ಸಾವರ್ಕರ್ ಅವರ ಜನ್ಮದಿನದ ನಿಮಿತ್ತವಾಗಿ ರಾಜ್ಯ ಬಿಜೆಪಿ ಸರ್ಕಾರ ಬೆಂಗಳೂರಿನ ಯಲಹಂಕ ಬಳಿಯ ಮೇಲ್ಸೇತುವೆಯೊಂದಕ್ಕೆ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರರ ಹೆಸರನ್ನು ಇಡುವುದಾಗಿ ನಿರ್ಧರಿಸಿತ್ತು. ಇದು ತಿಳಿದದ್ದೇ ತಡ ಸಿದ್ದರಾಮಯ್ಯ ಸಹಿತ ಬಿಜೆಪಿ ವಿರೋಧಿಗಳಿಗೆ ಒಂದು ಅಸ್ತ್ರ ಸಿಕ್ಕಂತಾಯಿತು. ಯಡಿಯೂರಪ್ಪ ಸರ್ಕಾರದ ಮೇಲೆ ಮುಗಿಬೀಳತೊಡಗಿದರು. ಇವರಿಗೆ ಕೆಲವು ನಾಮಕಾವಸ್ಥೆಯ ಕನ್ನಡ ಸಂಘಟನೆಗಳು ಕೂಡಾ ಬೆಂಬಲ ಸೂಚಿಸಿದವು. ನಮ್ಮ ರಾಜ್ಯದ ರಸ್ತೆಗೆ ಹೊರಗಿನವರ ಹೆಸರು ಬೇಡ, ನಮ್ಮ ಮಣ್ಣಿನ ಸಾಧಕರ ಹೆಸರು ಇಡಬೇಕೆಂಬುದು ಇವರುಗಳ ವಾದ. ಇವರ ವಾದಕ್ಕೆ ಇವರದೇ ದಾರಿಯಲ್ಲಿ ಉತ್ತರಿಸುವುದೇ ಸೂಕ್ತ.
ಏನಾಗಿದೆ ಈ ಮಾಜಿ ಮುಖ್ಯಮಂತ್ರಿಗಳಿಗೆ ?
ಯಲಹಂಕ ಮೇಲ್ಸೇತುವೆಗೆ ಈ ಮಣ್ಣಿನ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನಿಡಿ ಎಂದು ಸಿದ್ದರಾಮಯ್ಯ ಹೇಳುತ್ತಾರೆ, ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಬೇರೆ ರಾಜ್ಯದವರು ಇಟ್ಟಿಲ್ಲ, ಹೀಗಾಗಿ ಅನ್ಯ ರಾಜ್ಯದ ಹೋರಾಟಗಾರರ ಹೆಸರನ್ನು ನಮ್ಮ ರಾಜ್ಯದಲ್ಲಿ ಇಡಬಾರದೆಂದು ಕುಮಾರಸ್ವಾಮಿಯವರು ಹೇಳುತ್ತಾರೆ. ನಿಜಕ್ಕೂ ಏನಾಗಿದೆ ಈ ಮಾಜಿಗಳಿಗೆ..? ಉತ್ತರ ಒಂದೇ, ರಾಜಕೀಯ. ಇವರು ಮಾಡಿದ್ದಾದರೂ ಏನು? ಜನರ ತೆರಿಗೆಯಲ್ಲಿ ಸರ್ಕಾರದ ಖರ್ಚಿನಿಂದ ನಡೆಸುವ ಕ್ಯಾಂಟಿನ್ಗೆ ಅಂದು ಸಿದ್ದರಾಮಯ್ಯ ಸರ್ಕಾರ, ಕಾಂಗ್ರೆಸ್ ನಾಯಕಿಯಾಗಿದ್ದ ಇಂದಿರಾ ಗಾಂಧಿಯವರ ಹೆಸರು ಇಟ್ಟಿದ್ದರು. ಅವಾಗ ಇವರಿಗೆ ನಮ್ಮ ರಾಜ್ಯದ ಹೋರಾಟಗಾರರು ಕಣ್ಣಿಗೆ ಕಾಣಲಿಲ್ಲವೇ? ಪಕ್ಷದ ರಾಜ್ಯ ಕಛೇರಿಗೆ ಜೆ.ಪಿ. ಭವನ ಎಂಬ ಉತ್ತರದವರ ಹೆಸರನ್ನು ಇಡುವಾಗ ಕುಮಾರಸ್ವಾಮಿಗೇಕೆ ಈ ಮಣ್ಣಿನ ಮಕ್ಕಳು ನೆನಪಾಗಲಿಲ್ಲ?
ಸಾವರ್ಕರ್ ಅವರ ಹೆಸರೇ ಅತಿಸೂಕ್ತ !
ಯಲಹಂಕ ಫ್ಲೈಓವರ್ಗೆ ಸಾವರ್ಕರ್ ಹೆಸರಿಡುವ ರಾಜ್ಯ ಬಿಜೆಪಿ ಸರ್ಕಾರದ ನಿರ್ಧಾರ ಅತ್ಯಂತ ಸಮರ್ಥನೀಯವಾದದ್ದು. ದೇಶದ ಸ್ವಾತಂತ್ರ್ಯದ ಕಿಚ್ಚೊಂದಕ್ಕೆ ಅವರ ಜನ್ಮದಿನದಂದು ನೀಡುವ ಯೋಗ್ಯ ಗೌರವವಿದು. ರಾಜ್ಯದ ಮೂಲೆ ಮೂಲೆಯಲ್ಲಿ ಕಾಂಗ್ರೆಸ್ ನಾಯಕರ ಹೆಸರಿನಲ್ಲಿ ಸರ್ಕಾರಿ ರಸ್ತೆ, ಉದ್ಯಾನವನ, ಆಸ್ಪತ್ರೆ, ಹೋಟೇಲ್, ಮೈದಾನಗಳು ಇವೆ. ಅವಾಗೆಲ್ಲ ರಾಜ್ಯದ ಜನರ ಬಗ್ಗೆ ಚಿಂತಿಸದ ವಿರೋಧ ಪಕ್ಷಗಳು ಈಗ ಅಧಿಕಾರವಿಲ್ಲದ ಕಾರಣದಿಂದ ಬಿಜೆಪಿಯ ಪ್ರತೀ ನಡೆಗಳಿಗೆ ವಿರೋಧ ವ್ಯಕ್ತಪಡಿಸುತ್ತಿದೆ. ಕೆಲವು ತಾಂತ್ರಿಕ ಕಾಣ ನೀಡಿ ಕಾರ್ಯಕ್ರಮವನ್ನು ಸರ್ಕಾರ ಮುಂದಕ್ಕೆ ಹಾಕಿದೆ. ಆದರೆ ಯಾವುದೇ ಕಾರಣಕ್ಕೂ ಸರ್ಕಾರ ತನ್ನ ನಿಲುವಿನಿಂದ ಹಿಂದಕ್ಕೆ ಸರಿಯಬಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.