ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆಯನ್ನು ನೀಡಿರುವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ದೆಹಲಿಯ ಬಿಜೆಪಿ ಕೇಂದ್ರ ಕಛೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ ಅವರು ಬಿಜೆಪಿ ಶಾಲು ಹೊದಿಸಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಕಾಂಗ್ರೆಸ್ ಪಕ್ಷದ ನಾಯಕತ್ವದ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದ ಅವರು, ನಿನ್ನೆಯಷ್ಟೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆಯನ್ನು ನೀಡಿದ್ದರು. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆಯನ್ನೂ ನಡೆಸಿದ್ದರು.
ಪಕ್ಷ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಸಿಂಧಿಯಾ ಅವರು, “ನನ್ನನ್ನು ನಿಮ್ಮ ಪರಿವಾರಕ್ಕೆ ಸ್ವಾಗತಿಸಿ ಒಂದು ಸ್ಥಾನವನ್ನು ನೀಡಿದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದಿದ್ದಾರೆ.
ಮೂಲಗಳ ಪ್ರಕಾರ, ಸಿಂಧಿಯಾ ಅವರನ್ನು ರಾಜ್ಯಸಭಾ ಸ್ಥಾನಕ್ಕೆ ಆಯ್ಕೆ ಮಾಡಿ ಕೇಂದ್ರ ಸಚಿವರನ್ನಾಗಿಸುವ ಉದ್ದೇಶವನ್ನು ಬಿಜೆಪಿ ಹೊಂದಿದೆ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷದ ದಿಗ್ಗಜರಾಗಿದ್ದ ಸಿಂಧಿಯಾ ಅವರು, ರಾಹುಲ್ ಗಾಂಧಿ ಅವರಿಗೆ ತುಂಬಾ ಆಪ್ತರಾಗಿದ್ದರು. ಆದರೆ ಅವರಿಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನವನ್ನು ನೀಡಿರಲಾಗಿಲ್ಲ. ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದರೂ ಅವರಿಗೆ ಆ ಹುದ್ದೆ ಸಿಕ್ಕಿರಲಿಲ್ಲ, ಕೊನೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನೂ ಅವರಿಗೆ ನೀಡಲಾಗಿಲ್ಲ. ಇದು ಅವರ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.
ಸಿಂಧಿಯಾ ಸೇರಿದಂತೆ 21 ಮಂದಿ ಕಾಂಗ್ರೆಸ್ ಶಾಸಕರು ರಾಜೀನಾಮೆಯನ್ನು ನೀಡಿರುವ ಹಿನ್ನಲೆಯಲ್ಲಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.