ತಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು ಎನ್ನುವ ಆಸೆ ಎಲ್ಲಾ ಹೆತ್ತವರಲ್ಲಿಯೂ ಇರುತ್ತದೆ. ಕೆಲವರು ಶಿಕ್ಷಣದ ಅವಶ್ಯಕತೆಯನ್ನು ಸಮರ್ಥವಾಗಿ ಈಡೇರಿಸುವಲ್ಲಿ ಸಫಲರಾದರೆ, ಇನ್ನು ಕೆಲವು ಮಕ್ಕಳ ಹೆತ್ತವರಿಗೆ ಶಿಕ್ಷಣ ಎಂಬುದು ನಾನಾ ಕಾರಣಗಳಿಂದಾಗಿ ಗಗನ ಕುಸುಮವೇ ಆಗಿ ಬಿಡುತ್ತದೆ. ಆರ್ಥಿಕವಾಗಿ ಸದೃಢರಲ್ಲದ ಬಡ ಕುಟುಂಬಗಳಿಗಂತೂ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡುವುದು ತೀರಾ ಕಷ್ಟ. ಇನ್ನು ಕೆಲಸದ ಕಾರಣಕ್ಕಾಗಿ ವಲಸೆ ಹೋಗುವ ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸ ಎಂಬುದು ಸವಾಲಿನ ವಿಷಯ. ಬುದ್ಧಿವಂತರಾಗಿದ್ದರೂ ಹೆತ್ತವರ ಅಲೆಮಾರಿತನದ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾಗಬೇಕಾಗುತ್ತದೆ. ಹೀಗಿರುವ ಬಡ ಮಕ್ಕಳಿಗೆಂದೇ ಬೆಂಗಳೂರಿನ ಈ ಮೈತ್ರೀಯಿ ಎಂಬ ಮಹಿಳೆ ಡಿಎಸ್ಎಫ್ (ಡ್ರೀಮ್ ಸ್ಕೂಲ್ ಫೌಂಡೇಶನ್) ಎನ್ನುವ ಎನ್ಜಿಒ ಒಂದನ್ನು ಹುಟ್ಟು ಹಾಕಿದ್ದಾರೆ. ಆ ಮೂಲಕ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಡ, ಅಲೆಮಾರಿ ಕಾರ್ಮಿಕರ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದಕ್ಕೆ ಸಹಾಯವಾಗುವಂತೆ ಕೆಲಸ ಮಾಡುತ್ತಿದ್ದಾರೆ.
ಏನಿದು ಡಿಎಸ್ಎಫ್?
ಬಡ ಮತ್ತು ಅಲೆಮಾರಿ ಕಾರ್ಮಿಕರ ಮಕ್ಕಳಿಗೆ ನೆಲೆ ಕಲ್ಪಿಸುವ ನಿಟ್ಟಿನಲ್ಲಿ, ಅವರನ್ನು ಚುರುಕು ಮತ್ತು ಬುದ್ಧಿವಂತರನ್ನಾಗಿ ಮಾಡುವಲ್ಲಿ ಡಿಎಸ್ಎಫ್ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮಾತ್ರವಲ್ಲದೆ, ಅವರೊಳಗಿನ ಕೌಶಲ್ಯವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿಯೂ ಮೈತ್ರೇಯಿ ಮತ್ತವರ ತಂಡ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದೆ. ಆ ಮೂಲಕ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಏನೇನೂ ಕಡಿಮೆ ಇಲ್ಲದಂತೆ ಈ ಮಕ್ಕಳನ್ನು ತಯಾರು ಮಾಡುವತ್ತ ಚಿತ್ತ ನೆಟ್ಟಿದೆ. ಡಿಎಸ್ಎಫ್ ಎಂಬ ಸಮಾಜ ಸೇವಾ ಸಂಸ್ಥೆಯ ಮೂಲಕ ದೇಶದ ಭವಿಷ್ಯಗಳಾದ ವಿದ್ಯಾರ್ಥಿಗಳನ್ನು ಸಮರ್ಥರನ್ನಾಗಿ ರೂಪಿಸುವುದಕ್ಕೆ ಹೊರಟ ಮೃತ್ರೇಯಿ ತಂಡಕ್ಕೆ ಶಹಬ್ಬಾಸ್ ಹೇಳಲೇ ಬೇಕು.
