“ಮಾಧ್ಯಮಗಳು ಪರಿಸ್ಥಿತಿಯನ್ನು ವೈಭವೀಕರಿಸಿ ಜನರಲ್ಲಿ ಭಯ ಭಿತ್ತಿ ತಮ್ಮ ಟಿಆರ್ ಪಿ ಹೆಚ್ಚಿಸಿಕೊಳ್ಳುತ್ತಿವೆ”!
” ಸರಕಾರವು ಎರಡರಿಂದ ಮೂರು ಶೇಕಡಾ ಮರಣ ಪ್ರಮಾಣ ಇರುವಂತಹ ಕೊರೋನ ಕಾಯಿಲೆಯಲ್ಲಿ ಅನಗತ್ಯವಾದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಜನರ ವ್ಯವಹಾರಕ್ಕೆ ತೊಂದರೆ ಕೊಡುತ್ತಿದೆ”! “
ಇದು ನಾನು ಮಾಡುತ್ತಿರುವ ಆರೋಪವೆಂದು ಗಾಬರಿಗೊಳ್ಳುತ್ತಾ ಇದ್ದೀರಾ? ಖಂಡಿತ ಇಲ್ಲ ಸ್ವಾಮಿ. ಇದು ಕೆಲವೊಬ್ಬ ಜನಸಾಮಾನ್ಯರು, ಕೆಲವೊಬ್ಬ ತಜ್ಞವೈದ್ಯರು ಹಾಗೂ ಕೆಲವೊಬ್ಬ ವಿದ್ಯಾವಂತರು ಈ ಕೊರೋನಾವನ್ನು ಸಾಮಾನ್ಯ ಕಾಯಿಲೆಯೆಂದು ಜನರಿಗೆ ಆತ್ಮವಿಶ್ವಾಸ ಬರಿಸಲು ಸಾಮಾನ್ಯವಾಗಿ ಆಡುತ್ತಿರುವ ಮಾತುಗಳು. ಇಂತಹ ಮಾತುಗಳನ್ನು ಕೇಳಿದಾಗ ಒಂದು ಸಲ ಚಪ್ಪಾಳೆ ಹೊಡೆದೇ ಬಿಡೋಣ ಎಂದು ಯಾರಿಗಾದರೂ ಅನ್ನಿಸದೇ ಇರದು. ಇಂತಹ ಮಾತುಗಳನ್ನು ಟಿವಿ ಚಾನೆಲ್ ಗಳಲ್ಲಿ ಕುಳಿತು ಯಾರಾದರೂ ವೈದ್ಯರು ಹೇಳಿದರಂತೂ ಮುಗಿದೇಹೋಯಿತು. ನಿಂತಲ್ಲೇ ಕುಪ್ಪಳಿಸಿ ಕುಣಿದಾಡಿ ಬಿಡೋಣ ಎನಿಸುತ್ತದೆ ಅಲ್ಲವೇ? ಆದರೆ ಆತ್ಮವಿಶ್ವಾಸ ನೀಡುವ ಭರದಲ್ಲಿ ಆಡುವ ಈ ಮಾತುಗಳೆಲ್ಲ ಕಿವಿಗೆ ಇಂಪಾಗಿರಬಹುದು. ಆದರೆ ಜಾಗರೂಕತೆಯ ಕ್ರಮಗಳನ್ನು ದೂರಕ್ಕೆ ತಳ್ಳಿ, ಅತಿಯಾದ ಅಂಧ ಆತ್ಮವಿಶ್ವಾಸದಿಂದ, ಅಸಡ್ಡೆಯಿಂದ ಇರುವುದಕ್ಕಂತೂ ಖಂಡಿತವಾಗಿಯೂ ಸಾಧ್ಯವಾಗದು. ಏಕೆಂದರೆ ಚೀನಾ ಮತ್ತು ಇಟಲಿಗಳನ್ನು ನೋಡಿದರೆ ಇದು ನಮಗೆ ಅರ್ಥವಾದೀತು.
