
ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಮಂಗಳವಾರ ರಾತ್ರಿ ಹಿಂಸಾಚಾರ ಪೀಡಿತ ಈಶಾನ್ಯದಲ್ಲಿ ಭದ್ರತಾ ಪರಿಸ್ಥಿತಿಗಳನ್ನು ಪರಿಶೀಲಿಸಿದರು. ದೆಹಲಿ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಮಾತುಕತೆಯನ್ನು ನಡೆಸಿದರು. ಅಲ್ಲದೆ, ಹಿಂಸಾಚಾರ ಪೀಡಿತ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದಿಂದಾಗಿ ಕೇವಲ 3 ದಿನಗಳಲ್ಲಿ 17 ಜನರು ಮೃತಪಟ್ಟಿದ್ದಾರೆ. 200ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. ಉದ್ರಿಕ್ತ ಜನರ ಗುಂಪು ಹಲವು ಅಂಗಡಿ-ಮುಂಗಟ್ಟುಗಳನ್ನು ಬೆಂಕಿಹಚ್ಚಿ ನಾಶಪಡಿಸಿದೆ.
ಸೀಲಂಪುರದ ಡಿಸಿಪಿ ಕಚೇರಿಯಲ್ಲಿ ದೋವಲ್ ಅವರು ಮಂಗಳವಾರ ಮಧ್ಯರಾತ್ರಿಯವರೆಗೂ ಸಭೆಯನ್ನು ನಡೆಸಿದ್ದಾರೆ. ಈ ವೇಳೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಅಲ್ಲದೆ ನೋಬಲ್ ಅವರು ಸೀಲಂಪುರ್, ಜಾಫರಬಾದ್, ಮೌಜಪುರ್ ಮತ್ತು ಗೋಕುಲ್ಪುರಿ ಚೌಕ್ ಪ್ರದೇಶಗಳಿಗೆ ಪೊಲೀಸ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನವನ್ನು ನಡೆಸಿದರು.
ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಇತರರೊಂದಿಗೆ ಸಭೆ ನಡೆಸಿದ ಬಳಿಕ ದೋವಲ್ ಅವರು ಭದ್ರತಾ ಪರಿಸ್ಥಿತಿ ಅವಲೋಕನವನ್ನು ನಡೆಸಿದರು.
ದೆಹಲಿಯ ಹಲವು ಭಾಗಗಳಲ್ಲಿ ಕರ್ಫ್ಯೂ ಹೇರಲಾಗಿದ್ದು, ಕಾನೂನು-ಸುವ್ಯವಸ್ಥೆ ಪಾಲನೆಗಾಗಿ ಪ್ಯಾರಾ ಮಿಲಿಟರಿ ಪಡೆಗಳನ್ನು ನಿಯೋಜನೆಗೊಳಿಸಲಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟವೂ ಹಿಂಸಾತ್ಮಕವಾಗಿ ಪರಿವರ್ತನೆಯಾದ ಕಾರಣದಿಂದಾಗಿ ದೆಹಲಿಯಲ್ಲಿ ಹಿಂಸೆ ಭುಗಿಲೆದ್ದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


