ಕೊರೋನಾ ವೈರಸ್ ಕಾರಣದಿಂದ ಇಡೀ ಭಾರತವೇ ಲಾಕ್ಡೌನ್ ಆಗಿದೆ. 130 ಕೋಟಿ ಜನಸಂಖ್ಯೆ ಇರುವ ಭಾರತದಂತಹ ರಾಷ್ಟ್ರದಲ್ಲಿ ಕೊರೋನಾದಂತಹ ಸಮಸ್ಯೆಯನ್ನು ಬಗೆಹರಿಸಬೇಕೆಂದಾದಲ್ಲಿ ಅದು ಸಾಮಾನ್ಯ ವಿಚಾರವಲ್ಲ. ಅದಕ್ಕೆ ಕಠಿಣ ಕಾನೂನು ಕ್ರಮ, ನಿಯಂತ್ರಣ ಕ್ರಮಗಳ ಅವಶ್ಯಕತೆ ತುಂಬಾ ಅಗತ್ಯ. ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಲಾಕ್ಡೌನ್ ಕ್ರಮ ಜಾರಿಗೊಳಿಸಿತು. ಇಂತಹ ಸಂದರ್ಭದಲ್ಲಿ ದೇಶದ ಆರ್ಥಿಕತೆಗಿಂತ, ಜನರ ಆರೋಗ್ಯ ಮುಖ್ಯ ಎಂಬುದನ್ನು ಮನಗಂಡು ಈ ಕ್ರಮವನ್ನು ಸರ್ಕಾರ ಜಾರಿಗೊಳಿಸಿತು.
ಬೇರೆ ದಾರಿ ಇಲ್ಲದೆ ಕೇಂದ್ರ ತೆಗೆದುಕೊಂಡ ಈ ನಿರ್ಧಾರದಿಂದ ಜನರಿಗೂ ತೊಂದರೆಯಾಗುವ ಸಾಧ್ಯತೆ ಇತ್ತು. ಆದರೆ ಜನಸ್ನೇಹಿ ಸರ್ಕಾರ ಮತ್ತು ದೇಶದ ಯುವ ಪಡೆಗಳ ಅತ್ಯದ್ಭುತ ಕಾರ್ಯಾಚರಣೆಯ ಕಾರಣದಿಂದ ಬಡವರು, ಅಶಕ್ತರಿಗೆ, ರೋಗಿಗಳಿಗೆ ಲಾಕ್ಡೌನ್ ಪ್ರಭಾವ ಹೆಚ್ಚು ತಟ್ಟಲಿಲ್ಲ. ಆರ್ಥಿಕ ಸ್ಥಿತಿಗತಿ ಪಾತಾಳ ಕಂಡರೂ ಸರ್ಕಾರ ಬಡವರಿಗಾಗಿ ಘೋಷಿಸಿದ ಸಹಾಯಕ ಕ್ರಮಗಳು ಮತ್ತು ಅವುಗಳನ್ನು ಸಮರ್ಥವಾಗಿ ಅವಶ್ಯಕತೆ ಇರುವವರಿಗೆ ತಲುಪಿಸುವಲ್ಲಿ ದೇಶದ ಹೆಚ್ಚಿನ ಯುವಜನರ ಸ್ವಯಂ ಪ್ರೇರಿತ ಶ್ರಮ ದೇಶವನ್ನು ಯುಪಪಡೆ ಸಮರ್ಥವಾಗಿ ಕಟ್ಟಬಲ್ಲದು ಎಂಬ ನಿದರ್ಶನವನ್ನು ಸಾರಿತು.