ಆರಂಭದಲ್ಲಿ ಚೀನಾದಲ್ಲಿ ಕೊರೋನ ಬಾಧಿತರ ಸಂಖ್ಯೆ 333 ಇದ್ದಾಗ ಬೇರೆ ಬಹಳಷ್ಟು ದೇಶಗಳಲ್ಲಿ ಒಂದರಿಂದ ಎರಡರಷ್ಟು ಬಾಧಿತರು ಇದ್ದರು. ಚೀನಾದಲ್ಲಿ 12,759 ಬಾಧಿತರು ಇದ್ದಾಗ, ಇಟಲಿಯಲ್ಲಿ 2, ಭಾರತದಲ್ಲಿ 3 ಇತ್ತು. ಚೀನಾದಲ್ಲಿ 77,427 ರಷ್ಟು ಬಾಧಿತರ ಸಂಖ್ಯೆ ತಲುಪಿದಾಗ, ಇಟಲಿಯಲ್ಲಿ 181 ಸಂಖ್ಯೆ ದಾಟಿತ್ತು. ಚೀನಾದಲ್ಲಿ 80,844 ಸಂಖ್ಯೆ ತಲುಪಿದಾಗ ಇಟಲಿಯಲ್ಲಿ21157
, ಇರಾನ್ ದೇಶದಲ್ಲಿ 12729 , ಸೌತ್ ಕೊರಿಯಾದಲ್ಲಿ 8162 , ಸ್ಪೇನ್ ನಲ್ಲಿ 5753 ಸಂಖ್ಯೆಯಷ್ಟು ತಲುಪಿತು. ಬಾಧಿತರ ಸಂಖ್ಯೆಯನ್ನು ಗಮನಿಸಿದರೆ ಯಾವ ರೀತಿಯಲ್ಲಿ ಈ ಕಾಯಿಲೆ ಘಾತ ಗಣಕದ ರೀತಿಯಲ್ಲಿ ಹರಡಿದೆ ಎಂಬುದು ತಮಗೆ ಅರ್ಥವಾಗಿರಬೇಕಲ್ಲ?
1918ರಲ್ಲಿ ಕಂಡುಬಂದ ವೈರಸ್ ಫ್ಲೂ ಜ್ವರದಲ್ಲಿ ಐದರಿಂದ ಹತ್ತು ಕೋಟಿ ಜನ ಜಗತ್ತಿನಾದ್ಯಂತ ಮರಣ ಹೊಂದಿದ್ದರು. ಇದರ ಸ್ಪಷ್ಟ ಅರಿವಿಲ್ಲದೆಯೋ ಏನೋ, ಕೋರೋನಾ ಕೂಡ ಇಂಥದ್ದೇ ಸಾಮಾನ್ಯ ಕಾಯಿಲೆಯೆಂದು ಬಹಳಷ್ಟು ಜನ ಸುದ್ದಿಯನ್ನು ಬಿತ್ತರಿಸುತ್ತಿದ್ದಾರೆ. ಆದರೆ ಮಾಧ್ಯಮಗಳಿಗೆ ಮತ್ತು ಸರಕಾರಕ್ಕೆ ಈ ಕಾಯಿಲೆಯ ಗಂಭೀರತೆಯ ಅರಿವು ಅತ್ಯಂತ ಸ್ಪಷ್ಟವಾಗಿ ಇದ್ದುದರಿಂದಲೇ ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಬೇಕಾದ ಅನಿವಾರ್ಯತೆ ಉಂಟಾಯಿತು. ಮಾಧ್ಯಮಗಳನ್ನು ಸಮಾಜದ ಕಣ್ಣು ಎಂದು ಭಾವಿಸುತ್ತೇವೆ. ಸಮಾಜದಲ್ಲಿ ಸಂಭವಿಸುವ ಪ್ರತಿಯೊಂದನ್ನು ಪ್ರತಿಫಲಿಸುವ ಕನ್ನಡಿ ಎಂದು ನಂಬಿದ್ದೇವೆ. ಹಾಗಾದರೆ ಇಂದಿನ ಪರಿಸ್ಥಿತಿಯಲ್ಲಿ ಈ ಕಾಯಿಲೆಯ ಕುರಿತಾದ ಅಪಾಯಕಾರಿ ಸಂದರ್ಭಗಳನ್ನು ಬೊಟ್ಟು ಮಾಡಿ ತೋರಿಸದಿದ್ದರೆ ಬಹುಶಃ ನಿದ್ರಾ ಸ್ಥಿತಿಯಲ್ಲಿರುವ ಸಮಾಜ ಎಚ್ಚರಗೊಳ್ಳುತ್ತಿರಲಿಲ್ಲವೋ ಏನೋ. ಸಮಸ್ಯೆ ತನ್ನ ಬುಡಕ್ಕೆ ಬಂದಾಗ ಮಾತ್ರ ಎಚ್ಚರಗೊಳ್ಳುವ ಒಂದು ರೀತಿಯ ಜಾಢ್ಯ ಹಿಡಿದ ಮನಸ್ಥಿತಿ ಬಹಳಷ್ಟು ಜನರಲ್ಲಿ ಖಂಡಿತ ಇದೆ. ಅಥವಾ ನಾನೊಬ್ಬ ನಿಯಮ ಮುರಿದರೆ ಯಾರ ಗಂಟು ಏನು ಹೋಗುತ್ತದೆ ? ಎಂಬ ಉದ್ಧಟತನದ ಮನಸ್ಥಿತಿಯು ಜೊತೆಗೆ ಇದೆ. ಚೀನಾದಲ್ಲಿ ಕೋರೋನ ಪೀಡಿತರನ್ನು ಹಿಡಿದು ಪ್ರತ್ಯೇಕಿಸುವುದಕ್ಕೆ ಪರದಾಡುತ್ತಿರುವ ಪೊಲೀಸರ ಅವಸ್ಥೆಯನ್ನು ವಿಡಿಯೋದಲ್ಲಿ ನೋಡಿದರೆ ನಮಗೆ ಅರ್ಥವಾಗಬೇಕು.
ಇನ್ನು, ದೃಢೀಕರಿಸುವ ಪರೀಕ್ಷೆಯ ವಿಷಯಕ್ಕೆ ಬರೋಣ. 5 ಕೋಟಿ ಜನಸಂಖ್ಯೆ ಇರುವ ಕೊರಿಯಾದಲ್ಲಿ 2.7 ಲಕ್ಷ ಜನರಿಗೆ ಪಿಸಿಆರ್ ಟೆಸ್ಟ್ ಮಾಡಿದ್ದಾರೆ. ಯುಎಇನಲ್ಲಿ 40 ಸಾವಿರ ಜನರಿಗೆ, ಭಾರತದಲ್ಲಿ 12000 ಜನರಿಗೆ ಮಾತ್ರ ಈ ಪರೀಕ್ಷೆ ನಡೆಸಲಾಗಿದೆ.( ಮೂರು ದಿನಗಳ ಹಿಂದಿನ ಅಂಕಿಅಂಶ). ಒಂದು ವೇಳೆ ಭಾರತದ ಜನಸಂಖ್ಯೆಯ ಒಂದು ಶೇಕಡ ಜನರಿಗೆ ಇದು ಬಂದರೆ, ಅವರಲ್ಲಿ 20 ಶೇಕಡಾ ಜನ ಗಂಭೀರ ಅವಸ್ಥೆಯನ್ನು ತಲುಪಿದರೆ, ಅಂದರೆ 30 ಲಕ್ಷ ಜನರಿಗೆ ಉಸಿರಾಟದ ವೈಫಲ್ಯ ಕಾಣಿಸಿಕೊಂಡರೆ, ಆ ಸಂದರ್ಭದಲ್ಲಿ ಅಷ್ಟೊಂದು ಜನರಿಗೆ ಕೃತಕ ಉಸಿರಾಟದ ವ್ಯವಸ್ಥೆ ಗೆ ಬೇಕಾಗುವ ವೆಂಟಿಲೇಟರ್ ಮೆಷಿನ್ ಗಳು ನಮ್ಮ ದೇಶದಲ್ಲಿ ಲಭ್ಯವಿದೆಯೇ? ಖಂಡಿತಕ್ಕೂ ಅಸಾಧ್ಯ. ಇಟಲಿಯಲ್ಲಿ ಇದೇ ಸ್ಥಿತಿ ಇದೆ. ಅಲ್ಲಿ ಹಲವು ರೋಗಿಗಳು ಬಂದರೆ, ಇರುವ ಸೀಮಿತ ವ್ಯವಸ್ಥೆಯಲ್ಲಿ ಯಾರು ಬದುಕುವ ಸಾಧ್ಯತೆ ಹೆಚ್ಚು ಇದೆಯೋ ಅಂತಾ ರೋಗಿಗಳಿಗೆ ಮೊದಲು ಚಿಕಿತ್ಸೆ ಕೊಡುತ್ತಾರೆ. ಭಾರತದಲ್ಲೂ ಕೂಡ ಸದ್ಯದ ಪರಿಸ್ಥಿತಿಯಲ್ಲಿ ವೇಗದಲ್ಲಿ ಈ ಕಾಯಿಲೆ ಹರಡಿದರೆ ಇಟಲಿಯ ಪರಿಸ್ಥಿತಿಯೇ ಇಲ್ಲಿಯೂ ಬರಬಹುದು. ಆದರೆ ಹಾಗಾಗದಿರಲಿ ಎಂದು ಪ್ರಾರ್ಥಿಸೋಣ. ಇಟಲಿಯಲ್ಲೂ ಕೂಡ ಆರಂಭದ ಹಂತದಲ್ಲಿ ಮಾಸ್ಕ್ ಧರಿಸಿದವರನ್ನು ಕಂಡರೆ ಅಪಹಾಸ್ಯ ಮಾಡುತ್ತಿದ್ದೆ ಎಂದು ಅಲ್ಲಿಯ ರೋಗಿಯೊಬ್ಬ ಹೇಳಿಕೊಂಡಿದ್ದಾನೆ. ನಮ್ಮಲ್ಲಿ ಕೂಡ ಗುಂಪು ಸೇರುವುದನ್ನು, ಪ್ರಯಾಣ ಮಾಡುವುದನ್ನು ಸರಕಾರವು ನಿಷೇಧಿಸಿದಾಗ ಅಪಹಾಸ್ಯ ಮಾಡಿದ ವೈದ್ಯರ, ವಿದ್ಯಾವಂತರ ದಂಡೇ ಇದೆ. ಆದರೆ ಈಗ ಎಲ್ಲರಿಗೂ ಪರಿಸ್ಥಿತಿಯ ಗಂಭೀರತೆಯ ಅರಿವು ಆಗುತ್ತಾ ಇರುವುದು ಸಮಾಧಾನಕರ ವಿಷಯ.
ತಪ್ಪು ಮಾಹಿತಿಯ ಗಾಳಿಸುದ್ದಿ ಹಬ್ಬಿಸುವುದು ವೈರಸ್ ನಷ್ಟೇ ಅಪಾಯಕಾರಿ. ಆದ ಕಾರಣ ಗಾಳಿಸುದ್ದಿಯನ್ನು” ವೈರಲ್” ಮಾಡಬೇಡಿ. ಉತ್ತರ ಭಾರತದಲ್ಲಿ ಕೊರೋನಾವನ್ನು ತಡೆಗಟ್ಟಲು ಔಷಧ ಇದೆ ಎಂದು ಘೋಷಿಸಿಕೊಂಡ ಆಯುರ್ವೇದ ವೈದ್ಯರೊಬ್ಬರು ಇಂದು ಪೊಲೀಸರ ಸೆರೆಯಾಳಾಗಿದ್ದಾರೆ. ಆದ ಕಾರಣ ರಾಷ್ಟ್ರೀಯ ವಿಪತ್ತಿನ ಇಂತಹ ಸಂದರ್ಭದಲ್ಲಿ ಸುಳ್ಳು ಸುದ್ದಿ ಹಬ್ಬಿಸುವುದು ದೊಡ್ಡ ಅಪರಾಧ. ಗೋಮೂತ್ರ ಕುಡಿದರೆ ಸರಿಯಾಗುತ್ತದೆ, ಬೆಳ್ಳುಳ್ಳಿ ತಿಂದರೆ ವೈರಸ್ ಸತ್ತುಹೋಗುತ್ತದೆ, ಸರಿಯಾಗುತ್ತದೆ ಎಂಬಿತ್ಯಾದಿ ಪುಕಾರುಗಳು ಜನರನ್ನು ದಿಕ್ಕು ತಪ್ಪಿಸುತ್ತವೆ. ಕೊರೋನಾ ವೈರಸ್ಸನ್ನು ಕೊಲ್ಲುವ ಔಷಧವಾಗಲಿ, ತಡೆಗಟ್ಟುವ ಲಸಿಕೆಯಾಗಲಿ ಈವರೆಗೆ ಬಂದಿಲ್ಲ. ಜ್ವರ, ಉಸಿರಾಟದ ಸಮಸ್ಯೆ ಇತ್ಯಾದಿ ಲಕ್ಷಣಗಳಿಗೆ ವೈದ್ಯಕೀಯ ಚಿಕಿತ್ಸೆ ಹಾಗೂ ಅಂತಿಮವಾಗಿ ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆ ಉತ್ಪಾದಿಸುವ ಆಂಟಿಬಯೋಟಿಕ್ಗಳು ಈ ಕಾಯಿಲೆಗೆ ಪರಿಹಾರ.
