ಕೊರೋನಾ ಕರಾಳತೆಗೆ ಇಡೀ ದೇಶವೇ ಕಂಗೆಟ್ಟು ಕೂತಿದೆ. ಸರಕಾರ ಸೋಂಕು ವ್ಯಾಪಿಸದಂತೆ ಲಾಕ್ಡೌನ್ ಅನ್ನು ಜಾರಿಗೆ ತಂದಿದೆ. ಇದರಿಂದಾಗಿ ದೇಶದ ಆರ್ಥಿಕತೆಯ ಜೊತೆಗೆ, ಜನಜೀವನ ಅಸ್ತವ್ಯಸ್ತಗೊಂಡಿದೆ. ಬಡವರು ದೈನಂದಿನ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳುವುದಕ್ಕೂ ಪರದಾಟ ನಡೆಸುವ ಸ್ಥಿತಿ ಬಂದೊದಗಿದೆ. ಇಂತಹ ಸಂದರ್ಭದಲ್ಲಿ ಈ ಕಠಿಣ ಸ್ಥಿತಿಯಲ್ಲಿ ಮಾಸ್ಕ್ ಕೊಂಡುಕೊಳ್ಳುವುದಕ್ಕೂ ಸಾಧ್ಯವಾಗದ ಬಡವರಿಗೆ ಮಾಸ್ಕ್ ತಯಾರಿಸಿ ಕೊಡುವ ಕಾರ್ಯದಲ್ಲಿ ಬೆಂಗಳೂರಿನ ಈ ಇಬ್ಬರು ಸಹೋದರಿಯರು ತೊಡಗಿಕೊಂಡಿದ್ದಾರೆ.
ಅಂದ ಹಾಗೆ ಈ ಇಬ್ಬರು ಸಹೋದರಿಯರ ಹೆಸರು ನವ್ಯ ಮತ್ತು ನಿರ್ವಾ. ಬೆಂಗಳೂರಿನ ಸದಾಶಿವ ನಗರದ ನಿವಾಸಿಗಳು. 21 ದಿನಗಳ ಲಾಕ್ಡೌನ್ ಸಂದರ್ಭದಲ್ಲಿ ಬೋರ್ ಆಗುತ್ತದೆ, ಏನಪ್ಪಾ ಮಾಡೋದು ಎನ್ನುವವರಿಗೆ ಹೀಗೂ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟ ಮಕ್ಕಳು. ಅಂದ ಹಾಗೆ ಇವರಿಬ್ಬರೂ ವಿದ್ಯಾರ್ಥಿಗಳು. 12 ಮತ್ತು 10 ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದೀಗ 21 ದಿನಗಳನ್ನು ಪ್ರಯೋಜನಕಾರಿಯಾಗಿ ಕಳೆಯುವ ನಿಟ್ಟಿನಲ್ಲಿ, ಬಡವರಿಗಾಗಿ ಮಾಸ್ಕ್ ತಯಾರಿ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಇವರು ದಿನದ ತಮ್ಮ ಬಿಡುವಿನ ವೇಳೆಯಲ್ಲಿ ಮಾಸ್ಕ್ ತಯಾರಿಸುತ್ತಾರೆ. ಹಾಗೆಯೇ ಅದನ್ನು ತಮ್ಮ ಏರಿಯಾದ ಪೌರ ಕಾರ್ಮಿಕರಿಗೆ ಮತ್ತು ಮಾಸ್ಕ್ ಕೊಂಡುಕೊಳ್ಳುವುದಕ್ಕೂ ಶಕ್ತರಲ್ಲದ ಬಡ ಜನರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ದಿನಕ್ಕೆ 20 ಮಾಸ್ಕ್ಗಳನ್ನು ತಯಾರಿಸುತ್ತಾರೆ. ಇನ್ನು ನವ್ಯಾ ತಂದೆ ಆಕೆ 7 ನೇ ತರಗತಿಯಲ್ಲಿದ್ದಾಗ ನೀಡಿದ್ದ, ಯಂತ್ರದ ಸಹಾಯದಿಂದ ಇವರು ಮಾಸ್ಕ್ ತಯಾರು ಮಾಡುತ್ತಿದ್ದಾರೆ.
ಜನರು ಮಾಸ್ಕ್ಗೆ ಪರ್ಯಾಯವಾಗಿ ಸೀರೆ, ಕರವಸ್ತ್ರಗಳನ್ನು ಅಲರ್ಜಿ ತಡೆಯುವ ನಿಟ್ಟಿನಲ್ಲಿ ಬಳಕೆ ಮಾಡುವುದನ್ನು ಕಂಡ ಇವರು ಎಲ್ಲರಿಂದಲೂ ಮಾಸ್ಕ್ ಕೊಂಡುಕೊಳ್ಳುವುದು ಸಾಧ್ಯವಿಲ್ಲ ಎನ್ನುವುದನ್ನು ಮನಗಂಡರು. ಅದಕ್ಕಾಗಿಯೇ ಅಂತಹ ಬಡ ಜನತೆಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಇಂತಹ ಒಂದು ಮಾದರಿ ಕಾರ್ಯಕ್ಕೆ ಮುಂದಾಗಿ ಶಹಬ್ಬಾಸ್ ಗಿಟ್ಟಿಸಿಕೊಂಡಿದ್ದಾರೆ.
ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ದೇಶವನ್ನು ಕಾಪಾಡುವ ಕೆಲಸಕ್ಕೆ ಈ ಮಕ್ಕಳೂ ಕೈ ಜೋಡಿಸುವ ಮೂಲಕ ಹೀಗೂ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಮತ್ತು ಇತರರಿಗೂ ಮಾದರಿಯಾಗಿದ್ದಾರೆ ಎಂದರೂ ತಪ್ಪಾಗಲಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.