ಹಲವು ವರ್ಷಗಳ ಹಿಂದೆ ಬಂಗಾಳದ ಬರಗಾಲದ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರು ಬರೆದ ಪ್ಲ್ಯಾಗ್ ಮ್ಯಾನಿಫೆಸ್ಟೋ ಲೇಖನವನ್ನು ಈ ಲಾಕ್ಡೌನ್ ಸಂದರ್ಭದಲ್ಲಿ ಆರ್ಗನೈಸರ್ ಮತ್ತೆ ಪ್ರಕಟ ಮಾಡಿತು. ಅದರಲ್ಲಿ ವಿವೇಕಾನಂದರು ಯುವಶಕ್ತಿಯ ಕಾರಣದಿಂದ ಸಬಲ, ಸದೃಢ ರಾಷ್ಟ್ರ ನಿರ್ಮಾಣ ಹೇಗೆ ಸಾಧ್ಯವಾಗುತ್ತದೆ ಎಂಬುದನ್ನು ಬರೆದಿದ್ದರು. ಅದರಲ್ಲಿ ಸ್ವಾಮೀಜಿ ವ್ಯಕ್ತಪಡಿಸಿದ ಆಶಯಗಳಂತೆಯೇ, ಇಂದಿನ ಕೊರೋನಾ ಸಂಕಷ್ಟದ ಸಂದರ್ಭದಲ್ಲಿಯೂ ಭಾರತದ ಹೆಚ್ಚಿನ ಯುವ ಜನರು ಬಡವರು, ನಿರ್ಗತಿಕರಿಗೆ ಸಹಾಯ ಮಆಡುವ ಮೂಲಕ ರಾಷ್ಟ್ರ ಚಿಂತನೆ, ದೇಶ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಿರುವುದು ಕಂಡು ಬರುತ್ತಿದೆ. ಆ ಮೂಲಕ ಭವ್ಯ ಭಾರತದ ನಿರ್ಮಾಣದಲ್ಲಿ ಯುವ ಪಡೆಯ ಪಾತ್ರ ಎಷ್ಟು ಮುಖ್ಯ ಎಂಬುದು ಸಾಬೀತಾಗಿದೆ.
ದೇಶದಲ್ಲಿ ಲಾಕ್ಡೌನ್ ಘೋಷಣೆಯಾದ ಮರು ದಿನದಿಂದಲೇ ಆರೆಸ್ಸೆಸ್, ಎನ್ಸಿಸಿ ಸೇರಿದಂತೆ ಇನ್ನಿತರ ಸಂಘಟನೆಗಳು ದೇಶದ ಜನರ ಸಹಾಯಕ್ಕೆ ಟೊಂಕಕಟ್ಟಿ ನಿಂತರು. ಆಹಾರ ಇಲ್ಲದವರಿಗೆ ಆಹಾರ ತಲುಪಿಸುವುದು, ನಿರ್ಗತಿಕರಿಗೆ ವಸತಿ, ವಲಸಿಗರಿಗೆ ತಂಗುವ ವ್ಯವಸ್ಥೆಯ ಜೊತೆಗೆ ಆಹಾರ ವ್ಯವಸ್ಥೆ, ಬಡವರಿಗೆ ಆಹಾರ ವಿತರಣೆ, ರೋಗಿಗಳಿಗೆ ಔಷಧ ತಲುಪಿಸುವ ಕೆಲಸ ಹೀಗೆ ಹತ್ತು ಹಲವು ಜವಾಬ್ದಾರಿಗಳನ್ನು ಸ್ವಯಂಪ್ರೇರಿತರಾಗಿ ಹೆಗಲಿಗೇರಿಸಿಕೊಂಡು ಆರೋಗ್ಯಪೂರ್ಣ ದೇಶ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಸರ್ಕಾರದ ಯೋಜನೆಗಳನ್ನು ಸಮರ್ಥವಾಗಿ ಅವಶ್ಯಕತೆ ಇರುವವರಿಗೆ ತಲುಪಿಸುವ ಕೆಲಸ ಮಾಡುತ್ತಾರೆ. ತಮ್ಮ, ತಮ್ಮ ಕುಟುಂಬದ ಆರೋಗ್ಯ ಕಾಳಜಿಯನ್ನು ಬದಿಗಿಟ್ಟು ದೇಶ ಮೊದಲು ಎಂಬುದಾಗಿ ಕಾರ್ಯ ನಿರ್ವಹಿಸುವ ಮೂಲಕ ಲಾಕ್ಡೌನ್ನ ಬಿಸಿ ಸಮಾಜದ ಬಡ ಜನರಿಗೆ ತಟ್ಟದಂತೆ ನೋಡಿಕೊಳ್ಳುವ ಮೂಲಕ ದೇಶಕ್ಕೆ ಯುವಕರು ಎಷ್ಟು ಮುಖ್ಯ ಎಂಬುದನ್ನು ಸಾರುವ ಕೆಲಸ ಮಾಡುತ್ತಾರೆ.
