ಮಾತೃಭಾಷೆ ನಮ್ಮ ಕನಸನ್ನು ಅರಳಿಸುವ ಭಾಷೆ, ಅದು ನಮ್ಮ ಮನದ, ಹೃದಯದ ಭಾಷೆ. ಬೆಳೆಯುತ್ತಾ ಹೋದಂತೆ ಮನುಷ್ಯ ಅದೆಷ್ಟೋ ಭಾಷೆಗಳನ್ನು ಕರಗತಗೊಳಿಸಬಲ್ಲ, ವ್ಯವಹಾರಿಕವಾಗಿ ಯಾವುದೇ ಭಾಷೆಯನ್ನು ಬಳಸಿಕೊಳ್ಳಬಲ್ಲ, ಆದರೆ ಮಾತೃಭಾಷೆ ಎಂಬುದು ಆತನ ಆಂತರ್ಯದ ಭಾಷೆಯಾಗಿರುತ್ತದೆ. ಮಾತೃಭಾಷೆ ಮೇಲಿನ ಪ್ರೀತಿ ಪ್ರತಿಯೊಬ್ಬರ ಮನದಲ್ಲೂ ಅಚ್ಚಳಿಯದೆ ಇರುತ್ತದೆ.
ಫೆಬ್ರವರಿ 21 ರಂದು ವಿಶ್ವ ಮಾತೃಭಾಷಾ ದಿನವನ್ನು ಆಚರಿಸಲಾಗುತ್ತದೆ. ಮಾನವ ಸಂಪನ್ಮೂಲ ಸಚಿವಾಲಯ ಈ ದಿನದ ಆಚರಣೆಯನ್ನು ಆಯೋಜನೆಗೊಳಿಸುತ್ತದೆ. ಈ ವರ್ಷ ‘ ಬಹುಭಾಷಾ ಪರಂಪರೆಯ ಆಚರಣೆ’ ಎಂಬ ವಿಷಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದೆ. ಏಕ್ ಭಾರತ್ ಶ್ರೇಷ್ಠ ಭಾರತ್ ಉತ್ಸಾಹವನ್ನು ಇದು ಪ್ರತಿಬಿಂಬಿಸುತ್ತದೆ.
ಶಿಕ್ಷಣ ಸಂಸ್ಥೆಗಳು ಮತ್ತು ಭಾಷಾ ಸಂಸ್ಥೆಗಳೊಂದಿಗೆ ಎಂಎಚ್ಆರ್ಡಿ ಕಳೆದ ಮೂರು ವರ್ಷಗಳಿಂದ ಮಾತೃಭಾಷಾ ದಿನವನ್ನು ಆಚರಿಸುತ್ತದೆ. ಈ ವರ್ಷವೂ ಶಿಕ್ಷಣ ಸಂಸ್ಥೆಗಳು ವಾಕ್ಚಾತುರ್ಯ, ಚರ್ಚೆ, ಹಾಡುಗಾರಿಕೆ, ಪ್ರಬಂಧ ಬರೆಯುವ ಸ್ಪರ್ಧೆಗಳು, ಚಿತ್ರಕಲೆ ಸ್ಪರ್ಧೆಗಳು, ಸಂಗೀತ ಮತ್ತು ನಾಟಕೀಯ ಪ್ರದರ್ಶನಗಳ ಮೂಲಕ ಬಹುಭಾಷೆಯ ಅರಿವಿನ ಬಗ್ಗೆ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಅನ್ವೇಷಿಸುವ ಬಗ್ಗೆ ಕಾರ್ಯಕ್ರಮಗಳನ್ನು ಆಯೋಜಿಸಲಿವೆ. ಭಾರತೀಯರಿಗೆ ಒಂದಕ್ಕಿಂತ ಹೆಚ್ಚು ಭಾಷೆ ತಿಳಿದಿರುತ್ತದೆ ಎಂಬುದು ನಮ್ಮ ವೈವಿಧ್ಯತೆಯ ಪ್ರತೀಕ.
