ದೇಶ ಲಾಕ್ಡೌನ್ ಆಗಿದೆ. ಹೊರ ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಮನೆಯ ಪರಿಸರದಲ್ಲಿಯೇ ನಮ್ಮ ಹೆಚ್ಚಿನ ಸಮಯವನ್ನು ಅಥವಾ ಸಂಪೂರ್ಣ ಸಮಯವನ್ನು ಕಳೆಯಬೇಕಾದ ತುರ್ತು ಸ್ಥಿತಿ ನಿರ್ಮಾಣವಾಗಿದೆ. ಇಷ್ಟು ಸಮಯ ಮನಸೋ ಇಚ್ಛೆ ಆಫೀಸ್, ಪ್ರೆಂಡ್ಸ್, ಸ್ಕೂಲ್, ಕಾಲೇಜು, ಫಂಕ್ಷನ್ ಹೀಗೆ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಬ್ಯುಸಿ ಆಗಿದ್ದವರೆಲ್ಲರಿಗೂ ಮನೆಯಲ್ಲೀಯೇ ಕುಳಿತಿರುವುದು ಶಿಕ್ಷೆಯಂತೆಯೇ ಸರಿ.
ಇನ್ನು ಇಂತಹ ಪರಿಸ್ಥಿತಿಗೆ ಮನಸ್ಸು ಒಗ್ಗಿಕೊಳ್ಳುವುದು ತೀರಾ ಕಷ್ಟವೇ ಸರಿ. ಕೆಲವೊಮ್ಮೆ ಇದರಿಂದಾಗಿ ಮಾನಸಿಕವಾಗಿ ಜರ್ಜರಿತವಾಗುವುದು, ಮನಸ್ಸು ಹತೋಟಿ ಕಳೆದುಕೊಳ್ಳುವುದು ಮೊದಲಾದ ಸ್ಥಿತಿಗಳಿಗೂ ಕೆಲವರು ತಲುಪಿ ಬಿಡುತ್ತಾರೆ. ಆದರೆ ಏನೂ ಮಾಡುವಂತಿಲ್ಲ. ಸೋಂಕು ಹರಡದಂತೆ ಕಾಪಾಡಿಕೊಳ್ಳಲು, ನಮ್ಮನ್ನು ನಾವು ಅಪಾಯಕಾರಿ ಸ್ಥಿತಿಯಿಂದ ರಕ್ಷಿಸಿಕೊಳ್ಳಲು ಮನೆಯಲ್ಲಿ ಇರಲೇ ಬೇಕಾಗಿದೆ. ಆದ್ದರಿಂದ ಈ ಒಂಟಿತನವನ್ನು ಕಳೆಯಲು, ಮಾನಸಿಕ ನಿಯಂತ್ರಣ ಕಳೆದುಕೊಳ್ಳದಂತೆ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಔಷಧಿಗಳ ಹೊರತಾಗಿ ಹೇಗೆ ಪ್ರಯತ್ನಿಸಬಹುದು ಎಂಬುದಕ್ಕೆ ಇಲ್ಲಿದೆ ಕೆಲವು ಪರಿಹಾರ ಕ್ರಮಗಳು.
