ಪಡಿತರ ಚೀಟಿಯಲ್ಲಿ ಮಾಹಿತಿಗಳೇನಾದರೂ ತಪ್ಪಾದಲ್ಲಿ ಅದನ್ನು ಸರಿಪಡಿಸಲು ಹೆಣಗಾಡಬೇಕಾಗುತ್ತದೆ. ಇಂತಹ ಸಮಸ್ಯೆಗಳಿಂದ ಅದೆಷ್ಟೋ ಕುಟುಂಬಗಳು ಪಡಿತರ ಪಡೆಯಲೂ ಸಾಧ್ಯವಾಗದ ದಯನೀಯ ಪರಿಸ್ಥಿತಿಯಲ್ಲಿ ಬದುಕಬೇಕಾಗಿದೆ. ವಲಸಿಗರ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ದೇಶದ ಯಾವುದೋ ರಾಜ್ಯದ ಯಾವುದೋ ಪ್ರದೇಶದಲ್ಲಿ ಪಡಿತರ ಚೀಟಿ ಹೊಂದಿರುವ ವಲಸಿಗ ಕುಟುಂಬ, ಹೊಟ್ಟೆಪಾಡಿಗಾಗಿ ಇನ್ಯಾವುದೇ ರಾಜ್ಯದ ಮತ್ತೊಂದು ಪ್ರದೇಶದಲ್ಲಿ ವಾಸಿಸುವ ಸ್ಥಿತಿ ಇದೆ. ಇವರಿಗೆ ಪಡಿತರ ವ್ಯವಸ್ಥೆಯ ಮೂಲಕ ಕಡಿಮೆ ದರದಲ್ಲಿ ಆಹಾರ ವಸ್ತುಗಳನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಕೊಳ್ಳುವ ಅರ್ಹತೆಗಳಿದ್ದರೂ, ಆ ಪ್ರದೇಶದ ವಿಳಾಸದಲ್ಲಿ ಕಾರ್ಡ್ ಹೊಂದಿರದೆ ಪೂರ್ಣ ಬೆಲೆ ತೆತ್ತು ಹೊರಗಿನ ಮಾರುಕಟ್ಟೆಗಳಿಂದಲೇ ಸಾಮಗ್ರಿಗಳನ್ನು ಕೊಳ್ಳುವ ಅನಿವಾರ್ಯತೆ ಇದೆ.
ಇಂತಹ ಸಂದರ್ಭದಲ್ಲಿ ‘ಒನ್ ನೇಷನ್, ಒನ್ ರೇಷನ್ ಕಾರ್ಡ್’ (ಒಂದು ರಾಷ್ಟ್ರ, ಒಂದು ಪಡಿತರ ವ್ಯವಸ್ಥೆ) ಈ ವ್ಯವಸ್ಥೆ ರಾಷ್ಟ್ರದಲ್ಲಿದ್ದರೆ ಇಂತಹ ಅದೆಷ್ಟೋ ಬಡ ಕುಟುಂಬಗಳು ನ್ಯಾಯಯುತ ಬೆಲೆಗೆ ಆಹಾರ ವಸ್ತುಗಳನ್ನು ಕೊಂಡು ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಿದೆ. ಇಂತಹ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತರುವ ಮೂಲಕ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಅನೇಕರಿಗೆ ನೆರವಾಗಲು ಹೊರಟಿದೆ. ಆ ಮೂಲಕ ದೇಶದ ಬಡ ಜನರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ನ್ಯಾಯಯುತ ಬೆಲೆಗೆ ಪಡಿತರ ವಸ್ತುಗಳನ್ನು ಪಡೆಯುವ ಅವಕಾಶವನ್ನು ಇದೀಗ ಮಾಡಿಕಟ್ಟಿದೆ. ಆ ಮೂಲಕ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ನ್ಯಾಯ ಒದಗಿಸಲು ಕೇಂದ್ರ ನಮೋ ಸರ್ಕಾರ ಮುಂದಾಗಿದೆ.