ಅಂತರರಾಷ್ಟ್ರೀಯ ಮಾತೃ ಭಾಷಾ ದಿನ
ಅಂತರರಾಷ್ಟ್ರೀಯ ಮಾತೃ ಭಾಷಾ ದಿನ ಯುನೆಸ್ಕೋ ಆಯೋಜನೆಗೊಳಿಸುವ ದಿನವಾಗಿದ್ದು, ವಿಶ್ವವ್ಯಾಪಿಯಾಗಿ ಇದನ್ನು ಪ್ರತಿವರ್ಷ ಆಚರಿಸಲಾಗುತ್ತದೆ. ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆ ಮತ್ತು ಬಹುಭಾಷಾ ಸಿದ್ಧಾಂತದ ಅರಿವನ್ನು ಉತ್ತೇಜಿಸಲು ಫೆಬ್ರವರಿ 21 ರಂದು ಈ ಆಚರಣೆ ನಡೆಯುತ್ತದೆ. ಇದನ್ನು ಮೊದಲು ನವೆಂಬರ್ 17, 1999 ರಂದು ಯುನೆಸ್ಕೋ ಘೋಷಿಸಿತು. ಇದನ್ನು ಔಪಚಾರಿಕವಾಗಿ 2008 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ (ಯುಎನ್ಜಿಎ) ಮಾನ್ಯಗೊಳಿಸಿತು. “ಜನರು ಬಳಸುವ ಎಲ್ಲಾ ಭಾಷೆಗಳ ಸಂರಕ್ಷಣೆ ಮತ್ತು ರಕ್ಷಣೆಯನ್ನು ಉತ್ತೇಜಿಸಲು ವಿಶ್ವ ಮಾತೃ ಭಾಷಾ ದಿನವನ್ನು ಆಚರಿಸಬೇಕು” ಎಂದು ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿತು.
ಭಾರತ ಸಾಟಿಯಿಲ್ಲದ ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ. ನಮ್ಮ ಭಾಷೆಗಳನ್ನು ಉತ್ತೇಜಿಸುವ ಕಾರ್ಯಕ್ರಮಗಳು ನಿರಂತರವಾಗಿ ಭಾರತದಲ್ಲಿ ನಡೆಯುತ್ತಿರುತ್ತದೆ. ಭಾಷೆಯ ಬಳಕೆ ಮತ್ತು ಸಾಹಿತ್ಯದ ವೈವಿಧ್ಯತೆಯನ್ನು ಆಚರಿಸುವ ಸಲುವಾಗಿ 2020 ರ ಫೆಬ್ರವರಿ 21 ರಂದು ಭಾರತದಲ್ಲಿ ಮಾತೃ ಭಾಷಾ ದಿನವನ್ನು ಆಚರಿಸಲಾಗುತ್ತದೆ.
ನಮ್ಮ ದೇಶದ ಭಾಷಾ ವೈವಿಧ್ಯತೆಯನ್ನು ಎತ್ತಿ ತೋರಿಸಲು, ಆಯಾ ಮಾತೃಭಾಷೆ ಮಾತ್ರವಲ್ಲದೆ ಇತರ ಭಾರತೀಯ ಭಾಷೆಗಳನ್ನೂ ಸಹ ಪ್ರೋತ್ಸಾಹಿಸಲು, ಭಾರತದಲ್ಲಿನ ಸಂಸ್ಕೃತಿಗಳ ವೈವಿಧ್ಯತೆ ಮತ್ತು ಸಾಹಿತ್ಯ, ಕರಕುಶಲ, ಪ್ರದರ್ಶನ ಕಲೆಗಳು, ಲಿಪಿಗಳು ಮತ್ತು ಸೃಜನಶೀಲ ಅಭಿವ್ಯಕ್ತಿಯ ಇತರ ಪ್ರಕಾರಗಳ ವೇದಿಕೆಗಳನ್ನು ಅರ್ಥಮಾಡಿಕೊಳ್ಳಲು, ಒಬ್ಬರ ಸ್ವಂತ ಮಾತೃಭಾಷೆಯನ್ನು ಹೊರತುಪಡಿಸಿ ಬೇರೆ ಭಾಷೆಗಳ ಕಲಿಕೆಯನ್ನು ಪ್ರೋತ್ಸಾಹಿಸಲು ಈ ದಿನದ ಆಚರಣೆ ಪ್ರಯೋಜನಕಾರಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.