ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಎರಡನೆಯ ಅವಧಿಯ 9ನೇ ಮನ್ ಕೀ ಬಾತ್ನ ಅವತರಣಿಕೆಯಲ್ಲಿ ದೇಶಕ್ಕೆ ಸ್ಫೂರ್ತಿದಾಯಕರಾಗಿರುವ ವ್ಯಕ್ತಿಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಬಿಹಾರದ ಪೂರ್ಣಿಯಾ ಪ್ರದೇಶದ ಬಗ್ಗೆಯೂ ಮೆಚ್ಚುಗೆಯ ಮಾತನಾಡಿರುವ ಅವರು, ಇಲ್ಲಿನ ಮಹಿಳೆಯರು ದೇಶಕ್ಕೆ ಸ್ಫೂರ್ತಿ ಎಂದು ತಿಳಿಸಿದ್ದಾರೆ. ಪೂರ್ಣಿಯಾ ಪ್ರದೇಶದ ಜನರು ಬರದಿಂದ ಉಂಟಾದ ಹಾನಿಯ ಜೊತೆಗೆ ಹೋರಾಟ ನಡೆಸುತ್ತಿದ್ದಾರೆ. ಈ ಸ್ಥಿತಿಯಿಂದ ಹೊರ ಬರುವುದಕ್ಕಾಗಿ ಸರಕಾರ ನೀಡುವ ಸವಲತ್ತುಗಳನ್ನು ಬಳಕೆ ಮಾಡಿಕೊಂಡು ರೇಷ್ಮೆ ಹುಳುಗಳ ಸಾಕಾಣಿಕೆ, ನೂಲುವಿಕೆ ಮತ್ತು ಸೀರೆ ತಯಾರಿಕೆಯ ಮೂಲಕ ಲಾಭ ಪಡೆಯುತ್ತಿದ್ದಾರೆ. ಜೊತೆಗೆ ತಮ್ಮ ಪ್ರದೇಶದ ಆದಾಯ ಬಲಪಡಿಸುವಿಕೆಯತ್ತಲೂ ಗಮನ ಹರಿಸಿರುವುದಾಗಿ ತಿಳಿಸಿದ್ದಾರೆ. ಬರದಿಂದ ಉಂಟಾದ ಕಠಿಣ ಪರಿಸ್ಥಿತಿಯಲ್ಲಿಯೂ ಪರಿಶ್ರಮದ ಮೂಲಕ ಬದುಕು ಕಟ್ಟಿಕೊಳ್ಳುವುದಕ್ಕೆ ಹೊರಟ ಮಾದರಿ ಮಹಿಳೆಯರ ಸಾಲಿನಲ್ಲಿ ಪೂರ್ಣಿಯಾದ ಮಹಿಳೆಯರೂ ನಿಲ್ಲುತ್ತಾರೆ ಎನ್ನುವ ಮೂಲಕ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಹನ್ನೆರಡನೆಯ ವಯಸ್ಸಿನಲ್ಲಿಯೇ ದಕ್ಷಿಣ ಆಫ್ರಿಕಾದ 7000 ಮಿ. ಎತ್ತರದ ಅಕಂಕಾಗ್ವಾ ಎಂಬ ಅತಿ ಎತ್ತರದ ಪರ್ವತ ಶ್ರೇಣಿಯನ್ನು ಏರಿದ ಕಾಮ್ಯಾ ಕಾರ್ತಿಕೇಯನ್ ಅವರ ಸಾಧನೆ ದೇಶವಾಸಿಗಳಿಗೆಲ್ಲರಿಗೂ ಪ್ರೇರಣೆ ಎಂದು