ದೇಶದಲ್ಲಿ ಯಾವುದೇ ಕಠಿಣ ಪರಿಸ್ಥಿತಿ ಇರಲಿ ‘ರಾಷ್ಟ್ರೀಯ ಸ್ವಯಂಸೇವಕ ಸಂಘ’ ದೇಶ ಸೇವೆಗೆ ಸದ್ದಿಲ್ಲದಂತೆ ತೊಡಗಿ ಬಿಡುತ್ತದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮನವ ನಿರ್ಮಿತ ಅಥವಾ ಪ್ರಾಕೃತಿಕ ವಿಕೋಪಗಳಿಂದ ಜನರನ್ನು ರಕ್ಷಿಸಲು ಮುಂದಾಗುತ್ತದೆ. ಕಳೆದ ವರ್ಷ ಮಳೆಯಿಂದಾಗಿ ಉಂಟಾಗಿದ್ದ ರಣ ಭಯಂಕರ ಪ್ರವಾಹದ ಸಂದರ್ಭದಲ್ಲಿಯೂ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತಮ್ಮ ಜೀವವನ್ನೂ ಲಕ್ಷಿಸದೆ, ಲಕ್ಷಾಂತರ ಜನರ ಜೀವ ರಕ್ಷಣಾ ಕಾರ್ಯದಲ್ಲಿ ರಾಷ್ಟ್ರೀಯ ಸ್ಷಯಂಸೇವಕ ಸಂಘದ ನಿಸ್ವಾರ್ಥ ಕಾರ್ಯಕರ್ತರು ತೊಡಗಿಸಿಕೊಂಡು ರಾಷ್ಟ್ರ ಸೇವೆಯಲ್ಲಿ ಭಾಗಿಗಳಾಗಿದ್ದು ಎಲ್ಲರ ಮನದಲ್ಲಿಯೂ ಇನ್ನೂ ಹಸಿರಾಗಿಯೇ ಇದೆ.
ಇಂತಹ ಸಂದರ್ಭದಲ್ಲಿ ಇದೀಗ ದೇಶಕ್ಕೊದಗಿರುವ ಕೊರೋನಾ ಸಂಕಷ್ಟಕ್ಕೂ ಸ್ಪಂಧಿಸಿರುವ ಆರ್‌ಎಸ್‌ಎಸ್ ದೇಶದ ಉದ್ದಗಲದಲ್ಲಿಯೂ ತನ್ನ ಕೈಲಾದ ಸೇವೆ ಒದಗಿಸುವ ಮೂಲಕ ಮತ್ತೊಮ್ಮೆ ದೇಶವಾಸಿಗಳ ಮೆಚ್ಚುಗೆಗೆ ಪಾತ್ರವಾಗಿದೆ. 1993 ರಲ್ಲಿ ಪ್ಲೇಗ್ ರೋಗ ಭಾರತದ ನಿದ್ದೆಗೆಡಿಸಿತ್ತು. ಆ ಸಂದರ್ಭದಲ್ಲಿಯೂ ಆರ್‌ಎಸ್‌ಎಸ್ ಸೇವಾ ಕಾರ್ಯಗಳನ್ನು ನಿರ್ವಹಿಸಿದ್ದು, ಆ ಮೂಲಕ ದೇಶಸೇವೆ ಮಾಡಿತ್ತು. ಕೇಶವ ಹೆಡ್ಗೇವಾರ್ ಅವರಿಂದ ಪ್ರೇರಣೆ ಪಡೆದಿರುವ ನಾವು, ಯಾವ ಕಠಿಣ ಸಂದರ್ಭದಲ್ಲಿಯೂ ಹೆದರಿ ಬದುಕುವ ಪ್ರಮೇಯವೇ ಇಲ್ಲ ಎಂಬ ಸಂಘದ ಸದಸ್ಯರು ಮಹಾಮಾರಿ ಕೋವಿಡ್-19 ವಿರುದ್ಧವೂ ತೊಡೆ ತಟ್ಟಿ ನಿಂತಿದ್ದಾರೆ. ದೇಶವೇ ಲಾಕ್ಡೌನ್ ಆಗಿರುವುದರಿಂದ ಒಂದೆಡೆಯಿಂದ ಮತ್ತೊಂದು ಕಡೆಗೆ ತೆರಳಲೂ ಅವಕಾಶವಿಲ್ಲದೇ ಹೋದರು, ಸ್ವಯಂಸೇವಕರು ದೇಶದ 15 ರಾಜ್ಯಗಳನ್ನು ತಲುಪಿ ತುರ್ತು ಸೇವೆಗಳನ್ನು ಒದಗಿಸಿ ಕೊಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಆ ಮೂಲಕ “ರಾಷ್ಟ್ರ ಹಿತದ ಕಾಯಕ, ನಾಡಿಗಭಯ ದಾಯಕ.. ವ್ಯಕ್ತಿ ವ್ಯಕ್ತಿಯಾಗಲಿಂದು ನೈಜ ರಾಷ್ಟ್ರ ಸೇವಕ” ಎಂಬ ಮನೋಭಾವದಿಂದ ಜನಸಾಮಾನ್ಯರ ಸೇವಾ ಕೈಂಕರ್ಯದಲ್ಲಿ ತೊಡಗುವ ಮೂಲಕ “ಸಂಘಟನೆ” ಯ ನೈಜಾರ್ಥವನ್ನು ಜಗತ್ತಿಗೆ ಸಾರಿದ್ದಾರೆ.
ಲಾಕ್ಡೌನ್ನಿಂದಾಗಿ ಒಂದೆಡೆಯಿಂದ ಮತ್ತೊಂದು ಕಡೆಗೆ ಹೋಗಲಾಗುತ್ತಿಲ್ಲ. ಆದರೆ ಸಂಘ ಮಾತ್ರ ಅಶಕ್ತರನ್ನು ಅನಾಯಾಸವಾಗಿ ತಲುಪುತ್ತಿದೆ. ಅವರಿಗೆ ಬೇಕಾದ ಎಲ್ಲಾ ಅನುಕೂಲವನ್ನು ಮಾಡಿಕೊಡುತ್ತದೆ. ಅರೇ, ಇದು ಹೇಗೆ ಸಾಧ್ಯ ಎಂದಿರಾ. ಸಂಪರ್ಕ ಮಾತ್ರದಿಂದಲೇ ಒಂದಾಗುವ ದೇಶದದ ಮೂಲೆ ಮೂಲೆಯ ಕಾರ್ಯಕರ್ತರು ತಮ್ಮ ಸಮೀಪದಲ್ಲಿನ ಅಶಕ್ತರ ಬಗ್ಗೆ ಮಾಹಿತಿ ಪಡೆದು ಅವರನ್ನು ತಲುಪುತ್ತಿದ್ದಾರೆ. ಜೊತೆಗೆ ಇದಕ್ಕೆ ಬೇಕಾದ ಆರ್ಥಿಕ ಸಹಕಾರವನ್ನೂ ಸಹ ಎಲ್ಲಾ ಕಾರ್ಯಕರ್ತರ ನೆರವಿನಿಂದ, ದಾನಿಗಳ ಸಹಾಯದಿಂದ ಹೊಂದಿಸಿಕೊಂಡು, “ಸ್ವಂತಕ್ಕಲ್ಲ ಸಮಾಜಕ್ಕೆ” ಎಂಬ ಧ್ಯೇಯದೊಂದಿಗೆ ಹಗಲು ರಾತ್ರಿ ಎನ್ನದೆ ಶ್ರಮ ಪಡುತ್ತಿದ್ದಾರೆ.
