ನವದೆಹಲಿ: ಕೊರೋನ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ದೇಶವ್ಯಾಪಿಯಾಗಿ 21 ದಿನಗಳ ಲಾಕ್ಡೌನ್ ಅನ್ನು ಘೋಷಣೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಉತ್ತರಿಸಿದ್ದಾರೆ.
ಮೋದಿ ಅವರು ಮಂಗಳವಾರ ದೇಶವ್ಯಾಪಿಯಾಗಿ ಲಾಕ್ ಡೌನ್ ಮಾಡಿದ ಬಳಿಕ, ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ಸಂದೇಹಗಳ ಬಗ್ಗೆ ಹಲವಾರು ಪ್ರಶ್ನೆಗಳನ್ನು ಎತ್ತಿದ್ದರು. ಹೀಗಾಗಿ ಪ್ರಧಾನಿಯವರು ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ನೀಡುವ ಪ್ರಯತ್ನ ಮಾಡಿದ್ದಾರೆ.
ತನ್ನ ಲೋಕಸಭಾ ಕ್ಷೇತ್ರ ವಾರಣಾಸಿಯ ಜನರ ಪ್ರಶ್ನೆಗಳಿಗೆ ಉತ್ತರಿಸಿದ ಮೋದಿ, “ಭಾರತ ಯುದ್ಧವನ್ನು ಗೆಲ್ಲಲು ಹದಿನೆಂಟು ದಿನಗಳು ಬೇಕಾಯಿತು, ಕೋವಿಡ್ -19 ವಿರುದ್ಧದ ಯುದ್ಧವನ್ನು ಗೆಲ್ಲಲು ಮುಂದಿನ 21 ದಿನಗಳು ನಿರ್ಣಾಯಕವಾಗಿದೆ” ಎಂದಿದ್ದಾರೆ.
ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ 562ಕ್ಕೆ ಬುಧವಾರ ಏರಿಕೆಯಾಗಿದೆ. ಸಾವಿನ ಸಂಖ್ಯೆ 11ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.
ಪ್ರಸ್ತುತ ಸನ್ನಿವೇಶದಲ್ಲಿ ವೈರಸ್ ಹರಡುವುದನ್ನು ತಡೆಗಟ್ಟಲು ಸಾಮಾಜಿಕ ಅಂತರ ಅತ್ಯಂತ ಪ್ರಮುಖವಾದುದು ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ. ಈ ನಿಟ್ಟಿನಲ್ಲಿ ವಾರಣಾಸಿಯ ಜನತೆ ಉದಾಹರಣೆ ಯಾಗಬೇಕು ಎಂದು ಅವರು ಹೇಳಿದ್ದಾರೆ.
ಆರೋಗ್ಯ ಸೇವಾ ಕಾರ್ಯಕರ್ತರು ದೌರ್ಜನ್ಯಗಳನ್ನು ಎದುರಿಸುತ್ತಿರುವ ಬಗ್ಗೆ ಮತ್ತು ದಿನಗೂಲಿ ಕಾರ್ಮಿಕರು ಸಂಕಷ್ಟ ಎದುರಿಸುತ್ತಿರುವ ಬಗ್ಗೆಯೂ ಮೋದಿ ಪ್ರಸ್ತಾಪ ಮಾಡಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಸಹಕರಿಸದೆ ಇರುವ ಜನರ ವಿರುದ್ಧ ಕಠಿಣಾತಿ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಗೃಹ ಸಚಿವಾಲಯಗಳು ಮತ್ತು ಉಪ ಪೊಲೀಸ್ ಆಯುಕ್ತರು ಗಳಿಗೆ ಸೂಚಿಸಿರುವುದಾಗಿ ಮೋದಿ ಹೇಳಿದ್ದಾರೆ.
ದೇಶದ ಆಸ್ಪತ್ರೆಗಳು ದಿನದ 18 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದೆ, ಆರೋಗ್ಯ ಸೇವಾ ಕಾರ್ಯಕರ್ತರಿಗೆ ದಿನಕ್ಕೆ ಎರಡರಿಂದ ಮೂರು ಗಂಟೆವರೆಗೂ ಮಲಗಲು ಸಮಯ ಸಿಗುತ್ತಿಲ್ಲ. ನಾಗರಿಕ ಸೇವಾ ವಲಯದ ಸಿಬ್ಬಂದಿಗಳು ಕೂಡ ಈ ಸಂಕಷ್ಟದ ಕಾಲದಲ್ಲಿ ಅತಿ ಹೆಚ್ಚು ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದ್ದಾರೆ ಎಂದಿದ್ದಾರೆ.
ಜನರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಮತ್ತು ಆತಂಕಕ್ಕೆ ಒಳಗಾಗಬಾರದು. ಕೇವಲ ಸತ್ಯವನ್ನು ಮಾತ್ರ ಜನರ ನಂಬಬೇಕೆಂದು ಮೋದಿ ಒತ್ತಾಯಿಸಿದ್ದಾರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.