ಬಹುಶಃ ನಾನು ಅಮ್ಮನ ಮಡಿಲಲ್ಲಿ ಇದ್ದಾಗ ಮಾತ್ರವೇನೊ ತುಂಬಾ ಅತ್ತಿದ್ದು, ಅದನ್ನ ಹೊರತುಪಡಿಸಿದರೆ ಹತ್ತಿರದವರ ಸಾವು ಆದಾಗ ಏಕಾಂತದಲ್ಲಿ ಅತ್ತಿರಬಹುದು, ಅದೆಂತಹ ಕಷ್ಟದ ಸನ್ನಿವೇಶ ಎದುರಾದರೂ ನಗು ನಗುತ್ತಲೇ ನಿಭಾಯಿಸುವ ಶಕ್ತಿಯನ್ನ ಅಪ್ಪ ಕಲಿಸಿಕೊಟ್ಟಿದ್ದ, ಹೀಗಾಗಿ ಅಳುವುದು ಹೇಗೆ ಎಂಬುದರ ಅರಿವು ನನಗೆ ಸರಿಯಾಗಿ ಇರಲಿಲ್ಲ. ಯಥೇಚ್ಛವಾಗಿ ನಗುತ್ತಲೇ ಜೀವಿಸುವ ನನಗೆ ನಗಿಸುವ ಕಲೆ ಕೂಡ ಕರಗತವಾಗಿತ್ತು, ಅದೆಷ್ಟೊ ದುಃಖತಪ್ತ ಜೀವಗಳಿಗೆ ನಗುವೆಂಬ ಟಾನಿಕ್ ನೀಡಿ ಜೀವನೋತ್ಸಾಹ ತುಂಬಿದ್ದೇನೆ ಎಂಬ ಗರ್ವ ನನ್ನಲ್ಲಿದೆ.
ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇನೆ ಅಂದ್ರೆ, ಇತ್ತೀಚೆಗೆ ನಾನು ಕೆಲವೊಂದು ಭಾವನಾತ್ಮಕ ದೃಶ್ಯಗಳನ್ನ ನೋಡಿ ತುಂಬಾ ನೊಂದುಕೊಳ್ಳುತ್ತೇನೆ ಮತ್ತೆ ಅಳೋದನ್ನ ಕೂಡ ಕಲಿತಿದ್ದೇನೆ, ಅದ್ರಲ್ಲೂ ಕೆಲವೊಂದು ಸಿನಿಮಾಗಳನ್ನ ನೋಡಿ ತುಂಬಾ ಭಾವುಕನಾಗುತ್ತೇನೆ, ತಮಿಳಿನ 96 ಎಂಬ ಚಿತ್ರವನ್ನ ನೋಡಿ ಅತ್ತಿದ್ದು ಬಿಟ್ಟರೆ ಕೆಲ ದಿನಗಳ ಹಿಂದೆ ರಿಲೀಸ್ ಆದ ಕನ್ನಡದ “ಕಥಾ ಸಂಗಮ” ಚಿತ್ರದ ಒಂದು ಭಾಗವಾದ “ಲಚ್ಚವ್ವ”ನನ್ನ ನೋಡಿ ಅತ್ತಿದ್ದೆ, ತಾನು, ತನ್ನವರು, ತಮ್ಮೂರು ಇಷ್ಟೇ ನನ್ನ ಪ್ರಪಂಚ ಅಂತ ಬದುಕ್ತಿರೋಳನ್ನ ಬೇರೊಂದು ಪ್ರಪಂಚಕ್ಕೆ ಕರೆದುಕೊಂಡು ಬಂದಾಗ ಎಷ್ಟು ಕಸಿವಿಸಿಯಾಗ್ತಾಳೆ ಅನ್ನೋದನ್ನ ಲಚ್ಚವ್ವ ಪಾತ್ರಧಾರಿ ಅಷ್ಟು ನೈಜವಾಗಿ ಅಭಿನಯಿಸಿ ತೋರಿಸಿದ್ದಳು ಆದರೆ ಲಚ್ಚವ್ವನ ಜಾಗದಲ್ಲಿ ನನಗೆ ಮಾತ್ರ “ನಮ್ಮವ್ವ” ಕಾಣ್ತಿದ್ಲು, ಇದೇ ಕಾರಣಕ್ಕೆ ನಾನು ಆ ಕ್ಷಣ ಭಾವುಕನಾಗಿದ್ದು.
