ಲಾಕ್ಡೌನ್ನಿಂದಾಗಿ ಇಡೀ ದೇಶವೇ ಸ್ತಬ್ಧವಾಗಿದೆ. ದೇಶದ ಆರ್ಥಿಕತೆ ಕುಸಿತವಾಗಿದೆ. ಮಧ್ಯಮ, ಬಡ ವರ್ಗದ ಜನರು ದುಡಿಯಲು ಕೆಲಸವಿಲ್ಲದೆ, ಹೊಟ್ಟೆಗೆ ಅನ್ನವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ವಲಸಿಗ ಕಾರ್ಮಿಕರ ಪಾಡಂತೂ ದೇವರಿಗೇ ಪ್ರೀತಿ ಎಂಬಂತಾಗಿದೆ. ಇಂತಹ ಕಠಿಣ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಭಾರತಿ ಸೇವಾ ಸಂಘದ ಸ್ವಯಂಸೇವಕರು ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ವಲಸಿಗ ಕಾರ್ಮಿಕರ ಸೇವೆಗೆ ಟೊಂಕಕಟ್ಟಿ ನಿಂತಿದ್ದಾರೆ.
ಬಿಎಸ್ಎಸ್ ಸ್ವಯಂಸೇವಕರು ಕಮ್ಯೂನಿಟಿ ಕಿಚನ್ ಮೂಲಕ ತಯಾರಿಸುತ್ತಿರುವ ಆಹಾರವನ್ನು ಚೆನ್ನೈನಲ್ಲಿ ಬಾಕಿಯಾಗಿರುವ ವಲಸಿಗ ಕಾರ್ಮಿಕರಿಗೆ ತಲುಪಿಸುವ ಕೆಲಸವನ್ನು ಕಳೆದ 45 ದಿನಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಕೇವಲ ಚೆನ್ನೈ ನಗರದಲ್ಲಿ ಮಾತ್ರವೇ ಈ ವರೆಗೆ ಸುಮಾರು 6,12,000 ಜನರಿಗೆ ಈ ಸ್ವಯಂಸೇವಕರು ಆಹಾರ ತಯಾರಿಸಿ ನೀಡಿದ್ದಾರೆ. ಆ ಮೂಲಕ ಹಸಿದ ಹೊಟ್ಟೆಗೆ ಅನ್ನ.ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ಆ ಕಾರ್ಯವನ್ನು ಇಂದಿಗೂ ಮುಂದುವರಿಸಿಕೊಂಡೇ ಬಂದಿದ್ದಾರೆ.
ಜೊತೆಗೆ ಚೆನ್ನೈನಲ್ಲಿ ದಿನಗೂಲಿ ಸಂಬಳದ ಆಧಾರದಲ್ಲಿ ದಿನಕ್ಕೆ 250 ರೂ. ಗಳನ್ನು ಮಾತ್ರವೇ ಸಂಪಾದಿಸುವ, ಆ ಮೂಲಕವೇ ತಮ್ಮ ಕುಟುಂಬವನ್ನು ಸಲಹುವ ಇತರ ರಾಜ್ಯದ ವಲಸಿಗ ಕಾರ್ಮಿಕರಿಗೆ ದಿನಸಿ ಸಾಮಗ್ರಿಗಳನ್ನು ನೀಡುವ ಮೂಲಕವೂ RSS ಮತ್ತು BSS ಸಮಾಜಸೇವೆಯನ್ನು ಮಾಡುತ್ತಿದೆ. ಈ ವರೆಗೆ ಪೊರೂರ್, ಚೆನ್ನೈಗಳಲ್ಲಿ ವಾಸವಿರುವ ಸುಮಾರು 500 ಕ್ಕೂ ಅಧಿಕ ವಲಸಿಗ ಕುಟುಂಬಗಳಿಗೆ ಈ ಸ್ವಯಂಸೇವಕರು ಆಹಾರ ಕಿಟ್ಗಳನ್ನು ವಿತರಿಸಿದ್ದಾರೆ. ಆ ಮೂಲಕ ಅವರ ಹಸಿವು ತೀರಿಸುವ ಕೆಲಸ ಮಾಡಿದ್ದಾರೆ. ಮಾಡಲು ಕೆಲಸವಿಲ್ಲದೆ, ಕೈಯಲ್ಲಿ ಕಾಸಿಲ್ಲದೆ ಕಂಗಾಲಾಗಿದ್ದ ಕುಟುಂಬಗಳಿಗೆ ಆಹಾರ ವಿತರಿಸುವ ಮೂಲಕ ಅವರ ಕಣ್ಣೀರೊರೆಸಿದ್ದಾರೆ.
ಚೆನ್ನೈ ಮಾತ್ರವಲ್ಲದೆ ಇತರ ಪ್ರದೇಶಗಳ ವಲಸಿಗ ಕಾರ್ಮಿಕರ ಬಗೆಗೂ ಕಾಳಜಿ ಹೊಂದಿರುವ ಸ್ವಯಂಸೇವಕರು, ಗ್ರೇಟರ್ ಚೆನ್ನೈನ ಸಲಹೆಯಂತೆ ಸುಮಾರು 8500 ಜನರಿಗೆ 2000 ಕ್ಯಾಲರಿಗಳ ಆಹಾರವನ್ನು ಮಧ್ಯಾಹ್ನ ಮತ್ತು ರಾತ್ರಿಯ ವೇಳೆಯಲ್ಲಿ ನೀಡುವ ಅದ್ಭುತ ಕೆಲಸವನ್ನು ಮಾಡುತ್ತಿದೆ.
