ಜಗತ್ತು ಕೊರೋನಾ ಎಂಬ ಮಹಾಮಾರಿಯ ಹಿಡಿತದಿಂದ ಹೊರಬರಲಾರದೆ ಚಡಪಡಿಸಲಾರಂಭಿಸಿದೆ. ಒಂದು ಕಡೆಯಿಂದ ಆರೋಗ್ಯ ಹದೆಗೆಡುವ ಭಯ ಜನರನ್ನು ಕಾಡುತ್ತಿದ್ದರೆ, ಇನ್ನೊಂದೆಡೆಯಲ್ಲಿ ಜಗತ್ತು ಆರ್ಥಿಕ ಹಿಂಜರಿತವನ್ನು ಅನುಭವಿಸುವ ಸ್ಥಿತಿ. ಈ ಸ್ಥಿತಿಯನ್ನು ಆಕ್ಸ್ಫರ್ಡ್ ವಿಶ್ವವಿದ್ಯಾಲಯವು ಭಗವದ್ಗೀತೆಯ ಕುರುಕ್ಷೇತ್ರ ಯುದ್ಧಕ್ಕೆ ಹೋಲಿಸುತ್ತಿದೆ. ಕುರುಕ್ಷೇತ್ರ ಯುದ್ಧದಲ್ಲಿ ಧರ್ಮ ಸಂಸ್ಥಾಪನೆಗಾಗಿ ಅರ್ಜುನನ್ನು ಸಿದ್ಧಗೊಳಿಸುವ ಕೃಷ್ಣ, ತನ್ನವರನ್ನೇ ಹೇಗೆ ಕೊಲ್ಲುವುದು ಎಂಬ ಗೊಂದಲಗಳಿಗೆ ಕೃಷ್ಣ ನೀಡುವ ಪರಿಹಾರ, ಆ ಯುದ್ಧರಂಗ ಇವೆಲ್ಲವೂ, ಇಂದಿನ ಕೊರೋನಾ ಪರಿಸ್ಥಿತಿಗೆ ಸಮವಾಗಿದೆ. ಇಲ್ಲಿಯೂ ಕಣ್ಣಿಗೆ ಕಾಣದ ವೈರಾಣುಗಳ ದಾಳಿ ಎಂಬ ಕೆಟ್ಟ ಘಳಿಗೆಯ ಮೇಲೆ ಆರೋಗ್ಯ ಧರ್ಮದ ವಿಜಯವಾಗಬೇಕಾಗಿದೆ ಎಂದು ತಿಳಿಸಿದೆ.
ಕೊರೋನಾ ಕಾಲಘಟ್ಟದಲ್ಲಿ ಭಗವದ್ಗೀತೆ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತ ಎಂಬುದಾಗಿ, ಕೊರೋನಾ ಯೋಧರು ಇಂದಿನ ಅರ್ಜುನರು ಎಂದು ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ನಿಯತಕಾಲಿಕೆ ತಿಳಿಸಿದೆ.
ಕುರುಕ್ಷೇತ್ರದ ಸಂದರ್ಭದಲ್ಲಿ ಯುದ್ಧ ರಂಗದಲ್ಲಿ ಕೌರವರ ಜೊತೆ ಯುದ್ಧ ಮಾಡುವ ಸಂದರ್ಭದಲ್ಲಿ, ಅರ್ಜುನನಿಗೆ ತನ್ನ ಅಣ್ಣ ಕರ್ಣನನ್ನು ಎದುರಿಸುವ ಪ್ರಸಂಗ ಬರುತ್ತದೆ. ಒಡ ಹುಟ್ಟಿದ ಅಣ್ಣನ ಮೇಲೆಯೇ ತಾನು ಹೇಗೆ ಯುದ್ಧ ಮಾಡುವುದು, ಅದು ತಪ್ಪಲ್ಲವೇ.. ಅದರಿಂದ ತಾನು ಪಾಪಿಯಾಗುವುದಿಲ್ಲವೇ. ಹೀಗೆ ಅನೇಕ ರೀತಿಯ ಗೊಂದಲಗಳು ಅರ್ಜುನನ ಮನಸ್ಸಿನಲ್ಲಿ ಉದ್ಭವಿಸುತ್ತದೆ. ತಾನು ಯುದ್ಧ ಮಾಡುವುದಿಲ್ಲ ಎಂಬ ತೀರ್ಮಾನಕ್ಕೂ ಅವನು ಬರುತ್ತಾನೆ. ದಯನೀಯ ಭಾವದಿಂದ ಕೃಷ್ಣನ ಮುಖ ನೋಡುತ್ತಾನೆ. ಈ ಸಂದರ್ಭದಲ್ಲಿ ಕೃಷ್ಣನಿಗೆ ಅರ್ಜುನನ ಸಮಸ್ಯೆ, ಅವನ ತುಮುಲ, ಅವನ ಮನಸ್ಸಿನೊಳಗಿರುವ ಗೊಂದಲ ಇವೆಲ್ಲವೂ ಅರ್ಥವಾಗುತ್ತದೆ. ಆತ ಪಾರ್ಥನೊಳಗಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಹೇಳುತ್ತಾನೆ. ಅದೇ ಭಗವದ್ಗೀತೆ ಆಗುತ್ತದೆ.