ಇವತ್ತು ನನ್ನೊಳಗಿನ ಭಾವುಕ ವ್ಯಕ್ತಿಯನ್ನು ನಿಮಗೆಲ್ಲ ಪರಿಚಯಿಸುವಂತೆ ಮಾಡಿದ್ದು #ದಿಯಾ ಎಂಬ ಕನ್ನಡ ಸಿನಿಮಾ, ನಿನ್ನೆ ರಾತ್ರಿ ನೋಡಿದೆ, ಯಾಕಾದ್ರೂ ನೋಡಿದೆನೋ ಅನ್ನುವಷ್ಟರ ಮಟ್ಟಿಗೆ ಬೇಸರ ಆಯಿತು, ಇಡೀ ರಾತ್ರಿ ನಿದ್ದೆನೇ ಬರಲಿಲ್ಲ, ಚಿತ್ರ ಅಷ್ಟೊಂದು ಕಾಡುತ್ತಿತ್ತು, ಚಿತ್ರದ ಪ್ರತಿಯೊಂದು ದೃಶ್ಯಗಳು ಪ್ರೇಕ್ಷಕರಲ್ಲಿದ್ದ ಭಾವುಕ ವ್ಯಕ್ತಿಯನ್ನು ಬಡಿದೆಬ್ಬಿಸಿ ಆಚೆ ತೆಗೆಯುವಂತಿದ್ದವು, ದಿಯಾ ಹಾಗೂ ಆದಿ ಪಾತ್ರಧಾರಿಗಳು ನೋಡುಗರನ್ನು ಅಳಿಸುವಲ್ಲಿ ಅಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದರು.
ಈ ಹಿಂದೆ 6-5=2 ಎಂಬ ವಿಭಿನ್ನ ಸಿನಿಮಾ ನೀಡಿದ್ದ K.S.ಅಶೋಕ ಎಂಬುವರು “ದಿಯಾ” ಸಿನಿಮಾದ ಸೃಷ್ಟಿಕರ್ತ, ತುಂಬಾ ಅಚ್ಚುಕಟ್ಟಾಗಿ ಎಲ್ಲೂ ಬೋರ್ ಹೊಡೆಸದಂತೆ ಕತೆಯನ್ನು ಪ್ರೇಕ್ಷಕರ ಮನಮುಟ್ಟುವಂತೆ ನಿರೂಪಿಸಿದ್ದಾರೆ, ಬಹುತೇಕ ಜನರ ಪ್ರಕಾರ ಕ್ಲೈಮ್ಯಾಕ್ಸ್ ಒಂಚೂರು ಬೇರೆ ಥರ ಇರಬೇಕಿತ್ತು ಅನ್ನೋದು ಕೊಂಚ ಸತ್ಯವಾದರೂ ಕೂಡ ಈಗಿರುವ ಕ್ಲೈಮ್ಯಾಕ್ಸ್ ಚಿತ್ರದ ಮೈನಸ್ ಪಾಯಿಂಟ್ ಅಲ್ಲ ಎಂಬುದು ಅಷ್ಟೇ ಸತ್ಯ.
ದಿಯಾ ಪಾತ್ರಧಾರಿ ಖುಷಿ ತುಂಬಾ ನೈಜವಾಗಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದಿದ್ದಾಳೆ, ಅವಳಿಂದ ಆ ಚಿತ್ರಕ್ಕೊಂದು ಕಳೆ ಬಂದಿದೆ, ಅವಳನ್ನ ಬಿಟ್ಟು ಬೇರಾರಿಗೂ ಆ ಪಾತ್ರ ಸೂಟ್ ಆಗ್ತಿರ್ಲಿಲ್ವೇನೊ ಅನ್ನುವಷ್ಟರ ಮಟ್ಟಿಗೆ ದಿಯಾ ಪಾತ್ರವನ್ನ ಆವರಿಸಿ ಅದ್ಭುತ ಅಭಿನಯ ನೀಡಿದ್ದಾಳೆ, ಆದಿ ಪಾತ್ರಧಾರಿ ಪೃಥ್ವಿ ಅಂಬರ್ ನಟನೆ ಚಿತ್ರದ ಪ್ಲಸ್ ಪಾಯಿಂಟ್ ಅಂದರೆ ತಪ್ಪಾಗಲಾರದು, ನನಗಂತೂ ತುಂಬಾ ಇಷ್ಟ ಆದ, ಕನ್ನಡಕ್ಕೊಬ್ಬ ಸೆನ್ಸೆಷನಲ್ ನಟ ಸಿಕ್ಕ ಎಂಬ ಖುಷಿ ಆಯ್ತು, ಭವಿಷ್ಯದಲ್ಲಿ ಕಳಪೆ ಚಿತ್ರಗಳನ್ನ ನೀಡದೇ ಇದೇ ಹಾದಿಯಲ್ಲಿ ಮುಂದುವರೆದರೆ ಆತ ಸ್ಟಾರ್ ನಟನಾಗುವುದರಲ್ಲಿ ಸಂಶಯವಿಲ್ಲ, ಇನ್ನು ರೋಹಿತ್ ಪಾತ್ರಧಾರಿ ದೀಕ್ಷಿತ್ ಇನ್ನು ಪಳಗಬೇಕೆನೊ ಅನ್ನಿಸಿದರು ಕೂಡ ತನ್ನ ಪಾತ್ರಕ್ಕೆ ಎಳ್ಳಷ್ಟೂ ಮೋಸ ಮಾಡದಂತೆ, ಎಲ್ಲೂ ಕಳಪೆ ಅಭಿನಯ ಅನಿಸದಂತೆ ನಟಿಸಿದ್ದಾರೆ, ಆದಿ ಅಮ್ಮನಾಗಿ ಪವಿತ್ರ ಲೋಕೇಶ್ ಅವರದ್ದು ಕೂಡ ಉತ್ತಮವಾಗಿ ಅಭಿನಯ.