ಈಗಾಗಲೇ ಕೇಂದ್ರ ಸರಕಾರ 200ಕೋಟಿ ಹಣವನ್ನು ಈ ಸಂದರ್ಭಗಳನ್ನು ನಿಭಾಯಿಸಲು ಬಿಡುಗಡೆ ಮಾಡಿದೆ. ನಿರ್ಬಂಧ ವಿಧಾನಗಳನ್ನು ಮಾರ್ಚ್ 31ವರೆಗೆ ಮುಂದುವರಿಸಿದೆ. ಹೊಸ ಕೋರೋನಾ ರೋಗಿಗಳು ದಾಖಲು ಆಗುತ್ತಲೇ ಇದ್ದಾರೆ. ಚೆಕ್ ಪೋಸ್ಟ್ ಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಮುಂದುವರಿದಿದೆ. ವಿಮಾನ ಪ್ರಯಾಣಗಳನ್ನು ರದ್ದುಗೊಳಿಸಲಾಗಿದೆ. ಕಾಸರಗೋಡಿನಲ್ಲಿ ಹೊಸ ರೋಗಿಗಳು ದೃಢೀಕರಣವಾದ ಕಾರಣ ರಸ್ತೆ ಸಂಪರ್ಕಗಳನ್ನು ರದ್ದುಗೊಳಿಸಿದೆ. ವಿದೇಶದಿಂದ ಬಂದಿರುವ ಪ್ರಯಾಣಿಕರ ಫೋನ್ ನಂಬರ್ ಗಳನ್ನು ಸಂಗ್ರಹಿಸಿ ದಾಖಲಿಸಲಾಗಿದೆ. ಸಂಶಯದ ವ್ಯಕ್ತಿಗಳನ್ನು ಪ್ರತ್ಯೇಕ ಆಂಬುಲೆನ್ಸ್ ಮೂಲಕ ತುರ್ತು ಸಾಗಾಣಿಕೆಗೆ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆಗಳಲ್ಲಿ ಶಂಕಿತರನ್ನು ಪ್ರತ್ಯೇಕ ವಾರ್ಡುಗಳಲ್ಲಿ ಕ್ವಾರೆಂಟೈನ್ ಮಾಡಲಾಗಿದೆ. ಭಾರತೀಯ ಸೇನೆಯಲ್ಲಿ ಕೂಡ ಒಬ್ಬರು ಕೊರೋನ ರೋಗಿ ದೃಢೀಕೃತ ಆಗಿದ್ದಾರೆ, ಆದ ಕಾರಣ ಸಮರಾಭ್ಯಾಸವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ನಮ್ಮ ದೇಶದಲ್ಲಿ ದೃಢೀಕೃತ ರೋಗಿಗಳ ಸಂಖ್ಯೆ 170 ದಾಟಿದೆ.. ಜಿಮ್ನಾಷಿಯಂ, ಮಾಲ್ ಗಳು ,ಸಂತೆಗಳು, ಸಿನಿಮಾ ಥಿಯೇಟರ್, ಧಾರ್ಮಿಕ ಕೇಂದ್ರಗಳು, ಈಜುಕೊಳಗಳಿಗೆ ಹೋಗದಿರಲು ಸರಕಾರ ಕೇಳಿಕೊಂಡಿದೆ. ಬಸ್, ರೈಲು , ವಿಮಾನ ಪ್ರಯಾಣವನ್ನು ರದ್ದುಗೊಳಿಸಲು ವ್ಯವಸ್ಥೆ ಮಾಡಿದೆ. ಮೀಟಿಂಗ್ ಮಾಡಬೇಕಾದರೆ ವೆಬ್ ಬೇಸ್ಡ್ ಮೀಟಿಂಗ್ ಮಾಡಲು ಸೂಚಿಸಲಾಗಿದೆ. ಕಾನ್ಫರೆನ್ಸ್ ,ಕ್ರೀಡೆ, ಕೈ ಕುಲುಕು ವುದನ್ನು ಬಿಟ್ಟು ಬಿಡಲು ಹೇಳಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜನ ಸೇರುವುದನ್ನು ತಪ್ಪಿಸಬೇಕಾಗಿದೆ.