ಯಾರು ಈ ಮೈತ್ರೀಯಿ
ಪುಣೆ ಮೂಲದ ಈ ಮಹಿಳೆ, 1988-89ರಲ್ಲಿ ಪುಣೆ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಅದಾದ ಬಳಿಕ ಮಲ್ಟಿ ನ್ಯಾಷನಲ್ ಕಂಪನಿಯೊಂದರಲ್ಲಿ ಉನ್ನತ ಹುದ್ದೆಯನ್ನೂ ನಿರ್ವಹಿಸುತ್ತಿದ್ದವರು. ಸಾಮಾಜಿಕ ಕ್ಷೇತ್ರಗಳಲ್ಲಿ ಏನಾದರೂ ಕೆಲಸ ಮಾಡಬೇಕು ಎನ್ನುವ ಅದಮ್ಯ ಬಯಕೆಯೇ ಡಿಎಸ್ಎಫ್ ಅನ್ನು ಆರಂಭಿಸುವುದಕ್ಕೆ ಕಾರಣ. ಮೊದಲ ಹೆರಿಗೆಯ ನಂತರದಲ್ಲಿಯೇ ಅವರು ತಮ್ಮ ಕನಸಿಗೆ ಮೂರ್ತ ರೂಪ ಕೊಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದಕ್ಕಾಗಿ ಅವರು ಐಟಿ ಕಂಪನಿಯ ಉದ್ಯೋಗವನ್ನೂ ತ್ಯಜಿಸಿದ್ದಾರೆ. ಇವರ ಕನಸಿನ ಕೂಸು ಎನ್ಜಿಒ ಸ್ಥಾಪನೆಗೂ ಮುನ್ನ ಚೈಲ್ಡ್ ರೈಟ್ಸ್ ಆಂಡ್ ಯು ಎಂಬ ಸಂಸ್ಥೆಯಲ್ಲಿ ಸ್ವಯಂಸೇವಕಿಯಾಗಿಯೂ ಕಾರ್ಯ ನಿರ್ವಹಿಸಿದ ಅನುಭವ ಇವರದ್ದು.
ಚೈಲ್ಡ್ ರೈಟ್ಸ್ ಆಂಡ್ ಯು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ವಲಸೆ ಕಾರ್ಮಿಕರ, ಬಡ ಕುಟುಂಬದ, ಆರ್ಥಿಕ ಸಂಕಷ್ಟಕ್ಕೆ ಒಳಗಾದ ಕುಟುಂಬಗಳ ವಿದ್ಯಾರ್ಥಿಗಳನ್ನು ಮಾತನಾಡಿಸಬೇಕಾಗಿತ್ತು. ಈ ಸಂದರ್ಭದಲ್ಲಿಯೇ ಅವರಿಗೆ ಬಡ ಮಕ್ಕಳ ಶೋಚನೀಯ ಬದುಕಿನ ಬಗ್ಗೆ ಅರಿವು ಮೂಡಿದ್ದು ಮತ್ತು ಅವರಿಗಾಗಿ ಡಿಎಸ್ಎಫ್ ಸಂಸ್ಥೆಯನ್ನು ಸ್ಥಾಪಿಸುವ ಬಗ್ಗೆ ಯೋಜನೆಗಳನ್ನು ಹಾಕಿಕೊಂಡದ್ದು. ಇವರು ಭೇಟಿ ಮಾಡುತ್ತಿದ್ದ ಹೆಚ್ಚಿನ ಮಕ್ಕಳ ಕುಟುಂಬಗಳ ಸ್ಥಿತಿ ಶೋಚನೀಯವಾಗಿದ್ದ ಕಾರಣ ಎಳವೆಯಲ್ಲಿ, ಶಾಲೆಗೆ ಹೋಗಬೇಕಾದ ವಯಸ್ಸಿನಲ್ಲಿಯೇ ಕೆಲಸ ಮಾಡುವ, ಹೆತ್ತವರು ಕೆಲಸಕ್ಕೆ ಹೋದಾಗ ಮನೆಯಲ್ಲಿನ ತಮಗಿಂತ ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವ ಮಹತ್ತರ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕಾಗಿತ್ತು. ಈ ಎಲ್ಲಾ ಸಂಕಷ್ಟಗಳಿಂದ ಅವರನ್ನು ಪಾರು ಮಾಡಿ ಅವರಿಗೆ ಶಿಕ್ಷಣ ನೀಡುವುದು ಸುಲಭದ ಮಾತಾಗಿರಲಿಲ್ಲ.
