ದೇಶದಲ್ಲಿ ಗಲಭೆಗಳು ನಡೆಯುತ್ತವೆ. ದೊಂಬಿಗಳು ನಡೆಯುತ್ತವೆ. ದೇಶ ವಿರೋಧಿ ಶಕ್ತಿಗಳು ಅಟ್ಟಹಾಸ ಮೆರೆಯುತ್ತವೆ. ಬಾಂಬ್ ದಾಳಿ, ಸೈನಿಕರ ಮೇಲಿನ ದಾಳಿ, ಜನಾಂಗೀಯ ಘರ್ಷಣೆ, ಮತ ಮತಗಳ ನಡುವಿನ ಜಗಳ ಹೀಗೆ ಅನೇಕ ಘಟಿಸಬಾರದ ಘಟನೆಗಳು ನಡೆಯುತ್ತವೆ. ವಿದ್ರೋಹಿಗಳ ಕುಮ್ಮಕ್ಕಿನಿಂದ ದೇಶ ಹೊತ್ತಿ ಉರಿಯುತ್ತದೆ. ರಕ್ತಪಾತವೂ ನಡೆಯುತ್ತವೆ. ಹೀಗಾದಾಗೆಲ್ಲಾ ಮೋದಿ ವಿರೋಧಿಗಳ ಬಾಯಲ್ಲಿ ಇವೆಲ್ಲಕ್ಕೂ ಕಾರಣ ನಮ್ಮ ದೇಶದ ಅಡಳಿತ ನೌಕೆಯನ್ನು ನಡೆಸುತ್ತಿರುವ ನರೇಂದ್ರ ಮೋದಿ ಎಂಬ ಪೂರ್ವ ನಿರ್ಧರಿತ ಮಾತು ಕೇಳಿ ಬರುತ್ತದೆ. ಅವರಿಂದಾಗಿಯೇ ಇಂತಹ ದುಷ್ಕೃತ್ಯಗಳೆಲ್ಲಾ ನಡೆಯುತ್ತಿದೆ ಎನ್ನುವ ಮಾತುಗಳೂ ಸರ್ವೇ ಸಾಮಾನ್ಯ ಎಂಬಂತಾಗಿದೆ. ಇವೆಲ್ಲಕ್ಕೂ ಮೋದಿಯನ್ನೇ ಹೊಣೆಗಾರರನ್ನಾಗಿಸುವ ಈ ಪ್ರವೃತ್ತಿ ಪಕ್ಷಾತೀತವಾಗಿರುವ ಕೆಲವರಿಗಾದರೂ ಒಂದು ಸಂದೇಹವನ್ನು ಖಂಡಿತಾ ಹುಟ್ಟಿಸುತ್ತದೆ.
ಅದೇನೆಂದರೆ, ಈ ಹಿಂದೆಯೂ ಹಲವಾರು ಪಕ್ಷಗಳು ಯಾವುದೋ ರಾಜ್ಯದ, ಕೇಂದ್ರದ ಚುಕ್ಕಾಣಿ ಹಿಡಿದಿವೆ. ಈ ಸಂದರ್ಭಗಳಲ್ಲಿಯೂ ಇಂತಹ ನಡೆಯಬಾರದ ಘಟನೆಗಳು ನಡೆಯುತ್ತಲೇ ಬಂದಿದೆ. ಪರಿಸ್ಥಿತಿಗಳು ಹತೋಟಿಗೆ ಸಿಗದಂತಹ ಸಂದರ್ಭಗಳೂ ಎದುರಾಗಿವೆ. ಹೀಗೆಲ್ಲ ನಡೆದಾಗ ಅವುಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗದೆ ಕೈಕಟ್ಟಿ ನೋಡಿದವರೂ ಇದ್ದಾರೆ. ಹೀಗಿರುವಾಗ ಯಾವುದೋ ದುಷ್ಟ ಶಕ್ತಿಗಳ ಹುನ್ನಾರದಿಂದ ನಡೆದ ಗಲಭೆಗಳಿಗೆ ಮೋದಿ ಅದು ಹೇಗೆ ಹೊಣೆಗಾರರಾಗುತ್ತಾರೆ. ಅವರು ಇಂತಹ ಘಟನೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡರೂ ಅವರನ್ನೇ ಹೊಣೆಗಾರರನ್ನಾಗಿ ಮಾಡುತ್ತಿರುವುದು ಹಾಸ್ಯಾಸ್ಪದವೇ ಸರಿ.