ಜೊತೆಗೆ ವಲಸಿಗ ಕಾರ್ಮಿಕರಿಗೆ ಚೆನ್ನೈನಿಂದ ತಮ್ಮ ಸ್ವಸ್ಥಾನಗಳಿಗೆ ತೆರಳಲು ಬೇಕಾದ ಪ್ರಯಾಣದ ವ್ಯವಸ್ಥೆಯನ್ನು ಮಾಡುವ ನಿಟ್ಟಿನಲ್ಲಿಯೂ RSS ಸ್ವಯಂಸೇವಕರು ಶ್ರಮಿಸುತ್ತಿದ್ದಾರೆ. ನಾರ್ತ್ ಈಸ್ಟ್ನ ಸುಮಾರು 200 ವಲಸಿಗರ ಕುಟುಂಬಕ್ಕೆ ತೆರಳಲು ಬಸ್ಸುಗಳ ವ್ಯವಸ್ಥೆಯನ್ನೂ ಸಂಘದ ಸ್ವಯಂಸೇವಕರು ಮಾಡಿದ್ದು, ಆ ಮೂಲಕ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದ್ದಾರೆ. ಜೊತಗೆ ಶ್ರಮಿಕ್ ರೈಲುಗಳಲ್ಲಿ ಪ್ರಯಾಣಿಸುವ ಸುಮಾರು 15,000 ವಲಸಿಗ ಕಾರ್ಮಿಕರಿಗೆ ಆಹಾರವನ್ನು ಸಹ ಒದಗಿಸಿಕೊಡುವ ಮೂಲಕ ಜನರ ಸೇವೆಯನ್ನು RSS, BSS ಗಳು ಜಂಟಿಯಾಗಿ ಮಾಡಿವೆ.
ಭಾರತಿ ಸೇವಾ ಸಂಘವು ಚೆನ್ನೈನ 500 ಕುಟುಂಬಗಳಿಗೆ ಆಹಾರದ ಕಿಟ್ಗಳನ್ನು ನೀಡಿದ್ದು ಮಾತ್ರವಲ್ಲದೆ, ವಲಸಿಗ ಕಾರ್ಮಿಕರಲ್ಲಿ ಅಗತ್ಯವುಳ್ಳವರಿಗೆ ವೈದ್ಯಕೀಯ ನೆರವು ನೀಡುವಲ್ಲಿಯೂ ಸಹಾಯಹಸ್ತವನ್ನು ಚಾಚಿದೆ. ಜೊತೆಗೆ ಬೇರೆ ರಾಜ್ಯದಿಂದ ಬಂದ ಆರೋಗ್ಯ ರಕ್ಷಣಾ ಸಿಬ್ಬಂದಿಗಳಿಗೂ ಆಹಾರದ ವ್ಯವಸ್ಥೆಯನ್ನು ಮಾಡುವ ಮೂಲಕ ಸರ್ವೇ ಜನಾಃ ಸುಖಿನೋ ಭವಂತು ಮಂತ್ರವನ್ನು ಪಠಿಸಿದೆ. ಜನರ ಸೇವೆಯೇ ಭಗವಂತನ ಸೇವೆ ಎಂಬ ಮಾತನ್ನು ಕಾರ್ಯರೂಪಕ್ಕೆ ಇಳಿಸಿದೆ. ಸುಮಾರು 450 ಮಂದಿ ಆರೋಗ್ಯ ಕಾರ್ಯಕರ್ತರು ಇವರಿಂದ ನೆರವು ಪಡೆದುಕೊಂಡಿದ್ದಾರೆ.
ಇನ್ನು ಚೆನ್ನೈನಲ್ಲಿ ವೈಷ್ಣವಿ ಕ್ಯಾಟರಿಂಗ್ ಕಮ್ಯೂನಿಟಿ ಕಿಚನ್ನ ಮೂಲಕ ವಲಸಿಗರ ಸೇವೆ ಸಲ್ಲಿಸುತ್ತಿದ್ದ RSS ಸ್ವಯಂಸೇವಕ ಮಣಿಕಂಠನ್ ಎಂಬವರಿಂದ ಆಹಾರ ಪಡೆದ ತ್ರಿಪುರಾದ ಮಹಿಳೆ, ಆಗ ತಾನೆ ಹುಟ್ಟಿದ ತಮ್ಮ ಗಂಡು ಮಗುವಿಗೆ ಮಣಿಕಂಠನ್ ಎಂದೇ ಹೆಸರಿಡುವ ಮೂಲಕ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಭಾರತಿ ಸೇವಾ ಸಂಘದ ನಿಸ್ವಾರ್ಥ ಸೇವೆಗೆ ಸಮರ್ಪಕವಾದ ಗೌರವವನ್ನು ನೀಡಿದ್ದಾರೆ.
ಸಂಘವೆಂದರೆ ಹಾಗೆ. ಇಲ್ಲಿ ನಾನು, ನನ್ನದು ಎನ್ನುವುದಕ್ಕಿಂತ, ನಾವೆಲ್ಲರೂ ಎನ್ನುವುದು ಮುಖ್ಯ. ಇಲ್ಲಿ ಯಾರೂ ಮೇಲೂ ಅಲ್ಲ, ಕೀಳೂ ಅಲ್ಲ. ಬಡವನಾಗಲಿ, ಶ್ರೀಮಂತನಾಗಲಿ ಸಂಘದ ಮುಂದೆ ಎಲ್ಲರೂ ಸಮಾನರು. ಇಂತಹ ಸಮಾನತೆ, ಮಾನವೀಯತೆಯ ತತ್ವಗಳೇ ಸಂಘವನ್ನು ಇಂದು ವಿಶ್ವವ್ಯಾಪಿ ಮನ್ನಣೆ ಪಡೆಯುವಂತೆ ಮಾಡಿರುವುದು ಎಂದರೂ ಅದು ಅತಿಶಯೋಕ್ತಿಯಾಗಲಾರದು.
Source : Organiser
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.