ಈ ಸಂಸ್ಥೆಯನ್ನು ಹುಟ್ಟು ಹಾಕಿದ ಆರಂಭದಲ್ಲಿ ಸರಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಯತ್ತ ಗಮನ ವಹಿಸಲಾಯಿತು. ಸರ್ಕಾರಿ ಶಲೆಗಳು ಎದುರಿಸುತ್ತಿದ್ದ ಮೂಲಭೂತ ಅವಶ್ಯಕತೆಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಯೋಜನೆಗಳನ್ನು ಹಮ್ಮಿಕೊಳ್ಳಲಾಯಿತು. ಮಕ್ಕಳಿಗೆ ಪಠ್ಯ ವಿಚಾರಗಳ ಜೊತೆಗೆ ಸ್ಪೋಕನ್ ಇಂಗ್ಲೀಷ್, ಪಠ್ಯೇತರ ಚಟುವಟಿಕೆಗಳ ಶಿಕ್ಷಣ ನೀಡಲಾಯಿತು. ಇದರ ಜೊತೆಗೆ ಹೆತ್ತವರಿಗೂ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸುವ ಪ್ರಯತ್ನಗಳನ್ನೂ ಈ ತಂಡ ಮಾಡುತ್ತದೆ. ಏಕೆಂದರೆ ಕೆಲವು ಹೆತ್ತವರು ಶಿಕ್ಷಣ ವಂಚಿತರಾಗಿರುವ ಕಾರಣ ಅವರಿಗೆ ಶೈಕ್ಷಣಿಕ ವಿಚಾರಗಳಲ್ಲಿ ತಮ್ಮ ಮಕ್ಕಳನ್ನು ತಯಾರು ಮಾಡುವುದು ಸಾಧ್ಯವಾಗುವುದಿಲ್ಲ. ಮತ್ತೆ ಕೆಲವರಿಗೆ ಬದುಕು ಸಾಗಿಸಲು ಕೆಲಸ ಮಾಡಲೇ ಬೇಕಾಗಿದ್ದು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯ ಬಗ್ಗೆ ಕಾಳಜಿ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಅಂತಹ ಪೋಷಕರಿಗೂ ಶಿಕ್ಷಣದ ಅಗತ್ಯತೆಯ ಕುರಿತು ಮಾಹಿತಿ ನೀಡಲಾಗುತ್ತದೆ. ಸುಮಾರು ಎರಡು ವರ್ಷಗಳ ಕಾಲ ಸ್ವಯಂ ಆಸಕ್ತಿಯಿಂದ ಮೈತ್ರೇಯಿ ಅವರ ತಂಡ ನಗರದಾದ್ಯಂತ ಇರುವ 40 ಸರಕಾರಿ ಶಾಲೆಗಳ ಬಗ್ಗೆ ಕಾಳಜಿ ವಹಿಸಿ, ವಿದ್ಯಾರ್ಥಿ ಪೂರಕ ವಾತಾವರಣವನ್ನು ನಿರ್ಮಿಸುವಲ್ಲಿ ಪ್ರಯತ್ನಿಸುತ್ತಾರೆ. ಆ ಮೂಲಕ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳುವಲ್ಲಿಯವರೆಗಿನ ಎಲ್ಲಾ ಸಹಾಯವನ್ನು ಈ ಸಂಸ್ಥೆ ಮಾಡುತ್ತಿದೆ.
