ನರಸಿಂಹ ಜಯಂತಿ, ಭಗವಾನ್ ವಿಷ್ಣುವಿನ ನಾಲ್ಕನೇ ಅವತಾರ ಎಂದೇ ನಂಬಲಾಗಿರುವ ನರಸಿಂಹ ದೇವರ ಅನುಗ್ರಹ ಪಡೆಯುವ ಸಲುವಾಗಿ ಭಕ್ತರು ಆಚರಿಸುವ ಹಬ್ಬವಾಗಿದೆ. ಇದನ್ನು ವೈಶಾಖ ಶುದ್ಧ ಚತುರ್ದಶಿಯಂದು ಆಚರಿಸಲಾಗುತ್ತಿದ್ದು, ಈ ದಿನ ಉಪವಾಸ, ವ್ರತಗಳಿಂದ ನರಸಿಂಹಸ್ವಾಮಿಯನ್ನು ಪೂಜಿಸಿದರೆ, ಆತ ಪ್ರಸನ್ನನಾಗಿ ನಂಬಿದ ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತಾನೆ ಎನ್ನುವ ನಂಬಿಕೆ ಹಿಂದೂ ಸಮಾಜದ್ದು.
ನರ ಮತ್ತು ಸಿಂಹದ ಅವತಾರದಲ್ಲಿ ಅಂದರೆ ಅರ್ಧ ಮನುಷ್ಯ ಮತ್ತು ಅರ್ಧ ಪ್ರಾಣಿಯ ರೂಪದಲ್ಲಿ ಕಾಣಿಸಿಕೊಂಡು, ಹಿರಣ್ಯಕಶಿಪುವಿಗೆ ಉಗ್ರ ರೂಪ ತೋರಿ ಬೆಳಗೂ ಅಲ್ಲದ, ರಾತ್ರಿಯೂ ಅಲ್ಲದ ಸಂದರ್ಭದಲ್ಲಿ, ಮನೆಯ ಒಳಗೂ ಅಲ್ಲದೆ, ಹೊರಗೂ ಒಳಗೂ ಅಲ್ಲದೆ ಬಾಗಿಲಿನಲ್ಲಿ, ಆಯುಧವೂ ಆದ, ಆಯುಧವೂ ಅಲ್ಲದ ಉಗುರಿನ ಸಹಾಯದಿಂದ ಭೂಮಿಯ ಮೇಲೂ ಅಲ್ಲ ಎಂಬಂತೆ ತನ್ನ ತೊಡೆಯ ಮೇಲೆಯೇ ಆತನನ್ನು ಕೊಲ್ಲುವ ಮೂಲಕ ಸುಜನರನ್ನು ಪೊರೆದ ನೆನಪಿನ ಸಲುವಾಗಿ, ಹಿರಣ್ಯಕಶಿಪುವಿನ ಮರ್ಧನದ ವಿಜಯವನ್ನು ಸ್ಮರಿಸುವ ಸಲುವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಧರ್ಮದ ಮೇಲೆ ಧರ್ಮ ಸಾಧಿಸಿದ ವಿಜಯವನ್ನು ನೆನಪಿಸುವ ಈ ಹಬ್ಬವನ್ನು ನರಸಿಂಹ ಜಯಂತಿ ಎಂಬ ಹೆಸರಿನಿಂದ ಭಕ್ತ ಸಮೂಹ ಆಚರಿಸಿಕೊಂಡು ಬರುತ್ತಿದೆ.