ಇವೆಲ್ಲದರ ಮಧ್ಯೆ, ಖುಷಿಯ ವಿಷಯ ಏನು ಗೊತ್ತೇನು? ಮಿತ್ರರೇ…ವಿಶ್ವ ಆರೋಗ್ಯ ಸಂಸ್ಥೆ, ಕೋರೋನ ಕಾಯಿಲೆ ತಡೆಗಟ್ಟುವಿಕೆಗೆ ಭಾರತ ಸರಕಾರ ತೆಗೆದುಕೊಂಡ ಕ್ರಮಗಳನ್ನು ಮುಕ್ತ ಕಂಠದಿಂದ ಹೊಗಳಿದೆ.
ಬಂಧುಗಳೇ,ಇದೆಲ್ಲದರ ಉದ್ದೇಶ ಒಂದೇ.
ಈ ವೈರಾಣು ಕಾಯಿಲೆ ಹರಡುವುದನ್ನು ತಪ್ಪಿಸುವುದು. ಅದಕ್ಕೋಸ್ಕರವೇ ಸಾಮಾಜಿಕ ಸಂಪರ್ಕಗಳನ್ನು ಕಡಿಮೆಗೊಳಿಸುವುದು. ವ್ಯಕ್ತಿ ವ್ಯಕ್ತಿಗಳ ಮಧ್ಯೆ ನಿರ್ದಿಷ್ಟ ಅಂತರವನ್ನು ಕಾಯ್ದುಕೊಳ್ಳುವುದು.ಆ ಮೂಲಕ ರೋಗಾಣುವನ್ನು ಸೋಲಿಸುವುದು. ನಾವು, ನಮ್ಮ ಕುಟುಂಬ, ನಮ್ಮ ಸ್ನೇಹಿತರು ಹಾಗೂ ನಮ್ಮ ಸಮಾಜವನ್ನು ಸುರಕ್ಷಿತವಾಗಿಡುವುದು.
ಬಂಧುಗಳೇ, ನಾಳೆ 22 ನೇ ತಾರೀಕು. ಮರೆಯದಿರಿ. ಕೊರೋನ ರೋಗವನ್ನು ಮಟ್ಟಹಾಕುವ ಸರಕಾರದ ಪ್ರಯತ್ನದಲ್ಲಿ ನಾವೆಲ್ಲರೂ ಕೈ ಜೋಡಿಸೋಣ , ಅದಕ್ಕೋಸ್ಕರವೇ ನಿಮಗೆ ನನ್ನ ಎರಡೂ ಕೈ ಜೋಡಿಸಿ ” ನಮಸ್ತೆ ” ಎನ್ನುತ್ತೇನೆ. ಈ ವಿಪತ್ತನ್ನು ತೊಲಗಿಸಲು ಎಲ್ಲರೂ ಒಂದಾಗಿ ಶ್ರಮಿಸೋಣ.
ಇಂತಹ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಇದು ಅತೀ ಅಗತ್ಯ. ಮನೆ ಹೊತ್ತಿ ಉರಿದ ಮೇಲೆ ಬಾವಿ ತೋಡಿ ಪ್ರಯೋಜನವಿಲ್ಲ. ಅಸಡ್ಡೆ ಮಾಡಿದರೆ ಇಟಲಿ, ಚೀನಾದ ಪರಿಸ್ಥಿತಿ ನಮಗೂ ಬರಬಹುದು. ಆತ್ಮವಿಶ್ವಾಸ ಹೊಂದುವುದು ಅಸಡ್ಡೆಗೆ ಎಡೆ ಮಾಡಿಕೊಡದಿರಲಿ. ಆತ್ಮವಿಶ್ವಾಸ ನೀಡುವುದು, ಬೇಜವಾಬ್ದಾರಿಯ ಹೇಳಿಕೆಗಳು ಆಗದಿರಲಿ.
ಜೈ ಭಾರತ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.