ದಿನವಿಡೀ ಮನೆಯಲ್ಲಿಯೇ ಉಳಿಯುವ ನಾವು ಡಿಜಿಟಲ್ ತಂತ್ರಜ್ಞಾನಗಳ ಮೊರೆ ಹೋಗುವ ಮೂಲಕವೂ ನಮ್ಮ ಒಂಟಿತನವನ್ನು ಕಡಿಮೆ ಮಾಡಿಕೊಳ್ಳುವುದು ಸಾಧ್ಯ. ಟಿವಿ, ಕಂಪ್ಯೂಟರ್, ಲ್ಯಾಪ್ಟಾಪ್, ಅಂತರ್ಜಾಲಗಳನ್ನು ಸಮರ್ಥವಾಗಿ ಬಳಸುವ ಮೂಲಕವೂ ನಮ್ಮ ಮನಸ್ಸನ್ನು ರಿಲ್ಯಾಕ್ಸ್ಡ್ ಆಗಿ ಇಟ್ಟುಕೊಳ್ಳಬಹುದು. ಗೆಳೆಯರು, ಆತ್ಮೀಯರ ಜೊತೆ ಫೋನ್ ಮೂಲಕ ಸಂಭಾಷಣೆ ನಡೆಸುವುದು, ಮನೋಭಿರುಚಿಗೆ ಸಂಬಂಧಿಸಿದಂತೆ ಇರುವ ಚಿತ್ರಗಳನ್ನು ನೋಡುವುದು, ಹೊಸ ಕಲೆಗಳನ್ನು ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿಯೂ ಡಿಜಿಟಲ್ ತಂತ್ರಜ್ಞಾನ ನಮಗೆ ಸಹಾಯ ಮಾಡುತ್ತವೆ. ಈಗ ನಮ್ಮ ಕೈಯಲ್ಲಿ ಸಮಯವೂ ಇದೆ. ಕಲಿಕೆಗೆ ಪೂರಕವಾಗಿ ಅಂತರ್ಜಾಲವೂ ಇದೆ. ಮತ್ತೇಕೆ ತಡ. ಈ ದಾರಿಯನ್ನು ಅನುಸರಿಸುವ ಮೂಲಕವೂ ನಮ್ಮನ್ನು ನಾವು ಮಾನಸಿಕವಾಗಿ ಜರ್ಜರಿತವಾಗುವುದು ತಪ್ಪಿಸಬಹುದು.
ಇನ್ನು ಮನೆಯ ಸುತ್ತಮುತ್ತಲಿನ ಖಾಲಿ ಪ್ರದೇಶದಲ್ಲಿ ನಮ್ಮದೇ ಕೈತೋಟ ನಿರ್ಮಿಸುವುದು, ಗಿಡಗಳಿಗೆ ನೀರುಣಿಸುವುದು, ಅವುಗಳ ಪಾಲನೆ ಪೋಷಣೆ ಮಾಡುವ ಮೂಲಕವೂ ನಮ್ಮ ಮನಸ್ಸನ್ನು ನಾವು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಸಾಧ್ಯ. ಇದರಿಂದಾಗಿ ಪರಿಸರ ಶೂದ್ಧವಾಗುವ ಜೊತೆಗೆ ನಮ್ಮನ್ನು ನಾವು ಪ್ರಕೃತಿಯ ಜೊತೆಗೆ, ಮಣ್ಣಿನ ಜೊತೆಗೆ ಬೆರೆಯುವಂತೆ ಮಾಡುವುದು ಸಾಧ್ಯವಾಗುತ್ತದೆ. ಅಲ್ಲದೆ ನಮ್ಮ ಪರಿಸರದ ಜೊತೆಗೆ ನಮ್ಮನ್ನು ನಾವು ಕೂಲ್ ಆಗಿಟ್ಟುಕೊಳ್ಳುವುದಕ್ಕೂ ಇದು ಸಹಕಾರಿ.
ಇನ್ನು ದಿನನಿತ್ಯದ ವ್ಯಾಯಾಮವೂ ನಮ್ಮನ್ನು ನಾವು ಒತ್ತಡಕ್ಕೊಳಗಾಗದಂತೆ ರಕ್ಷಿಸಿಕೊಳ್ಳುವಲ್ಲಿ ಸಹಕರಿಸುತ್ತದೆ. ಪ್ರಾತಃಕಾಲದಲ್ಲಿ ಮತ್ತು ಸಂಜೆ ಕನಿಷ್ಠ ಒಂದೊಂದು ಗಂಟೆಯಾದರೂ ವ್ಯಾಯಾಮ ಅಥವಾ ಯೋಗ ಮಾಡುವುದರಿಂದ ದೇಹಾರೋಗ್ಯ ವೃದ್ಧಿಸುತ್ತದೆ. ಅಲ್ಲದೆ ಮೈಂಡ್ ರಿಫ್ರೆಶ್ ಆಗುತ್ತದೆ. ಡಿಪ್ರೆಶನ್ಗೆ ಒಳಗಾಗುವುದನ್ನೂ ಇದು ತಪ್ಪಿಸುತ್ತದೆ.
