ದೇಶದ ನಾಗರೀಕತೆ, ಸಂಸ್ಕೃತಿಯ ಪ್ರತೀಕವಾಗಿ, ಜನ ಸೇವೆಯ ಮೂಲಕ ರಾಷ್ಟ್ರ ಸೇವೆ ಎಂಬ ಧ್ಯೇಯದ ಜೊತೆಗೆ RSS ಕೆಲಸ ಮಾಡುತ್ತಿದೆ. ದೇಶ ಎದುರಿಸುವ ಅನೇಕ ಗಂಭೀರ ಸಂದರ್ಭಗಳಲ್ಲಿ, ಪ್ರಾಕೃತಿಕ ವಿಕೋಪ, ಮಾನವ ನಿರ್ಮಿತ ಸಂಕಷ್ಟ ಮೊದಲಾದ ಸಂದರ್ಭದಲ್ಲಿ ದೇಶವನ್ನು ಉಳಿಸುವ ಮಹಾ ಕೈಂಕರ್ಯದಲ್ಲಿ RSS ಪ್ರತಿಫಲಾಪೇಕ್ಷೆ ಅಥವಾ ಪ್ರಚಾರವನ್ನು ಬಯಸದೆ ಕೆಲಸ ಮಾಡಿದೆ. ಇದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ವಿಚಾರ. ಸದ್ಯ ಇಡೀ ವಿಶ್ವವೇ ಕೊರೋನಾ ಸೋಂಕಿಗೆ ತುತ್ತಾಗಿ ಬಳಲುತ್ತಿರುವ ಸಂದರ್ಭದಲ್ಲಿ ಭಾರತದ ರಕ್ಷಣೆಗೆ ಜೀವವನ್ನೂ ಲೆಕ್ಕಿಸದೆ ದೇಶದುದ್ದಗಲದಲ್ಲಿಯೂ ಸಂಘ ಸೇವೆ ಮಾಡುವ ಮೂಲಕ “ನರ ಸೇವೆಯೇ, ನಾರಾಯಣ ಸೇವೆ” ಎಂಬಂತೆ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಸಂಘ ಇದ್ದರೆ RSS ನಂತಿರಬೇಕು ಎಂದು ಇಡೀ ವಿಶ್ವವೇ ಮಾತನಾಡಿಕೊಳ್ಳುವಂತಾಗಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರು ರಾಷ್ಟ್ರವಾಸಿಗಳು ಮತ್ತು ಸ್ವಯಂಸೇವಕರನ್ನು ಉದ್ದೇಶಿಸಿ ಅಕ್ಷಯ ತೃತೀಯಾ (ಏಪ್ರಿಲ್ 26)ದಂದು ಮಾತನಾಡಿದ್ದಾರೆ. ಕೊರೋನಾ ಸಂದರ್ಭದಲ್ಲಿ ‘ಪ್ರಸ್ತುತ ಪರಿಸ್ಥಿತಿ ಮತ್ತು ನಮ್ಮ ಪಾತ್ರ’ ಎಂಬ ವಿಚಾರದ ಕುರಿತು ಅರಿವು ಮೂಡಿಸಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ದೇಶದ ರಕ್ಷಣೆಯನ್ನು ಹೇಗೆ ಒಗ್ಗಟ್ಟಾಗಿ ಮಾಡಬೇಕು, ಆ ಮೂಲಕ ಸಮಾಜ, ಜನರ ರಕ್ಷಣೆ ಹೇಗೆ ಮಾಡಬೇಕು ಎಂಬೆಲ್ಲಾ ವಿಚಾರಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಇಃತಹ ಸಂದರ್ಭದಲ್ಲಿ ಭಾರತದ ಏಕತೆಗೆ ಧಕ್ಕೆಯಾಗದಂತೆ, ಎಲ್ಲರೂ ಒಂದಾಗಿ ಹೋರಾಡುವಂತೆಯೂ ಭಾಗವತ್ ಜೀ ಜನರಿಗೆ ಕರೆ ಕೊಟ್ಟಿದ್ದಾರೆ.
ಸೋಂಕಿನಿಂದ ಯಾರೇ ಬಳಲುತ್ತಿದ್ದರೂ ಯಾವುದೇ ಬೇಧವಿಲ್ಲದೆ ಅವರನ್ನು ರಕ್ಷಿಸುವ ಕೆಲಸ ಮಾಡಬೇಕು. ಈಗ ನಾವು ಒಗ್ಗಟ್ಟು ಪ್ರದರ್ಶಿಸದೇ ಹೋದಲ್ಲಿ ಪರಿಸ್ಥಿತಿಯ ಲಾಭವನ್ನು ರಾಷ್ಟ್ರದ್ರೋಹಿ ಹಿತಾಸಕ್ತಿಗಳು ಬಳಸುವ ಸಾಧ್ಯತೆ ಇದೆ. ಸೋಂಕು ಜಾತಿ ಧರ್ಮ ನೋಡಿ ಬರುವುದಲ್ಲ. ಆದ್ದರಿಂದ ಸಂತ್ರಸ್ಥರಲ್ಲಿ ಭೇದ ಭಾವ ಎಣಿಸದೆ ರಕ್ಷಣೆ ನೀಡುವುದು ನಿಜವಾದ ಭಾರತೀಯತೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ಯಾವುದೋ ಕೆಲವು ರಾಷ್ಟ್ರ ವಿರೋಧಿ ಹಿತಾಸಕ್ತಿಗಳು ಮಾಡುವ ತಪ್ಪಿಗೆ ಇಡೀ ಸಮುದಾಯದ ದೂಷಣೆ ಮಾಡದಂತೆ ತಿಳಿಸಿದ್ದಾರೆ. ಏಕೆಂದರೆ ಇಂತಹ ಮನಸ್ಥಿತಿಗಳು ಮುಂದುವರೆದರೆ ದೇಶದ ಸಾರ್ವಭೌಮತೆ, ಸಾಮರಸ್ಯಕ್ಕೆ ಧಕ್ಕೆ ಉಂಟಾಗುವ ಮೂಲಕ ಸಮಾಜದಲ್ಲಿ ಅಹಿತಕರ ಬೆಳವಣಿಗೆ ಹೆಚ್ಚಬಹುದು. ಇಂತಹ ಬೆಳವಣಿಗೆಗೆ ಆಸ್ಪದ ನೀಡದಂತೆ ಭಾಗವತ್ ಜೀ ದೇಶವಾಸಿಗಳಲ್ಲಿ ಮನವಿ ಮಾಡಿದ್ದಾರೆ.
ದೇಶದ ಆರ್ಥಿಕತೆಯನ್ನು ಸದೃಢ ಮಾಡುವತ್ತ ನಾವು ಚಿತ್ತ ಹರಿಸಬೇಕಿದೆ. ತಾಳ್ಮೆ ಹಾಗೂ ಸಂಯಮದ ಮೂಲಕವೇ ಇಂತಹ ಕಠೋರ ಸ್ಥಿತಿಯಿಂದ ಪಾರಾಗಬೇಕಾಗಿದೆ. ನೆರವಿನ ಅಗತ್ಯ ಇರುವ ಭಾರತದ ಜನರೆಲ್ಲರೂ ನಮ್ಮವರೇ ಆಗಿದ್ದಾರೆ. ಅವರಿಗೆ ಸಹಾಯ ಮಾಡುವುದು ಭಾರತೀಯರಾದ ನಮ್ಮ ಕರ್ತವ್ಯ. ಸಂಕಷ್ಟದ ಸಂದರ್ಭದಲ್ಲಿ ತಾರತಮ್ಯ ಸಲ್ಲ ಎಂದು ಅವರು ಕಿವಿಮಾತು ಹೇಳಿದ್ದಾರೆ. ಆ ಮೂಲಕ ದೇಶ ವಿರೋಧಿ ಶಕ್ತಿಗಳನ್ನು ಎಲ್ಲರೂ ಏಕತೆಯ ಮೂಲಕ ನಿರ್ನಾಮ ಮಾಡಬೇಕು. ಮಾತ್ರವಲ್ಲದೆ ಆ ಸಾಮುದಾಯಿಕ ಹೋರಾಟ ಇದ್ದಲ್ಲಿ ಮಾತ್ರವೇ ಕೋವಿಡ್ ವಿರುದ್ಧ ಸಮರ್ಥ ಹೋರಾಟ ಸಾಧ್ಯ ಎಂದು ಅಭಿಪ್ರಾಯಪಟ್ಟಿರುವುದು ಏಕತೆಯ ಭಾವವನ್ನು ಸಾರುತ್ತಿದೆ.
