ಹಚ್ಚ ಹಸುರಿನ ಪ್ರಕೃತಿ, ನಿರ್ಮಲ ವಾತಾವರಣ, ಮನುಷ್ಯ ಸ್ನೇಹಿ ಪರಿಸರ, ಉಸಿರಾಟಕ್ಕೆ ಶುದ್ಧ ಗಾಳಿ, ಕುಡಿಯಲು ಶುದ್ಧ ನೀರು ಇಂತಹ ಅನೇಕ ಪರಿಸರ ಸ್ನೇಹಿ ವಿಚಾರಗಳ ಜೊತೆಗೆ ಮನುಷ್ಯ ಬದುಕು ನಡೆಸುವ ಕಾಲವೊಂದಿತ್ತು. ಆದರೆ ಮನುಷ್ಯ ವಿದ್ಯಾವಂತನಾದಂತೆ ಅವನ ದುರಾಸೆಯೂ ಹೆಚ್ಚಾಗಿ ಬದುಕು ನೀಡಿದ್ದ ಪ್ರಕೃತಿಯನ್ನೇ ಹಾಳು ಮಾಡುವುದು, ಪರಿಸರವನ್ನು ಕಲುಷಿತಗೊಳಿಸುವ ಎಲ್ಲಾ ಕೆಲಸಗಳಲ್ಲಿಯೂ ತೊಡಗಿಸಿಕೊಂಡು, ತನ್ನ ಜೀವನಕ್ಕೆ ತಾನೇ ಸಂಚಕಾರ ತಂದುಕೊಳ್ಳುವಂತಹ ಎಲ್ಲಾ ನೀಚ ಕೆಲಸಗಳನ್ನೂ ಮಾಡಿದ. ಪರಿಣಾಮ ವಾಯು, ಭೂ, ಜಲ ಹೀಗೆ ಒಟ್ಟಾರೆ ಪರಿಸರವೇ ಕಲುಷಿತವಾಯಿತು. ಕಾಂಕ್ರೀಟ್ ಕಾಡುಗಳ ನಿರ್ಮಾಣದ ಭರದಲ್ಲಿ ಉಸಿರಾಟಕ್ಕೆ ಶುದ್ಧ ಗಾಳಿಯನ್ನು ಒದಗಿಸುತ್ತಿದ್ದ ಹಸಿರು ಕಾಡುಗಳು ನಾಶವಾದವು. ಕಸ, ಕಡ್ಡಿ, ಕೊಳಚೆ ವಸ್ತುಗಳನ್ನು ಎಸೆಯುವ ಮೂಲಕ ಜಲವೂ ವಿಷಮಯವಾಯಿತು. ಒಟ್ಟಾರೆಯಾಗಿ ಪರಿಸರ ಹಾಳಾಗುವುದಕ್ಕೆ ಬೇಕಾದ ಎಲ್ಲಾ ಕೆಲಸಗಳನ್ನೂ ಮನುಷ್ಯ ಮಾಡಿದ ಮೇಲೆ ಇಂದು ಬದುಕುವುದಕ್ಕೆ ಬೇಕಾಗಿಯೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಪರಿಸ್ಥಿತಿ ಹೀಗಿರುವಾಗ ಹರಿಯಾಣ ಮೂಲದ ಎಂಜಿನಿಯರ್ ಅರುಣ್ ಮಿತ್ತಲ್ ಎಂಬಾತ ಪರಿಸರ ಸಂರಕ್ಷಣೆಯ ಪಣ ತೊಟ್ಟು ಅದಕ್ಕಾಗಿ ಶ್ರಮಿಸುತ್ತಿದ್ದಾರೆ. ಕಾಲೇಜು ದಿನಗಳಿಂದಲೇ ಅರುಣ್ಗೆ ಪರಿಸರ ಸಂರಕ್ಷಣೆಯ ವಿಚಾರದಲ್ಲಿ ಇನ್ನಿಲ್ಲದ ಕಾಳಜಿ. ಅದಕ್ಕಾಗಿ ಸ್ಥಳೀಯ ಎನ್ಜಿಒಗಳ ಸಹಕಾರದ ಜೊತೆಗೆ ಗಿಡ ನೆಡುವುದು, ಸ್ಥಳೀಯರಲ್ಲಿ ಪರಿಸರ ಸಂರಕ್ಷಣೆಯ ಅಗತ್ಯತೆಯ ಕುರಿತು ಜಾಗೃತಿ ಮೂಡಿಸುವ ಕೆಲಸಗಳನ್ನೂ ಮಾಡುತ್ತಿರುತ್ತಾರೆ. ಇಷ್ಟರಲ್ಲಿಯೇ ತೃಪ್ತಿ ಹೊಂದದ ಇವರು ಪರಿಸರ ರಕ್ಷಣೆಯ ಹೊಣೆಯನ್ನು ಇನ್ನಷ್ಟು ಸಾರ್ವಜನಿಕರು ಹೊತ್ತುಕೊಳ್ಳುವಂತೆ ಮಾಡುವ ದೃಷ್ಟಿಯಿಂದ 13,000 ಕಿ.