ಹವಾಮಾನ ವೈಪರೀತ್ಯದ ಕಾರಣಕ್ಕೆ ಒಮ್ಮೊಮ್ಮೆ ಮಳೆ ಹೆಚ್ಚಾಗಿ ಬಿದ್ದು ಅತಿವೃಷ್ಟಿಯಾಗುತ್ತದೆ. ಇನ್ನೂ ಕೆಲವು ಬಾರಿ ಮಳೆಯೇ ಇಲ್ಲದೆ ಅನಾವೃಷ್ಟಿಯೂ ಸಂಭವಿಸುತ್ತದೆ. ಅಲ್ಲದೆ ಪ್ರಾಕೃತಿಕ ವಿಕೋಪಗಳಂತಹ ಸಂದರ್ಭಗಳಂತೂ ಸರ್ವೇ ಸಾಮಾನ್ಯ. ಹೀಗಾಗುವುದಕ್ಕೆಲ್ಲಾ ಮೋದಿ ಆಡಳಿತವೇ ಕಾರಣ ಎಂಬಂತೆ, ಅವರನ್ನೇ ಎಲ್ಲಕ್ಕೂ ದೂಷಣೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ತಲೆಯೊಳಗೆ ಮೆದುಳಿದ್ದವನಿಗೆ ಕಾಡಿಯೇ ಕಾಡುತ್ತದೆ. ವಿರೋಧಿಸಲೇ ಬೇಕು ಎನ್ನುವ ಭರದಲ್ಲಿ ಸರಿ, ತಪ್ಪುಗಳ ಬಗ್ಗೆ ಯೋಚನೆಯನ್ನೇ ಮಾಡದೆ ವಿರೋಧಿಸುವುದಿದೆಯಲ್ಲಾ ಅದರಷ್ಟು ನಾಚಿಗೇಡಿನ ಸಂಗತಿ ಬೇರೊಂದಿರುವುದಕ್ಕೆ ಸಾಧ್ಯವಿಲ್ಲ. ಹೀಗೆ ವಿರೋಧಿಸುವವರನ್ನು ತಿಳಿಗೇಡಿಗಳು ಎಂಬುದರಲ್ಲಿ ಏನು ತಪ್ಪಿದೆ?
ಇದು ಕೇವಲ ವಿರೋಧ ಪಕ್ಷಗಳಷ್ಟೇ ಮಾಡುತ್ತಿರುವ ತಪ್ಪಲ್ಲ. ಬದಲಾಗಿ ಇಂತಹ ಕೃತ್ಯಗಳು ನಡೆದ ಸಂದರ್ಭಗಳಲ್ಲಿ ಅರೆ ಬರೆ ವಿಷಯಗಳನ್ನು ತಿಳಿದುಕೊಂಡ ಮಾಧ್ಯಮಗಳೂ ಮೋದಿ ಮೇಲೆ ಗೂಬೆ ಕೂರಿಸುವುದು ಸಾಮಾನ್ಯ. ದೇಶದ ಮಹತ್ವದ ಸ್ಥಾನವನ್ನು ಅಲಂಕರಿಸಿದ ವ್ಯಕ್ತಿಯೊಬ್ಬನಿಗೆ ಕಿಂಚಿತ್ ಗೌರವವನ್ನೂ ನೀಡದೆ ಅವಮಾನ ಮಾಡುತ್ತಾ, ಆತನನ್ನು ಭಯೋತ್ಪಾದಕನ ಹಾಗೆ ಚಿತ್ರಿಸುವ ಕೆಲಸವನ್ನು ಕೆಲವು ಭಾರತೀಯ ಮಾಧ್ಯಮಗಳು ಮಾಡುತ್ತಲೇ ಬಂದಿವೆ. ಕೆಲವೊಮ್ಮೆ ಕೆಲವು ಸಂದರ್ಭಗಳಲ್ಲಿ ಪರಿಸ್ಥಿತಿಯ ವಿಷಮತೆ ಹೆಚ್ಚಾಗುವುದಕ್ಕೂ ಮಧ್ಯಮಗಳು ಬಿತ್ತರಿಸಿದ ವರದಿಗಳೇ ನೇರಾನೇರ ಹೊಣೆಯಾಗಿರುತ್ತವೆ ಎಂದರೆ ತಪ್ಪಲ್ಲ. ವಿರೋಧ ಪಕ್ಷಗಳಿಗೆ ಪಾರದರ್ಶಕ ಆಡಳಿತದಲ್ಲಿ ಬೇರೆ ಯಾವುದನ್ನೂ ಜಗಿಯಲು ಅವಕಾಶವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಸಿಕ್ಕಿದ ಅವಕಾಶವನ್ನು ಬಳಸಿಕೊಳ್ಳುತ್ತಾರೆ. ಆದರೆ ಕೆಲವು ಮಾಧ್ಯಮಗಳೂ ತಪ್ಪು ದಾರಿ ಹಿಡಿದಿರುವುದು, ಹಿಡಿಯುತ್ತಿರುವುದು ನಾಚಿಕೆಯ ಸಂಗತಿ.
ಇನ್ನು ಕೆಲವು ಜಾಗತಿಕ ಮಾಧ್ಯಮಗಳಂತೂ ಎಲ್ಲವೂ ಮೋದಿಯಿಂದಲೇ ನಡೆದದ್ದು ಎಂಬುದನ್ನು ಯಾವ ವಿಚಾರವನ್ನೂ ಸರಿಯಾಗಿ ತಿಳಿದುಕೊಳ್ಳದೆಯೇ ಜಡ್ಜ್ಮೆಂಟ್ ನೀಡುವುದಕ್ಕೂ ಹೊರಟು ಬಿಡುತ್ತವೆ. ನಿಜವಾಗಿ ನಡೆದದ್ದೇನು? ಯಾವುದರಿಂದಾಗಿ ಸಮಾಜದ ಶಾಂತಿ ಕದಡಿ ಹೋಗುವ ಕೆಲಸಗಳಾಗಿವೆ ಎಂಬುದನ್ನು ವಿಮರ್ಶಿಸಿ ಜನರಿಗೆ ಸರಿಯಾದ ರೀತಿಯಲ್ಲಿ ಜನರಿಗೆ ಮಾಹಿತಿ ರವಾನಿಸುವುದು, ಅವರನ್ನು ದುಷ್ಕೃತ್ಯದಲ್ಲಿ ಪಾಲು ಪಡೆಯದಂತೆ ಮಾಡುವುದನ್ನು ಬಿಟ್ಟು, ಅವರು ರೊಚ್ಚಿಗೇಳುವಂತೆ, ಹಿಂಸಾಚಾರಕ್ಕೆ ಪ್ರೇರೇಪಣೆ ನೀಡುವಂತೆ ಮಾಡುವ ಕೆಲಸವನ್ನು ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಮಾಡುತ್ತಿವೆ. ಜಾಗತಿಕ ಮಾಧ್ಯಮಗಳ ಈ ತಪ್ಪು ನಡೆಯಿಂದ ವಿಶ್ವದೆಲ್ಲೆಡೆ ಬದುಕು ಕಟ್ಟಿಕೊಳ್ಳುವುದಕ್ಕಾಗಿ ಹೋಗಿರುವ ಜನರಲ್ಲಿ ಕೆಲವರು ಘಾತುಕ ಶಕ್ತಿಗಳಾಗಿ ಬದಲಾಗುತ್ತಿದ್ದಾರೆ. ಇವೆಲ್ಲಕ್ಕೂ ಬಲಿಯಾಗುತ್ತಿರುವವರು ಯುವ ಜನತೆ. ಯಾವ ಹಿಂಸೆಗೂ ಪ್ರೇರೇಪಣೆ ನೀಡದ, ದೇಶ, ದೇಶವಾಸಿಗಳ ಹಿತ ಕಾಪಾಡುವುದಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಮೋದೀಜಿ ವಿರುದ್ಧವೇ ಹೋರಾಟಗಳನ್ನು ನಡೆಸುತ್ತಾರೆ. ಹುಚ್ಚು ನಡೆಗಳ ಮೂಲಕವೇ ಸಾರ್ವಜನಿಕ ವಲಯದಲ್ಲಿ ಅಶಾಂತಿ ಸೃಷ್ಟಿಸುತ್ತಾರೆ.
ಇತ್ತೀಚೆಗಷ್ಟೇ ದೆಹಲಿಯಲ್ಲಿ ನಡೆದ ದಂಗೆಯೂ ಇದಕ್ಕೆ ಪುಷ್ಟಿ ನೀಡುವಂತೆಯೂ ಇದೆ. ದೇಶವಾಸಿಗಳಿಗೆ ಯಾವುದೇ ಹಾನಿಯನ್ನು ಮಾಡದ, ನುಸುಳುಕೋರರ ವಿರುದ್ಧ ತಂದ ಸಿಎಎ, ಎನ್ಆರ್ಸಿ ವಿರುದ್ಧ ಪ್ರಚಾರವಾದ ಸುಳ್ಳುಗಳನ್ನೇ ನಂಬಿ, ದೆಹಲಿಯ ಜನರು ಪ್ರತಿಭಟನೆ, ದಂಗೆಗಳನ್ನು ನಡೆಸಿದರು. ಸುಳ್ಳುಗಳನ್ನು ಹಬ್ಬಿಸಿದವರು ಹೊತ್ತುರಿದ ದೆಹಲಿಯ ಬಿಸಿಗೆ ಚಳಿ ಕಾಯಿಸಿಕೊಂಡರು. ಅದೆಷ್ಟೋ ಬಡ ಕುಟುಂಬಗಳು ನರಳಿದವು. ಇಷ್ಟೆಲ್ಲಾ ನಡೆಯುವುದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿದ್ದರೆ, ವಿರೋಧಿಗಳು ಮಾತ್ರ ಮೋದಿಯನ್ನೇ ಇದಕ್ಕೆ ಹೊಣೆಗಾರನನ್ನಾಗಿ ಮಾಡಿದರು. ನೈಜತೆಯನ್ನು ಮುಚ್ಚಿಟ್ಟು ಕೆಲವು ಪಕ್ಷಗಳ ನಾಯಕರೇ ಕೇಂದ್ರ ಸರ್ಕಾರದ ವಿರುದ್ಧ ದಂಗೆ ಎಬ್ಬಿಸುವಲ್ಲಿ ಕೆಲಸ ಮಾಡಿದ್ದು, ನಮ್ಮ ದೇಶದಲ್ಲಿ ಯಾರು ಏನು ಹೇಳಿದರೂ ಶಿಕ್ಷೆ ಇಲ್ಲ ಎಂಬ ಅಹಂಕಾರದಿಂದ. ಇಲ್ಲಿ ಬಂದು ಹೇಳಿದರೂ ಯಾರೂ ನಮ್ಮನ್ನು ಪ್ರಶ್ನಿಸುವುದಿಲ್ಲ ಎನ್ನುವ ಭಂಡತನದಿಂದ.