ಕೊರೋನಾ ಸಂದರ್ಭದಲ್ಲಿ ಈವರೆಗೆ ಭಾರತದ 15 ರಾಜ್ಯಗಳ ಸುಮಾರು 2000ಕ್ಕೂ ಅಧಿಕ ಹಳ್ಳಿಯನ್ನು ವಾರಣಾಸಿಯ ಸಂಘದ ಕಾರ್ಯಕರ್ತರ ಶ್ರಮದಿಂದ ತಲುಪಲಾಗಿದೆ ಎಂದರೆ ನೀವು ನಂಬಲೇ ಬೇಕು. ಆ ಮೂಲಕ 31200 ಕ್ಕೂ ಅಧಿಕ ಕುಟುಂಬಗಳಿಗೆ ಆರ್‌ಎಸ್‌ಎಸ್ ಸಹಾಯ ಮಾಡಿದೆ. ಇನ್ನು ಆರ್‌ಎಸ್‌ಎಸ್ ಜೊತೆಗೆ ದೇಶದ ಹೆಮ್ಮೆಯ ವಿದ್ಯಾರ್ಥಿ ಸಂಘಟನೆ ಎಬಿವಿಪಿಯೂ ಕೈ ಜೋಡಿಸುವ ಮೂಲಕ ಸಮಾಜ ಸೇವಾ ಕಾರ್ಯವನ್ನು ಮಾಡಿದೆ. ಇಂತಹ ಸಮಾಜಮುಖಿ ಕಾರ್ಯದ ಕಾರಣದಿಂದಾಗಿ ಅರುಣಾಚಲ ಮುಖ್ಯಮಂತ್ರಿ ಪ್ರೇಮಾ ಖಂಡು ಅವರೇ ಸಂಘದ ನಡೆ ಅನುಕರಣೀಯ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಘಾಟ್ಕೋಪರ್ ಪ್ರದೇಶದ ಸಣ್ಣ ಅಂಗಡಿ ಹೊಂದಿರುವ ಸಂಘದ ಕಾರ್ಯಕರ್ತ ತಾನು ಆರ್ಥಿಕವಾಗಿ ಸಬಲನಲ್ಲದಿದ್ದರೂ, ಈ ತುರ್ತು ಅಗತ್ಯ ಸ್ಥಿತಿಯಲ್ಲಿ ದೇಶಾದ್ಯಂತ ಇರುವ ಸಂಘದ ಸ್ವಯಂಸೇವಕರನ್ನು ಸಂಪರ್ಕ ಮಾಡಿ, ಅವರ ಮತ್ತು ದಾನಿಗಳ ನೆರವಿನಿಂದ ಹಣ ಸಂಗ್ರಹಿಸಿ, ಕಾಲೇಜೊಂದರ ಸಹಕಾರದಲ್ಲಿ ಕಮ್ಯೂನಿಟಿ ಕಿಚನ್ ಆರಂಭಿಸಿದ್ದಾರೆ. ಇಲ್ಲಿಂದ ಪ್ರತಿ ನಿತ್ಯ 25,000 ದಷ್ಟು ಆಹಾರ ವಸ್ತುಗಳನ್ನು ಅಶಕ್ತರಿಗೆ, ಬಡವರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇವರ ಈ ಶ್ರಮದಿಂದ ಕೇವಲ ಎರಡೇ ವಾರದಲ್ಲಿ 1.1 ಮಿಲಿಯನ್ ಆಹಾರ, ಅಗತ್ಯ ವಸ್ತುಗಳನ್ನು ಆರ್‌ಎಸ್‌ಎಸ್ ಅಗತ್ಯವಿರುವವರಿಗೆ ತಲುಪಿಸಿದೆ. 2500 ಕುಟುಂಬಗಳಿಗೆ ದಿನಸಿ, ಅನಾರೋಗ್ಯ ಪೀಡಿತರಿಗೆ ಚಿಕಿತ್ಸಾ ವ್ಯವಸ್ಥೆ , 205 ಬಾಟಲ್ ರಕ್ತ ಸಂಗ್ರಹದಂತಹ ಬಹುಪಯೋಗಿ ಕೆಲಸವನ್ನು ಮಾಡಿದೆ. ಅಲ್ಲದೆ ಕಾಲ್ ಸೆಂಟರ್ಗಳನ್ನು ಆರಂಭಿಸಿ ಆ ಮೂಲಕವೂ ಸಂಪರ್ಕ ಮಾಡುವ, ಒಂದು ಪ್ರದೇಶದ ಘಟಕದಿಂದ ಇನ್ನೊಂದು ಪ್ರದೇಶದ ಘಟಕದ ಕಾರ್ಯಕರ್ತರನ್ನು ಸಂಪರ್ಕಿಸಿ ಸೇವಾ ಕಾರ್ಯದಲ್ಲಿ ತೊಡಗುವತ್ತಲೂ ಸಂಘ ಉತ್ಸಾಹ ತೋರಿದೆ.