ಭಾರತ ಸರ್ಕಾರದ ಸಮಯೋಚಿತ ನಿರ್ಧಾರದ ಕಾರಣದಿಂದ ಸೋಂಕು ಭಾರತದಲ್ಲಿ ನಿಯಂತ್ರಣದಲ್ಲಿದೆ. ಸರ್ಕಾರಗಳ ಎಲ್ಲಾ ಸೂಚನೆಗಳನ್ನು ಬದುಕಿನಲ್ಲಿ ಅಳವಡಿಸುವ ಕೆಲಸ ನಮ್ಮಿಂದಾದಲ್ಲಿ ಮಾತ್ರ ನಾವು ಈ ಬಿಕ್ಕಟ್ಟಿನಿಂದ ಹೊರ ಬರಬಹುದು. ಅಲ್ಲದೆ ಈ ಸಂದರ್ಭದಲ್ಲಿ ತಮ್ಮ ಜೀವವನ್ನೂ ರಕ್ಷಿಸದೆ ಆರೋಗ್ಯ ಸಿಬ್ಬಂದಿಗಳು ಮತ್ತು ಪೊಲೀಸ್ ಇಲಾಖೆ ಕೆಲಸ ಮಾಡುತ್ತಿವೆ. ಅವರೊಂದಿಗೆ ಅಶಕ್ತರ ಸಹಾಯಕ್ಕೆ ಸಂಘ ಕಾರ್ಯ ಪ್ರವೃತ್ತವಾಗಿದೆ. ಈ ಕಾರ್ಯ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ನಡೆಯಬೇಕು ಎಂಬ ಆಶಯವನ್ನು ಭಾಗವತ್ ಜೀ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನಿಯಂತ್ರಣ ನಿಯಮಗಳ ಪಾಲನೆ ಮತ್ತು ಇತರರಿಗೂ ಪಾಲನೆ ಮಾಡುವಂತೆ ಅರಿವು ಮೂಡಿಸುವ ಮಹತ್ವದ ಜವಾಬ್ದಾರಿ ಪ್ರತಿಯೊಬ್ಬರದ್ದೂ ಆಗಿದೆ ಎಂಬುದಾಗಿ ಅವರು ತಿಳಿಸಿದ್ದಾರೆ.
ಜೊತೆಗೆ ಇನ್ನೊಬ್ಬರು ನಮ್ಮನ್ನು ಶ್ಲಾಘಿಸಬೇಕು, ನಮಗೆ ಪ್ರಚಾರ ಬೇಕು ಎಂಬ ಮನಸ್ಥಿತಿ ಸಂತೃಪ್ತಿ ನೀಡಲಾರದು. ಹಾಗೆಯೇ ಅದರಿಂದ ಮಾಡಿದ ಕೆಲಸ ದೇವರಿಗೆ ಸಮರ್ಪಿತವಾಗಲಾರದು. ಹಾಗಾಗಿ ದೇಶಕ್ಕೆ ಈಗ ನನ್ನ ಅವಶ್ಯಕತೆ ಇದೆ ಎಂಬುದನ್ನು ಮನಗಂಡು ಲೋಕಹಿತ ಕಾಪಾಡುವ ನಿಟ್ಟಿನಲ್ಲಿ ನಿಸ್ವಾರ್ಥ ಮನೋಭಾವದಿಂದ ದುಡಿದಲ್ಲಿ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂಬ ಸಂದೇಶವನ್ನು ಅವರು ಸಾರಿದ್ದಾರೆ. ಇದನ್ನು ತಾಯಿ ಭಾರತಿಯ ಸೇವೆಗೆ ಒದಗಿ ಬಂದಿರುವ ಅವಕಾಶ ಎಂಬುದಾಗಿ ಪರಿಗಣಿಸಿ ಆತ್ಮತೃಪ್ತಿಗಾಗಿ ಕೆಲಸ ಮಾಡಿದಲ್ಲಿ ಮಾತ್ರ ಮಾಡಿದ ಕೆಲಸ ಅರ್ಥ ಪಡೆಯುವುದಾಗಿ ಭಾಗವತ್ ಜೀ ಅಭಿಪ್ರಾಯ ಪಟ್ಟಿದ್ದಾರೆ.