ಕೃಷ್ಣ ಅರ್ಜುನನಿಗೆ ಹೇಳಿದ್ದು ಇಷ್ಟೇ, ಎದುರಾಳಿ ಯಾರು ಎಂದು ಯೋಚಿಸುವುದಲ್ಲ. ಈ ಯುದ್ಧ ಧರ್ಮ ಮತ್ತು ಅಧರ್ಮದ ನಡುವಿನ ಯುದ್ಧ ಎಂಬುದಷ್ಟೇ ಕ್ಷತ್ರಿಯನ ಮನಸ್ಸಲ್ಲಿರಬೇಕು. ಕ್ಷತ್ರಿಯನ ಗುಣವೇ ಹೋರಾಟ ಆಗಿರುವಾಗ, ಯಾರ ವಿರುದ್ದ ಹೋರಾಡುತ್ತಿದ್ದೇವೆ ಅಂದರೆ ನಮ್ಮ ಎದುರಾಳಿ ಯಾರು, ಯುದ್ಧದ ಫಲಿತಾಂಶ ಏನು? ಎಂಬುದಾಗಿ ಯೋಚಿಸುತ್ತಾ ಕೂರುವುದಲ್ಲ. ಹೀಗೆ ಕೂರುವುದು ಕ್ಷಾತ್ರ ಗುಣವೂ ಅಲ್ಲ ಎಂದು. ಕೃಷ್ಣನ ಪ್ರೇರಣೆ ಪಡೆದ ಅರ್ಜುನ ಮತ್ತೆ ಹೋರಾಡುತ್ತಾನೆ. ಪಾಂಡವರು ಧರ್ಮ ಯುದ್ಧ ಕುರುಕ್ಷೇತ್ರದಲ್ಲಿ ವಿಜಯವನ್ನು ಪಡೆಯುತ್ತಾರೆ.
ಸದ್ಯದ ಕೊರೋನಾ ಪರಿಸ್ಥಿತಿಯೂ ಕುರುಕ್ಷೇತ್ರ ಯುದ್ಧದಂತೆಯೇ ಇದೆ. ಇಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡುವ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಪೌರ ಕಾರ್ಮಿಕರ ಮೊದಲಾದವರು ಅರ್ಜುನನಂತೆ. ಆಸ್ಪತ್ರೆಯೇ ಇಲ್ಲಿ ರಣರಂಗ. ಔಷಧವೇ ಇಲ್ಲದ ರೋಗಕ್ಕೆ ಹೇಗೆ ಔಷಧ, ಚಿಕಿತ್ಸೆ ನೀಡುವುದು ಎಂದು ಯೋಚಿಸುತ್ತಾ ಕುಳಿತರೆ ಬದುಕುವ ಸಾಧ್ಯತೆಗಳಿದ್ದವರೂ ಜೀವ ಕಳೆದುಕೊಳ್ಳುವ ಸಂಭವವಿದೆ. ಆದ್ದರಿಂದ ಫಲಿತಾಂಶದ ಬಗ್ಗೆ ಯೋಚಿಸದೆ ವೈದ್ಯರು ಅದಕ್ಕೆ ಪೂರಕ ಚಿಕಿತ್ಸೆಗಳನ್ನು ನೀಡುವಲ್ಲಿ ಕೆಲಸ ಮಾಡಬೇಕು. ಒಟ್ಟಿನಲ್ಲಿ ಕೊರೋನಾ ಎಂಬ ಅನಾರೋಗ್ಯದ ವಿರುದ್ಧ ಮತ್ತೆ ಆರೋಗ್ಯವಂತ ಸದೃಢ ಸಮಾಜ ನಿರ್ಮಾಣವಾಗಬೇಕು. ಕೋವಿಡ್ ಯುದ್ಧದಲ್ಲಿ ಗೆಲ್ಲುವುದಕ್ಕೆ ಬೇಕಾದ ಎಲ್ಲಾ ಉತ್ಸಾಹವನ್ನೂ ಸೋಂಕಿತರಿಗೆ, ವೈದ್ಯಕೀಯ ಸಿಬ್ಬಂದಿಗಳಿಗೆ ನಾವು ಅಂದರೆ ಸಮಾಜ ತುಂಬುವಂತಾದಲ್ಲಿ ಮಾತ್ರ ಈ ಸಮಸ್ಯೆಯಿಂದ ಪ್ರಪಂಚ ಮುಕ್ತಿ ಪಡೆಯುವುದು ಸಾಧ್ಯ.
