ಹೋಟೆಲ್ ಚೈನ್ ಓಯೊ ಹೆಸರು ಕೇಳಿದ್ದೀರಾ. ಪ್ರಸಿದ್ಧ ನಗರಗಳಲ್ಲಿ ಜನರಿಗೆ ತಂಗುವುದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಒದಗಿಸಿಕೊಟ್ಟು, ಗ್ರಾಹಕರನ್ನು ಸಂತೃಪ್ತರನ್ನಾಗಿ ಮಾಡುವಲ್ಲಿ ಓಯೋ ಹೊಟೇಲ್ ಎತ್ತಿದ ಕೈ. ಈ ಓಯೋ ಹೊಟೇಲ್ಗಳ ಆರಂಭದ ಹಿಂದೆ ಒಬ್ಬ ಹದಿಹರೆಯದ ಹುಡುಗನ ಕನಸಿನ ಕಥೆ ಇದೆ. ಸಣ್ಣ ಹಳ್ಳಿಯ, ಮಧ್ಯಮ ವರ್ಗದ ಕುಟುಂಬದಿಂದ ಬಂದ ಸಣ್ಣ ಹುಡುಗನೊಬ್ಬ ದೊಡ್ಡ ಕನಸು ಇಂದು ಓಯೋ ಹೊಟೇಲ್ಗಳ ಮೂಲಕ ಸಾಕಾರಗೊಂಡಿರುವುದನ್ನು ಇಲ್ಲಿ ನಾವು ಕಾಣಬಹುದು. ಇಂದು ಈತ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ದೊಡ್ಡ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾನೆ. ಅಷ್ಟಕ್ಕೂ ಯಾರು ಈ ಹುಡುಗ. ಏನಿವನ ಕಥೆ ಎಂದು ತಿಳಿಯುವ ಕುತೂಹಲವೇ. ಹಾಗಾದರೆ ಈ ಸ್ಟೋರಿ ಓದಿ.
ಒರಿಸ್ಸಾ ಮೂಲದ ಈ ಯುವಕನ ಹೆಸರು ರಿತೇಶ್ ಅಗರ್ವಾಲ್. ಈಗ 26 ರ ಹರೆಯ. ಓದಿನಲ್ಲಿ ಅಷ್ಟೇನೂ ಆಸಕ್ತಿ ಇರಲಿಲ್ಲ. ತಾನೊಬ್ಬ ದೊಡ್ಡ ಉದ್ಯಮಿಯಾಗಿ ಬೆಳೆಯಬೇಕು ಎನ್ನುವ ಕನಸುಗಳ ಜೊತೆಗೆ, ಅದನ್ನು ಈಡೇರಿಸಿಕೊಳ್ಳುವ ದಾರಿಗಾಗಿ ಹುಡುಕಾಟ ನಡೆಸುತ್ತಿರುತ್ತಾನೆ. ಆದರೂ ಹೆತ್ತವರ ಆಶಯವನ್ನು ಪೂರ್ಣಗೊಳಿಸುವ ಸಲುವಾಗಿ ಶಾಲೆ, ಕಾಲೇಜಿನ ಮುಖ ನೋಡುತ್ತಾನೆ. ಬಾಲ್ಯದ ಶಿಕ್ಷಣವನ್ನು ಒರಿಸ್ಸಾದಲ್ಲಿಯೇ ಮುಗಿಸಿದ ರಿತೇಶ್, ನಂತರದ ಶಿಕ್ಷಣವನ್ನು ಪೂರೈಸಲು ರಾಜಸ್ಥಾನಕ್ಕೆ ತೆರಳುತ್ತಾನೆ. ಅಲ್ಲಿಂದ ಅವನ ಕನಸುಗಳ ಜೊತೆಗಿನ ಓಟ ಆರಂಭವಾಗುತ್ತದೆ. ಕಾಲೇಜಿಗೆ ಬಂಕ್ ಹೊಡೆದು ದೆಹಲಿಗೆ ತೆರಳುತ್ತಾನೆ. ಅಲ್ಲಿನ ಹೊಸ ಸ್ಟಾರ್ಟ್ಅಪ್ಗಳಲ್ಲಿ ಕೆಲಸ ಮಾಡುತ್ತಾನೆ. ಆ ಮೂಲಕ ಅನುಭವ ಗಳಿಸುತ್ತಾನೆ. ಈ ನಡುವೆ ಆತ ಕೇವಲ ಅವನ ಪರೀಕ್ಷೆಗಳನ್ನು ಬರೆಯುವುದಕ್ಕೆ ಮಾತ್ರವೇ ರಾಜಸ್ಥಾನಕ್ಕೆ ಬರುತ್ತಾನೆ. ಕಾಲೇಜಿಗೆ ಬಂಕ್ ಹೊಡೆದು ಉದ್ಯಮಿಯಾಗುವ ತನ್ನ ಕನಸನ್ನು ಈಡೇರಿಸಿಕೊಳ್ಳುವುದರಲ್ಲಿಯೇ ಅವನು ಹೆಚ್ಚು ಆಸಕ್ತಿ ತೋರುತ್ತಾನೆ. ಈ ಆಸಕ್ತಿಯೇ ಅವನನ್ನು ಇಂದು ವಿಶ್ವ ಮಟ್ಟದಲ್ಲಿ ಹೆಸರು ಗಳಿಸುವಂತೆ ಮಾಡಿದೆ.