ಇಃತಹ ವ್ಯವಸ್ಥೆಗಳ ಮೂಲಕ ಜನರಿಗೆ ಆಹಾರ ಭದ್ರತೆಯನ್ನು ನೀಡಲು ಸರ್ಕಾರ ಮುಂದಾಗಿದ್ದು 2019 ರಲ್ಲಿ. ಮೊದಲಿಗೆ ದೇಶದ 12 ರಾಜ್ಯಗಳಿಗೆ ಸಂಬಂಧಿಸಿದಂತೆ ಈ ಕಾನೂನನ್ನು ಜಾರಿಗೊಳಿಸಿ ಆದೇಶ ಹೊರಡಿಸಿತು. ನಂತರ ಇದರ ಸಾಧ್ಯತೆ ಬಾಧ್ಯತೆಗಳ ಪರಿಶೀಲನೆ ನಡೆಸಿ ಇತರ ರಾಜ್ಯಗಳಲ್ಲೂ ಈ ವ್ಯವಸ್ಥೆಯನ್ನು ಜಾರಿಗೆ ತರುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶವನ್ನು ನೀಡಿತ್ತು. ಆಂಧ್ರಪ್ರದೇಶ, ಗೋವಾ, ಗುಜರಾತ್, ಹರಿಯಾಣ, ಜಾರ್ಖಂಡ್, ಕೇರಳ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತೆಲಂಗಾಣ ಮತ್ತು ತ್ರಿಪುರ ಮೊದಲಾದ ರಾಜ್ಯಗಳ ಜೊತೆಗೆ ಇನ್ನೂ ಐದು ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ಪಂಜಾಬ್, ದಮನ್ ಮತ್ತು ದಿಯು ಮತ್ತು ಹಿಮಾಚಲ ಪ್ರದೇಶ ಗಳನ್ನೂ ಸೇರಿಸುವ ಮೂಲಕ ಒಟ್ಟು 17 ರಾಜ್ಯಗಳಿಗೆ ಏಕ ರಾಷ್ಟ್ರ, ಏಕ ಪಡಿತರ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ದೇಶದ ಆಹಾರ ವಸ್ತುಗಳನ್ನು ನ್ಯಾಯಯುತ ಬೆಲೆಗೆ, ದೇಶದ ಯಾವುದೇ ಪ್ರದೇಶದಲ್ಲಾದರೂ ನೀಡುವ ಮೂಲಕ ಮೋದಿ ಪಡೆ ಗಮನಾರ್ಹ ಸಾಧನೆ ಮಾಡಿದೆ.
ಇನ್ನು ಈ ಯೋಜನೆಗಾಗಿ ಹಿಂದಿ ಭಾಷೆ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಯಾವುದಾದರೊಂದನ್ನು ಸ್ಥಳೀಯ ಭಾಷೆಯ ಜೊತೆಗೆ ಪಡಿತರ ಚೀಟಿಯಲ್ಲಿ ಅಳವಡಿಸುವಂತೆಯೂ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಿರುವ ರಾಜ್ಯ ಸರ್ಕಾರಗಳ ಬಳಿ ಕೇಳಿಕೊಳ್ಳಲಾಗಿದೆ. ಇನ್ನು ಸಾಮಾನ್ಯವಾಗಿ ಪಡಿತರ ಚೀಟಿಯಲ್ಲಿ ಹತ್ತು ಅಂಕೆಗಳುಳ್ಳ ಪಡಿತರ ಚೀಟಿಯ ಸಂಖ್ಯೆ ನಮೂದಾಗಿದ್ದು, ಇದರ ಆರಂಭದ ಎರಡು ಸಂಖ್ಯೆಗಳು ಅದು ಯಾವ ರಾಜ್ಯಕ್ಕೆ ಸಂಬಂಧಿಸಿದ್ದು ಎಂಬುದನ್ನು ತಿಳಿಸುತ್ತದೆ. ಉಳಿದ ಸಂಖ್ಯೆಗಳು ಪಡಿತರ ಚೀಟಿಯ ಸಂಖ್ಯೆಗಳಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ರಾಜ್ಯಗಳನ್ನೂ ಈ ಯೋಜನೆಗೆ ಒಳಪಡಿಸುವುದಾಗಿಯೂ ಸರ್ಕಾರ ಮಾಹಿತಿ ನೀಡಿದೆ. ಆ ಮೂಲಕ ದೇಶದ ಎಲ್ಲಾ ಬಡವರಿಗೂ ಸಮಾನ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮಕ್ಕೂ ಮುಂದಾಗಿದೆ.