ಬಿಲ್ವಿದ್ಯೆಯಲ್ಲಿ ಪಾರ್ಥನನ್ನು ಸೋಲಿಸುವವರೇ ಇಲ್ಲ. ಆದರೆ ಆತನ ಮನೋ ವಿಶ್ವಾಸದ ಕೊರತೆ , ತನ್ನ ಬಂಧುಗಳನ್ನೇ ಹೇಗೆ ಕೊಲ್ಲುವುದಪ್ಪಾ ಎಂಬ ಜಿಜ್ಞಾಸೆ ಅವನನ್ನು ಸೋಲಿನ ದವಡೆಗೆ ನೂಕುವುದಕ್ಕೆ ಸನ್ನದ್ಧವಾಗಿತ್ತು. ಶಸ್ತ್ರ ತ್ಯಾಗದ ಕುರಿತಾಗಿಯೂ ಅರ್ಜುನ ಆ ಸಂದರ್ಭದಲ್ಲಿ ಯೋಚಿಸಿದ್ದ. ಆದರೆ ತಕ್ಷಣ ಕಾರ್ಯ ಪ್ರವೃತ್ತನಾದ ಕೃಷ್ಣ ಅವನ ಮನಸ್ಸಿಗೆ ಧೈರ್ಯ ತುಂಬುತ್ತಾನೆ. ‘ಧೈರ್ಯಂ ಸರ್ವತ್ರ ಸಾಧನಂ’ ಎಂಬಂತೆ, ನಮ್ಮಲ್ಲಿ ಆತ್ಮವಿಶ್ವಾಸ, ಮಾಡಿಯೇ ತೀರುತ್ತೇನೆ ಎಂಬ ಹಠ ಇದ್ದರೆ ಎಲ್ಲವನ್ನೂ ಸಾಧಿಸುವುದು ಸಾಧ್ಯ ಎಂಬುದನ್ನು ಅವನಿಗೆ ಮನವರಿಕೆ ಮಾಡಿ ಕೊಡುತ್ತಾನೆ. ಆ ಧೈರ್ಯವೇ ಯುದ್ಧದಲ್ಲಿ ಪಾಂಡವರಿಗೆ ಜಯ ತಂದುಕೊಟ್ಟಿದ್ದು.
ಸದ್ಯ ಆರೋಗ್ಯ ರಕ್ಷಕರೆಂಬ ಅರ್ಜುನರು ಕೊರೋನಾ ಎಂಬ ವೈರಿಯ ಜೊತೆಗೆ ಸಮರ್ಪಕ ಹೋರಾಟ ನಡೆಸಬೇಕು ,ನರಳುತ್ತಿರುವ ರೋಗಿಗಳಲ್ಲಿ ಆತ್ಮವಿಶ್ವಾಸ, ನಾಳೆಯ ಭರವಸೆಯ ಜೊತೆಗೆ ಪೂರಕ ಚಿಕಿತ್ಸೆಯನ್ನು ಆಸ್ಪತ್ರೆ ಎಂಬ ರಣಾಂಗಣದಲ್ಲಿ ನೀಡಬೇಕು. ಸೋಲು ಗೆಲುವಿನ ಲೆಕ್ಕಾಚಾರ ಆ ಬಳಿಕದ್ದು ಎಂಬುದನ್ನು ಆಕ್ಸ್ಫರ್ಡ್ ವಿವಿ ತಿಳಿಸಿದೆ. ತಮ್ಮ, ತಮ್ಮವರ ಕಾಳಜಿಯನ್ನೂ ಕಡೆಗಣಿಸಿ ಕರ್ತವ್ಯ ಪರತೆ ಮೆರೆಯುತ್ತಿರುವವರಿಗೆ ಸಮಾಜವೂ ಸಂಪೂರ್ಣ ಸಹಕಾರ ನೀಡಬೇಕಿದೆ. ಅತ್ಮವಿಶ್ವಾಸವಿದ್ದರಷ್ಟೇ ಸೇವಿಸಿದ ಔಷಧಗಳೂ ಮೈಗೆ ಹತ್ತಲು ಸಾಧ್ಯ ಎಂಬುದೇ ಈ ಮಾತಿನ ತಾತ್ಪರ್ಯ.