ಮೀ.ಗಳ ಕಾಲ್ನಡಿಗೆಯನ್ನು ಆರಂಭಿಸಿದ್ದಾರೆ, ಆ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆ ಮೂಲಕ ಭೂಮಿ ಎಂಬ ಜೀವರಾಶಿಗಳನ್ನು ಪೋಷಿಸುವ ಗ್ರಹದ ರಕ್ಷಣೆಗೆ ಕಂಕಣಬದ್ಧರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೇವಲ ಭಾರತದಲ್ಲಿ ಮಾತ್ರವಲ್ಲದೆ, ವಿಶ್ವದಾದ್ಯಂತ ಸಂಚರಿಸಿ ಜಾಗೃತಿ ಮೂಡಿಸುವುದಕ್ಕೆ ಮುಂದಾಗಿದ್ದಾರೆ. ಕಳೆದ ಒಂದು ವರ್ಷದಿಂದಲೂ ಈ ಜನ ಜಾಗೃತಿ ನಡಿಗೆಯನ್ನು ಮಾಡುತ್ತಿರುವ ಮಿತ್ತಲ್, ತಮ್ಮ ತಾಯಿಯ ಮರಣದ ನಂತರ ಸ್ವಲ್ಪ ಕಾಲ ಇದನ್ನು ನಿಲ್ಲಿಸಿದ್ದರು. ಆದರೆ ಇದೀಗ ಮತ್ತೆ ಈ ಶ್ಲಾಘನಾರ್ಹ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಪರಿಸರ ಸೇವೆಯ ಮಹಾ ಕೈಂಕರ್ಯಕ್ಕೆ ಮುಂದಾಗಿದ್ದಾರೆ. ಇವರ ಈ ಯೋಜನೆಯ ಬಗ್ಗೆ ವ್ಯಂಗ್ಯವಾಡಿದ ಜನರೂ ಇದ್ದಾರೆ. ಭಾರತವೇ ಇಷ್ಟೊಂದು ವಿಶಾಲವಾಗಿದೆ. ಇದನ್ನೇ ಸಂಪೂರ್ಣವಾಗಿ ಸುತ್ತವುದು ಸಾಧ್ಯವಿಲ್ಲ. ಹೀಗಿರುವಾಗ ಇಡೀ ಪ್ರಪಂಚ ಸುತ್ತಿ ಜನ ಜಾಗೃತಿ ನಡೆಸುತ್ತೇನೆ ಎಂಬುದನ್ನು ಯಾರೂ ನಂಬುವುದಿಲ್ಲ. ಇವರ ದೃಷ್ಟಿಕೋನವನ್ನು ಅರ್ಥ ಮಾಡಿಕೊಳ್ಳದ ಜನರು, ಈ ಯೋಜನೆ ಕೈಗೂಡುವುದು ಅಸಾಧ್ಯ ಎಂದೇ ಭಾವಿಸುತ್ತಾರೆ. ಆದರೆ ಇವ್ಯಾವುದಕ್ಕೂ ಜಗ್ಗದ, ಕುಗ್ಗದ ಮಿತ್ತಲ್ ತಾವು ಅಂದುಕೊಂಡದ್ದನ್ನು ಸಾಧಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗುತ್ತಾರೆ. ಜೊತೆಗೆ ತಾವಂದುಕೊಂಡದ್ದನ್ನು ಸಾಧಿಸಿ ಜನರು ಮೂಗಿಗೆ ಬೆರಳಿಡುವಂತೆ ಮಾಡುತ್ತಾರೆ.