ಸೇವಾ ಭಾರತಿಯ ಸಹಕಾರದೊಂದಿಗೆ ಈ ವರೆಗೆ ದೇಶಾದ್ಯಂತ ಒಂದು ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಅಗತ್ಯ ಸೌಲಭ್ಯಗಳನ್ನು ತುರ್ತು ಸ್ಥಿತಿಯಲ್ಲಿ ಒದಗಿಸಿಕೊಟ್ಟಿದೆ. ಜೊತೆಗೆ ಅನಾಥರು, ವಲಸಿಗರು, ಬಡವರು, ನಿರ್ಗತಿಕರ ಜೊತೆಗೆ ಪ್ರಾಣಿಗಳಿಗೆ ಬೇಕಾದ ಆಹಾರವನ್ನು ಪೂರೈಸುವ ನಿಟ್ಟಿನಲ್ಲಿಯೂ ಸಂಘ ಕಂಕಣಬದ್ಧವಾಗಿದೆ. ಅಲ್ಲದೆ ಆಸ್ಪತ್ರೆಗೆ ಬೇಕಾದ ವ್ಯವಸ್ಥೆಗಳು, ನಿರ್ಗತಿಕರಿಗೆ ವಸತಿ ಮೊದಲಾದ ವ್ಯವಸ್ಥೆಯನ್ನೂ ದೇಶದೆಲ್ಲೆಡೆ ಸಂಘ ಮಾಡಿಕೊಟ್ಟಿದೆ. 2,50,000 ಕ್ಕೂ ಅಧಿಕ ಸ್ವಯಂಸೇವಕರು ಇಂದು ಸಮಾಜವನ್ನು ಕೊರೋನಾ ಸಂಕಷ್ಟದಿಂದ ಕಾಪಾಡಲು, ತಮ್ಮ ಜೀವವನ್ನೂ ಲೆಕ್ಕಿಸದೆ ನಿಸ್ವಾರ್ಥದಿಂದ ಸೇವೆ ಮಾಡುತ್ತಿದ್ದಾರೆ.
ಇಂತಹ ದುರಂತ ಸ್ಥಿತಿಯಲ್ಲಿ ಎಲ್ಲರೂ ತಾವು, ತಮ್ಮ ಕುಟುಂಬ ಎಂದು ಬದುಕುತ್ತಿದ್ದರೆ, ಸಂಘದ ಸ್ವಯಂಸೇವಕರು ಮಾತ್ರ ನಮಗೆ ದೇಶವೇ ಮೊದಲು ಎಂಬ ಸೇವಾ ಮನೋಭಾವದೊಂದಿಗೆ ಕಾರ್ಯ ಪ್ರವೃತ್ತರಾಗಿದ್ದಾರೆ. ಆ ಮೂಲಕ ದೇಶದ ಇತರ ಸಂಘಟನೆಗಳಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾದರಿಯಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.