ಬದುಕು ಎಲ್ಲರೂ ಬದುಕುತ್ತಾರೆ. ಆದರೆ ಹೇಗೆ ಬದುಕುತ್ತೇವೆ ಎನ್ನುವುದು ತುಂಬಾ ಮುಖ್ಯವಾಗುತ್ತದೆ. ಸಮಾಜ ನಮಗೇನು ಕೊಟ್ಟಿದೆ ಎಂಬ ಭಾವನೆ ಬಿಟ್ಟು, ಸಮಾಜಕ್ಕೆ ನಾನೇನು ಕೊಟ್ಟಿದ್ದೇನೆ ಎಂಬುದಾಗಿ ಪ್ರತಿಯೊಬ್ಬರೂ ಯೋಚಿಸಿದಲ್ಲಿ ಸಮಾಜ ಸದೃಢವಾಗಿ, ಆರೋಗ್ಯಪೂರ್ಣವಾಗಿ ಕಂಗೊಳಿಸಲು ಸಾಧ್ಯ. ಆದ್ಯತೆಗಳನ್ನರಿತು ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ತಿಳಿಯದಂತೆ ಕೆಲಸ ಮಾಡುವತ್ತ ನಮ್ಮ ಮನಸ್ಸು ಹೊರಳಿದಲ್ಲಿ ಸಮಾಜ ಬದಲಾಗುತ್ತದೆ. ಇಂತಹ ಕೆಲಸವನ್ನು RSS ಹಿಂದಿನಿಂದ ಇಂದಿನವರೆಗೂ ಮಾಡಿಕೊಂಡು ಬಂದಿದೆ. ಹೀಗಾದಲ್ಲಿ ಮಾತ್ರ ‘ವಸುದೈವ ಕುಟುಂಬಕಮ್’ ಎಂಬ ಮಾತು ಅರ್ಥಪೂರ್ಣ ಆಗುತ್ತದೆ. ಇದು ಒಗ್ಗಟ್ಟಿನಿಂದ ಮಾತ್ರ ಸಾಧ್ಯ. ಈ ಒಗ್ಗಟ್ಟೇ ಪ್ರಸ್ತುತ ಪರಿಸ್ಥಿತಿಯ ಅನಿವಾರ್ಯ ಎಂಬುದೇ ಮೋಹನ್ ಭಾಗವತ್ ಜೀ ಅವರ ಮಾತಿನ ತಾತ್ಪರ್ಯ.
“ರಾಪ್ಟ್ರ ಹಿತದ ಕಾಯಕ, ನಾಡಿಗಭಯದಾಯಕ, ವ್ಯಕ್ತಿ ವ್ಯಕ್ತಿಯಾಗಲಿಂದು ನೈಜ ರಾಷ್ಟ್ರ ಸೇವಕ” ಎಂಬ ಮಾತಿನಂತೆ ನಾಡು, ನುಡಿಗಾಗಿ, ನಾಡಿನ ಜನರಿಗಾಗಿ ಕೆಲಸ ಮಾಡುವಾತನೇ ರಾಷ್ಟ್ರದ ನಿಜವಾದ ಸೇವಕನಾಗುತ್ತಾನೆ. ಅಲ್ಲಿ ಅಹಂಕಾರ, ತೋರ್ಪಡಿಕೆ, ಆಲಸ್ಯ, ಭೇದಭಾವ ಇರಬಾರದು. ಬದಲಾಗಿ ಎಲ್ಲರೂ ನಮ್ಮವರು, ನಮ್ಮವರ ರಕ್ಷಣೆ ನಮ್ಮ ಹೊಣೆ ಎಂಬ ಮನಸ್ಥಿತಿ ಇದ್ದಲ್ಲಿ ಮಾತ್ರ ರಾಷ್ಟ್ರ ಅಭಿವೃದ್ಧಿ ಆಗುತ್ತದೆ. ಈ ಮಾನಸಿಕ ಎಚ್ಚರ ಎಲ್ಲರಲ್ಲೂ ಮೂಡಿದಲ್ಲಿ ಮಾತ್ರ ಭಾರತ ವಿಶ್ವಗುರು ಆಗಲು ಸಾಧ್ಯ. ಇಂತಹ ಏಕತೆಯಿಂದಲೇ ಪರಿಸ್ಥಿತಿ ನಿರ್ವಹಣೆ ಸಾಧ್ಯ. ಈ ಏಕತೆ ಎಲ್ಲರಲ್ಲೂ ಮೂಡಿದರೆ ಮಾತ್ರ ಕೊರೋನಾ ಸೇರಿದಂತೆ ಕಣ್ಣಿಗೆ ಕಾಣದ, ಕಾಣುವ ವೈರಿಗಳಿಂದಲೂ ಮುಕ್ತರಾಗಲು ಸಾಧ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.