ನವದೆಹಲಿ : ಕೊರೋನಾ ಸಂಕಷ್ಟವನ್ನು ಸಮರ್ಥವಾಗಿ ಎದುರಿಸುತ್ತಿರುವ ಮೋದಿ ನೇತೃತ್ವದ ಭಾರತ ಸರ್ಕಾರದ ಕ್ರಮವನ್ನು WHO ರಾಯಭಾರಿ, ಬ್ರಿಟಿಷ್ ಡಾಕ್ಟರ್ ಡೇವಿಡ್ ನಬಾರೋ ಅವರು ಖಾಸಗಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಜಗತ್ತಿನ ಎಲ್ಲಾ ರಾಷ್ಟ್ರಗಳೂ ಕೊರೋನಾ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿವೆ. ಅಲ್ಲದೆ ಭಾರತವನ್ನು ಹೊರತು ಪಡಿಸಿದಂತೆ ಇತರ ರಾಷ್ಟ್ರಗಳಲ್ಲಿ ಸೋಂಕು ವ್ಯಾಪಿಸಲು ತೆಗೆದುಕೊಳ್ಳಲು ಕಡಿಮೆ ಸಮಯ ತಗುಲುತ್ತಿದೆ. ಆದರೆ ಭಾರತದಲ್ಲಿ ಸೋಂಕು ವ್ಯಾಪಿಸುವ ತೀವ್ರತೆ ಕಡಿಮೆ ಇದೆ ಎಂದು ಅವರು ತಿಳಿಸಿದ್ದಾರೆ. ಭಾರತದಲ್ಲಿ 11 ದಿನಗಳಲ್ಲಿ ಹರಡುವಷ್ಟು ಪ್ರಮಾಣದ ಸೋಂಕು, ವಿಶ್ವದ ಇತರ ರಾಷ್ಟ್ರಗಳಲ್ಲಿ ಕೇವಲ ಎರಡೂವರೆ ದಿನಗಳಲ್ಲಿಯೇ ಹರಡುತ್ತಿದೆ. ಆದ್ದರಿಂದ ಭಾರತ ಸರ್ಕಾರ ತೆಗೆದುಕೊಂಡ ಕೊರೋನಾ ನಿಯಂತ್ರಣ ಕ್ರಮಗಳು ಇತರ ದೇಶಗಳಿಗೆ ಮಾದರಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸೋಂಕಿತರ ವಿಚಾರದಲ್ಲಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತಾಗಿಯೂ ಮಾತನಾಡಿರುವ ನಬಾರೋ, ಇಲ್ಲಿನ ವೈದ್ಯಕೀಯ ಸಿಬ್ಬಂದಿಗಳ ಶ್ರಮ, ಕ್ವಾರಂಟೈನ್ಗೆ ತೆಗೆದುಕೊಳ್ಳುವ ಕ್ರಮ ಮೊದಲಾದವುಗಳನ್ನು ಮಾದರಿ ಎಂದು ತಿಳಿಸಿದ್ದಾರೆ. ಭಾರತದ ಮುಂಬೈ, ಅಹಮದಾಬಾದ್, ತಮಿಳುನಾಡು ಸೋಂಕಿನ ಕೇಂದ್ರ ಬಿಂದುವಾಗಿದ್ದು, ಅಲ್ಲಿಯೂ ಸಮರ್ಥವಾಗಿ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ದೇಶದ 750 ಜಿಲ್ಲೆಗಳ ಪೈಕಿ 450 ಜಿಲ್ಲೆಗಳಲ್ಲಿ ಸೋಂಕು ಇಲ್ಲದೇ ಇದ್ದು, ಇದು ಭಾರತದಲ್ಲಿ ಸಮರ್ಥವಾಗಿ ಕೈಗೊಳ್ಳಲಾದ ಕಟ್ಟುನಿಟ್ಟಿನ ಕ್ರಮಗಳ ಕಾರಣದಿಂದಲೇ ಸಾಧ್ಯವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಕೊರೋನಾಗೆ ಲಸಿಕೆ ಕಂಡು ಹಿಡಿಯಲು 2 ವರ್ಷಗಳಾದರೂ ಬೇಕಾಗಿದೆ. ಆದರೆ ಭಾರತದಲ್ಲಿ ಅನುಸರಿಸಲಾಗುತ್ತಿರುವ ಕ್ರಮಗಳನ್ನು ಅನುಸರಿಸಿದರೆ, ಶುಚಿತ್ವಕ್ಕೆ ಆದ್ಯತೆ ನೀಡಿದರೆ ಇದನ್ನು ನಿಯಂತ್ರಣದಲ್ಲಿಡುವುದು ಸಾಧ್ಯ ಎಂದು ನಬಾರೋ ಅವರು ಕಿವಿಮಾತು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.