2019ರ ಸೆಪ್ಟೆಂಬರ್ 14ರಂದು ಭಾರತದ ವಿವಿಧ ರಾಜ್ಯಗಳಿಗೆ ಭೇಟಿ ನೀಡುವ ಮಿತ್ತಲ್ ಹೆಚ್ಚೆಚ್ಚು ಜನರನ್ನು ತಲುಪುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗುತ್ತಾರೆ. ಹೆಚ್ಚು ಜನರನ್ನು ಭೇಟಿ ಮಾಡಿ ಅವರಲ್ಲಿಯೂ ಪರಿಸರದ ಬಗ್ಗೆ ಕಾಳಜಿ ಮೂಡಿಸಬೇಕು ಎಂದಾದಲ್ಲಿ ಯಾವುದೇ ವಾಹನವನ್ನು ಬಳಕೆ ಮಾಡದೆ ಕಾಲ್ನಡಿಗೆಯನ್ನೇ ಅವಲಂಬಿಸುವುದು ಹೆಚ್ಚು ಸೂಕ್ತ ಎಂದು ಭಾವಿಸಿ, ಆ ದಾರಿಯನ್ನೇ ಅಯ್ಕೆ ಮಾಡಿಕೊಳ್ಳುತ್ತಾರೆ. ಇದು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಸಹಾಯ ಮಾಡುವುದರ ಜೊತೆಗೆ, ಮಾನಸಿಕ ಸದೃಢತೆಗೂ ಸಹಾಯ ಮಾಡುತ್ತದೆ ಎಂಬುದನ್ನು ಅರಿತು, ಕಾಲ್ನಡಿಗೆಯ ಪ್ರಯೋಜನದ ಬಗ್ಗೆಯೂ ಜನರಿಗೆ ಶಿಕ್ಷಣ ನೀಡಲು ಬಯಸುತ್ತಾರೆ.
ಈ ನಡಿಗೆಯ ಮಧ್ಯೆ ಇವರು ಸುಮಾರು 500 ಗಿಡಗಳನ್ನು ನೆಟ್ಟಿದ್ದಾರೆ. ಶಾಲಾ, ಕಾಲೇಜುಗಳಿಗೆ ತೆರಳಿ ಸೆಮಿನಾರ್ಗಳನ್ನು ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಅಗತ್ಯತೆಯ ಕುರಿತು ಅರಿವು ಮೂಡಿಸಿದ್ದಾರೆ. ಜಾಗತಿಕವಾಗಿ ಸ್ವಚ್ಛ ವಾತಾವರಣ, ಗಿಡ ನೆಡುವುದರಿಂದಾಗುವ ಸತ್ಪರಿಣಾಮಗಳ ಬಗ್ಗೆಯೂ ಮಕ್ಕಳಿಗೆ ತಿಳಿಸುತ್ತಾರೆ. ಧಾರ್ಮಿಕ ಸಂಸ್ಥೆಗಳನ್ನು ಭೇಟಿ ಮಾಡಿ ಅಲ್ಲಿಗೆ ಬರುವ ಜನರಲ್ಲಿಯೂ ಪ್ರಕೃತಿ ಸಂರಕ್ಷಣೆಯ ಅನಿವಾರ್ಯತೆಯ ಬಗ್ಗೆ ತಿಳಿಸಿಕೊಡುತ್ತಾರೆ.