ಮಗ ಕಾಲೇಜಿಗೆ ಹೋಗುತ್ತಿದ್ದಾನೆ, ಓದುತ್ತಿದ್ದಾನೆ ಎಂದೇ ತಿಳಿದುಕೊಂಡಿದ್ದ ಹೆತ್ತವರಿಗೆ ಅದೊಂದು ದಿನ ತಮ್ಮ ಮಗ ಕಾಲೇಜಿಗೆ ಸರಿಯಾಗಿ ಹಾಜರಾಗುತ್ತಿಲ್ಲ ಎಂಬ ಸತ್ಯದ ಅರಿವಾಗುತ್ತದೆ. ಮಗನಲ್ಲಿ ಈ ಬಗ್ಗೆ ವಿಚಾರಿಸಿದಾಗ, ತಾನು ಬೇರೊಂದು ಉದ್ಯೋಗದಲ್ಲಿ ತೊಡಗಿಕೊಂಡಿರುವುದಾಗಿ ತಿಳಿಸುತ್ತಾನೆ. ಹೆತ್ತವರಿಗೆ ಆಘಾತವಾಗುತ್ತದೆ. ತಂದೆ ಮಗನ ಈ ಅಭ್ಯಾಸವನ್ನು ವಿರೋಧಿಸುತ್ತಾರೆ. ಆದರೆ ತಾಯಿ ತನ್ನ ಮಗ ಏನೋ ಸಾಧನೆ ಮಾಡುತ್ತಾನೆ ಎಂಬುದನ್ನು ಮನಗಂಡು ತಂದೆಯ ಮನ ಒಲಿಸುತ್ತಾರೆ. ಅಲ್ಲಿಂದ ಈ ಕನಸು ಕಂಗಳ ಹುಡುಗನ ಡ್ರೀಮ್ ಹಂಟಿಂಗ್ ಆರಂಭವಾಗುತ್ತದೆ. ಪ್ರತಿಷ್ಟಿತ ಹೊಟೇಲ್ಗಳ ಮಾಲಕರ ಜೊತೆಗೆ ಮಾತುಕತೆ ನಡೆಸಿ, 100 ಹಾಸಿಗೆಗಳ, ಬೆಳಗ್ಗಿನ ಉಪಹಾರ, ಊಟೋಪಚಾರಗಳ ಜೊತೆಗೆ ಪ್ರವಾಸಿಗರಿಗೆ ಉತ್ತಮ ಮಟ್ಟದ ಸೇವೆ ನೀಡುವ ವ್ಯವಸ್ಥೆಗಳನ್ನು ಮಾಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತನಾಗುತ್ತಾನೆ.
ಕಾಲೇಜಿಗೆ ಹೋಗದೆ ಹೆತ್ತವರಿಗೆ ನೋವು ನೀಡುವುದು ಎಂದಿಗೂ ಈ ಹುಡುಗನ ಉದ್ದೇಶವಾಗಿರಲಿಲ್ಲ. ಆದರೆ ಕನಸು ನನಸು ಮಾಡಿ ತಾನೂ ಏನಾದರೂ ಸಾಧನೆ ಮಾಡಬೇಕು ಎನ್ನುವ ಬಯಕೆಯೇ ಈತನಲ್ಲಿ ಇಂತಹ ಮನಸ್ಥಿತಿಯನ್ನು ತಂದು ಹಾಕಿತ್ತು. ಆದರೂ ವ್ಯರ್ಥವೇನಿಲ್ಲ ಬಿಡಿ. ಏಕೆಂದರೆ ಅವರ ಈ ಕನಸಿನ ಹಾದಿಯ ಕಾರಣದಿಂದಲೇ ಅವನಿಗೆ ಪೀಟರ್ ಥಿಯೆಲ್ ಫೆಲೋಶಿಪ್ ಪಡೆಯುವ ಅವಕಾಶವನ್ನು ತಂದೊದಗಿಸಿತು. ಆ ಮೂಲಕ ಈ ಫೆಲೋಶಿಪ್ಗೆ ಭಾಜನನಾದ ಏಷ್ಯಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಯೂ ಈ ಮಧ್ಯಮ ವರ್ಗದ ಸಾಧಕನ ಮುಡಿಗೇರಿತು.
