ಸ್ವ ಪ್ರಯತ್ನಕ್ಕೆ ಅತಿ ದೊಡ್ಡ ಉದಾಹರಣೆ ಎಂದರೆ ಅದು ಹೆಚ್ಚೆನ್. ಇವತ್ತಿಗೆ ಅವರು ಹುಟ್ಟಿ ಒಂದು ನೂರು ವರ್ಷ.
School dropout ಹುಡುಗನೊಬ್ಬ ಗೌರಿಬಿದನೂರು ಸಮೀಪದ ಹೊಸೂರಿನಿಂದ ನೆಡೆದು ಬಂದು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್ ಸೇರಿ ಅಲ್ಲಿಯೇ ಕಾಲೇಜು ಓದಿ, ಮೇಷ್ಟ್ರಾಗಿ, ಅಮೇರಿಕಾದಲ್ಲಿ ಪಿಹೆಚ್ಡಿ ಮಾಡಿ, ಅದೇ ಕಾಲೇಜಿನಲ್ಲಿ ಪ್ರಿನ್ಸಿಪಾಲಾಗಿ, ವಿಶ್ವವಿದ್ಯಾಲಯದ ಉಪಕುಲಪತಿಯಾಗಿ, ನಿವೃತ್ತಿಯ ನಂತರ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿ, ಕೊನೆಗೆ ಅಧ್ಯಕ್ಷರಾದದ್ದು ವಿಸ್ಮಯದ ಕಥೆ.
ಹೆಚ್. ನರಸಿಂಹಯ್ಯನವರ ಆತ್ಮಕಥೆ – ಹೋರಾಟದ ಹಾದಿ – ಓದಿ ವರ್ಷಗಟ್ಟಳೆ ಅದೇ ಗುಂಗಿನಲ್ಲಿ ಇರುವಂತೆ ಮಾಡಿತ್ತು. ಬೆಂಗಳೂರಿಗೆ ಬಂದಾಗಲೊಮ್ಮೆ ಹೆಚ್ಚೆನ್ ಮೇಷ್ಟ್ರನ್ನು ಹುಡುಕಿಕೊಂಡು ಹೋಗಿದ್ದೆ. ಅವರು ತೋರಿದ ಪ್ರೀತಿ ನನ್ನನ್ನು ಪದೇ ಪದೇ ಅವರಿದ್ದ ನ್ಯಾಷನಲ್ ಕಾಲೇಜಿನ ಹಾಸ್ಟೆಲ್ಲಿಗೆ ಹೋಗುವಂತೆ ಮಾಡಿತು. ಆನಂತರ ನಾನು ಬೆಂಗಳೂರಿಗೆ ಬಂದು ಇರುವಂತಾದದ್ದು ಅವರ ಅಸಂಖ್ಯ ವಿದ್ಯಾರ್ಥಿಗಳಲ್ಲಿ ನಾನೂ ಒಬ್ಬನೇನೊ ಎನ್ನುವಂತೆ ಮಾಡಿತ್ತು.
ನನ್ನ ಆರೆಸ್ಸೆಸ್ ಹಿನ್ನೆಲೆ ಅವರ ಪ್ರೀತಿಯಲ್ಲಿ ಒಂದಿನಿತು ಕಡಿಮೆ ಮಾಡಲಿಲ್ಲ.
ಅವರೇ ಒಮ್ಮೆ ಹೇಳಿದರು – ‘ನಿಮ್ಮ ಹೊ. ವೆ. ಶೇಷಾದ್ರಿ, ನಾನು ಒಟ್ಟಿಗೆ ಓದಿದವರು, ಸೆಂಟ್ರಲ್ ಕಾಲೇಜಿನಲ್ಲಿ ಅವರದ್ದು ಕೆಮಿಸ್ಟ್ರಿ, ನಂದು ಫಿಸಿಕ್ಸು’ – ಅಷ್ಟು ಸಾಕಾಯಿತು ಹೆಚ್ಚೆನ್ ಅವರನ್ನು ಕೇಶವಕೃಪಾಕ್ಕೆ ಕರೆತರಲು …
ದೇಶದುದ್ದಗಲಕ್ಕೆ ಅನುದಿನವೂ ಊರೂರು ತಿರುಗುವ ಶೇಷಾದ್ರಿರವರಿಗೂ ಅವತ್ತು ಹಳೆಯ ಗೆಳೆಯನನ್ನು ಕಾಣುವ ಸಂಭ್ರಮ.
ಅವತ್ತು ಗೆಳೆಯರಿಬ್ಬರ ಭರ್ಜರಿ ಹರಟೆ. ಮಧ್ಯಾಹ್ನದ ಊಟ, ಮುದ್ದೆ – ಸೊಪ್ಪಿನ ಸಾರು. ಹೆಚ್ಚೆನ್ ಖುಷಿಪಟ್ಟರು. ಅಡುಗೆ ಮನೆಗೆ ತೆರಳಿ ಪರಿಚಯ ಮಾಡಿಕೊಂಡರು. ನಾನು ಆಗಾಗ ಊಟಕ್ಕೆ ಬರಬಹುದೇನಪ್ಪ ಎಂದು ಅಡುಗೆಯ ಮಣಿವಣ್ಣನ ಹೆಗಲು ಸವರಿದ್ದರು.