ಮೋದಿ ಅಭಿಪ್ರಾಯ ಪಟ್ಟರು. ಅಲ್ಲದೆ ಇದಕ್ಕಿಂತಲೂ ದೊಡ್ಡ ಸಾಧನೆಯನ್ನು ಮಾಡುವುದಕ್ಕಾಗಿ ಕಾಮ್ಯಾ ಯೋಜನೆಗಳನ್ನು ಹಾಕಿಕೊಂಡಿದ್ದು ಅದಕ್ಕೆ ಮಿಷನ್ ಸಾಹಸ್ ಎಂದು ಹೆಸರಿಟ್ಟಿರುವುದಾಗಿಯೂ ತಿಳಿಸಿದ್ದಾರೆ. ಮಿಷನ್ ಸಾಹಸ್ನ ಮೂಲಕ ಪ್ರಪಂಚದ ಅತೀ ಎತ್ತರದ ಎಲ್ಲಾ ಪ್ರದೇಶಗಳನ್ನು ಏರಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ. ಇದು ದೇಶದ ಕ್ರೀಡಾಪಟುಗಳೆಲ್ಲರಿಗೂ ಸ್ಫೂರ್ತಿಯೇ ಸರಿ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ ಭಾರತದ ಕ್ರೀಡಾಳುಗಳು ತಮ್ಮ ತಮ್ಮ ಆಸಕ್ತಿಯ ಕ್ಷೇತ್ರಗಳನ್ನು ಗುರುತಿಸಿಕೊಂಡು ಅದರಲ್ಲಿಯೇ ದೊಡ್ಡ ಮಟ್ಟದ ಸಾಧನೆ ಮಾಡುವ ನಿಟ್ಟಿನಲ್ಲಿ ಮನಸ್ಸು ಮಾಡುವಂತೆಯೂ ಅವರು ಮನವಿ ಮಾಡಿದರು.
ಮೊರಾದಾಬಾದ್ನ ಹಮೀರ್ಪುರ ಗ್ರಾಮದಲ್ಲಿ ವಾಸಿಸುವ ಸಲ್ಮಾನ್ ಅವರ ಉದಾಹರಣೆಯನ್ನೂ ಮೋದಿ ಉಲ್ಲೇಖಿಸಿದರು ಮತ್ತು ಹುಟ್ಟಿನಿಂದ ದಿವ್ಯಾಂಗ ಆಗಿದ್ದ ಸಲ್ಮಾನ್ ತಮ್ಮ ಕಷ್ಟದ ಹೊರತಾಗಿಯೂ ಭರವಸೆಯನ್ನು ಕಳೆದುಕೊಂಡಿಲ್ಲ. ತಮ್ಮ ಹಳ್ಳಿಯಲ್ಲಿಯೇ ಅವರು ಡಿಟರ್ಜೆಂಟ್ ಮತ್ತು ಚಪ್ಪಲಿ ತಯಾರಿಕೆಯ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ನಿರ್ಧರಿಸಿದರು ಮತ್ತು ಅದರಲ್ಲಿ ದೊಡ್ಡ ಸಾಧನೆಯನ್ನು ಮಾಡಿದ್ದಾರೆ. ಅಲ್ಲದೇ, ದಿವ್ಯಾಂಗ ಜನರಿಗೆ ಸಹಾಯ ಮಾಡುವ ಸಲುವಾಗಿ ಅವರು ತಮ್ಮ ಉದ್ಯಮದಲ್ಲಿ 30 ಮಂದಿ ದಿವ್ಯಾಂಗರಿಗೆ ಉದ್ಯೋಗವನ್ನು ನೀಡಿದ್ದಾರೆ.