ಇನ್ನು ಗುಜರಾತ್, ಮುಂಬೈನಲ್ಲಿ ನಡೆದ ಹಿಂಸಾಚಾರ, ಅಯೋದ್ಯೆಯ ವಿಚಾರ, ಸಿಖ್ ವಿರೋಧಿ ದಂಗೆಗಳ ಸಂದರ್ಭದಲ್ಲಿಯೂ ಮೋದಿಯನ್ನೇ ಗುರಿಯನ್ನಾಗಿಸಿ ದೂಷಿಸುವುದರಲ್ಲಿಯೆ ವಿರೋಧಿಗಳು ಮತ್ತು ಕೆಲವು ಪೇಯ್ಡ್ ಮಾಧ್ಯಮಗಳು ಹೆಚ್ಚು ಮುತುವರ್ಜಿ ವಹಿಸಿದ್ದವು. ಸಿಖ್ ವಿರೋಧಿ ದಂಗೆಯ ಸಂದರ್ಭದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಒಂದು ದೊಡ್ಡ ಮರ ಬಿದ್ದರೂ, ಭೂಮಿ ಅಲುಗಾಡುತ್ತದೆ ಎಂಬ ಹೇಳಿಕೆಯನ್ನೂ ನೀಡಿದ್ದರು. ಅಂದರೆ ಘಟನೆ ಚಿಕ್ಕದೇ ಇರಲಿ, ದೊಡ್ಡದೇ ಅಗಿರಲಿ ವಿರೋಧಿಗಳು ಅದನ್ನು ಹೇಗೆ ಬಳಸಿಕೊಳ್ಳುವುದು, ಒಬ್ಬ ವ್ಯಕ್ತಿಯನ್ನು ನಿರ್ನಾಮ ಮಾಡುವುದಕ್ಕಾಗಿ ಅದನ್ನು ಹೇಗೆ ಬಳಸಿಕೊಳ್ಳುವುದು ಎನ್ನುವುದನ್ನೇ ಯೋಚಿಸುತ್ತಾರೆ. ಸದ್ಯ ಮೋದಿಯ ಪರಿಸ್ಥಿತಿಯೂ ಇದೇ ಆಗಿದೆ. ದೇಶದೊಳಗೆ ಏನೇ ಕೆಟ್ಟದ್ದು ನಡೆಯಲಿ, ಅದೆಲ್ಲವೂ ಮೋದಿ ಅವರಿಂದಲೇ ನಡೆದಿದೆ ಎಂಬುದಾಗಿ ಬಿಂಬಿಸುವ ಕೆಲಸವನ್ನು ಕೆಲವು ಕೆಲಸವಿಲ್ಲದವರು ಮಾಡುತ್ತಲೇ ಇರುತ್ತಾರೆ.
ಮೋದಿ ಅವರಿಗಿಂತಲೂ ಹಿಂದೆ ದೇಶದ ಆಡಳಿತ ಚುಕ್ಕಣಿ ಹಿಡಿದವರೆಲ್ಲರನ್ನೂ ಗಮನಿಸಿದರೆ, ಅವರೆಲ್ಲರಿಗಿಂತಲೂ ಹೆಚ್ಚು ಸಮರ್ಥವಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ ಮೋದಿ. ಎಲ್ಲಾ ವಿರೋಧಗಳನ್ನೂ ಸಮರ್ಥವಾಗಿ ನಿಭಾಯಿಸಿಕೊಂಡು, ಯಾವ ಟೀಕೆ ಟಿಪ್ಪಣಿಗಳಿಗೂ ತಲೆ ಕೆಡಿಸಿಕೊಳ್ಳದೆ, ತಮ್ಮ ಕರ್ತವ್ಯವನ್ನು ನಿಭಾಯಿಸುವತ್ತಲೇ ಚಿತ್ತ ನೆಟ್ಟಿದ್ದಾರೆ. ಜೊತೆಗೆ ದೇಶ ಅಭಿವೃದ್ಧಿಯಾಗಬೇಕಾದರೆ, ದೇಶದ ಜನರ ಭವಿಷ್ಯ ನೆಮ್ಮದಿಯಿಂದ ಕೂಡಿರಬೇಕಾದರೆ ಏನಾಗಬೇಕೋ, ಅಂತಹ ಕಾನೂನುಗಳನ್ನು ಸಾಂವಿಧಾನಿಕವಾಗಿಯೇ ಜಾರಿಗೆ ತರುತ್ತಿದ್ದಾರೆ. ಅದೆಷ್ಟೋ ಕುತಂತ್ರಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದರೂ ಅದಕ್ಕೆ ಕ್ಯಾರೇ ಎನ್ನದೆ ಎಲ್ಲವನ್ನೂ ಸಮಚಿತ್ತದಿಂದಲೇ ಸ್ವೀಕರಿಸಿ ಕೆಲಸ ಮಾಡುತ್ತಿದ್ದಾರೆ. ಇಂತಹ ಒಬ್ಬ ನಿಷ್ಕಲ್ಮಷ ವ್ಯಕ್ತಿ ಭಾರತದ ಪ್ರಧಾನಿಯಾಗಿರುವುದಕ್ಕೆ ನಿಜಕ್ಕೂ ನಾವು ಹೆಮ್ಮೆ ಪಡಲೇಬೇಕು.
