ನವದೆಹಲಿ: ಎಪ್ರಿಲ್ 7 – ವಿಶ್ವ ಆರೋಗ್ಯ ದಿನ. ಈ ಬಾರಿಯ ಆರೋಗ್ಯ ದಿನವನ್ನು ಕೋವಿಡ್-19 ವಿರುದ್ಧ ಹೋರಾಟ ನಡೆಸುತ್ತಿರುವ, ಆ ಮೂಲಕ ಜನರ ಜೀವ, ಜೀವನವನ್ನು ಕಾಪಾಡಲು ತಮ್ಮ ಜೀವನವನ್ನೇ ಪಣಕ್ಕಿಟ್ಟು ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ರಕ್ಷಕರಿಗೆ ಧನ್ಯವಾದ ಸಮರ್ಪಿಸುವ ಮೂಲಕ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
ಕೊರೋನಾ ವೈರಸ್ನಿಂದ ನಮ್ಮನ್ನು ಕಾಪಾಡುತ್ತಿರುವ ಆರೋಗ್ಯ ರಕ್ಷಕರು, ನರ್ಸ್ಗಳನ್ನು ಬೆಂಬಲಿಸಿ ಎಂಬ ಟ್ಯಾಗ್ಲೈನ್ ಜೊತೆಗೆ ಈ ಬಾರಿಯ ವರ್ಲ್ಡ್ ಹೆಲ್ತ್ ಡೇ ಅನ್ನು ಆಚರಿಸಲಾಗುತ್ತಿದ್ದು, ತಮ್ಮ ಜೀವನವನ್ನೇ ಪಣಕ್ಕಿಟ್ಟು ನಮ್ಮ ಜೀವ ರಕ್ಷಣೆಯ ಭಾರ ಹೊತ್ತವರಿಗೆ ಕೃತಜ್ಞತೆ ಅರ್ಪಿಸುವ ಮೂಲಕ ಈ ಬಾರಿ ಈ ದಿನಾಚರಣೆಯನ್ನು ಅರ್ಥಪೂರ್ಣವಾಗಿ ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ.
ಈ ಬಗ್ಗೆ ಮಾತನಾಡಿರುವ ಮೋದಿ, ಆರೋಗ್ಯ ರಕ್ಷಕರು ಸಾಮಾನ್ಯ ದಿನಗಳಿಗಿಂತ ದ್ವಿಗುಣ ಕೆಲಸವನ್ನು ಈ ಕಠಿಣ ಪರಿಸ್ಥಿತಿಯಲ್ಲಿ ಮಾಡುತ್ತಿದ್ದಾರೆ. ನಾವು ನಮ್ಮ ಆರೋಗ್ಯಕ್ಕಾಗಿ ಪ್ರಾರ್ಥಿಸುವ ಜೊತೆಗೆ ನಮ್ಮ ಆರೋಗ್ಯ ರಕ್ಷಣೆಯಲ್ಲಿ ತೊಡಗಿರುವವರಿಗೂ ಧನ್ಯವಾದ ಸಮರ್ಪಿಸಿ, ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸುವಂತೆ ತಿಳಿಸಿದ್ದಾರೆ. ಜೊತೆಗೆ ನಮ್ಮನ್ನು ನಾವು ಕೊರೋನಾ ದಿಂದ ಕಾಪಾಡಿಕೊಳ್ಳಲು ಮನೆಯಿಂದ ಹೊರಬರದೆ ಲಾಕ್ಡೌನ್ ನಿಯಮಗಳನ್ನು ಪಾಲಿಸುವಂತೆಯೂ ಮೋದಿ ತಿಳಿಸಿದ್ದಾರೆ.
ಜೊತೆಗೆ ಆರೋಗ್ಯ ಸಿಬ್ಬಂದಿಗಳಿಗೆ ಬೇಕಾದ ಪಿಪಿಇ ರಕ್ಷಣಾ ವಸ್ತುಗಳ ಕೊರತೆ ಇದ್ದು, ಲಭ್ಯವಿರುವವುಗಳನ್ನು ಆರೋಗ್ಯ ರಕ್ಷಕರಿಗೆ ದೊರೆಯುವಂತೆ ಮಾಡಬೇಕು. ಆದ್ದರಿಂದ ಸಾಮಾನ್ಯ ಜನರು ತಾವೇ ತಯಾರಿಸಿದ ಮಾಸ್ಕ್, ಕೈಗವಸುಗಳನ್ನು ಮತ್ತಿತರ ವಸ್ತುಗಳನ್ನು ಬಳಸುವಂತೆಯೂ ಅವರು ಜನತೆಗೆ ಮನವಿ ಮಾಡಿದ್ದಾರೆ. ಜೊತೆಗೆ ಬಡವರಿಗೆ ಆಹಾರ, ಔಷಧ ಮತ್ತು ಧನ ಸಹಾಯ ಮಾಡುವ ಮೂಲಕವೂ ದೇಶಸೇವೆ ಮಾಡುವಂತೆ ತಿಳಿಸಿದ್ದಾರೆ. ಜೊತೆಗೆ ಆರೋಗ್ಯ ರಕ್ಷಕರಿಗೆ ಆಹಾರ ಒದಗಿಸುವ ಮೂಲಕವೂ ನಮ್ಮನ್ನು ಕಾಯುವ ಅವರ ಜೊತೆ ನಾವಿದ್ದೇವೆ ಎಂಬ ಸಂದೇಶ ಸಾರುವಂತೆ ಪ್ರಧಾನಿ ತಿಳಿಸಿದ್ದಾರೆ.
ಅಲ್ಲದೆ ಆರೋಗ್ಯ ರಕ್ಷಕರ ಮಕ್ಕಳ ಬಗ್ಗೆ ಕಾಳಜಿ ತೆಗೆದುಕೊಳ್ಳುವ ಮೂಲಕವೂ ಈ ದಿನವನ್ನು ಹೆಚ್ಚು ಅರ್ಥಪೂರ್ಣವಾಗಿ ಆಚರಿಸುವಂತೆ ಮೋದಿ ಮನವಿ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.