ವರ್ಣಚಿತ್ರಗಳ ರಚನೆ, ಅಡುಗೆ, ಮನೆಗೆಲಸ ಹೀಗೆ ಹತ್ತು ಹಲವು ಕಾರ್ಯಗಳಲ್ಲಿ ದಿನಪೂರ್ತಿ ನಮ್ಮನ್ನು ನಾವು ತೊಡಗಿಸಿಕೊಂಡಾಗ, ನಾವು ಒಬ್ಬಂಟಿ ಎನ್ನುವುದು ಮರೆತು ಹೋಗುತ್ತದೆ. ಜೊತೆಗೆ ನಮ್ಮ ಕೆಲಸವನ್ನು ನಾವೇ ಮಾಡುವುದನ್ನು ರೂಢಿಸಿಕೊಂಡು ಕಾರ್ಯಪ್ರವೃತ್ತರಾದಲ್ಲಿ ಮಾನಸಿಕ ತೃಪ್ತಿ ದೊರೆಯುತ್ತದೆ. ಜೊತೆಗೆ ನಿಯಂತ್ರಣ ಕಳೆದುಕೊಳ್ಳುವುದನ್ನು ತಪ್ಪಿಸಿಕೊಳ್ಳುವುದು ಸಾಧ್ಯವಾಗುತ್ತದೆ.
ಇನ್ನು ಮನೆಯವರ ಜೊತೆಗೆ ಆನಂದದಿಂದ ಕಳೆಯುವುದಕ್ಕೆಂದೇ ಈ ಸಮಯ ಸಿಕ್ಕಿದೆ. ಲಾಕ್ಡೌನ್ ಮುಗಿಯುವಲ್ಲೀಯವರೆಗೆ ತಮ್ಮ ಮನೆಯವರ ಜೊತೆ ಮಾತಾಡುತ್ತಾ ಸಂತೋಷದಿಂದ ಸಮಯ ಕಳೆಯಿರಿ. ಎಲ್ಲರೂ ಸೇರಿ ಮಾತನಾಡಿ. ಕುಟುಂಬವನ್ನು ಪ್ರೀತಿಸುವ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಹಿರಿಯರ ಜೊತೆಗೆ ಸಮಯ ಕಳೆಯಿರಿ. ಮಕ್ಕಳ ಜೊತೆಗೆ ಆಟವಾಡಿ. ಆಗ ಒತ್ತಡ ಹೇಳ ಹೆಸರಿಲ್ಲದೆ ಮಾಯವಾಗುತ್ತದೆ.
ಒತ್ತಡ ಸಹಜ. ಬಂಧನದ ಹಕ್ಕಿಯ ಹಾಗೆ ನಮ್ಮ ಮನಸ್ಸು ಇಂತಹ ಸಂದರ್ಭದಲ್ಲಿ ಪೇಚಾಡುವುದೂ ಸಹಜ. ಹಾಗೆಂದು ನಾವು ಕುಗ್ಗಿದರೆ ನಾಳೆಯ ನಮ್ಮ ಬದುಕಿನ ಮೇಲೆ ಇದು ಪರಿಣಾಮ ಬೀರುತ್ತವೆ. ಹಾಗಾಗಲು ಬಿಡಬಾರದು. ಬದಲಾಗಿ ನಮ್ಮ ಮನಸ್ಸಿನ ನಿಯಂತ್ರಣ ನಮ್ಮ ಕೈಯಲ್ಲಿ ಇದೆ. ಹೇಗೆ ನಮ್ಮನ್ನು ನಾವು ಒತ್ತಡದಿಂದ ಕಾಪಾಡಿಕೊಳ್ಳಬಹುದು ಎಂಬುದನ್ನು ಅರಿತುಕೊಂಡರೆ ಯಾವ ವೈದ್ಯರು, ಯಾವ ಔಷಧದ ಸಹಾಯವೂ ಇಲ್ಲದೆ ನಮ್ಮನ್ನು ನಾವು ಫಿಟ್ ಆಗಿಟ್ಟುಕೊಳ್ಳುವುದು ಸಾಧ್ಯ. ಏಕೆಂದರೆ ಲಾಕ್ಡೌನ್ ಆಗಿರುವುದು ಸಮಾಜ. ನಮ್ಮ ಮನಸ್ಸಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.