ಹಿಂದೊಮ್ಮೆ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ವೀಸಾ ನಿರಾಕರಿಸಿದ್ದ ಅಮೆರಿಕವೇ ಇಂದು ಮೋದಿಯ ವರ್ಚಸ್ಸಿಗೆ ಸೋತು, ಅವರ ಸ್ನೇಹ ಹಸ್ತವನ್ನು ಬಯಸಿ ಬರುತ್ತಿದ್ದಾರೆ ಎಂದರೆ ಅವರೊಳಗಿರುವ ನಾಯಕತ್ವದ ಗುಣ ಎಂಥದ್ದು ಎಂದು ನಾವು ಅರ್ಥ ಮಾಡಿಕೊಳ್ಳಲೇ ಬೇಕು. ಹೀಗೆ ವಿನಾ ಕಾರಣ ಎಲ್ಲದ್ದಕ್ಕೂ ಮೋದಿ ಅವರನ್ನು ವಿರೋಧಿಸುತ್ತಲೇ ಹೋದರೆ ಅದು ವಿಶ್ವದಲ್ಲಿ ನಮ್ಮ ದೇಶದ ಗೌರವವನ್ನು ನಾವೇ ಪಾತಾಳಕ್ಕೆ ತಳ್ಳುವ ಕೆಲಸ ಮಾಡುತ್ತಿದ್ದೇವೆ ಎಂದು ಅರ್ಥ. ಭಾರತವನ್ನು ವಿಶ್ವಗುರುವನ್ನಾಗಿಸಲು ಹೊರಟ ಶ್ರೇಷ್ಟ ನಾಯಕನಿಗೇ ನಾವು ಗೌರವ ನೀಡುವುದಿಲ್ಲ, ಅವನ ವಿರುದ್ಧ ಹಬ್ಬುವ ಸುಳ್ಳು ಸುದ್ದಿಗಳನ್ನು ನಂಬಿ ಗಲಭೆ, ಹಿಂಸಾಚಾರವನ್ನು ಮಾಡುತ್ತೇವೆ ಎಂದಾದರೆ, ಅದೆಲ್ಲವನ್ನೂ ಮತ್ತೆ ಆ ಶ್ರೇಷ್ಟ ವ್ಯಕ್ತಿತ್ವದ ತಲೆಗೇ ಕಟ್ಟುತ್ತೇವೆ ಎಂದಾದರೆ ನಮ್ಮ ಬಗ್ಗೆ ನಮಗೇ ಅಸಹ್ಯ ಹುಟ್ಟಬೇಕು.
ರಾಜಕೀಯ ವಿರೋಧ ಸರಿ. ಆದರೆ ವಿನಾಕಾರಣ ವ್ಯಕ್ತಿಯ ವಿರೋಧ ಎಷ್ಟು ಸರಿ ಹೇಳಿ. ನಮ್ಮ ಒಳಿತಿಗಾಗಿ ಶ್ರಮಿಸುವ, ದೇಶವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದ ನಾಯಕನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸುವ ಮುನ್ನ ಒಮ್ಮೆ ಯೋಚಿಸಿದರೆ ಉತ್ತಮ ಅಲ್ಲವೇ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.