ಮತ್ತೊಂದು ದಿನ ಮೇಷ್ಟ್ರನ್ನ ಕೇಳಿದೆ ‘ನಿಮ್ಮ ಜೀವನದಲ್ಲಿ ನಿರ್ಣಾಯಕ ಘಳಿಗೆ ಅಂದ್ರೆ ಯಾವುದದು ?’
‘1942 – ಚಲೇಜಾವ್ ಚಳವಳಿ, ಬಿಎಸ್ಸಿ ಓದ್ತಾ ಇದ್ದೆ, ಮನಸ್ಸಿನಲ್ಲಿ ಹೊಯ್ದಾಟ, ಚಳವಳಿಗೆ ಹೋಗಬೇಕು, ಹೋದರೆ, ಜೈಲು ಸೇರಬೇಕಾಗುತ್ತೆ, ಕ್ಲಾಸು, ಪರೀಕ್ಷೆ ಗೋತಾ. ಮುಂದೆ ಮೇಷ್ಟ್ರು ಆಗುವ ಕನಸಿಗೂ ಕಲ್ಲು ಬೀಳುತ್ತೆ. ಏನಾದರಾಗಲಿ ಎಂದು ಚಳವಳಿಗೆ ಹೋದೆ. ಜೈಲು ಸೇರಿ ವರ್ಷ ಕಳ್ಕೊಂಡೆ. ಆವತ್ತಿನ ನಿರ್ಧಾರ ನನ್ನ ಮಟ್ಟಿಗೆ ಅದು ನಿರ್ಣಾಯಕ’ ಹೆಚ್ಚೆನ್ ವಿವರಿಸಿದ್ದರು.
‘ಯಾವಾಗ ಕಳೆದುಕೊಳ್ಳುವುದನ್ನು ಕಲಿತೆನೋ ಆನಂತರ ಜೀವನದಲ್ಲಿ ದುಃಖ ಸುಳಿಯಲಿಲ್ಲ !’
ಅವತ್ತೊಂದಿನ ಆಗ ಕನ್ನಡಪ್ರಭದಲ್ಲಿದ್ದ ಗೆಳೆಯ ರವಿಪ್ರಕಾಶರವರನ್ನು ಕರೆದುಕೊಂಡು ಮೇಷ್ಟ್ರ ಹತ್ತಿರ ಹೋಗಿದ್ದೆ. ಆಗ ಸೋನಿಯಾ ಪ್ರಧಾನಿಯಾಗೋ ವಿಷಯ ಜೋರು ಚರ್ಚೆಯಲ್ಲಿತ್ತು. ಅದೇ ವಿಷಯವನ್ನು ರವಿಪ್ರಕಾಶ್ ಕೇಳಿದರು. ‘ನಮ್ಮ ಕಾಲೇಜಿನ ಅಟೆಂಡರ್ ರಾಮಣ್ಣ ಈ ದೇಶದ ಪ್ರಧಾನಿ ಆಗಬಹುದು, ಸೋನಿಯಾ ಆಗಕೂಡದು. ಸ್ವಾತಂತ್ರ್ಯದ ಹೋರಾಟ ಮಾಡಿದ್ದಾದರು ಏತಕ್ಕೆ ? ಮತ್ತೆ ಅವರನ್ನೇ ತಂದು ಕೂಡಿಸುವುದಕ್ಕಾ ?’ ಮೇಷ್ಟ್ರು ಗುಡುಗಿದ್ದರು.
‘ಆ ಗಾಂಧಿನೇ ಬೇರೆ – ಈ ಗಾಂಧಿಗಳೇ ಬೇರೆ’ ಈ ಸ್ಪಷ್ಟತೆ ಇದ್ದ ಒಬ್ಬನೆ ಗಾಂಧಿವಾದಿ ಅಂದ್ರೆ ಅದು ಹೆಚ್ಚೆನ್ ಮಾತ್ರ.
ಮತ್ತೊಂದ್ಸಲ ಬದುಕಿನ ಸಾರ್ಥಕತೆಯ ಬಗ್ಗೆ ಕೇಳಿದೆ.