ಛಾಯಾಗ್ರಹಣ, ಹಿನ್ನೆಲೆ ಸಂಗೀತ, ಸಂಭಾಷಣೆ ಎಲ್ಲವೂ ಚಂದ, ವಿಶೇಷ ಏನೆಂದರೆ ಚಿತ್ರದಲ್ಲಿ ಒಂದೂ ಹಾಡುಗಳಿಲ್ಲ, ಕಾಮಿಡಿ ದೃಶ್ಯಗಳಿಲ್ಲ, ಡಬಲ್ ಮೀನಿಂಗ್ ಡೈಲಾಗ್ ಗಳಿಲ್ಲ, ಫೈಟುಗಳಿಲ್ಲ, ವಿಲನ್ ಕೂಡ ಇಲ್ಲ ಆದರೂ ಕೂಡ ಚಿತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದರೆ ನಿಜಕ್ಕೂ ಮೆಚ್ಚುವಂತದ್ದು.
ಚಿತ್ರದಲ್ಲಿ ಸ್ಟಾರ್ ನಟರಿಲ್ಲ ಎಂಬ ಕಾರಣಕ್ಕೊ, ಪ್ರಚಾರದ ಕೊರತೆಯಿಂದಲೊ ಸಿನಿಮಾ ಥಿಯೇಟರಲ್ಲಿ ಒಂದು ವಾರವೂ ನಿಲ್ಲಲಿಲ್ಲ, ಬಹುತೇಕ ಜನರಿಗೆ ಇಂಥದ್ದೊಂದು ಸಿನಿಮಾ ರಿಲೀಸ್ ಆಗಿದೆ ಅನ್ನೋದೆ ಗೊತ್ತಾಗಲಿಲ್ಲ, ನನ್ನಂತ ಅದೆಷ್ಟೊ ಸಿನಿರಸಿಕರಿಗೆ ಚಿತ್ರವನ್ನ ಥಿಯೇಟರಲ್ಲಿ ನೋಡುವ ಭಾಗ್ಯ ಸಿಗಲೇ ಇಲ್ಲ ಆದ್ದರಿಂದ ಅನಿವಾರ್ಯವಾಗಿ ಮೊಬೈಲಿನಲ್ಲೇ ನೋಡಬೇಕಾಯಿತು ಎಂಬುದು ವಿಷಾದನೀಯ.
ಅದೇನೆ ಇರಲಿ ಈ ಸಿನಿಮಾವನ್ನ ಎಲ್ಲಾದರೂ ನೋಡಲಿ, ಆದರೆ ಎಲ್ಲರೂ ನೋಡುವಂತೆ ಆಗಲಿ ಎಂಬುದೇ ನನ್ನ ಆಶಯ, ದಿಯಾ ಸಿನಿಮಾ ಥಿಯೇಟರಲ್ಲಿ ಕೋಟಿ ಗೆಲ್ಲದಿದ್ದರೇನಂತೆ, ಕೋಟಿ ಜನರ ಮನ ಗೆದ್ದಿದೆ ಎಂಬುದು ಸಂತಸದ ಸಂಗತಿ.
✍ ರವಿ ಕೋಡಮಗ್ಗಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.