ಇನ್ನು ತನ್ನ ಕನಸು ಕೈಗೂಡಬೇಕಾದರೆ ಈ ಹುಡುಗ ದಿನದ 24 ಗಂಟೆಗಳನ್ನೂ ಅದರಲ್ಲಿ ತೊಡಗಿಸಿಕೊಂಡಿದ್ದಾನೆ. ಇವನ ಕಾರ್ಯ ವೈಖರಿ, ಒತ್ತಡವನ್ನು ಕಂಡು ಹೆತ್ತವರು ಅಚ್ಚರಿಗೊಂಡ ಸನ್ನಿವೇಶಗಳೂ ಇವೆ. ಇನ್ನು ಅನೇಕ ಒತ್ತಡಗಳ ನಡುವೆ ಕೆಲಸ ಮಾಡುವಾಗ, ಇವನನ್ನು ಕೊಂಚ ಮಟ್ಟಿಗೆ ಒತ್ತಡ ಮುಕ್ತನನ್ನಾಗಿ ಮಾಡುತ್ತಿದ್ದಿದ್ದು ಇವನ ಮುದ್ದಿನ ನಾಯಿ ಲಿಸಾ. ಅದರೊಂದಿಗೆ ಕೊಂಚ ಹೊತ್ತು ಕಳೆದು ನೆಮ್ಮದಿ ಕಂಡುಕೊಂಡು ಮತ್ತೆ ತನ್ನ ಕೆಲಸದಲ್ಲಿ ಮಗ್ನನಾಗುತ್ತಿದ್ದ. ಆದರೆ ಇವನ ಕೆಲಸ ಮಾತ್ರ ಯಾರಿಗೂ ಅರ್ಥವಾಗುತ್ತಿರಲಿಲ್ಲ. ಆದರೆ ಕೊನೆಗೊಮ್ಮೆ ದೇಶದ ಮುಖ್ಯ ನಗರಗಳ ಬೀದಿ ಬೀದಿಗಳಲ್ಲಿಯೂ ಓಯೋ ಹೊಟೇಲ್ ಆರಂಭವಾದಾಗ, ಅದರ ಪೋಸ್ಟರ್ಗಳು ರಾರಾಜಿಸುವುದಕ್ಕೆ ಆರಂಭವಾದಾಗ ಎಲ್ಲರೂ ಇವನ ಸಾಧನೆಯನ್ನು ಪುರಸ್ಕರಿಸುತ್ತಾರೆ. ಇವನ ಸಾಧನೆಗೆ ಮೆಚ್ಚುಗೆ ಸೂಚಿಸುತ್ತಾರೆ.
ಇಂದು ದೇಶದ ಪ್ರಸಿದ್ಧ, ಪ್ರಮುಖ ಹೊಟೇಲ್ಗಳಲ್ಲಿಯೂ ಓಯೋ ಬುಕ್ಕಿಂಗ್ ಸೌಲಭ್ಯ ಲಭ್ಯ. ಅತ್ಯಾಧುನಿಕ ತಂತ್ರಜ್ಞಾನಗಳ ಜೊತೆಗೆ, ಗ್ರಾಹಕರ ಮನಸ್ಸಿಗೊಪ್ಪುವಂತಹ ಸರ್ವ ವ್ಯವಸ್ಥೆಗಳನ್ನೂ ಓಯೋ ನೀಡುತ್ತಿದೆ. ಈ ಸಾರ್ಥಕ ಕೆಲಸದ ಹಿಂದೆ ರಿತೇಶ್ ಅಗರ್ವಾಲ್ ಎಂಬ 26 ರ ಸಾಧಕ ಹುಡುಗನ ಬೆವರಿನ ಫಲವಿದೆ. ಸಾಧಿಸುವ ಮನಸ್ಸಿದ್ದರೆ ಸಾಧನೆ ನೀರು ಕುಡಿದಷ್ಟೇ ಸುಲಭ ಎಂಬುದಕ್ಕೆ ಈ ಹುಡುಗ ಸಾಕ್ಷಿ. ಸಾಧಿಸುವ ಮನಸ್ಸು, ಕನಸು ಹೊತ್ತಿರುವ ಯುವ ಮನಗಳಿಗೂ ಈತ ಸ್ಫೂರ್ತಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.