ಎಬಿವಿಪಿ 610 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ, 11464 ಸ್ಥಳಗಳಲ್ಲಿ 104247 ಸ್ವಯಂಸೇವಕರ ಸಹಾಯದಿಂದ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ. 4800 ಎಬಿವಿಪಿ ಸ್ವಯಂಸೇವಕರು ವಿವಿಧ ರಾಜ್ಯಗಳಲ್ಲಿ ರಕ್ತದಾನ ಮಾಡಿದ್ದಾರೆ ಮತ್ತು ಎಬಿವಿಪಿಯ ಎಲ್ಲಾ ರಾಜ್ಯ ಘಟಕಗಳು ಪಿಎಂ ಕೇರ್ಸ್ ನಿಧಿಯಲ್ಲಿ 88,50,613 ರೂ. ಇಲ್ಲಿಯವರೆಗೆ, ಎಬಿವಿಪಿ 65741 ಸಹಾಯವಾಣಿ ಕರೆಗಳಿಗೆ ಹಾಜರಾಗಿದ್ದು, 13,29,551 ಫಲಾನುಭವಿಗಳಿಗೆ ಪಡಿತರ ಕಿಟ್ ಮತ್ತು ಆಹಾರವನ್ನು ವಿತರಿಸಿದೆ.
ಅಲ್ಲದೆ ಅದೆಷ್ಟೋ ಯುವ ಜನರು ವೈಯಕ್ತಿಕ ದೇಣಿಗೆಗಳನ್ನು ಕೋವಿಡ್-19 ಪರಿಹಾರ ನಿಧಿಗೆ ನೀಡುವ ಮೂಲಕ ತಮ್ಮ ಜವಾಬ್ದಾರಿ ಮೆರೆದಿದ್ದಾರೆ. ಆ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ. ಅಲ್ಲದೆ ಕೇಂದ್ರ ಆರೋಗ್ಯ ಇಲಾಖೆ, ರಾಜ್ಯ ಸರ್ಕಾರಗಳು ದೇಶದ ಜನರ ಒಳಿತಿಗಾಗಿ, ಆರೋಗ್ಯ ಸಂರಕ್ಷಣೆ ಯ ಹಿತದೃಷ್ಟಿಯಿಂದ ತೆಗೆದುಕೊಂಡ ನಿಯಂತ್ರಣ ಕ್ರಮಗಳ ಬಗೆಗೂ ದೇಶವಾಸಿಗಳಲ್ಲಿ ಎಚ್ಚರಿಕೆ ಮೂಡಿಸಲು, ಅವುಗಳನ್ನು ಅನುಸರಿಸುವ ಮೂಲಕ ಕೊರೋನಾದಿಂದ ಕಾಪಾಡಿಕೊಳ್ಳುವ ಕುರಿತು ಅರಿವು ಮೂಡಿಸುವಲ್ಲಿಯೂ ಯುವಕರು ತೆಗೆದುಕೊಂಡ ಜವಾಬ್ದಾರಿಯುತ ಕ್ರಮಗಳು ನಿಜಕ್ಕೂ ಮಾದರಿಯೇ ಹೌದು.
ಅದರೊಂದಿಗೆ ಮನೆಯಲ್ಲಿ ಕುಳಿತು ಜನರಿಗೆ ಹೆಚ್ಚು ಮಾನಸಿಕ ಆಘಾತಗಳಾಗದಂತೆ ತಡೆಯುವ ನಿಟ್ಟಿನಲ್ಲಿ ಆನ್ಲೈನ್ ಸ್ಪರ್ಧೆಗಳನ್ನೂ ಕೆಲವು ಯುವಕರ ಗುಂಪು ಜಾರ್ಖಂಡ್ನಂತಹ ರಾಜ್ಯಗಳಲ್ಲಿ ಮಾಡಿವೆ. ಅಲ್ಲದೆ ಸ್ಯಾನಿಟೈಸರ್ ತಯಾರಿ, ಮಾಸ್ಕ್ ತಯಾರಿಕೆ ಸೇರಿದಂತೆ ಅಗತ್ಯ ಪಿಪಿಇಗಳ ತಯಾರಿಕೆಯಲ್ಲಿಯೂ ಯುವ ಜನರು ಸೈ ಎನಿಸಿಕೊಂಡಿದ್ದಾರೆ. ಆಹಾರ ಸಂಗ್ರಹಣೆ, ವಿತರಣೆ ಸೇರಿದಂತೆ, ಔಷಧಗಳ ವಿತರಣೆ, ಅಗತ್ಯ ವೈದ್ಯಕೀಯ ಸೇವೆಗಳನ್ನು ಜನರ ಕಾಲ ಬುಡಕ್ಕೆ ಲಾಕ್ಡೌನ್ ಸಂದರ್ಭದಲ್ಲಿ ತಲುಪಿಸುವಲ್ಲಿಯೂ ದೇಶದ ಯುವಕರು ಮುಂಚೂಣಿಯಲ್ಲಿ ಇದ್ದಾರೆ.