ಪುರಾಣದ ಪ್ರಕಾರ, ಕಷ್ಯಪ ಬ್ರಹ್ಮನ ಪತ್ನಿ ದಿತಿ. ಅವರಿಗೆ ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷ. (ಇವರಿಬ್ಬರೂ ಶಾಪಗ್ರಸ್ತರಾದ ಜಯ, ವಿಜಯರು ಎಂಬುದಾಗಿಯೂ ಹೇಳುತ್ತಾರೆ). ರಾಕ್ಷಸೀಯ ಪ್ರವೃತ್ತಿ ಹೊಂದಿದ್ದ ಇವರಿಬ್ಬರೂ ಲೋಕ ಕಂಟಕರಾಗಿರುತ್ತಾರೆ. ಹಿರಣ್ಯಾಕ್ಷನಿಂದ ಲೋಕವನ್ನು ರಕ್ಷಿಸುವ ಸಲುವಾಗಿ ವಿಷ್ಣು ಆತನನ್ನು ಕೊಲ್ಲುತ್ತಾನೆ. ಇದರಿಂದ ಕುಪಿತಗೊಂಡ ಹಿರಣ್ಯಕಶಿಪು ಹರಿ ದ್ವೇಷಿಯಾಗುತ್ತಾನೆ. ತನ್ನ ರಾಜ್ಯದಲ್ಲಿ ಯಾರೂ ಹರಿ ನಾಮ ಸ್ಮರಣೆ, ಹರಿ ಭಕ್ತರಿರಬಾರದು ಎಂದು ಆಜ್ಞೆಯಾಗುತ್ತದೆ. ಹರಿ ಭಕ್ತರನ್ನು ಕೊಲ್ಲಲಾಗುತ್ತದೆ.
ಆದರೆ ಹಿರಣ್ಯಕಶಿಪು ಮತ್ತು ಕಯಾಲು ದಂಪತಿಯ ಪುತ್ರ ಪ್ರಹ್ಲಾದ ಮಾತ್ರ ಹರಿ ಭಕ್ತನಾಗುತ್ತಾನೆ. ಆತನನ್ನು ಹರಿ ದ್ವೇಷಿಯನ್ನಾಗಿಸಲು ಹಿರಣ್ಯಕಶಿಪು ಅದೆಷ್ಟೇ ಪ್ರಯತ್ನ ಪಟ್ಟರೂ ಆತನಲ್ಲಿ ಹರಿ ದ್ವೇಷ ಮೂಡಿಸಲು ಸಾಧ್ಯವಾಗುವುದಿಲ್ಲ. ಬದಲಾಗಿ ಮತ್ತಷ್ಟು ಹರಿಗೆ ಅವನನ್ನು ಹತ್ತಿರವಾಗುವಂತೆ ಮಾಡುತ್ತದೆ. ಆತನನ್ನು ಕೊಲ್ಲುವ ಸಲುವಾಗಿ ಹಿರಣ್ಯಕಶಿಪು ಅದೆಷ್ಟೇ ಪ್ರಯತ್ನ ನಡೆಸಿದರೂ ಆತನನ್ನು ಪ್ರತಿ ಸಂದರ್ಭದಲ್ಲಿಯೂ ಹರಿ ಕಾಯುತ್ತಾನೆ. ಕೊನೆಗೆ ತಾಯಿ ಕಯಾಲುವಿನ ಕೈಯಲ್ಲೇ ಹಾಲಾಹಲ ನೀಡಿ ಕೊಲ್ಲುವ ಯತ್ನ ನಡೆಯುತ್ತದೆ. ಆದರೆ ಅದರಲ್ಲೂ ಆತ ಬದುಕುಳಿಯುತ್ತಾನೆ. ಇದರಿಂದ ಕ್ರೋಧಗೊಂಡ ಹಿರಣ್ಯಕಶಿಪು ಪ್ರಹ್ಲಾದನ ಬಳಿ ಹರಿಯನ್ನು ತೋರಿಸುವಂತೆ ತಿಳಿಸುತ್ತಾನೆ.