‘ನನ್ನನ್ನ ತುಂಬಾ ಹೊಗಳ್ತಾರಪ್ಪ ಆದರೆ ಯಾರು ಅನುಸರಿಸಲ್ಲ, ಆದರೆ ನಿಮ್ಮಲ್ಲಿ ಹಾಗಲ್ಲ, ನೀವ್ಯಾರು ಶೇಷಾದ್ರಿನ ಹೊಗಳಲ್ಲ, ಅದರೆ ಅನುಸರಿಸುತ್ತೀರ, ಅದೇ ನಿಜವಾದ ಸಾರ್ಥಕತೆ ಅನ್ಸುತ್ತೆ’
ದಿನಗಳೆದಂತೆ ಮೇಷ್ಟ್ರು ಸೊರಗಿದರು. ಅವತ್ತು ಸಂಜೆ 7 ಕ್ಕೆ ಹಾಸ್ಟೆಲ್ಗೆ ಹೋದಾಗ ಮೇಷ್ಟ್ರು ಊಟ ಸಾಗಿತ್ತು. ನಡುಗುತ್ತಿದ್ದ ಕೈನಿಂದಾಗಿ ಚಮಚದಲ್ಲಿ ತಿನ್ನುವುದೂ ಕಷ್ಟವಾಗಿತ್ತು. ಅನ್ನ ಮೈಮೇಲೆ ಬೀಳುತ್ತಿತ್ತು. ನಡುಗುವ ಕೈ ಹಿಡಿದು ಸಹಾಯ ಮಾಡಿದೆ. ‘ವಯಸ್ಸಾಗಿ ಬಿಟ್ಟರೆ back to childhood’ ಹೆಚ್ಚೆನ್ ಸಣ್ಣ ಧ್ವನಿಯಲ್ಲಿ ಹೇಳಿದ್ದರು.
ಕೆಲವೇ ದಿನ ಮೇಷ್ಟ್ರು ಆಸ್ಪತ್ರೆ ಸೇರಿರೋ ಸುದ್ದಿ ಬಂತು. ಅಶೋಕಾ ಪಿಲ್ಲರ್ ಹತ್ತಿರದ ಮಯ್ಯಾ ಆಸ್ಪತ್ರೆ. ಅವರ ಶಿಷ್ಯನದೇ. ICU ನಲ್ಲಿದ್ದ ಮೇಷ್ತ್ರನ್ನ ಕಿಟಿಕಿಯಿಂದ ನೋಡಿದ್ದಷ್ಟೆ.
ಅವತ್ತು ಜನವರಿ 31, 2005 ಬೆಳಗಿನ ಜಾವ ಸುದ್ದಿ ಬಂತು ‘ಹೆಚ್ಚೆನ್ ತೀರಿಕೊಂಡರು’
ಶೇಷಾದ್ರಿ ವೀಲ್ ಚೇರ್ನಲ್ಲಿ ಬಂದರು ಗೆಳೆಯನ ಪಾರ್ಥಿವ ಶರೀರ ನೋಡಲು. ಅಸಾಧ್ಯ ಜನಸಾಗರ. ಮೈಲುದ್ದದ ಸಾಲು.
ವಾಪಸ್ ಬಂದಾಗ ಶೇಷಾದ್ರಿ ಮೆಲುದನಿಯಲ್ಲಿ ಹೇಳಿದರು. ‘ ಜೀವನದಲ್ಲಿ ಆದ್ರೆ ಮೇಷ್ಟ್ರಾಗಬೇಕಾಪ್ಪ, ಅದೂ ನಮ್ಮ ನರಸಿಂಹಯ್ಯನ ಥರ ‘
* * * * *
ಮತ್ತೊಂದೆರಡು ದಿನ ಬಿಟ್ಟು ಮಯ್ಯಾ ಆಸ್ಪತ್ರೆಗೆ ಹೋಗಿ ಡಾಕ್ಟರ್ರನ್ನು ಕೇಳಿದೆ. ‘ಮೇಷ್ಟ್ರು ಕೊನೆ ಮಾತು ಅಂತ ಏನು ಹೇಳಿದ್ರು ? ‘
ಸಾಯೋ ಎರಡು ದಿನ ಮುಂಚೆ ICU ನಲ್ಲಿದ್ದ ಮೇಷ್ಟ್ರು ಹತ್ತಿರ ಕರೆದರು. ಮೂಗಿಗೆ, ಕೈಗೆ ಕಟ್ಟಿದ ನಾಲ್ಕಾರು ನಳಿಕೆಗಳನ್ನು ಕಣ್ಣಲ್ಲೇ ತೋರಿಸುತ್ತಾ ‘ಏನಪ್ಪಾ ಸ್ವಲ್ಪ ಜಾಗ ಮಾಡು, ಏನೇನೋ ಕಟ್ಟಿಬಿಟ್ಟಿದ್ದಿಯಾ. ಇಲ್ಲಿ ಪ್ರಾಣ ಹೋಗೋಕು ಜಾಗ ಇಲ್ಲ !’
ಇಂತಹ ಕೊನೆಮಾತನ್ನು ಹೆಚ್ಚೆನ್ ಮಾತ್ರ ಹೇಳಬಲ್ಲರು.
✍️ ವಾದಿರಾಜ್ , ಬೆಂಗಳೂರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.