ಯುವಕರೇ ಈ ದೇಶದ ಶಕ್ತಿ ಎಂದು ಸ್ವಾಮಿ ವಿವೇಕಾನಂದರು ಅಂದು ಹೇಳಿದ ಮಾತು ಇಂದಿಗೂ ಪ್ರಸ್ತುತವೇ ಸರಿ ಎಂಬುದಕ್ಕೆ ಈ ಕೊರೋನಾ ಸಂಕಷ್ಟದ ದಿನಗಳೇ ಸಾಕ್ಷಿ ನುಡಿಯುತ್ತಿವೆ. ವಿವೇಕಾನಂದರಿಂದಲೇ, ಅವರ ಪ್ರಖರ ಮಾತುಗಳಿಂದಲೇ ಆತ್ಮಸ್ಥೈರ್ಯ, ಪ್ರೇರಣೆ ಪಡೆದ ರಾಷ್ಟ್ರಸ್ನೇಹಿ ಯುವಪಡೆ ಯಾವುದೇ ಸಂದರ್ಭದಲ್ಲಿಯೂ ದೇಶವನ್ನು ಕಾಪಾಡುವುದಕ್ಕೆ ಸಿದ್ಧರಿದ್ದೇವೆ ಎಂಬುದನ್ನೂ ಇದೇ ಲಾಕ್ಡೌನ್ ಸಂದರ್ಭಗಳೇ ಸಾಕ್ಷೀಕರಿಸುತ್ತಿವೆ. ಆ ಮೂಲಕ ಜಾಗೃತ ಯುವ ಮನಗಳು ಭಾರತಾಂಬೆಯ ಸೇವೆಗೆ ಸದಾ ಸಿದ್ಧ ಎಂಬುದನ್ನು ಸಾಬೀತು ಮಾಡಿದ್ದಾರೆ.
ಆ ಮೂಲಕ ತಾಯಿ ಭಾರತಿಯ ಯಶೋಗಾನವನ್ನು ವಿಶ್ವಕ್ಕೆ ಸಾರುವಲ್ಲಿ, ಭಾರತವನ್ನು ವಿಶ್ವಗುರುವನ್ನಾಗಿ ತಮ್ಮ ಮಾದರಿ ಕಾರ್ಯಗಳ ಮೂಲಕವೇ ಮಾಡುವಲ್ಲಿ ದೇಶದ ವಿವೇಕಾನಂದರ ಅನುಯಾಯಿ ಯುವ ಪಡೆಗಳು ಏಕ ಮನಸ್ಸಿನಿಂದ ಮಾಡುತ್ತಿದ್ದಾರೆ ಎನ್ನುವುದೇ ಹೆಮ್ಮೆಯ ಸಂಗತಿ. ಆ ಮೂಲಕ 121 ವರ್ಷಗಳ ನಂತರವೂ ವಿವೇಕಾನಂದರ ಯುವವಾಣಿಯನ್ನು ಜೀವಂತವಾಗಿರಿಸಲು ಪಣ ತೊಟ್ಟಿರುವ ಯುವಕರನ್ನು, ವಿವೇಕಾನಂದರ ಯುವ ಪಡೆಯನ್ನು ಈ ಸಂದರ್ಭ ಸ್ಮರಿಸಬೇಕಾದದ್ದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವೇ ಸರಿ.
Source : Organiser
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.