ಕೊರೋನಾ ಬರಬಾರದಿತ್ತು. ಆದರೆ ಅಂತಹ ಸ್ಥಿತಿ ಬಂದುಬಿಟ್ಟಿದೆ. ಇದು ಕರ್ಣಾರ್ಜುನರ ನಡುವಿನ ಯುದ್ಧದ ಪರಿಸ್ಥಿತಿ. ಇಲ್ಲಿ ನಮ್ಮ ಮನಸ್ಸೇ ಶ್ರೀಕೃಷ್ಣ. ಮನಸ್ಸು ಹೇಳುವ ಆತ್ಮವಿಶ್ವಾಸವೇ ಭಗವದ್ಗೀತೆಯಾಗಿದೆ. ಕೊರೋನಾದಿಂದ ಬಳಲುವ ಜನರು ವೈದ್ಯರೆಂಬ ಅರ್ಜುನನನ್ನು ನಂಬಿದ್ದಾರೆ. ಯೋಚಿಸುತ್ತಾ ಕೂತರೆ ಪರಿಣಾಮ ಕೆಡುತ್ತದೆ. ಆದ್ದರಿಂದ ಕೂಡಲೇ ಗಮನಹರಿಸಿದಲ್ಲಿ ಸಂಭಾವ್ಯ ಅಪಾಯ ತಡೆದು, ಆರೋಗ್ಯ ಧರ್ಮ ಕಾಪಾಡಲು ಸಾಧ್ಯ. ಒಟ್ಟಿನಲ್ಲಿ ಹೇಳುವುದಾದರೆ ಕೊರೋನಾ ಎಂಬ ಧರ್ಮ ಯುದ್ಧ ಗೆಲ್ಲಲು ಆತ್ಮವಿಶ್ವಾಸವೇ ಭಗವದ್ಗೀತೆ.
ಕೊರೋನಾ ಬರಬಾರದಿತ್ತು. ಆದರೆ ಬಂದುಬಿಟ್ಟಿದೆ. ಇದು ಕರ್ಣಾರ್ಜುನರ ನಡುವಿನ ಯುದ್ಧದ ಪರಿಸ್ಥಿತಿ. ಇಲ್ಲಿ ನಮ್ಮ ಮನಸ್ಸೇ ಶ್ರೀಕೃಷ್ಣ. ಮನಸ್ಸು ಹೇಳುವ ಆತ್ಮವಿಶ್ವಾಸವೇ ಭಗವದ್ಗೀತೆಯಾಗಿದೆ. ಕೊರೋನಾದಿಂದ ಬಳಲುವ ಜನರು ವೈದ್ಯರೆಂಬ ಅರ್ಜುನನನ್ನು ನಂಬಿದ್ದಾರೆ. ಯೋಚಿಸುತ್ತಾ ಕೂತರೆ ಪರಿಣಾಮ ಕೆಡುತ್ತದೆ. ಆದ್ದರಿಂದ ಕೂಡಲೇ ಗಮನಹರಿಸಿದಲ್ಲಿ ಸಂಭಾವ್ಯ ಅಪಾಯ ತಡೆದು, ಆರೋಗ್ಯ ಧರ್ಮ ಕಾಪಾಡಲು ಸಾಧ್ಯ. ಒಟ್ಟಿನಲ್ಲಿ ಹೇಳುವುದಾದರೆ ಕೊರೋನಾ ಎಂಬ ಧರ್ಮ ಯುದ್ಧ ಗೆಲ್ಲಲು ಆತ್ಮವಿಶ್ವಾಸವೇ ಭಗವದ್ಗೀತೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.