೆ ಮಾಡಬಹುದಾಗಿದೆ. ಇವುಗಳು ವೈರಸ್ ಮಾದರಿಗಳ ಸಂಗ್ರಹ, ಸಾಗಾಟ, ನಿರ್ವಹಣೆ, ಧೀರ್ಘ ಕಾಲದ ಪ್ರೀಝರ್ ಮೆತಡ್ಗಳನ್ನು ಒಳಗೊಂಡಿವೆ. 72 ಗಂಟೆಗಳ ಕಾಲ ವೈರಸ್ ಸಾಯದಂತೆ ಕಾಪಿಟ್ಟುಕೊಳ್ಳುವ ಮತ್ತು ಪರೀಕ್ಷೆಗೆ ಸಹಕರಿಸುವ ವ್ಯವಸ್ಥೆಯನ್ನು ಈ ಕಿಟ್ಗಳು ಒಳಗೊಂಡಿವೆ. ಇವುಗಳು ಬಳಕೆದಾರರ ಆರೋಗ್ಯ ಸ್ನೇಹಿ ಕಿಟ್ಗಳಾಗಿರುವುದಾಗಿಯೂ ಐಐಟಿ ಭರವಸೆ ನೀಡಿದೆ.
ಕೊರೋನಾ ಸಂಕಷ್ಟದಿಂದ ದೇಶವಾಸಿಗಳನ್ನು ಪಾರು ಮಾಡುವ ನಿಟ್ಟಿನಲ್ಲಿ ಈ ಕಿಟ್ಗಳು ಹೆಚ್ಚು ಪರಿಣಾಮ ಬೀರಲಿದ್ದು, ಸದ್ಯ ಇವುಗಳನ್ನು ಅಸ್ಸಾಂನಲ್ಲಿ ದೊಡ್ಡ ಮಟ್ಟದಲ್ಲಿ ತಯಾರಿಸಲು ಐಐಟಿ ಮುಂದಾಗಿದೆ. ಮುಂದಿನ ದಿನಗಳಲ್ಲಿ ಈ ಕಿಟ್ಗಳು ದೇಶದಾದ್ಯಂತ ಜನರ ಪರೀಕ್ಷೆಗೆ ಲಭ್ಯವಾಗಲಿರುವುದಾಗಿಯೂ ಐಐಟಿ ಗುವಾಹಟಿ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.