ಹರಿಯು ಎಲ್ಲೆಲ್ಲೂ ಇರುವ. ನನ್ನಲ್ಲೂ ಇರುವ, ನಿನ್ನಲ್ಲೂ ಇರುವ ಎಂಬ ಪ್ರಹ್ಲಾದನ ಮಾತು ಕೇಳಿ ಅಲ್ಲೇ ಇದ್ದ ಕಂಬವನ್ನು ಒಡೆಯುತ್ತಾನೆ. ಹರಿ ಉಗ್ರ ನರಸಿಂಹನ ರೂಪದಲ್ಲಿ ಬಂದು ಹಿರಣ್ಯಕಶಿಪುವನ್ನು ಕೊಲ್ಲುತ್ತಾನೆ. ಆ ಮೂಲಕ ಪ್ರಹ್ಲಾದನನ್ನು ಕಾಯುತ್ತಾನೆ. ಆ ಮೂಲಕ ತನ್ನ ಭಕ್ತರ ಮೇಲಾಗುತ್ತಿದ್ದ ದೌರ್ಜನ್ಯವನ್ನು ವಿಷ್ಣು ಕೊನೆಗೊಳಿಸುತ್ತಾನೆ. ಅಲ್ಲಿಗೆ ದೇವಲೋಕದ ದ್ವಾರಪಾಲಕರಾದ ಜಯ ವಿಜಯರಿಗೆ ಶಾಪ ವಿಮೋಚನೆ ಆಗುತ್ತದೆ ಎಂಬ ನಂಬಿಕೆಗಳೂ ಜನರದ್ದು. ಈ ಅಧರ್ಮದ ವಿರುದ್ಧ ಧರ್ಮ ಸಾಧಿಸಿದ ವಿಜಯದ ದಿನವನ್ನು ಭಕ್ತರು ಇಂದಿಗೂ ನರಸಿಂಹ ಜಯಂತಿಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.
ಈ ದಿನ ಹರಿ ಭಕ್ತರು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ಸ್ನಾನಾದಿಗಳನ್ನು ಮುಗಿಸಿ ಮಡಿಯುಟ್ಟು ಲಕ್ಷ್ಮೀ ನರಸಿಂಹನ ಆರಾಧನೆಯಲ್ಲಿ ತೊಡಗುತ್ತಾರೆ. ದೇವರಿಗೆ ಪ್ರಿಯ ಫಲ, ಪುಷ್ಪಗಳನ್ನು ಸಮರ್ಪಿಸಿ ದೇವರ ಅರಾಧನೆ ಮಾಡುತ್ತಾರೆ. ನರಸಿಂಹನ ಕುರಿತು ಜಪ-ತಪ ಮಂತ್ರಾದಿಗಳ ಪಠಣ, ವಿಶೇಷ ಪೂಜೆಗಳನ್ನು ನೀಡುವ ಮೂಲಕ ವಿಷ್ಣುವನ್ನು ಭಜಿಸುವ ಮೂಲಕ ಆತನ ರಕ್ಷಣೆ ಬೇಡುತ್ತಾರೆ. ಆಶೀರ್ವಾದ ಪಡೆಯುತ್ತಾರೆ. ದಾನ ಧರ್ಮಗಳ ಮೂಲಕವೂ ಈ ದಿನವನ್ನು ಆಚರಣೆ ಮಾಡುತ್ತಾರೆ.
ಒಟ್ಟಿನಲ್ಲಿ ಈ ಸಮಾಜದಲ್ಲಿನ ಅಧರ್ಮಗಳಿಂದ ಧರ್ಮಕ್ಕೆ ವಿಜಯ ಸಿಗುವಂತಾಗಬೇಕು, ಭಕ್ತ ಜನರ ಕಷ್ಟಗಳನ್ನು ಪರಿಹರಿಸಿ ಅವರನ್ನು ಆಶೀರ್ವದಿಸಬೇಕು, ತನ್ನ ಭಕ್ತರ ಸಂಕಷ್ಟಗಳನ್ನು ಪರಿಹರಿಸಿ ಉದ್ಧರಿಸುವ ನಿಟ್ಟಿನಲ್ಲಿ ನರಸಿಂಹ ದೇವರ ಜಯಂತಿಯನ್ನು ದೇಶಾದ್ಯಂತ ಆಚರಿಸಲಾಗುತ್ತದೆ ಎಂದರೂ ತಪ್ಪಾಗಲಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.