ನವದೆಹಲಿ: ಕೊರೋನಾ ಲಾಕ್ಡೌನ್ ಬಿಕ್ಕಟ್ಟಿನಿಂದಾಗಿ ತಮ್ಮ ತವರೂರು ಸೇರಿರುವ ವಲಸೆ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು, ಗ್ರಾಮೀಣ ನಾಗರಿಕರಿಗೆ ಜೀವನೋಪಾಯದ ದಾರಿ ತೋರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗರೀಬ್ ಕಲ್ಯಾಣ ರೋಜ್ಗಾರ್ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಲಿದ್ದಾರೆ. ಆರು ರಾಜ್ಯಗಳಲ್ಲಿ ಈ ಯೋಜನೆಯನ್ನು ಆರಂಭಿಸಲಿದ್ದಾರೆ.
ಈ ಯೋಜನೆಯಡಿ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು. ಅದಕ್ಕೆ ಪೂರಕವಾಗಿ 125 ದಿನಗಳ ಮಿಷನ್ ಮೋಡ್ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ. ಸುಮಾರು 25 ರೀತಿಯ ಬೇರೆ ಬೇರೆ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗುವಂತೆ ಹಾಗೂ ವಲಸಿಗರು ಮತ್ತು ಗ್ರಾಮೀಣ ಭಾಗದ ಬಡ ಜನರಿಗೆ ಸಹಕಾರಿಯಾಗುವಂತೆ ಈ ಯೋಜನೆಗೆ ರೂಪುರೇಶೆಗಳನ್ನು ಸಿದ್ಧಪಡಿಸಿರುವುದಾಗಿಯೂ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಸುಮಾರು 50 ಸಾವಿರ ಕೋಟಿ ರೂ. ಗಳನ್ನು ಇದಕ್ಕಾಗಿ ಬಳಕೆ ಮಾಡಲಾಗುವುದೆಂದೂ ಕೇಂದ್ರ ತಿಳಿಸಿದೆ.
ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಜಾರ್ಖಂಡ್, ರಾಜಸ್ಥಾನ, ಒಡಿಶಾ ರಾಜ್ಯಗಳಿಗೆ ಸಂಬಂಧಿಸಿದಂತೆ ಪಿಎಂ ಗರೀಬ್ ಕಲ್ಯಾಣ್ ಯೋಜನೆಗೆ ಚಾಲನೆ ನೀಡಲಿದ್ದಾರೆ. ಸುಮಾರು 116 ಜಿಲ್ಲೆಗಳನ್ನು ಮತ್ತು 25000 ಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಗೆ ಚಾಲನೆ ನೀಡುವ ಕೆಲಸ ನಡೆಯಲಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಇತರ ಮುಖ್ಯಮಂತ್ರಿಗಳು, ಕೇಂದ್ರ ಸಚಿವರ ಸಮ್ಮುಖದಲ್ಲಿ ಪಿಎಂ ಗರೀಬ್ ಕಲ್ಯಾಣ ಯೋಜನೆಯನ್ನು ಬಿಹಾರದ ಖಗೇರಿಯಾ ಜಿಲ್ಲೆಯ ತೆಲಿಹಾರ್ ಗ್ರಾಮದಿಂದ ಆರಂಭಿಸಲಾಗುತ್ತದೆ. ಯೋಜನೆ ಚಾಲ್ತಿಯಲ್ಲಿರುವ ಜಿಲ್ಲಾ ಸಾಮಾನ್ಯ ಸೇವಾ ಕೇಂದ್ರಗಳು ಮತ್ತು ಕೃಷಿ ವಿಜ್ಞಾನ ಇಲಾಖೆಗಳ ಸಹಯೋಗದಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುತ್ತದೆ ಎಂದೂ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟೆಲಿಕಾಂ ,ಕೃಷಿ , ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಕೆಲಸ, ಗಣಿ, ಕುಡಿಯುವ ನೀರು, ನೈರ್ಮಲ್ಯ, ಪರಿಸರ, ರೈಲ್ವೆ, ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಹೊಸ ಮತ್ತು ನವೀಕರಿಸಬಹುದಾದ ಇಂಧನ, ಗಡಿ ರಸ್ತೆಗಳಿಗೆ ಸಂಬಂಧಿಸಿದ 12 ಇಲಾಖೆಗಳ ಸಂಘಟಿತ ಪ್ರಯತ್ನದ ಮೂಲಕ ಈ ಯೋಜನೆಯನ್ನು ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.