ಇನ್ನು ದೇಶ ಕೊರೋನಾ ವೈರಸ್ನಿಂದ ಆರೋಗ್ಯ, ಆರ್ಥಿಕ, ಆಹಾರದ ಅಭದ್ರತೆಯನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಬಡವರು ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುತ್ತಿದ್ದಾರೆ. ದಿನಗೂಲಿ, ವಲಸೆ, ಅಶಕ್ತರಿಗೆ ಈ ಒನ್ ನೇಷನ್, ಒನ್ ಕಾರ್ಡ್ ಯೋಜನೆ ಕೊಂಚ ಮಟ್ಟಿಗೆ ರಿಲೀಫ್ ಒದಗಿಸಿದೆ ಎನ್ನಬಹುದು. ಲಾಕ್ಡೌನ್ ಸಂದರ್ಭದಲ್ಲಿ ಊರಿಗೆ ತಲುಪಲಾಗದಿದ್ದರೂ, ತಾವಿರುವ ಪ್ರದೇಶದ ರೇಷನ್ ಅಂಗಡಿಗಳಲ್ಲೇ ಆಹಾರ ವಸ್ತುಗಳನ್ನು ಖರೀದಿಸುವ ಮೂಲಕ ಹೊಟ್ಟೆ ತುಂಬಿಸಿಕೊಳ್ಳಬಹುದು. ಅಃತಹ ಒಂದು ಸಮಾಜ ಸ್ನೇಹಿ ಬದಲಾವಣೆಯನ್ನು ಕೇಂದ್ರ ಮಾಡಿದ್ದು ಒಂದು ಅಭೂತಪೂರ್ವ ಕಾರ್ಯವೇ ಹೌದು.
ಭಾರತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕ ಕಾರ್ಡ್ ಹೊಂದುವ ಅವಕಾಶವೂ ಇದೆ. 18 ವರ್ಷ ಕೆಳಗಿನವರನ್ನು ಹೆತ್ತವರು ಅಥವಾ ಪೋಷಕರ ಕಾರ್ಡ್ ಗಳಲ್ಲಿಯೇ ಗುರುತಿಸಲಾಗುತ್ತದೆ. ಅಲ್ಲದೆ ಸಬ್ಸಿಡಿ ಪಡಿತರಕ್ಕೆ ಅರ್ಹರಾದವರಿಗೆ 5 ಕೆ.ಜಿ. ಅಕ್ಕಿ (ಕೆ.ಜಿ.ಗೆ 3ರೂ.), ಗೋಧಿ (ಕೆ.ಜಿ. 2 ರೂ.), 1 ರೂ. ಗಳಿಗೆ ಧಾನ್ಯಗಳನ್ನು ವಿತರಿಸುವುದಕ್ಕೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, ಆ ಮೂಲಕ ಬಡ ಜನರ ಆಹಾರ ಸಂಕಷ್ಟವನ್ನು ಪರಿಹರಿಸಲು ಸಿದ್ಧವಾಗಿದೆ ಎಂಬುದನ್ನು ಸಾಧಿಸಿ ತೋರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.