ಹಲವಾರು ಕಾರಣಗಳಿಂದ ಶಿಕ್ಷಣ ವಂಚಿತರಾಗಿರುವ ವಿದ್ಯಾರ್ಥಿಗಳನ್ನು ಶಾಲೆಯತ್ತ ಸೆಳೆಯಲು ಸರ್ಕಾರಿ ಶಾಲೆಯಲ್ಲಿ ಕಲಿತು ದೊಡ್ಡ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವವರ ಸಾಧನೆಗಳನ್ನು ತಿಳಿಸುತ್ತಾರೆ. ಉನ್ನತ ವಿದ್ಯಾಭ್ಯಾಸದ ಕನಸನ್ನು ಹೊತ್ತಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನೂ ಮಾಡುತ್ತಾರೆ. ಇವರ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳ ಕಾರಣದಿಂದಾಗಿ ಮೊದಲ ಬ್ಯಾಚ್ನ ಶೇ. 85 ರಷ್ಟು ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಅಲ್ಲದೆ ತಾಂತ್ರಿಕ, ವೈದ್ಯಕೀಯ ಶಿಕ್ಷಣವನ್ನೂ ಕೆಲವು ವಿದ್ಯಾರ್ಥಿಗಳು ಪಡೆದುಕೊಂಡದ್ದಾಗಿ ಡಿಎಸ್ಎಫ್ ಅಭಿಮಾನ ಪಡುತ್ತದೆ. ವಿದ್ಯಾರ್ಥಿಗಳ ಅಸಕ್ತಿಯ ಕ್ಷೇತ್ರಗಳನ್ನು ತಿಳಿದುಕೊಳ್ಳುವುದು, ಅವರಿಗೆ ಸ್ಕಾಲರ್ ಶಿಪ್ ವ್ಯವಸ್ಥೆಯನ್ನು ಮಾಡುವುದು, ತರಬೇತಿಗಳನ್ನು ನೀಡುವ ನಿಟ್ಟಿನಲ್ಲಿಯೂ ಸಂಸ್ಥೆ ಕೆಲಸ ಮಾಡುತ್ತಿದೆ. ಅಲ್ಲದೆ ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆಯುವುದಕ್ಕೆ ಬೇಕಾದ ಕೌಶಲಗಳನ್ನೂ ಇವರು ನೀಡುತ್ತಿದ್ದಾರೆ.
ಮಕ್ಕಳೊಳಗಿನ ಪ್ರತಿಭೆಗಳನ್ನು ತಿಳಿದುಕೊಂಡು, ಅದಕ್ಕೆ ಸರಿಯಾದ ವೇದಿಕೆ ನಿರ್ಮಿಸಿಕೊಡುವಲ್ಲಿ ಇವರ ಸಾಧನೆ ಅಪಾರ. ಹಾಗೆಯೇ ಬಡ ಮಕ್ಕಳನ್ನೂ ಮುನ್ನೆಲೆಗೆ ತರಬೇಕು, ಅವರನ್ನೂ ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಬೇಕು ಎನ್ನುವ ಇವರ ಮನೋಭಾವಕ್ಕೆ ಹ್ಯಾಟ್ಸ್ಅಪ್ ಹೇಳಲೇ ಬೇಕು. ಟ್ಯೂಷನ್, ತರಬೇತಿಗಳಿಗೆ ಹೋಗುವುದಕ್ಕೆ ಆರ್ಥಿಕ ಶಕ್ತಿ ಇಲ್ಲದ ವಿದ್ಯಾರ್ಥಿಗಳಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಿಕೊಟ್ಟು, ಪ್ರೋತ್ಸಾಹ ನೀಡಿ ಸುಶಿಕ್ಷಿತರನ್ನಾಗಿಸಲು ಹೊರಟ ಇವರ ಕಾರ್ಯ ಯುವ ಜನತೆಗೆ ಮಾದರಿಯೇ ಸರಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.