ನವದೆಹಲಿ: 2023ರ ಡಿಸೆಂಬರ್ ವೇಳೆಗೆ ಭಾರತೀಯ ರೈಲ್ವೆಯ ಬ್ಯಾಲೆನ್ಸ್ ಬ್ರಾಡ್ಗೇಜ್ (ಬಿಜಿ) ಮಾರ್ಗಗಳನ್ನು ಸಂಪೂರ್ಣ ವಿದ್ಯುದ್ದೀಕರಿಸಲು ರೈಲ್ವೆ ಸಚಿವಾಲಯ ಯೋಜಿಸಿದೆ ಎಂದು ಅಧಿಕೃತ ಹೇಳಿಕೆ ಶುಕ್ರವಾರ ತಿಳಿಸಿದೆ.
ರೈಲ್ವೆ ಯೋಜನೆಯ ಪ್ರಕಾರ, 2020-21ರಲ್ಲಿ 6,000 ಕಿ.ಮೀ ಬಿಜಿ ಮಾರ್ಗಗಳನ್ನು ವಿದ್ಯುದ್ದೀಕರಿಸಲಾಗುವುದು ಮತ್ತು 2021-22ರಲ್ಲಿ ಇನ್ನೂ 6,000 ಕಿ.ಮೀ ಹಳಿಗಳ ವಿದ್ಯುದ್ದೀಕರಣ ಪೂರ್ಣಗೊಳ್ಳಲಿದೆ. 2022-23ರ ಆರ್ಥಿಕ ವರ್ಷದಲ್ಲಿ 6,500 ಕಿ.ಮೀ ಮಾರ್ಗಗಳನ್ನು ವಿದ್ಯುದ್ದೀಕರಿಸಲಾಗುವುದು. ಉಳಿದ 4,310 ಕಿ.ಮೀ ಹಳಿಗಳ ವಿದ್ಯುದ್ದೀಕರಣವು ಡಿಸೆಂಬರ್ 2023 ರ ವೇಳೆಗೆ ಪೂರ್ಣಗೊಳ್ಳುತ್ತದೆ.
ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ರಾಜ್ಯಸಭೆಯಲ್ಲಿ ಶುಕ್ರವಾರ ಕೇಳಲಾದ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.
ರೈಲ್ವೆ ಶೂನ್ಯ-ಹೊರಸೂಸುವಿಕೆ ಜಾಲವಾಗಲು ಯೋಚಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಗೋಯಲ್, “ಆರಂಭದಲ್ಲಿ, ಭಾರತೀಯ ರೈಲ್ವೆ (ಐಆರ್)ಯು ತನ್ನ ಸೌರ ಕಾರ್ಯಾಚರಣೆಯ ಭಾಗವಾಗಿ ಸುಮಾರು 1000 ಮೆಗಾ ವ್ಯಾಟ್ ಸೌರಶಕ್ತಿಯನ್ನು ಮತ್ತು ಟೆಕ್ನೋ-ಕಮರ್ಷಿಯಲ್ ಮೌಲ್ಯಮಾಪನದ ಆಧಾರದ ಮೇಲೆ 200 ಮೆಗಾವ್ಯಾಟ್ ಪವನ ಶಕ್ತಿಯನ್ನು ಮೂಲವಾಗಿಡಲು ಯೋಜಿಸಿದೆ. ಇದರಲ್ಲಿ ಸುಮಾರು 204.82 ಮೆಗಾವ್ಯಾಟ್ (101.42 ಮೆಗಾವ್ಯಾಟ್ ಸೌರ ಮತ್ತು 103.4 ಮೆಗಾವ್ಯಾಟ್ ಪವನ ಶಕ್ತಿ) ನವೀಕರಿಸಬಹುದಾದ ವಿದ್ಯುತ್ ಅನ್ನು ಈಗಾಗಲೇ ಸ್ಥಾಪಿಸಲಾಗಿದೆ” ಎಂದಿದ್ದಾರೆ.
ಇದರ ಜೊತೆಗೆ, ಭಾರತೀಯ ರೈಲ್ವೆಯ ಇಂಧನ ಹೊರೆಯನ್ನು ಮತ್ತಷ್ಟು ಕಡಿಮೆ ಮಾಡಲು, ಟ್ರ್ಯಾಕ್ಷನ್ ಮತ್ತು ನಾನ್ ಟ್ರ್ಯಾಕ್ಷನ್ ಉದ್ದೇಶಕ್ಕಾಗಿ ತನ್ನ ಇಂಧನ ಅಗತ್ಯಗಳನ್ನು ಪೂರೈಸಲು ಭಾರತದಾದ್ಯಂತ ಭೂ-ಆಧಾರಿತ ಸೌರ ಸ್ಥಾವರಗಳನ್ನು ಬಳಕೆಯಾಗದ ರೈಲ್ವೆ ಭೂಮಿಯಲ್ಲಿ ಸ್ಥಾಪಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.