ಇನ್ನು ಈ ಜಾಗೃತಿಗಾಗಿ ಶ್ರಮಿಸುವಲ್ಲಿ ಇವರು ಕಾಡು ದಾರಿಯಲ್ಲಿಯೂ ಯಾತ್ರೆ ಮಾಡಿದ್ದಾರೆ. ಕಾಡಿನ ದಾರಿಯಲ್ಲಿ ಬರುವ ಎಲ್ಲಾ ಅಪಾಯಗಳನ್ನೂ ಲೆಕ್ಕಿಸದೆ ಪರಿಸರ ಸಂರಕ್ಷಣೆಗಾಗಿ ಪಣ ತೊಟ್ಟು ನಡೆದಿದ್ದಾರೆ. ಈ ಪಯಣವನ್ನು 2020ರ ಡಿಸೆಂಬರ್ನ ಒಳಗೆ ಮುಗಿಸುವ ಆಶಯವನ್ನೂ ಮಿತ್ತಲ್ ಹೊಂದಿದ್ದಾರೆ. ಈ ಪ್ರಯಾಣದಲ್ಲಿ ಆಯಾ ಪ್ರದೇಶಕ್ಕೆ ಸಂಬಂಧಿಸಿದ ಕೆಲವು ಜನರು ತಾವೂ ಹೆಜ್ಜೆ ಸೇರಿದ್ದಾರೆ. ಈ ಮಾದರಿ ಕಾರ್ಯದಲ್ಲಿ ಇವರಿಗೆ ಜನರಿಂದ ಶೇ.99ರಷ್ಟು ಬೆಂಬಲ ಸಿಕ್ಕಿರುವುದಾಗಿಯೂ ಮಿತ್ತಲ್ ಹೇಳುತ್ತಾರೆ.
ಇತ್ತೀಚಿಗೆ ಅವರು ತಮ್ಮ ಕಾಲ್ನಡಿಗೆಯ ಭಾಗವಾಗಿ ಕರ್ನಾಟಕಕ್ಕೆ ಆಗಮಿಸಿದ್ದು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಜೊತೆ ಮಾತುಕತೆ ನಡೆಸಿದರು.
ಪರಿಸರ ನಾಶ ಮಾಡುವುದರಲ್ಲಿ ನಮ್ಮೆಲ್ಲರ ಪಾತ್ರ ದೊಡ್ಡದಾಗಿಯೇ ಇದೆ. ಆದರೆ ಅದರ ಸಂರಕ್ಷಣೆಯ ವಿಚಾರಕ್ಕೆ ಬಂದಾಗ ಮಾತ್ರ ನಾವು ಹೆಚ್ಚು ಆಸ್ಥೆ ವಹಿಸುವುದಿಲ್ಲ. ಹಾಳು ಮಾಡಿದ ನಾವೇ ಅದನ್ನು ಸಂರಕ್ಷಣೆ ಮಾಡುವುದಕ್ಕೆ ಹಿಂದೆ ಮುಂದೆ ನೋಡುತ್ತೇವೆ. ಎಲ್ಲಕ್ಕೂ ಪುರುಸೊತ್ತಿರುವ ನಮಗೆ ಪರಿಸರ ಸಂರಕ್ಷಣೆಗೆ ಮಾತ್ರ ಸಮಯವಿಲ್ಲ. ಹೀಗಿರುವಾಗ ಮಿತ್ತಲ್ನಂತಹ ಯುವಕರು ಜನಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾದಲ್ಲಿ ಪ್ರಪಂಚ ಮತ್ತೆ ಹಸಿರಿನ ಉಸಿರು ಚೆಲ್ಲುವುದರಲ್ಲಿ ಸಂದೇಹವಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.