ಇನ್ನು ಕೇರಳದ ಕೊಲ್ಲಂನ ಭಾಗೀರಥಿ ಅಮ್ಮ ಎನ್ನುವ 105 ವರ್ಷ ವಯಸ್ಸಿನ ಮಹಿಳೆಯ ಬಗ್ಗೆಯೂ ಅಭಿಮಾನವನ್ನು ವ್ಯಕ್ತಪಡಿಸಿರುವ ಪ್ರಧಾನಿ, ತಮ್ಮ ಸಣ್ಣ ವಯಸ್ಸಿನಲ್ಲಿಯೇ ಪತಿ ಮತ್ತು ತಾಯಿಯನ್ನು ಕಳೆದುಕೊಂಡ ಇವರು ತಮ್ಮ 105 ನೇ ವಯಸ್ಸಿನಲ್ಲಿ ವಿದ್ಯಾಭ್ಯಾಸ ಪಡೆದು 4 ಮುಖ್ಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ಶೇ. 74 ಅಂಕಗಳನ್ನು ಪಡೆದಿರುವ ಭಾಗೀರಥಿ ಅಮ್ಮ ತಮ್ಮ ಶಿಕ್ಷಣವನ್ನು ಮುಂದುವರೆಸುವ ಇಂಗಿತವನ್ನೂ ವ್ಯಕ್ತಪಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದ್ದಾರೆ ಎಂದು ಮೋದಿ ಮನ್ ಕೀ ಬಾತ್ ಮೂಲಕ ಹೇಳಿದ್ದಾರೆ. ಜೊತೆಗೆ ಗುಜರಾತ್ನ ಕುಚ್ಚ್ ಎಂಬ ಹಳ್ಳಿಯ ಕತೆಯೊಂದರ ಬಗ್ಗೆಯೂ ಬೆಳಕು ಚೆಲ್ಲಿದ ಮೋದಿ, ಅಲ್ಲಿನ ಭೂಕಂಪ ಸೇರಿದಂತೆ ಮತ್ತಿತರ ಹಾನಿಯ ಸಂದರ್ಭದಲ್ಲಿ ಹಳ್ಳಿಗೆ ಹಳ್ಳಿಯೇ ವಲಸೆ ಹೋಗಿತ್ತು ಆದರೆ ಆ ಹಳ್ಳಿಯ ಓರ್ವ ವ್ಯಕ್ತಿ ಆ ಹಳ್ಳಿಯ ಅಜ್ರಾಕ್ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಲ್ಲಿಯೇ ನೆಲೆ ನಿಲ್ಲುತ್ತಾರೆ. ಇವರ ಕಾರ್ಯವನ್ನು ಗಮನಿಸಿದ ಹಳ್ಳಿಯ ಇತರ ವ್ಯಕ್ತಿಗಳೂ ನಂತರ ಈ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಲ್ಲಿಯೇ ಬದುಕು ಕಟ್ಟಿಕೊಳ್ಳುವುದಕ್ಕೆ ಆರಂಭಿಸಿದರು. ಆ ಮೂಲಕ ದೇಶಕ್ಕೇ ಸ್ಫೂರ್ತಿ ನೀಡಿದ್ದಾಗಿಯೂ ಅವರು ತಿಳಿಸಿದರು.
ಈ ಸಂದರ್ಭ ದೇಶವಾಸಿಗಳಿಗೆ ಅವರು ಶಿವರಾತ್ರಿ ಶುಭದಿನದ ಶುಭಾಶಯಗಳನ್ನೂ ಮೋದಿ ತಿಳಿಸಿದರು. ಅಲ್ಲದೆ ದೇಶಕ್ಕಾಗಿ ಇರುವ ನಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸುವಂತೆಯೂ ಅವರು ವಿನಂತಿಸಿಕೊಂಡರು. ಮುಂದಿನ ದಿನಗಳಲ್ಲಿ ಹೋಲಿ, ನವರಾತ್ರಿ, ಗುಡಿ ಪರ್ವ ಮೊದಲಾದ ಹಬ್ಬಗಳನ್ನೂ ದೇಶವಾಸಿಗಳೆಲ್ಲರೂ ಆಚರಿಸಲಿದ್ದೇವೆ. ಈ ಎಲ್ಲಾ ಹಬ್ಬಗಳೂ ಕೇವಲ ಆಚರಣೆಯಾಗಿ ಮಾತ್ರವಲ್ಲದೆ ಸಮಾಜಕ್ಕೆ ನಾವೆಲ್ಲರೂ ಒಂದು ಎನ್ನುವ ಸಂದೇಶವನ್ನೂ ನೀಡುವ ಕೆಲಸವನ್ನು ಮಾಡುತ್ತಿವೆ ಎಂದು ಹಬ್ಬದ ಅಶಯಗಳನ್ನೂ ಅವರು ಈ ಸಂದರ್ಭ ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.